ಒಂದೊಮ್ಮೆ ಅದು ಪತ್ರಿಕಾರಂಗ ಎನಿಸಿಕೊಂಡದ್ದ ಕಾಲದಲ್ಲಿ ಪತ್ರಿಕೆಗಳಲ್ಲಿ ಸತ್ಯ ಧರ್ಮಗಳನ್ನು ಎತ್ತಿ ಹಿಡಿಯಲಾಗುತ್ತಿತ್ತು ಆಗ ಸಂಪಾದಕರ ವೈಯಕ್ತಿಕ ವರ್ಚಸ್ಸಿನಲ್ಲೇ ಪತ್ರಿಕೆ ನಡೆಸುತ್ತಿದ್ದರು.
ಆದರೆ ಅದು ಪತ್ರಿಕೋದ್ಯಮದ ರೂಪು ಪಡೆದಾದ ಪ್ರಕಟಣೆಯ ವ್ಯಾಪ್ತಿ ಮತ್ತು ಸುದ್ದಿ ಉದ್ಯಮಿಗಳ ನಿಯಂತ್ರಣಕ್ಕೆ ಬಂತು.
ಆಯಾ ಉದ್ಯಮಿಯ
ಇಂಗಿತವನ್ನಾಧರಿಸಿ ಪತ್ರಿಕೆಗಳು ತಮ್ಮ ತಮ್ಮ ಸುದ್ದಿಯ ಸ್ವರೂಪವನ್ನು ರೂಪಿಸಿಕೊಂಡವು.
ಇಂತಹ ಸಂದರ್ಭದಲ್ಲಿ ಸುದ್ದಿಯು ಕಳೆದುಕೊಂಡ ಪಾವಿತ್ರ್ಯತೆಯನ್ನು ಉಳಿಸಿಕೊಂಡ ಪ್ರಕಾರವೇ ” ಅಂಕಣ ಬರಹ”ಗಳು. ಅವು ಸುದ್ದಿಯ ಕ್ಷಣಿಕ ಪ್ರಸ್ತುತತೆಯನ್ನು ಮೀರಿ, ನಾನಾ ಸುದ್ದಿಗಳ ಹಿಂದಿನ ಸತ್ಯವನ್ನು ಹಲವು ಆಯಾಮಗಳಲ್ಲಿ ವಿಶ್ಲೇಷಿಸುತ್ತಾ ಸಾರ್ವಕಾಲಿಕ ಮಹತ್ವವನ್ನು ಅಂಕಣ ಬರಹಗಳು
ಪಡೆದುಕೊಂಡವು. ಹೀಗಾಗಿ ಸಂಪಾದಕ ವರ್ಗವೇ ಅಲ್ಲದೇ ಸಾಹಿತ್ಯ ವಲಯ, ವಿವಿಧ ವೃತ್ತಿನಿರತರಿಂದ ಅಂಕಣ ಬರಹಗಳು ಇನ್ನೂ ಹೆಚ್ಚು ಶ್ರೀಮಂತವಾದವು. ಪತ್ರಿಕೆಗಳಿಗೆ ನಿಯತವಾಗಿ ಓದುಗ ವರ್ಗವನ್ನೂ ಹೆಚ್ಚಿಸುವಲ್ಲಿ ಅಂಕಣ ಬರಹಗಾರರು ತಮ್ಮದೇ ಕೊಡುಗೆ ನೀಡಿದರು ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈದ್ಯನಾಥ್ ಹೇಳಿದರು.
ಕನ್ನಡ ಪತ್ರಿಕಾಕ್ಷೇತ್ರದಲ್ಲಿ ಅಂಕಣ ಸಾಹಿತ್ಯ ಈಗೀಗ ಪ್ರತಿಷ್ಠಿತವೆನಿಸಿದೆ.
