ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡುವ ಉದ್ದೇಶದಿಂದ, ಶಿವಮೊಗ್ಗ ತಾಲ್ಲೂಕಿನ ಹೊಳಲೂರಿನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ವಿವಿಧ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಣಬೆ ಬೇಸಾಯ, ಕೃತಕ ಆಭರಣಗಳ ತಯಾರಿಕೆ ಹಾಗೂ ಜೂಟ್ ಬ್ಯಾಗ್ ತಯಾರಿಕೆ ಸೇರಿದಂತೆ ಮೂರು ತರಬೇತಿಗಳನ್ನು ಆಯೋಜಿಸಲಾಗಿದೆ.
ಅಣಬೆ ಬೇಸಾಯ ತರಬೇತಿಯು 12 ದಿನಗಳ ಅವಧಿಯದ್ದಾಗಿದ್ದು, ಡಿಸೆಂಬರ್ 2ರಿಂದ ಆರಂಭವಾಗಲಿದೆ. 14 ದಿನಗಳ ಕೃತಕ ಆಭರಣಗಳ ತಯಾರಿಕೆ ತರಬೇತಿ ಡಿಸೆಂಬರ್ 10ರಿಂದ ಹಾಗೂ 13 ದಿನಗಳ ಜೂಟ್ ಬ್ಯಾಗ್ ತಯಾರಿಕೆ ತರಬೇತಿ ಡಿಸೆಂಬರ್ 18ರಿಂದ ಪ್ರಾರಂಭವಾಗಲಿದೆ.
ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18ರಿಂದ 49 ವರ್ಷದೊಳಗಿರಬೇಕು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ತರಬೇತಿ ಪೂರ್ಣಗೊಳಿಸಿದ ನಂತರ ಸ್ವಂತ ಉದ್ಯೋಗ ಆರಂಭಿಸುವ ಆಸಕ್ತಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಸ್ಥೆಯಲ್ಲಿಯೇ ವಾಸ್ತವ್ಯ ಹೂಡುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಆಸಕ್ತರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ಹಾಗೂ ವಯಸ್ಸಿನ ವಿವರಗಳೊಂದಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು – 577216, ಶಿವಮೊಗ್ಗ ತಾಲ್ಲೂಕು ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 9481955721, 9743429595, 9164411580, 9449371579, 9632961707 ಈ ಮೊಬೈಲ್ ಸಂಖ್ಯೆಗಳ ಸಂಪರ್ಕಿಸಬಹುದು.
