Klive Special Article ಕರ್ನಾಟಕದ ಗ್ರಾಮೀಣ ಆರ್ಥಿಕತೆಯಲ್ಲಿ ಪಶುಪಾಲನೆ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿಯ ಜೊತೆಗೆ ಹೈನುಗಾರಿಕೆ ಮತ್ತು ಪಶುಪಾಲನೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ಜಾನುವಾರುಗಳು ಆರ್ಥಿಕ ಭದ್ರತೆಯ ಪ್ರಮುಖ ಆಧಾರವಾಗಿವೆ. ಹೀಗಾಗಿ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಗುಣಮಟ್ಟದ ಮೇವು ಲಭ್ಯವಾಗುವಂತೆ ಮಾಡುವುದು ರೈತರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ರಾಜ್ಯದಲ್ಲಿ ಪ್ರಸಕ್ತ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಹಸಿರು ಮೇವು ಲಭ್ಯತೆ ರೈತರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಪ್ರಮುಖ ಸವಾಲಾಗಿದೆ. ಪಶುಪಾಲನೆಯ ಮೇಲೆ ಅವಲಂಬಿತರಾಗಿರುವ ರೈತರ ಜೀವನೋಪಾಯಕ್ಕೆ ಜಾನುವಾರುಗಳ ಆರೋಗ್ಯ ಮತ್ತು ಉತ್ಪಾದಕತೆ ಅತ್ಯಂತ ಮುಖ್ಯವಾಗಿದ್ದು, ಅದಕ್ಕೆ ಗುಣಮಟ್ಟದ ಮೇವು ನಿರಂತರವಾಗಿ ದೊರೆಯುವುದು ಅಗತ್ಯ.
ಸಾಮಾನ್ಯವಾಗಿ ಮೇವು ಹುಲ್ಲಿನ ಬೀಜಗಳನ್ನು ಬಿತ್ತನೆಮಾಡಿದ ನಂತರ ಉತ್ತಮ ಪ್ರಮಾಣದಲ್ಲಿ ಹಸಿರುಮೇವು ಪಡೆಯಲು ಸುಮಾರು50 ರಿಂದ 60 ದಿನಗಳ ಅವಧಿ ಬೇಕಾಗುತ್ತದೆ. ಮಳೆಯ ಕೊರತೆ ಮತ್ತು ನೀರಿನ ಲಭ್ಯತೆ ಕಡಿಮೆಯಾಗಿರುವ ಸಂದರ್ಭದಲ್ಲಿಇಂತಹ ಸಾಂಪ್ರದಾಯಿಕ ಮೇವು ಬೆಳೆಗಳ ಮೇಲೆ ಮಾತ್ರ ಅವಲಂಬಿಸುವುದು ರೈತರಿಗೆ ಕಷ್ಟಕರವಾಗಬಹುದು. ಹೀಗಾಗಿ ಕಡಿಮೆ ನೀರಿನಲ್ಲಿ, ಕಡಿಮೆ ಸ್ಥಳದಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶಯುಕ್ತ ಮೇವನ್ನು ಉತ್ಪಾದಿಸುವ ಪರ್ಯಾಯ ತಂತ್ರಜ್ಞಾನಗಳನ್ನು ಉತ್ತೇಜಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಜೋಲಾ (Azolla) ಒಂದು ಗಮನಾರ್ಹ ಪರ್ಯಾಯ ಪೂರಕ ಮೇವು ಸಂಪನ್ಮೂಲವಾಗಿದೆ.
