ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಪರೇಖ್ ವಿನಾಯಕ ಮಾಲ್ನಲ್ಲಿ (BSC) ಸಹ್ಯಾದ್ರಿ ನಾರಾಯಣ ಆಸ್ಪತ್ರೆ (ನಾರಾಯಣ ಹೆಲ್ತ್) ವತಿಯಿಂದ ಆಯೋಜಿಸಲಾಗಿದ್ದ “ಪಿಂಕ್ ಪ್ಲೆಡ್ಜ್: ನಿಮಗಾಗಿ ಮತ್ತು ಇತರರಿಗಾಗಿ” ಸಮುದಾಯ ಜಾಗೃತಿ ಕಾರ್ಯಕ್ರಮ ಜರುಗಿತು.
ಇತ್ತೀಚಿಗೆ ಜರುಗಿದ ಈ ಜಾಗೃತಿ ಅಭಿಯಾನದಲ್ಲಿ ನೂರಾರು ಮಹಿಳೆಯರು, ಅವರ ಕುಟುಂಬದವರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಸುಮಾರು 700 ರಿಂದ 800 ಮಂದಿ “ನಾನು ಸ್ತನ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುತ್ತೇನೆ ಮತ್ತು ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸುತ್ತೇನೆ” ಎಂದು ‘ಪಿಂಕ್ ಪ್ರತಿಜ್ಞೆ’ (Pink Pledge) ಸ್ವೀಕರಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರು ಮಾತನಾಡಿ, ಸ್ತನ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳು, ಸ್ವಯಂ ಪರೀಕ್ಷೆಯ ವಿಧಾನಗಳು, ಸಕಾಲಿಕ ತಪಾಸಣೆಯ ಮಹತ್ವ ಹಾಗೂ ಲಭ್ಯವಿರುವ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಉತ್ತಮ ಶರ್ಮಾ, ರೇಡಿಯೇಷನ್ ಆಂಕಾಲಜಿಸ್ಟ್ ಸುದರ್ಶನ್ ಗುಪ್ತಾ, ಹಿರಿಯ ಮಾರುಕಟ್ಟೆ ಮುಖ್ಯಸ್ಥ ಶೈಲೇಶ್ ಎಸ್.ಎನ್. ಸೇರಿದಂತೆ ಮಾರುಕಟ್ಟೆ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.
ಉಚಿತ ತಪಾಸಣಾ ಪ್ಯಾಕೇಜ್ ವಿತರಣೆ:
ಕಾರ್ಯಕ್ರಮದ ವಿಶೇಷ ಅಂಗವಾಗಿ ಸಾರ್ವಜನಿಕರ ಸಮ್ಮುಖದಲ್ಲಿಯೇ ‘ಲಕ್ಕಿ ಡಿಪ್’ ನಡೆಸಲಾಯಿತು. ಇದರಲ್ಲಿ ವಿಜೇತರಾದ 10 ಅದೃಷ್ಟಶಾಲಿಗಳಿಗೆ ತಲಾ ₹1,999 ಮೌಲ್ಯದ ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಅನ್ನು ಆಸ್ಪತ್ರೆಯ ವತಿಯಿಂದ ಸಂಪೂರ್ಣ ಉಚಿತವಾಗಿ ನೀಡಲಾಯಿತು.
”ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಪ್ರತಿಯೊಬ್ಬರೂ ಯಾವುದೇ ಹಿಂಜರಿಕೆಯಿಲ್ಲದೆ ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಈ ಜೀವ ಉಳಿಸುವ ಸಂದೇಶವನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ತಲುಪಿಸಬೇಕು” ಎಂದು ಆಸ್ಪತ್ರೆಯ ವೈದ್ಯಕೀಯ ತಂಡ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿತು.
