ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ವೈಭವಯುತ ತೆರೆ ಬಿದ್ದಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ವಿಜಯದಶಮಿಯ ಸಂಭ್ರಮಕ್ಕೆ ಸಾಕ್ಷಿಯಾದರು.
ನಗರದ ನೂರಾರು ದೇವರುಗಳ ಉತ್ಸವ ಮೂರ್ತಿಗಳ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ನಡೆದ ಅಂಬು ಛೇದನ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಾಜೀವ್ ಅವರು ಬಾಳೆ ಕಂದನ್ನು ಛೇದಿಸುವ ಮೂಲಕ ಬನ್ನಿ ಮುಡಿದರು.
ಅಂಬು ಛೇದನ ನಡೆಯುತ್ತಿದ್ದಂತೆ ಬನ್ನಿ ಸಂಗ್ರಹಿಸಲು ಜನರು ಮುಗಿಬಿದ್ದರು. ಬಳಿಕ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯದಶಮಿಯ ಶುಭಾಶಯಗಳನ್ನು ಹಂಚಿಕೊಂಡರು.
ಇದೇ ವೇಳೆ ನಡೆದ ಆಕರ್ಷಕ ರಾವಣ ದಹನ ಹಾಗೂ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ದಸರಾ ಸಂಭ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಆದರೆ, ಈ ಬಾರಿಯ ದಸರಾ ಮಹೋತ್ಸವದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಆನೆಯ ಅನುಪಸ್ಥಿತಿ ಎದ್ದು ಕಾಣಿಸಿತು. ಈ ನಡುವೆಯೂ ಸಾಂಪ್ರದಾಯಿಕ ವಿಧಿವಿಧಾನಗಳು ಹಾಗೂ ಜನರ ಉತ್ಸಾಹದೊಂದಿಗೆ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು.