ಹಾಲು ಕೊಡುವ ಹಸುಗಳು ಸೇರಿದಂತೆ ಜಾನುವಾರುಗಳಲ್ಲಿ ಅಜೋಲಾವನ್ನು ಪೂರಕ ಆಹಾರವಾಗಿ ಬಳಸುವ ಕುರಿತು ಹಲವು ಅಧ್ಯಯನಗಳು ನಡೆದಿವೆ. ಸೂಕ್ತ ಪ್ರಮಾಣದಲ್ಲಿ ನೀಡಿದಾಗ ಪೌಷ್ಟಿಕಾಂಶಗಳ ಸೇವನೆ, ಆಹಾರದ ಬಳಕೆ ಹಾಗೂ ಕೆಲವು ಸಂದರ್ಭಗಳಲ್ಲಿ ಬೆಳವಣಿಗೆ ಮತ್ತು ಹಾಲಿನ ಉತ್ಪಾದನೆಯಲ್ಲಿ ಸುಧಾರಣೆ ಕಂಡುಬಂದಿರುವುದನ್ನು ಉಲ್ಲೇಖಿಸಲಾಗಿದೆ. ಇದರ ಪರಿಣಾಮವು ಜಾನುವಾರುಗಳ ಜಾತಿ, ಆಹಾರದಲ್ಲಿ ಸೇರಿಸುವ ಪ್ರಮಾಣ, ಒಟ್ಟಾರೆ ಆಹಾರದ ಸಂಯೋಜನೆ ಮತ್ತು ಅಜೋಲಾದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ರೈತರಿಗೆ ಅಜೋಲಾ ಉತ್ಪಾದನೆಯ ಕುರಿತು ವೈಜ್ಞಾನಿಕ ತರಬೇತಿ ಮತ್ತು ಸೂಕ್ತ ಆಹಾರ ನಿರ್ವಹಣೆಯ ಮಾರ್ಗದರ್ಶನ ನೀಡುವುದು ಮುಖ್ಯವಾಗಿದೆ. ಕಡಿಮೆ ನೀರಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ
ಅಜೋಲಾ ನೀರಿನಲ್ಲಿ ತೇಲುವ ಸಣ್ಣ ಜಲಸಸ್ಯವಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಪ್ರೋಟೀನ್, ಖನಿಜಾಂಶಗಳು, ಜೀವಸತ್ವಗಳು ಹಾಗೂ ಅಗತ್ಯ ಅಮೈನೋಆಮ್ಲಗಳನ್ನು ಹೊಂದಿರುವ ಕಾರಣ ಇದನ್ನು ಜಾನುವಾರುಗಳ ಆಹಾರದಲ್ಲಿ ಪೂರಕವಾಗಿ ಬಳಸುವ ಸಾಧ್ಯತೆಯಿದೆ. ಅಜೋಲಾದೊಂದಿಗೆ ಸಹಜೀವನ ಹೊಂದಿರುವ Anabaena azollae ಎಂಬನೈಟ್ರೋಜನ್ ಸ್ಥೀರೀಕರಿಸುವ ಸಯನೋಬ್ಯಾಕ್ಟೀರಿಯಾವು ಅದರ ವೇಗವಾದ ಜೈವಿಕ ಬೆಳವಣಿಗೆಗೆ ಸಹಕಾರಿಯಾಗಿದೆ.
ಅಜೋಲಾದಲ್ಲಿ 50-60% ಸಾಂದ್ರಕ ಪ್ರಧಾನ ಸಮುದಾಯಗಳು, ಜೀವದ್ರವ್ಯಗಳ ಎ ಮತ್ತು ಬಿ ಕ್ಯಾರೋಟಿನ್ ಹಾಗೂ (ಸುಣ್ಣ) ಕ್ಯಾಲ್ಸಿಯಂ (ರಂಜಕ), ಫಾಸ್ಪರಸ್, ಜೈವಿಕಾಂಶ, (ಕಬ್ಬಿಣ), ಐರನ್, (ತಾಮ್ರ) ಕಾಪರ್ ಮತ್ತು ಮೆಗ್ನೀಷಿಯಂ ಖನಿಜಾಂಶಗಳು ಹೆಚ್ಚಾಗಿ ಲಭ್ಯವಿರುತ್ತವೆ.
