S.N. Channabasappa ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗ ನಗರ ಆಶ್ರಯ ಸಮಿತಿ ಸಭೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಭಾಗವಹಿಸಿ, ನಗರದ ಆಶ್ರಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಧಾನಮಂತ್ರಿ ಆವಾಸ್ (ನಗರ) ಯೋಜನ 1.0 ಯು ಸೆಪ್ಟೆಂಬರ್ 2026ಕ್ಕೆ ಮುಕ್ತಾಯಗೊಳ್ಳಲಿದ್ದು, ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ವಿಳಂಬವಿಲ್ಲದೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಗೋಪಿಸೆಟ್ಟಿಕೊಪ್ಪದಲ್ಲಿ ನಿರ್ಮಿಸುತ್ತಿರುವ ಗುಂಪು ಮನೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಂದಾಯ ಇಲಾಖೆಯ ಶಿಫಾರಸಿನೊಂದಿಗೆ ಆನ್ಲೈನ್ ಅಟ್ಯಾಚ್ಮೆಂಟ್ ಮಾಡಲಾಗಿದ್ದು, ಅರ್ಹ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
S.N. Channabasappa ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಜಮೀನು ನೀಡಿದ ಮಾಲೀಕರಿಗೆ ಎಕರೆಗೆ ಒಂದು ನಿವೇಶನವನ್ನು ಉಚಿತವಾಗಿ ನೀಡುವ ಪ್ರಸ್ತಾವನೆಯ ಸ್ಥಿತಿಗತಿ, ಗೋವಿಂದಪುರ ಬಡಾವಣೆಯ ಗುಂಪು ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮತ್ತು ಯುಜಿಡಿ ಕಾಮಗಾರಿಗಳನ್ನು ತ್ವರಿತವಾಗಿ ಕಲ್ಪಿಸುವಂತೆ ತಾಕೀತು ಮಾಡಲಾಯಿತು. ಗೋವಿಂದಪುರ ಮತ್ತು ಗೋಪಿಸೆಟ್ಟಿಕೊಪ್ಪ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಕಲ್ಪಿಸಲು ಸರ್ಕಾರ ಅಭಿವೃದ್ಧಿಪಡಿಸಿರುವ ವಿಶೇಷ ಟ್ರ್ಯಾಕಿಂಗ್ ವ್ಯವಸ್ಥೆಯ ಸದ್ಬಳಕೆ, ಸೋಗಾನೆಯಲ್ಲಿ ಅಭಿವೃದ್ಧಿಪಡಿಸಿದ ಬಡಾವಣೆಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವುದು ಹಾಗೂ ವಿರೂಪಿನಕೊಪ್ಪ ಗ್ರಾಮದ ಫಲಾನುಭವಿಗಳ ಹಕ್ಕುಪತ್ರಗಳಲ್ಲಿ ಆಗಿರುವ ಹೆಸರುಗಳ ತಪ್ಪುಗಳನ್ನು ತಕ್ಷಣವೇ ಸರಿಪಡಿಸಿ ವಿತರಿಸಲು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
