ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ದೂರುಗಳ ವಿಲೇವಾರಿ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಎರಡು ವಿಚಿತ್ರ ಪ್ರಕರಣಗಳು ಸಾಕ್ಷಿಯಾಗಿವೆ. ನಗರದ ಮರ ಕಡಿದಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾಗರಿಕ ವೇದಿಕೆ ದೂರು ನೀಡಿದೆ. ಮತ್ತೊಂದೆಡೆ, ಹೊಸನಗರದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮತ್ತೊಂದು ದೂರು ಸಲ್ಲಿಕೆಯಾಗಿದೆ.
ಆದರೆ ಅಚ್ಚರಿಯ ಸಂಗತಿ ಏನೆಂದರೆ, ಈ ಎರಡೂ ದೂರುಗಳು ಸಂಬಂಧಪಟ್ಟ ಇಲಾಖೆಗೆ ತಲುಪುವ ಬದಲು ಅಬಕಾರಿ ಇಲಾಖೆಗೆ ವರ್ಗಾವಣೆಯಾಗಿವೆ ಎನ್ನಲಾಗಿದೆ.
ಮರ ಕಡಿದ ಪ್ರಕರಣಕ್ಕೂ ಅಬಕಾರಿ ಇಲಾಖೆಗೂ ಏನು ಸಂಬಂಧ? ಮಂಗಗಳ ಹಾವಳಿಗೂ ಅಬಕಾರಿ ಇಲಾಖೆಯೇ ಪರಿಹಾರ ನೀಡಬೇಕಾ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಜನಸಾಮಾನ್ಯರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂಬ ಉದ್ದೇಶದಿಂದ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸುತ್ತಾರೆ. ಆದರೆ ಸಂಬಂಧವೇ ಇಲ್ಲದ ಇಲಾಖೆಗೆ ದೂರುಗಳನ್ನು ವರ್ಗಾಯಿಸಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಾದರೂ ಹೇಗೆ?
ದೂರುಗಳ ವಿಲೇವಾರಿಯಲ್ಲಿ ಇಂತಹ ಎಡವಟ್ಟುಗಳು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿವೆ. ಇದೀಗ ತಮ್ಮ ದೂರುಗಳಿಗೆ ಅಬಕಾರಿ ಇಲಾಖೆ ಯಾವ ರೀತಿಯ ಉತ್ತರ ನೀಡಲಿದೆ ಎಂಬ ಕುತೂಹಲ ನಾಗರಿಕ ವೇದಿಕೆಯಲ್ಲಿದೆ.