ಸಾಂದರ್ಭಿಕಚಿತ್ರ
ಅಜೋಲಾದ ಕಚ್ಚಾ ಪ್ರೋಟೀನ್ ಪ್ರಮಾಣವು ಅದರ ಜಾತಿ, ಬೆಳೆಸುವ ವಿಧಾನ, ನೀರಿನ ಗುಣಮಟ್ಟ ಮತ್ತು ಕೊಯ್ಲಿನ ಹಂತದ ಆಧಾರದ ಮೇಲೆ ಬದಲಾಗುತ್ತದೆ. ಒಣಪದಾರ್ಥದ ಆಧಾರದ ಮೇಲೆ ಸಾಮಾನ್ಯವಾಗಿ ಸುಮಾರು15 ರಿಂದ 35 ಪ್ರತಿಶತದಷ್ಟು ಕಚ್ಚಾ ಪ್ರೋಟೀನ್ ವರದಿಯಾಗಿದೆ. ಇದರ ಜೊತೆಗೆ ಖನಿಜಾಂಶಗಳು, ಅಗತ್ಯ ಅಮೈನೋಆಮ್ಲಗಳು, ಕ್ಯಾರೋಟಿನಾಯ್ಡ್ಗಳು ಮತ್ತು ಜೀವಸತ್ವಗಳೂ ಇವೆ. ಆದ್ದರಿಂದ ಅಜೋಲಾವನ್ನು ಸಾಂಪ್ರದಾಯಿಕ ಆಹಾರಕ್ಕೆ ಸಂಪೂರ್ಣ ಪರ್ಯಾಯವಾಗಿ ಪರಿಗಣಿಸುವುದಕ್ಕಿಂತ ಪೂರಕ ಮೇವು ಆಗಿಬಳಸುವುದು ಸೂಕ್ತವಾಗಿದೆ.
ಅಜೋಲಾ ಬೆಳೆ ಉತ್ಪಾದನಾ ವಿಧಾನ
ಮೊದಲಿಗೆ 2.6 ಮೀ. ಉದ್ದ ಹಾಗೂ 1.6 ಮೀ. ಅಗಲ ಮತ್ತು 1 ಮೀಟರ್ ಆಳದ ಗುಂಡಿಯನ್ನು ಸ್ವಲ್ಪ ನೆರಳು ಇರುವ ಜಾಗದಲ್ಲಿ ತೋಡಬೇಕು. ನೆಲವನ್ನು ಮಟ್ಟಮಾಡಿ 2.6 ಮೀ. X 1.6 ಮೀ. ಆಕಾರದಲ್ಲಿ ಮಂದವಾದ ಮಣ್ಣಿನಿಂದ ಗುಂಡಿಯ ಆಕಾರದಲ್ಲಿ ಹಾಸಬೇಕು.
10-15 ಕೆ.ಜಿ. ಕೊಳೆತಿರುವ ಮಣ್ಣು, 2 ದಿನ ಕೊಳೆದ ಗೊಬ್ಬರ, 1-2 ಕೆ.ಜಿ. ಮತ್ತು 10-20 ಗ್ರಾಂ ಸೂಪರ್ ಫಾಸ್ಪೇಟ್ ಅನ್ನು 10 ಲೀ. ನೀರಿನಲ್ಲಿ ಕಲಸಿ ಗುಂಡಿಯಲ್ಲಿ ಹಾಕಬೇಕು. ಗುಂಡಿಯಲ್ಲಿ 10 ಸೆಂ.ಮೀ. ನಮ್ನು ನೀರು ತುಂಬಿಸಬೇಕು ನಂತರ 20 ಗ್ರಾಂ ಖನಿಜ ಮಿಶ್ರಣ ಸೇರಿಸಬೇಕು. 0.5-1 ಕೆ.ಜಿ. ತಾಜಾ ಅಜೋಲಾವನ್ನು ನೀರಿನಮೇಲೆ (ಬಿತ್ತನೆ) ಬಿಡಬೇಕು.
