ಸಾಂಬಾರ ಬೆಳೆಯಲ್ಲಿ ರೈತರು ಸ್ವಾವಲಂಬಿ ಬದುಕು ಕಂಡುಕೊಳ್ಳಬೇಕು ಎಂಬ ಧ್ಯೇಯದಿಂದ ಆರಂಭಗೊಂಡ ಸಹ್ಯಾದ್ರಿ ಕಾಫಿ ಸಹಕಾರ ಸಂಘ ೨೫ ವರ್ಷಗಳನ್ನು ಪೂರೈಸಿದೆ. ಮಡಸೂರು ಲಿಂಗದಹಳ್ಳಿಯ ಮಹಾಬಲೇಶ್ವರ ಅವರ ಕನಸುಗಳಲ್ಲಿ ಕೆಲವನ್ನಾದರೂ ಸಾರ್ಥಕಗೊಳಿಸಿರುವ ಸಂಸ್ಥೆ ಈ ವರ್ಷ ಬೆಳ್ಳಿ ಹಬ್ಬದ ನೆಲೆಯಲ್ಲಿ ಸಾಗರದಲ್ಲಿ ಕಾಫಿ ಮಂಡಳಿ ಶಾಖೆ ಆರಂಭ ಸೇರಿದಂತೆ ಗುರುತರ ಹೆಜ್ಜೆಗಳನ್ನು ದಾಖಲಿಸಲು ನಿರ್ಧರಿಸಿದೆ ಎಂದು ಸಹ್ಯಾದ್ರಿ ಕಾಫಿ ಸಹಕಾರ ಸಂಘ ಎಸ್ಹೆಚ್ಸಿಎಫ್ಆರ್ಡಿಎಂ ಕೋಸ್ ಅಧ್ಯಕ್ಷ ಎಂ.ಬಿ.ಚಂದ್ರಶೇಖರ, ಮಗೆಕೊಪ್ಪ ತಿಳಿಸಿದರು.
ನಗರದ ನಗರೇಶ್ವರ ದೇವಸ್ಥಾನದ ವಿನಾಯಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸ್ಥೆಯ ೨೫ನೇ ವರ್ಷದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬರುವ ವರ್ಷದಲ್ಲಿ ಸಾಗರದಲ್ಲಿ ಕಾಫಿ ವಿಸ್ತೀರ್ಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಗರದಲ್ಲಿಯೇ ಕಾಫಿ ಮಂಡಳಿ ಶಾಖೆ ತೆರೆಯಲು ಇನ್ನೊಂದು ಪ್ರಯತ್ನ ಮಾಡಲಾಗುವುದು. ಪ್ರಸ್ತುತ ಕೇಂದ್ರ ಸಾಂಬಾರು ಮಂಡಳಿಗೆ ಸದಸ್ಯರಾಗಿ ನಮ್ಮ ಭಾಗದ ಪ್ರಸನ್ನ ಕೆರೆಕೈ ಆಯ್ಕೆಯಾಗಿರುವುದು ಈ ನಿಟ್ಟಿನಲ್ಲಿ ಸಹಕಾರಿ ಆಗಲಿದೆ ಎಂದರು.
ಸಂಸ್ಥೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಷೇರು ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಸಾಂಬಾರು ಪದಾರ್ಥಗಳ ಖರೀದಿ, ಮಾರಾಟದ ಜಾಲವನ್ನು ವಿಸ್ತರಿಸುವುದು, ತೆಂಗಿನ ಉತ್ತಪನ್ನಗಳ ಖರೀದಿ, ಸಂಸ್ಕರಣೆ, ಮಾರಾಟಕ್ಕೆ ಒತ್ತು ನೀಡುವುದು, ಕಾಫಿ ಬೆಳೆಗಾರರಿಗೆ ಹೆಚ್ಚಿನ ಮಾರ್ಗದರ್ಶನ, ಕಾಫಿ ಬೀಜದ ವ್ಯವಸ್ಥಿತ ಟೆಂಡರ್ ಮೊದಲಾದ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸಲಿದ್ದೇವೆ ಎಂದರು.
ಸಂಸ್ಥೆ ನೂತನವಾಗಿ ತೆಂಗಿನ ಎಣ್ಣೆ ತೆಗೆಯುವ ಯಂತ್ರವನ್ನು ಅಳವಡಿಸಿದೆ. ಚಿಕ್ಕಮಗಳೂರಿನ ಸಹ್ಯಾದ್ರಿ ಶ್ರೇಣಿಯಲ್ಲಿ ಬೆಳೆದ ಕಾಫಿ ಬೀಜದಿಂದ ತಯಾರಿಸಿದ ಅತ್ಯುತ್ತಮ ಗುಣಮಟ್ಟದ ಸಹ್ಯಾದ್ರಿ ಗೋಲ್ಡ್ ಕಾಫಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ರಿಯಾಯ್ತಿ ದರದಲ್ಲಿ ಜಾತಿಯ ಕಾಫಿ ಗಿಡಗಳು ಸಂಘದಲ್ಲಿ ಲಭ್ಯವಿದೆ. ಸಂಘದ ಪ್ರಾಡಕ್ಟ್ಗಳನ್ನು ಸದಸ್ಯರು ಹಾಗೂ ಸಾಗರದ ಜನತೆ ಬಳಸಿಕೊಳ್ಳುವ ಮೂಲಕ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಿದರೆ ಸಂಘ ತಾನೇತಾನಾಗಿ ಬಲವರ್ಧಿಸುತ್ತದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ರಾಘವೇಂದ್ರ ಕೆ.ಎಸ್., ನಿರ್ದೇಶಕರಾದ ಸೂರ್ಯನಾರಾಯಣ ಬ್ಯಾಗಡಿಪಾಲು, ಮಯೂರ ಕುಗ್ವೆ, ದಯಾನಂದ ಗೌಡ, ನಾಗೇಂದ್ರ ಎಚ್., ಎಸ್.ಕುಮಾರ, ವಿಜಯಲಕ್ಷ್ಮಿ, ಶಾಂತಕುಮಾರಿ ಬೇದೂರು ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ವಾರ್ಷಿಕ ಗರಿಷ್ಠ ವ್ಯಾಪಾರ ಮಾಡಿದ ವೆಂಕಟೇಶ್ ಕವಲಕೋಡು ಅವರನ್ನು ಗೌರವಿಸಲಾಯಿತು. ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಹಂಗಾಮಿ ಸಿಇಓ ಅಶ್ವಿನಿ ಹೆಗಡೆ ವರದಿ ಮಂಡಿಸಿದರು. ಸಹಜಾನಂದ ಎಂ.ಎಂ. ಸ್ವಾಗತಿಸಿದರು. ಬಿ.ಎನ್.ನಾಗರಾಜ ವಂದಿಸಿದರು.
ಸಾಗರದಲ್ಲಿ ಕಾಫಿ ಮಂಡಳಿ ಶಾಖೆ ತೆರೆಯಲು ಪ್ರಯತ್ನ-ಎಂ.ಬಿ.ಚಂದ್ರಶೇಖರ ಮಗೆಕೊಪ್ಪ
Date:
