ಹೊಸನಗರ ತಾಲೂಕಿನ ಕಾಡಿಗೆರೆ ಗ್ರಾಮದಲ್ಲಿ ಜಮೀನಿನಲ್ಲಿ ಹುಲ್ಲು ಕೊಯ್ಯುವ ವೇಳೆ ರೈತನಿಗೆ ನಾಗರಹಾವು ಕಡಿದಿರುವ ಘಟನೆ ನಡೆದಿದೆ.
ಕಾಡಿಗೆರೆ ಗ್ರಾಮದ ರೈತ ಉಮೇಶ್ ಅವರಿಗೆ ಹಾವು ಕಡಿತವಾಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ನಗರ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರಕ್ಕೆ ರವಾನಿಸಲಾಗಿದೆ.
ಹೊಸನಗರದಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಆದರೆ, ರೆಫರ್ ಕೇಸ್‌ಗಳ ಸಾಗಣೆಗೆ ನಿಯಮಾವಳಿಗಳ ತೊಡಕಿದೆ ಎಂದು 108 ಆಂಬುಲೆನ್ಸ್ ಸಿಬ್ಬಂದಿ ಶಿವಮೊಗ್ಗಕ್ಕೆ ಕರೆದೊಯ್ಯಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಆಸ್ಪತ್ರೆ ಆವರಣದಲ್ಲೇ ಸಾರ್ವಜನಿಕರು ಹಾಗೂ ಸ್ಥಳೀಯರು ಆಂಬುಲೆನ್ಸ್ ಸಿಬ್ಬಂದಿಯ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರ ನಿತಿನ್, ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಸೇರಿದಂತೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಸತತ ಒತ್ತಾಯದ ಬಳಿಕ ಕೊನೆಗೂ ರೈತ ಉಮೇಶ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತುರ್ತು ಪರಿಸ್ಥಿತಿಯಲ್ಲೂ ಜೀವರಕ್ಷಕ 108 ಆಂಬುಲೆನ್ಸ್ ಸೇವೆಯಿಂದ ಇಂತಹ ನಿರ್ಲಕ್ಷ್ಯ ಏಕೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.
ಅಲ್ಲದೆ, ತುರ್ತು ಸಂದರ್ಭಗಳಲ್ಲಿ ರೆಫರ್ ಕೇಸ್‌ಗಳ ಸಾಗಣೆಗೆ 108 ಆಂಬುಲೆನ್ಸ್ ಸೇವೆಯಲ್ಲಿರುವ ನಿಯಮಗಳೇನು? ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