ಅಜೋಲಾವನ್ನು ತೇವವಾದ ವಾತಾವರಣದಲ್ಲಿ ಬೆಳೆಸಬೇಕು. ನೀರಿನ pH 5.5-7 ಇರಬೇಕು.10-15 ದಿನಗಳ ನಂತರ ಅಜೋಲಾ ಗುಂಡಿ ತುಂಬಾ ಬೆಳೆದ 0.5-1 ಕೆ.ಜಿ. ಅಜೋಲಾ ಬೆಳೆಯನ್ನು ಪಡೆಯಬಹುದು. ಪ್ರತಿ 5 ದಿನಕ್ಕೊಮ್ಮೆ 0.5-1 ಕೆ.ಜಿ. ಗೊಬ್ಬರ ಮತ್ತು 10 ಗ್ರಾಂ ಸೂಪರ್ ಫಾಸ್ಪೇಟ್ ಹಾಕಬೇಕು. ಇದರಿಂದ ಪ್ರತಿದಿನವೂ 1 ಕೆ.ಜಿ. ಅಜೋಲಾ ಪಡೆಯಬಹುದು. ಅಜೋಲಾವನ್ನು ಹಸುಗಳಿಗೆ ನೀಡುವ ಮುನ್ನ ಸಗಣಿ ಗೊಬ್ಬರವನ್ನು ತೆಗೆದುಹಾಕಿ ತೊಳೆಯಬೇಕು. ಕೋಳಿಗಳಿಗೆ ಕೂಡ ಮೇವಿನ ರೂಪದಲ್ಲಿ ನೀಡಬಹುದು.
ಒಂದು ಅಜೋಲಾ ಘಟಕದ ವೆಚ್ಚ
ಅಜೋಲಾ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅಗತ್ಯವಿರುವ ಸಾಮಗ್ರಿ ವೆಚ್ಚವು ಒಟ್ಟು ₹2,450 ಆಗಿರುತ್ತದೆ. ಇದರಲ್ಲಿ 450 GSM ಗುಣಮಟ್ಟದ 10×6 ಅಡಿಗಾತ್ರದ UV-Stabilized HDPE ಅಜೋಲಾ ಬೆಡ್/ಶೀಟ್ಗೆ ₹1,350, 80% ನೆರಳು ಬಲೆ (Shade Net) ಹಾಗೂ GI ಫ್ರೇಮ್ಗೆ ₹650, ಫಾಸ್ಫೇಟ್ಯುಕ್ತ ಗೊಬ್ಬರ ಮತ್ತು ಸೂಪರ್ಫಾಸ್ಫೇಟ್ಗೆ ₹250 ಹಾಗೂ ಅಜೋಲಾ ಮದರ್ ಕಲ್ಚರ್/ಬೀಜ ಸಂಸ್ಕೃತಿ (Starter Culture/Inoculum) 2 ಕೆ.ಜಿ.ಗೆ ₹200 ವೆಚ್ಚವಾಗುತ್ತದೆ. ಘಟಕದ ಕಾರ್ಮಿಕ ವೆಚ್ಚವು ₹700 ಆಗಿದ್ದು, ಸ್ಥಳ ಸಿದ್ಧತೆ, ತೊಟ್ಟಿಯ/ಬೆಡ್ನ ಅಳವಡಿಕೆ, ಸಂರಕ್ಷಣಾ ವ್ಯವಸ್ಥೆ ಹಾಗೂ ಬೀಜ ಸಂಸ್ಕೃತಿ ಹಾಕುವಂತಹ ಕಾರ್ಯಗಳಿಗೆ 2 ಮಾನವ ದಿನಗಳ ಕೂಲಿಯನ್ನು ಒಳಗೊಂಡಿರುತ್ತದೆ. ಹೀಗಾಗಿ, ಅಜೋಲಾ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಒಟ್ಟು ಅಂದಾಜು ವೆಚ್ಚ ₹3,150 ಆಗಿರುತ್ತದೆ.