ಅಂಕಣ ಬರಹಗಳು
ಸಮಾಜದ ಅನೇಕ ತಲ್ಲಣ, ಪಲ್ಲಟ ಮತ್ತು ಸಾಮಾಜಿಕ ಸಮಸ್ಯೆಗಳ ರೂಢಮೂಲ ವಿಶ್ಲೇಷಣೆ ಮತ್ತು ಪರ ವಿರೋಧ ಚರ್ಚೆಗೆ ಅವಕಾಶ ನೀಡುತ್ತಿವೆ. ಅಂತಹ ಸಮರ್ಥ ವಿಶ್ಲೇಷಣೆ ಮತ್ತು ವಿಡಂಬನಾತ್ಮಕ ಲೇಖನಗಳು ಡಾ.ರಾಘವೇಂದ್ರ ವೈಲಾಯರ ” ಖಾರ ಬಾತ್ ” ಪುಸ್ತಕದಲ್ಲಿವೆ
ಎಂದು ಹಿರಿಯ ಪತ್ರಕರ್ತ, ಚಲನಚಿತ್ರ ಕಲಾವಿದರಾದ ವೈದ್ಯನಾಥ್ ಅವರು ಖಾರ ಬಾತ್ ಪುಸ್ತಕ ಪರಿಚಯದ ಭಾಣದಲ್ಲಿ ಹೇಳಿದರು. ಅಖಿಲ ಭಾರತಿಯ ಸಾಹಿತ್ಯ ಪರಿಷತ್ತು,ಶಿವಮೊಗ್ಗ ಶಾಖೆ, ಜನನಿ ನ್ಯೂಲೈಫ್ ಆಸ್ಪತ್ರೆ ಮತ್ತು ಯಾಜಿ ಪ್ರಕಾಶನಗಳ ಸಹಯೋಗದಲ್ಲಿ ಖಾರ ಬಾತ್ ಪುಸ್ತಕ ಲೋಕಾರ್ಪಣೆ ಸಮಾರಂಭ ನಡೆಯಿತು. ಶಿವಮೊಗ್ಗದ ಸನ್ ಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ನಾಡಿನ ಹಿರಿಯ ಅಂಕಣ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು “ಖಾರ ಬಾತ್” ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಪುಸ್ತಕಗಳಿಂದ ಜೀವನವೇ ಬದಲಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದೆ. ಅಂತಹ ಸಂದರ್ಭದಲ್ಲಿ ಅರ್ಥಶಾಸ್ತ್ರಜ್ಞರ ಪುಸ್ತಕಗಳನ್ನ ಓದುವ ಅವಕಾಶ ಸಿಕ್ಕಿತು.
ಅಲ್ಲಿಂದ ನನ್ನ ಬದುಕೇ ಬದಲಾಯಿತು.
ಹಣ ಚಲಾವಣೆ, ಹೂಡಿಕೆ ಮುಂತಾದ ಬುದ್ಧಿಕೌಶಲಗಳ ಬಗ್ಗೆ ಬರೆಯುವ ಪ್ರೇರಣೆ ಅದರಿಂದಲೇ ಸಿಕ್ಕಿತು. ಪತ್ರಿಕೆಯಲ್ಲಿ “ಹಣ- ಕ್ಲಾಸು” ಮುಂತಾದ ಅಂಕಣಗಳಿಗೆ ಓದುಗರು ಒಳ್ಳೆಯ ಪ್ರತಿಕ್ರಿಯೆ ನೀಡಿದರು.
ಜೊತೆಗೆ ಪುಸ್ತಕಗಳನ್ನ ಕೊಂಡು ಓದುವ ಹವ್ಯಾಸಕೂಡ ಬೆಳೆಸಿಕೊಂಡೆ.
ಪ್ರಸ್ತುತ ಖಾರಬಾತ್ ಪುಸ್ತಕದ ಲೇಖಕ ಡಾ.ರಾಘವೇಂದ್ರ ವೈಲಾಯರು ಒಬ್ಬ ಅನನ್ಯ ಚಿಂತಕರು. ನಮ್ಮ ಸಮಾಜ, ರಾಜಕೀಯ, ಶಿಕ್ಷಣರಂಗ, ಸಂಸ್ಕೃತಿ, ವೈದ್ಯಕೀಯ ರಂಗ ಎಲ್ಲದರ ಬಗ್ಗೆ ವಾಸ್ತವ
ಚಿತ್ರಣವನ್ನು ನಿಷ್ಠುರವಾಗಿ, ನೇರನುಡಿಗಳಲ್ಲಿ ಹಿಡಿದಿಟ್ಟಿದ್ದಾರೆ. ಹೀಗಾಗಿ ನನಗೆ ಅವರ ಬರಹಗಳು ಇಷ್ಟವಾಗಿವೆ ಎಂದು ಖಾರಬಾತ್ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಸನ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ,ಮೂಳೆ ಮತ್ತು ಬೆನ್ನುಹುರಿ ತಜ್ಞ ಡಾ.ಆಕಾಶ್ ಹೊಸತೋಟ
ಅವರು ಜ್ಯೋತಿ ಬೆಳಗಿಸಿ, ಭಾರತಾಂಬೆ, ಕನ್ನಡಾಂಬೆ ಹಾಗೂ ಸಾಯಿಬಾಬ ಗುರುಪೀಠಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಸತ್ಸಂಗಕ್ಕೆ, ತರಬೇತಿ, ಸಮಾಜಕ್ಕೆ ಹಿತವೆನ್ನಿಸುವ ವಿಚಾರ ಸಂಕಿರಣಗಳಿಗೆ ಸದಾ ಮೀಸಲಾಗಿರುವ ಈ ಸಭಾಂಗಣದಲ್ಲಿ ಖಾರ ಬಾತ್ ನಂತಹ ವೈವಿಧ್ಯ ಲೇಖನಗಳ ಸಂಕಲನ ಲೋಕಾರ್ಪಣೆಯು ನನಗೆ
ಖುಷಿಕೊಟ್ಟಿದೆ ಎಂದು ಡಾ.ಆಕಾಶ್ ಹೇಳಿದರು. ಮುಖ್ಯ ಅತಿಥಿಗಳಾಗಿ’ ಕಗ್ಗ’ ಖ್ಯಾತಿಯ ಖ್ಯಾತ ವಾಗ್ಮಿ ಜಿ.ಎಸ್.ನಟೇಶ್, ಕೃತಿಕರ್ತ ಡಾ.ಸಿ.ಜಿ.ರಾಘವೇಂದ್ರ ವೈಲಾಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ ಉಪಸ್ಥಿತರಿದ್ದರು.
ಒಂದು ಶ್ರೇಷ್ಠ ಕಾವ್ಯಕ್ಕೆ ಮನಸ್ಸನ್ನು ತೀವ್ರವಾಗಿ ತಟ್ಟುವುದು, ಹೊಸ ವಿಚಾರಗಳಿಗೆ ಪ್ರೇರಣೆ ನೀಡುವುದು ಮೊದಲಾದ ಹಲವು ಲಕ್ಷಣಗಳಿವೆ. ಅಂತಹ ತೀವ್ರತೆ, ಪ್ರೇರಣೆ, ಚಿಂತನ-ಮಂಥನಗಳು ಖಾರಬಾತ್ ಪುಸ್ತಕದ ಓದಿನಿಂದ ಸಿಗುತ್ತದೆ. ಹಲವು ಸಂಗತಿಗಳನ್ನಂತೂ ವೇದಕಾಲೀನ ಉಕ್ತಿಗಳಿಂದಲೂ, ಕನ್ನಡದ ಹಲವು ಜನಪ್ರಿಯ ನಾಣ್ಣುಡಿಗಳಿಂದಲೂ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ ಎಂದು ಜಿ.ಎಸ್.ನಟೇಶ್ ತಮ್ಮ ಸೋದಾಹರಣ ಭಾಷಣದಲ್ಲಿ ತಿಳಿಸಿದರು.
ಲೇಖರಾಗಿ ಡಾ.ಸಿಜಿ.ರಾಘವೇಂದ್ರ ವೈಲಾಯರು ತಮ್ಮನ್ನು ತೀವ್ರವಾಗಿ ಕಾಡಿದ ವಿಚಾರಗಳು, ಸಾರ್ವಜನಿಕವಾಗಿ ಅವುಗಳ ಕುರಿತು ಚರ್ಚೆಗೆ ಇರುವ ಪ್ರತಿರೋಧ, ತಾತ್ವಿಕ ಜಿಜ್ಞಾಸೆಗಳು, ಹಲವಾರು ಐತಿಹಾಸಿಕ ಮತ್ತು ಪೌರಾಣಿಕ ತಥ್ಯಗಳ ತಪ್ಪು ನಿರೂಪಣೆಗಳ ಮುಂದುವರಿಕೆಯಿಂದ ದೇಶದಲ್ಲಿ ಭುಗಿಲೆದ್ದಿರುವ ವಾದ ವಿವಾದಗಳು ತಮ್ಮನ್ನು ಖಾರವಾಗಿಯೂ ನಿಷ್ಠುರವಾಗಿಯೂ ಬರೆಯುವಂತೆ ಮಾಡಿವೆ. ಎಲ್ಲೂ ಪರಿಣಾಮಗಳಿಗೆ ಭಯಪಟ್ಟು ನಾನು ನನ್ನ ವಿಚಾರ ಮತ್ತು ವಿಷಯ ನಿರೂಪಣೆಗಳಲ್ಲಿ ಕಿಂಚಿತ್ತೂ ರಾಜಿ ಇಲ್ಲದಂತೆ ವಸ್ತುವಿವರಣೆಗಳನ್ನು ಓದುಗರ ಮುಂದಿಟ್ಟುರುವೆ ಎಂದು ನುಡಿದರು.
ಪುಸ್ತಕ ಲೋಕಾರ್ಪಣೆ ,ಕವಿಗೋಷ್ಠಿ , ಕಾವ್ಯಕಮ್ಮಟ , ರಾಜ್ಯೋತ್ಸವ ಆಚರಣೆ ಮೂಲಕ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನ ಆರಂಭಿಸಿದೆ.
ಈ ಮೂಲಕ ಭಾರತೀಯ ಸಾಹಿತ್ಯ,ಸಂಗೀತ, ಕಲೆ,ಸಂಸ್ಕೃತಿಯ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸುವುದು ಪರಿಷತ್ತಿನ ಆಶಯವಾಗಿದೆ. ಸಹೃದಯರು ಪರಿಷತ್ತಿಗೆ ಸದಸ್ಯರಾಗುವ ಮೂಲಕ ತಮ್ಮ ಬೆಂಬಲ,ಸಹಕಾರ ನೀಡಬೇಕೆಂದು ಅಭಾಸಾಪ ಜಿಲ್ಲಾಧ್ಯಕ್ಷರಾದ ಡಾ.ಸುಧೀಂದ್ರ ಅವರು ಮನವಿ ಮಾಡಿದರು.
ಶ್ರೀಶಾರದಾ ಸಂಗೀತ ವಿದ್ಯಾಲಯದ ಗಾಯಕಿಯರು ವೈಲಾಯರು ರಚಿಸಿದ ಆಯ್ದ ಭಕ್ತಿ, ಭಾವ, ದೇಶಭಕ್ತಿ ಗೀತೆಗಳ ಗಾನಪ್ರಸ್ತುತಿಯ ಮೂಲಕ ಕಲಾಸಕ್ತರನ್ನು ರಂಜಿಸಿದರು. ಅಭಾಸಾಪದ ಉಪಾಧ್ಯಕ್ಷ ಡಾ.ಕೃಷ್ಣ ಎಸ್ ಭಟ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಪುಸ್ತಕ ಲೋಕಾರ್ಪಣೆಯನ್ನು ಬಾಣಸಿಗರ ಛದ್ಮವೇಷಧಾರಿಗಳು ವಿಶಾಲ ಕರಂಡಿಕೆಯಲ್ಲಿ ವೇದಿಕೆಗೆ ಪುಸ್ತಕಗಳನ್ನ ” ಲಘು ಉಪಾಹಾರ”ವನ್ನು ವಿತರಿಸುವಂತೆ ” ಖಾರ ಬಾತ್ ” ಪುಸ್ತಕಗಳನ್ನು ಒಂದೊಂದಾಗಿ ಅನಾವರಣಗೊಳಿಸಿದ ದೃಶ್ಯ ವಿನ್ಯಾಸ ಎಲ್ಲರಿಂದ ಮೆಚ್ಚುಗೆ ಪಡೆಯಿತು.
ಸಮಾರಂಭದಲ್ಲಿ ಮಧ್ಯಂತರವಾಗಿ ಸಾಹಿತ್ಯದ ಕುರಿತು ಹಲವು ರಸಪ್ರಶ್ನೆಗಳನ್ನು ಕೇಳಿ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ನೆರೆದವರ ಮಸ್ತಕವನ್ನೂ ಪ್ರಚೋದಿಸಲಾಯ್ತು.
ಅಭಾಸಾಪದ ಕೋಶಾಧಿಕಾರಿ ಕೆ.ಜಿ.ಮಂಜುನಾಥ ಶರ್ಮರ ಆಭಾರ ಮನ್ನಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
