ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ನೇತೃತ್ವದಲ್ಲಿ ದಸರಾ ರಾಜ್ಯ ಮಟ್ಟದ ಕವಿಗೋಷ್ಠಿಆಯೋಜಿಸಲಾಗುತ್ತಿದೆ.
ವರ್ತಮಾನದ ಹಲವು ಸಾಮಾಜಿಕ ಸಮಸ್ಯೆಗಳು ಹಾಗೂ ಜನರ ತಲ್ಲಣಗಳಿಗೆ ಕವಿಗಳು ತಮ್ಮ ಕವನಗಳ ಮೂಲಕ ಧ್ವನಿಯಾಗುವಂತೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಅವರು ಮನವಿ ಮಾಡಿದ್ದಾರೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ, ಕಸ್ತೂರಿ ರಂಗನ್ ವರದಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಬರದ ಸಂಕಷ್ಟ, ಜನಸಾಮಾನ್ಯರ ಬದುಕು, ಸರ್ಕಾರದ ಯೋಜನೆಗಳು, ನಿರುದ್ಯೋಗ ಹಾಗೂ ಯುವಜನರ ತಲ್ಲಣ ಸೇರಿದಂತೆ ಹಲವು ವಿಚಾರಗಳನ್ನು ಕವನಗಳ ಮೂಲಕ ಅಭಿವ್ಯಕ್ತಪಡಿಸುವಂತೆ ಅವರು ಕೋರಿದ್ದಾರೆ.
ಅದೇ ರೀತಿ, ದ್ವಿಭಾಷಾ ನೀತಿಯ ಹೆಸರಿನಲ್ಲಿ ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯ, ಇಂಗ್ಲಿಷ್ ಭಾಷೆಯ ಮೇಲಿನ ಅತಿಯಾದ ವ್ಯಾಮೋಹ ಹಾಗೂ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಕೂಡ ಕವಿಗಳು ತಮ್ಮ ಚಿಂತನೆಗಳನ್ನು ಕವನದ ಮೂಲಕ ವ್ಯಕ್ತಪಡಿಸಬಹುದು ಎಂದು ತಿಳಿಸಿದ್ದಾರೆ.
ಹೊಸ ತಲೆಮಾರಿನ ಸೃಜನಶೀಲ ಮನಸ್ಥಿತಿಗೆ ಸಾಹಿತ್ಯವೇ ಭರವಸೆಯಾಗಬೇಕು. ಈ ಹಿನ್ನೆಲೆಯಲ್ಲಿ ಎಳೆಯರಿಂದ ಹಿರಿಯರವರೆಗೆ ಎಲ್ಲರೂ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿ. ಮಂಜುನಾಥ ತಿಳಿಸಿದ್ದಾರೆ.
ಕವಿಗಳು ತಮ್ಮ ಕವನಗಳ ಜೊತೆಗೆ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಿ, ಸೆಪ್ಟೆಂಬರ್ 30ರೊಳಗೆ ಡಿ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಆರ್.ಟಿ.ಓ. ಕಚೇರಿ ರಸ್ತೆ, ಶಿವಮೊಗ್ಗ ಇವರಿಗೆ ತಲುಪಿಸುವಂತೆ ಕೋರಲಾಗಿದೆ.