2026-27ನೇ ಸಾಲಿನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಒಟ್ಟು 12000 ಅಜೋಲಾ ಘಟಕಗಳನ್ನು ರೂ. 3150/- ಪ್ರತಿ ಘಟಕ ವೆಚ್ಚದಂತೆ, ರೂ. 3.78 ಕೋಟಿ ವೆಚ್ಚದಲ್ಲಿ ಅನುದಾನ ಒದಗಿಸಲಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗಳಿಗೆ ಜಿಲ್ಲಾವಾರು ಗುರಿಯನ್ನು ನಿಗದಿಪಡಿಸಲಾಗಿದೆ.
ಅಜೋಲಾ ಕಲ್ಚರ್ (Azolla Culture)ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ (KVK), ಕೃಷಿ ವಿಶ್ವ ವಿದ್ಯಾಲಯಗಳಲ್ಲಿ, ಪಶುವೈದ್ಯಕೀಯ ಮಹಾ ವಿದ್ಯಾಲಯಗಳಲ್ಲಿ ಹಾಗೂ ಖಾಸಗಿ ವ್ಯಾಪಾರಿಗಳಲ್ಲಿ ಲಭ್ಯವಿರುತ್ತದೆ. ಇದರ ಅಂದಾಜು ಬೆಲೆ ಪ್ರತಿ ಕಲ್ಚರ್ಗೆ ಕೆ.ಜಿ. ₹50 ಆಗಿರುತ್ತದೆ.
ಜಾನುವಾರುಗಳ ಆಹಾರದಲ್ಲಿ ಅಜೋಲಾ ಪೂರಕ ಬಳಕೆ
ಜಾನುವಾರುಗಳಿಗೆ ಅಜೋಲಾವನ್ನು ಪೂರಕ ಆಹಾರವಾಗಿ ನೀಡುವಾಗ, ವಯಸ್ಕ ಹಸುವಿಗೆ ದಿನಕ್ಕೆ 1.0–1.5 ಕೆ.ಜಿ., ವಯಸ್ಕ ಎಮ್ಮೆಗೆ ದಿನಕ್ಕೆ 1.0–1.5 ಕೆ.ಜಿ., ಮೇಕೆಗೆ ದಿನಕ್ಕೆ 200–300 ಗ್ರಾಂ ಮತ್ತು ಕೋಳಿಗಳಿಗೆ ದಿನಕ್ಕೆ 10–15 ಗ್ರಾಂ ತಾಜಾ ಅಜೋಲಾವನ್ನು ನೀಡಬಹುದು. ಇದು ಜಾನುವಾರುಗಳಿಗೆ ನೀಡುವ ಒಟ್ಟು ಕೇಂದ್ರೀಕೃತ ಆಹಾರ/ಮೇವಿನ ಪ್ರಮಾಣದಲ್ಲಿ ಕ್ರಮವಾಗಿ ಸುಮಾರು 10–15%ರಷ್ಟು (ಹಸು, ಎಮ್ಮೆ ಮತ್ತು ಮೇಕೆಗಳಿಗೆ) ಹಾಗೂ 5–10%ರಷ್ಟು (ಕೋಳಿಗಳಿಗೆ) ಪೂರಕವಾಗಿರಬಹುದು. ಅಜೋಲಾ ಉತ್ಪಾದನೆ, ಕೊಯ್ಲು, ಸಂಸ್ಕರಣೆ ಮತ್ತು ಜಾನುವಾರುಗಳಿಗೆ ನೀಡುವ ಪ್ರಮಾಣದ ಕುರಿತು ಪ್ರಮಾಣಿತ ಮಾರ್ಗಸೂಚಿ (SOP) ಗಳನ್ನು ಅನುಸರಿಸುವುದು ಅಗತ್ಯ.
