ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ ವ್ಯಕ್ತವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದರೂ, ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮೀನಿಗೆ ನೀರು ಇರುವ ರೈತರಿಗೆ ಕೇವಲ 2,500 ರೂಪಾಯಿ ಬರ ಪರಿಹಾರ ಘೋಷಿಸಲಾಗಿದೆ. ಆದರೆ ಒಂದು ಎಕರೆ ಭತ್ತದ ಬೆಳೆಗೆ 25 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರು, ಈ ಪರಿಹಾರ ಯಾವುದಕ್ಕೂ ಸಾಲದು ಎಂದು ಅಳಲು ತೋಡಿಕೊಂಡಿದ್ದಾರೆ.
ಮಳೆ ಕೈಕೊಟ್ಟ ಪರಿಣಾಮ ಬೆಳೆ ನಷ್ಟವಾಗಿದ್ದು, ಮತ್ತೊಂದೆಡೆ ಸಮರ್ಪಕ ಪರಿಹಾರವೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲೆನಾಡಿನ ಹಲವು ಭಾಗಗಳಲ್ಲಿ ಮಳೆಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ನಷ್ಟದ ಸಮೀಕ್ಷೆಯಲ್ಲೂ ಗೊಂದಲ ಉಂಟಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಇನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಿಲ್ಲದೆ ಬತ್ತದ ಗದ್ದೆಗಳು ಬಿರುಕು ಬಿಟ್ಟಿರುವ ದೃಶ್ಯ ಕಂಡುಬರುತ್ತಿದ್ದು, ಮತ್ತೆ ಮರುಸಮೀಕ್ಷೆ ನಡೆಸಿ ವಾಸ್ತವ ನಷ್ಟದ ಆಧಾರದ ಮೇಲೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ರೈತರನ್ನು ಭಿಕ್ಷುಕರಂತೆ ಕಾಣಲಾಗುತ್ತಿದೆ ಎಂದು ಆರೋಪಿಸಿರುವ ರೈತರು, ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.
ಕನಿಷ್ಠ ಶೇಕಡ 80ರಷ್ಟು ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಯುವ ರೈತರ ಒತ್ತಾಯಿಸಿದ್ದಾರೆ.
