ಪ್ರವಾಹವು ಕೇವಲ ಪ್ರಕೃತಿ ವಿಕೋಪವಲ್ಲ, ಮಾನವ ನಿರ್ಮಿತ ತಪ್ಪುಗಳ ಪರಿಣಾಮವೂ ಆಗಿದೆ. ನದಿ ದಂಡೆಗಳಲ್ಲಿ ಅನಿಯಂತ್ರಿತ ನಿರ್ಮಾಣ, ಜಲಮೂಲಗಳ ಅತಿಕ್ರಮಣ, ಯೋಜಿತವಲ್ಲದ ನಗರೀಕರಣ, ಜೌಗು ಪ್ರದೇಶಗಳ ನಾಶ, ಹೂಳು ತೆಗೆಯುವ ಕಾರ್ಯದ ನಿರ್ಲಕ್ಷ್ಯ ಹಾಗೂ ಕಳಪೆ ಅಣೆಕಟ್ಟು ನಿರ್ವಹಣೆಯಂತಹ ಅಂಶಗಳು ಪ್ರವಾಹದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಚೇರಿಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಡಾ. ಕುಮಾರ್ ವಿ.ಎಲ್.ಎಸ್. ಹೇಳಿದರು.
ನಗರದ ರಾಜೇಂದ್ರನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ “ಅಸ್ಸಾಂ ಪ್ರವಾಹ ಪರಿಹಾರ ಕಾರ್ಯಾಚರಣೆ–2026 ಸ್ಮರಣೀಯ ಕ್ಷಣಗಳು” ಎಂಬ ವಿಷಯದ ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟಗಳಂತಹ ಪರ್ವತ ಪ್ರದೇಶಗಳಲ್ಲಿ ನಡೆಯುತ್ತಿರುವ ಅನಿಯಂತ್ರಿತ ನಿರ್ಮಾಣ, ಅರಣ್ಯನಾಶ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ಭೂಕುಸಿತ ಮತ್ತು ಶಿಲಾಖಂಡರಾಶಿಗಳ ಜಾರುವಿಕೆಗೆ ಕಾರಣವಾಗುತ್ತಿವೆ. ನಗರ ಯೋಜನೆಯಲ್ಲಿ ಪರಿಸರ ಸುಸ್ಥಿರತೆಯನ್ನು ಪ್ರಮುಖ ಅಂಶವಾಗಿ ಪರಿಗಣಿಸಬೇಕು. ಜೊತೆಗೆ ನಾಗರಿಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದೂ ಇಂತಹ ದುಸ್ಥಿತಿಗೆ ಕಾರಣವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಸ್ಸಾಂನಲ್ಲಿ ಈ ವರ್ಷ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ತಂಡ ಕೈಗೊಂಡ ಪರಿಹಾರ ಕಾರ್ಯಾಚರಣೆಗಳ ಕುರಿತು ವಿವರಿಸಿದ ಅವರು, ಪರಿಹಾರ ಶಿಬಿರಗಳ ಸ್ಥಾಪನೆ, ಆಹಾರ, ಕುಡಿಯುವ ನೀರು, ಔಷಧಿ ಹಾಗೂ ಅಗತ್ಯ ವಸ್ತುಗಳ ವಿತರಣೆ, ನೀರು ಶುದ್ಧೀಕರಣ ಘಟಕಗಳ ನಿಯೋಜನೆ ಮತ್ತು ಸ್ಥಳೀಯ ಸ್ವಯಂಸೇವಕರಿಗೆ ತರಬೇತಿ ನೀಡುವ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಭಾರೀ ಮಳೆಯ ಅವಧಿಯಲ್ಲಿ ಸರ್ಕಾರದ ಸೂಚನೆಗಳು ಹಾಗೂ ಹವಾಮಾನ ಮುನ್ಸೂಚನೆಗಳ ಆಧಾರದ ಮೇಲೆ ನದಿ ಮಟ್ಟಗಳ ನಿರಂತರ ಮೇಲ್ವಿಚಾರಣೆ ನಡೆಸಲಾಯಿತು. ಪ್ರವಾಹದ ನೀರು ಇಳಿದ ನಂತರ ಮನೆಗಳು, ರಸ್ತೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಿಗೆ ಉಂಟಾದ ಹಾನಿಯ ಮೌಲ್ಯಮಾಪನವನ್ನೂ ಕೈಗೊಳ್ಳಲಾಯಿತು ಎಂದು ಪರಿಹಾರ ಕಾರ್ಯಾಚರಣೆಯ ಅನುಭವಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಅವರು, ಮಾನ್ಸೂನ್ ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಸಾವಿರಾರು ಕುಟುಂಬಗಳು ವಸತಿ, ಆಹಾರ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸಿವೆ. ಹವಾಮಾನ ವೈಪರೀತ್ಯವು ದೇಶಾದ್ಯಂತ ಪ್ರವಾಹ ಮತ್ತು ಭೂಕುಸಿತಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಪರಿಹಾರ ಕಿಟ್, ಪ್ರತಿಯೊಬ್ಬ ಸ್ವಯಂಸೇವಕ ಹಾಗೂ ಪ್ರತಿಯೊಂದು ಸೇವಾ ಗಂಟೆಯೂ ಸಂಕಷ್ಟದಲ್ಲಿರುವ ಜನರ ಬದುಕಿಗೆ ಆಶಾಕಿರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಕುಮಾರ್ ಅವರು ಪವರ್‌ಪಾಯಿಂಟ್ ಪ್ರಸ್ತುತಿಯ ಮೂಲಕ ಅಸ್ಸಾಂ ಪ್ರವಾಹ ಪರಿಹಾರ ಕಾರ್ಯಾಚರಣೆಯ ವಿವರಗಳನ್ನು ನೀಡಿದ್ದು, ರೋಟರಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿ ಆರ್. ಮನೋಹರ್, ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ. ವಿಜಯಕುಮಾರ್, ಮಾಜಿ ಅಧ್ಯಕ್ಷರಾದ ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಎನ್.ಎಚ್. ಡಾ. ಪರಮೇಶ್ವರ್ ಶಿಗ್ಗಾವ್, ಅರುಣ್ ದೀಕ್ಷಿತ್, ಕೃಷ್ಣಮೂರ್ತಿ ಬಿ., ನಿಕಟಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಬಿ.ಆರ್. ಧನಂಜಯ್, ಧರಣೇಂದ್ರ ದಿನಕರ್, ಕೇಶವಪ್ಪ, ಶಶಿಕಾಂತ್ ನಾಡಿಗ್, ಜಿ. ಸುನಿಲ್ ಕುಮಾರ್, ರವಿಪ್ರಕಾಶ್ ಕಾಳಾಚಾರ್, ಕಾಸಲ ವಿ. ಸುರೇಂದ್ರ, ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಜಗದೀಶ್, ಕೆ.ಟಿ. ಗುರುಮೂರ್ತಿ, ರಾಜೇಶ್ ಸೇರಿದಂತೆ ರೋಟರಿ ಹಾಗೂ ಇನ್ನರ್ ವೀಲ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