ಜಾನುವಾರುಗಳ ಒಟ್ಟು ಆಹಾರ ಪಡಿತರವನ್ನು ಅವಲಂಬಿಸಿ ಈ ಪ್ರಮಾಣದಲ್ಲಿ ವ್ಯತ್ಯಾಸವಾಗಬಹುದು. ಆರಂಭದಲ್ಲಿ ಕಡಿಮೆ ಪ್ರಮಾಣದ ಅಜೋಲಾವನ್ನುನೀಡಿ, ನಂತರ ಕ್ರಮೇಣ ಪ್ರಮಾಣವನ್ನು ಹೆಚ್ಚಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ (AHVS) ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಅಧಿಕಾರಿಗಳು ಅಥವಾ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿಗಳನ್ನುಸಂಪರ್ಕಿಸಬಹುದು.
ಗುಣಮಟ್ಟ ಮತ್ತು ಸುರಕ್ಷತೆ ಅತ್ಯಗತ್ಯ
ಅಜೋಲಾ ಉತ್ಪಾದಿಸುವಾಗ ಗುಣಮಟ್ಟ ಮತ್ತು ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು. ಅಜೋಲಾದ ಪೌಷ್ಟಿಕ ಸಂಯೋಜನೆ ಬೆಳೆಯುವ ಪರಿಸ್ಥಿತಿಯ ಮೇಲೆ ಬದಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ನಾರು ಮತ್ತು ಕೆಲವು ಪ್ರತಿ ಪೌಷ್ಟಿಕ ಅಂಶಗಳ ಪರಿಣಾಮ ಉಂಟಾಗಬಹುದಾಗಿದೆ. ಕಲುಷಿತ ನೀರಿನಲ್ಲಿ ಬೆಳೆದ ಅಜೋಲಾ ಮಾಲಿನ್ಯಕಾರಕಗಳನ್ನು ಸಂಗ್ರಹಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸ್ವಚ್ಛ ನೀರು ಮತ್ತು ಗುಣಮಟ್ಟದ ಉತ್ಪಾದನಾ ವ್ಯವಸ್ಥೆಅತ್ಯಂತ ಮುಖ್ಯ.
ರೈತರ ಮನೆಯ ಬಳಿಯೇ ಮೇವು ಉತ್ಪಾದನೆ:
ಅಜೋಲಾದ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಇದನ್ನು ದೊಡ್ಡ ಪ್ರಮಾಣದ ಕೃಷಿಭೂಮಿ ಅಗತ್ಯವಿಲ್ಲದೆ ಸಣ್ಣ ಪ್ರಮಾಣದ ವ್ಯವಸ್ಥೆಯಲ್ಲಿಯೇ ಉತ್ಪಾದಿಸಬಹುದಾಗಿದೆ. ಸೂಕ್ತ ನೀರಿನ ವ್ಯವಸ್ಥೆ ಹೊಂದಿರುವ ರೈತರು ತಮ್ಮ ಮನೆ ಅಥವಾ ಜಾನುವಾರು ಕೊಟ್ಟಿಗೆಯ ಸಮೀಪದಲ್ಲಿಯೇ ಅಜೋಲಾ ಬೆಳೆಸಿಕೊಳ್ಳಬಹುದು. ಇದರಿಂದ ಪ್ರತಿದಿನ ಜಾನುವಾರುಗಳಿಗೆ ಅಗತ್ಯವಿರುವ ಪೂರಕ ಮೇವನ್ನು ಸ್ಥಳೀಯವಾಗಿ ಉತ್ಪಾದಿಸುವ ಅವಕಾಶ ದೊರೆಯುತ್ತದೆ. ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಹಸಿರುಮೇವು ಲಭ್ಯತೆ ಕಡಿಮೆಯಾದಾಗ ಇದು ರೈತರಿಗೆ ಸಹಾಯಕವಾಗಬಹುದು.
