ಗೋಪಾಳಗೌಡ ಬಡಾವಣೆಯ ನಿವಾಸಿ, ಹಿರಿಯ ಯೋಗಪಟು ಹಾಗೂ ಪ್ರಾಧ್ಯಾಪಕರಾದ ಶ್ರೀಯುತ ಕೆ.ಎಸ್. ಮೃತ್ಯುಂಜಯ (78 ವರ್ಷ) ಅವರು ನಿನ್ನೆ ಸಂಜೆ 4:30ರ ಸುಮಾರಿಗೆ ತುಮಕೂರಿನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಪಾರ ಬಂಧು-ಬಳಗ, ಶಿಷ್ಯರು ಹಾಗೂ ಸ್ನೇಹಿತರನ್ನು ಬಿಟ್ಟು ಅಗಲಿರುವ ಅವರ ನಿಧನದಿಂದ ಯೋಗ ಕ್ಷೇತ್ರ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಅಪಾರ ಶೋಕ ವ್ಯಕ್ತವಾಗಿದೆ.
ಮೃತರ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ ಅವರ ಹುಟ್ಟೂರಾದ ಚಿಕ್ಕನಾಯಕನಹಳ್ಳಿಯಲ್ಲಿ ನೆರವೇರಿಸಲಾಗುವುದು. ಪುತ್ರರು ಅಮೆರಿಕದಿಂದ ಆಗಮಿಸಬೇಕಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯನ್ನು ಶನಿವಾರಕ್ಕೆ ನಿಗದಿಪಡಿಸಲಾಗಿದೆ.
ಶ್ರೀಯುತ ಕೆ.ಎಸ್. ಮೃತ್ಯುಂಜಯ ಅವರು ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಮಂಡಳಿಯ ಸದಸ್ಯರಾಗಿ ಹಾಗೂ ಸುಮಾರು 15 ವರ್ಷಗಳ ಕಾಲ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಬ್ರದರ್ ಡಿವೈನ್ ಪಾರ್ಕಿನ ಸದಸ್ಯರಾಗಿದ್ದು, ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರ ನಿಧನಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಹಾಗೂ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾದ ರುದ್ರಗೌಡರು, ಯೋಗಾಚಾರ್ಯ ಸೇವಾ ರುದ್ರಾರಾಧ್ಯರು, ಕಾರ್ಯದರ್ಶಿ ಚಂದ್ರಶೇಖರಯ್ಯ, ಎಸ್.ಎಸ್.ಜ್ಯೋತಿ ಪ್ರಕಾಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್, ಯೋಗ ಶಿಕ್ಷಕರು ಹಾಗೂ ಯೋಗ ಬಂಧುಗಳು ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.