ಒಬ್ಬರೈತ – ಹಲವು ಜಾನುವಾರುಗಳಿಗೆ ನೆರವು’
ಅಜೋಲಾ ಉತ್ಪಾದನೆಯನ್ನು ಕೇವಲ ವೈಯಕ್ತಿಕ ರೈತರ ಪ್ರಯೋಜನಕ್ಕೆ ಸೀಮಿತಗೊಳಿಸದೆ, ಗ್ರಾಮ ಮಟ್ಟದ ಮೇವು ಭದ್ರತಾ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ನೀರಾವರಿ ಇರುವ ಪ್ರದೇಶಗಳಲ್ಲಿ ಆಯ್ದ ರೈತರು ಅಜೋಲಾ ಸೇರಿದಂತೆ ಪೂರಕ ಮೇವು ಉತ್ಪಾದಿಸಿ, ಅದನ್ನು ಮೇವು ಕೊರತೆ ಯಿರುವ ಪ್ರದೇಶಗಳಿಗೆ ಅಥವಾ ಅಗತ್ಯವಿರುವ ಜಾನುವಾರು ಮಾಲೀಕರಿಗೆ ಪೂರೈಸುವ ವ್ಯವಸ್ಥೆಯನ್ನು ರೂಪಿಸಬಹುದು. ಈ ಮೂಲಕ ಸರ್ಕಾರದ ಮೇವು ವಿತರಣಾ ಕಾರ್ಯಕ್ರಮಕ್ಕೆ ಸ್ಥಳೀಯ ಉತ್ಪಾದನೆಯ ಮೂಲಕ ಮತ್ತಷ್ಟು ಬಲ ದೊರೆಯುತ್ತದೆ.
ಸರ್ಕಾರದ ಬೆಂಬಲದೊಂದಿಗೆ ಮೇವು ಭದ್ರತೆ
ಹೆಚ್ಚುವರಿ ಅಜೋಲಾ ಘಟಕಗಳನ್ನು ಸ್ಥಾಪಿಸಲು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 2026-27ನೇ ಸಾಲಿನ ಜಿಲ್ಲಾವಾರು ಕ್ರಿಯಾ ಯೋಜನೆ/ಕಾರ್ಯ ಯೋಜನೆಯಲ್ಲಿ “ಅಜೋಲಾ ಪೌಷ್ಟಿಕ ಪೂರಕ ಮೇವು ಉತ್ಪಾದನಾ ಘಟಕ ನಿರ್ಮಾಣ”ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.
ಸರ್ಕಾರವು ಮೇವು ಬೀಜಗಳ ಖರೀದಿ ಮತ್ತು ವಿತರಣಾ ಕಾರ್ಯಕ್ರಮಕ್ಕಾಗಿ ರೂ. 25 ಕೋಟಿಗಳನ್ನು ಒದಗಿಸಿದೆ. ಈ ಪೈಕಿ, 4,72,114 ಮೇವಿನ ಬೀಜದ ಮಿನಿಕಿಟ್ಗಳನ್ನು ಖರೀದಿಸಿ, ನೀರಾವರಿ ಸೌಲಭ್ಯ ಹೊಂದಿರುವ ರೈತರನ್ನು ಗುರುತಿಸಿ, ಅವರಿಗೆ ಮೇವು ಉತ್ಪಾದನೆಗೆ ಅಗತ್ಯವಾದ ಬೀಜ, ತರಬೇತಿ ಹಾಗೂ ತಾಂತ್ರಿಕ ಮಾರ್ಗದರ್ಶನ ಒದಗಿಸಲಾಗುವುದು. ಇಂತಹ ರೈತರೊಂದಿಗೆ ಒಡಂಬಡಿಕೆ (MOU) ಮಾಡಿಕೊಂಡು, ಅವರು ಉತ್ಪಾದಿಸುವ ಹೆಚ್ಚುವರಿ ಮೇವನ್ನು ಸರ್ಕಾರದ ಮೂಲಕ ಮೇವು ಅಗತ್ಯವಿರುವ ಜಾನುವಾರು ಮಾಲೀಕರಿಗೆ ತಲುಪಿಸಲಾಗುವುದು. ಇದರಿಂದ ಮೇವು ಉತ್ಪಾದಿಸುವ ಸಾಮರ್ಥ್ಯವಿರುವ ರೈತರಿಗೆ ಅವಕಾಶ ದೊರೆಯುವುದರ ಜೊತೆಗೆ, ಸ್ವಂತವಾಗಿ ಮೇವು ಉತ್ಪಾದಿಸಲು ಸಾಧ್ಯವಾಗದ ರೈತರಿಗೆ ಸರ್ಕಾರದ ಮೂಲಕ ಅಗತ್ಯ ಮೇವು ಲಭ್ಯವಾಗುವಂತೆ ಮಾಡಲಾಗುವುದು.
ಸುಸ್ಥಿರ ಪಶುಪಾಲನೆಯತ್ತ ಹೆಜ್ಜೆ
ಅಜೋಲಾದ ವೇಗವಾದ ಜೈವಿಕ ಬೆಳವಣಿಗೆ, ನೈಟ್ರೋಜನ್ ಸ್ಥಿರೀಕರಣದ ಸಾಮರ್ಥ್ಯ ಮತ್ತು ಪೌಷ್ಟಿಕ ಗುಣಗಳು ಸಣ್ಣ ಪ್ರಮಾಣದ ಹಾಗೂ ಸಮಗ್ರ ಕೃಷಿವ್ಯವಸ್ಥೆಗಳಿಗೆ ಪೂರಕವಾಗಿದೆ. ಆದರೆ ಸುರಕ್ಷಿತ ಮತ್ತು ಆರ್ಥಿಕವಾಗಿ ಸೂಕ್ತ ಬಳಕೆಗೆ ಪ್ರಮಾಣಿತ ಉತ್ಪಾದನಾ ವಿಧಾನಗಳು ಮತ್ತು ಸೂಕ್ತ ಆಹಾರ ನಿರ್ವಹಣೆ ಅಗತ್ಯವಾಗಿದೆ.
ಸಮಾರೋಪ
ಮಳೆಯ ಕೊರತೆ ಮತ್ತು ನೀರಿನ ಅಭಾವದಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ನಿರಂತರವಾಗಿ ಮೇವು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಂಪ್ರದಾಯಿಕ ಮೇವು ಬೆಳೆಗಳು ಉತ್ತಮ ಆಯ್ಕೆಯಾಗಿದ್ದರೂ, ಅವುಗಳಿಗೆ ಅಗತ್ಯವಿರುವ ಬೆಳವಣಿಗೆಯ ಅವಧಿ ಮತ್ತು ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಜೋಲಾದಂತಹ ಕಡಿಮೆ ನೀರಿನಲ್ಲಿ ಉತ್ಪಾದಿಸಬಹುದಾದ ಪೂರಕ ಮೇವು ಸಂಪನ್ಮೂಲಗಳಿಗೆ ಹೆಚ್ಚಿನ ಗಮನನೀಡುವುದು ಇಂದಿನ ಅಗತ್ಯವಾಗಿದೆ.
ಸರ್ಕಾರದ ನೆರವು, ಇಲಾಖೆಗಳ ಸಮನ್ವಯ, ನೀರಾವರಿ ಸೌಲಭ್ಯ ಹೊಂದಿರುವ ರೈತರ ಸಹಭಾಗಿತ್ವ ಮತ್ತು ವೈಜ್ಞಾನಿಕ ಮಾರ್ಗದರ್ಶನದ ಮೂಲಕ ಜಾನುವಾರುಗಳ ಮೇವು ಲಭ್ಯತೆಯನ್ನು ಬಲಪಡಿಸಲು ಅಜೋಲಾ ತಂತ್ರಜ್ಞಾನವನ್ನು ರೈತರ ಬಳಿಗೆ ಕೊಂಡೊಯ್ಯುವುದು ಇಂದಿನ ಮೇವು ಭದ್ರತೆಯ ಸವಾಲಿಗೆ ಒಂದು ಸುಸ್ಥಿರ ಪರಿಹಾರವಾಗಬಹುದು ಎಂದು ಭಾವಿಸಿದೆ.
(ಡಾ. ಶಾಲಿನಿರಜನೀಶ್)
ಸರ್ಕಾರದ ಮುಖ್ಯ ಕಾರ್ಯದರ್ಶಿ
