Thursday, August 27, 2026
Thursday, August 27, 2026

Klive Special Article ಕಾ.ತ.ಚಿಕ್ಕಣ್ಣನವರ ‘ಮನಸು ಮುಗಿಲು’

Date:

-ಡಾ. ರವಿ ಎಂ. ಸಿದ್ಲಿಪುರ

Klive Special Article ಕನ್ನಡ ಸಣ್ಣಕಥಾ ಪರಂಪರೆಯಲ್ಲಿ ಸಾಮಾಜಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಕ್ರೌರ್ಯವನ್ನು, ಅದರ ನಡುವೆ ನಲುಗುವ ಮನುಷ್ಯ ಸಂವೇದನೆಯನ್ನು ಅತ್ಯಂತ ಸೂಕ್ಷ್ಮವಾಗಿ ಧ್ವನಿಸಿದ ಪ್ರಮುಖ ಲೇಖಕರಲ್ಲಿ ಕಾ.ತ.ಚಿಕ್ಕಣ್ಣನವರು ಒಬ್ಬರು. ಅವರ ‘ಮನಸು ಮುಗಿಲು’(1993) ಕಥಾಸಂಕಲನದಲ್ಲಿರುವ ‘ನಿರ್ಗಮನ’, ‘ದೊರೆ’, ‘ಹಮೀದಾಯಣ’, ‘ಎದೆಗೂಡೊಳಗೆ ಮುಗಿಯದ ಮಾತುಗಳು’ ಮತ್ತು ‘ಆಕೃತಿಗಳು’ ಕಥೆಗಳು ಕೇವಲ ಘಟನಾವಳಿಗಳ ನಿರೂಪಣೆಯಾಗಿ ಉಳಿಯದೆ, ಆಧುನಿಕ ನಾಗರಿಕತೆಯ ಕೃತಕತೆ ಹಾಗೂ ಸಂಸ್ಥಾಗತ ವ್ಯವಸ್ಥೆಯು ಜೀವಂತ ಮನುಷ್ಯರನ್ನು ಹೇಗೆ ನಿಷ್ಪ್ರಾಣಿ ಕಡತಗಳನ್ನಾಗಿ ಪರಿವರ್ತಿಸುತ್ತದೆ ಎಂಬುದನ್ನು ಅನಾವರಣಗೊಳಿಸುತ್ತವೆ. ಈ ಕಥಾಗುಚ್ಛವು ಅಧಿಕಾರ, ಶಿಸ್ತು, ಪ್ರೊಸೀಜರ್ ಮತ್ತು ನಾಗರಿಕ ಸೌಜನ್ಯಗಳೆಂಬ ಮುಖವಾಡಗಳ ಹಿಂದೆಡಗಿರುವ ಮನುಷ್ಯನ ಒಂಟಿತನ, ಅಸಹಾಯಕತೆ ಹಾಗೂ ಸಾಮಾಜಿಕ ವೈಷಮ್ಯಗಳನ್ನು ಶೋಧಿಸುವ ಪ್ರಕ್ರಿಯೆಯಾಗಿದೆ.

‘ನಿರ್ಗಮನ’ ಕಥೆಯು ಅಧಿಕಾರದ ತುದಿಯಲ್ಲಿದ್ದು ನಿವೃತ್ತಿಯ ಹೊಸ್ತಿಲಿನಲ್ಲಿ ನಿಂತ ಅಧಿಕಾರಿಯೊಬ್ಬನ ಆಂತರಿಕ ಪತನ ಮತ್ತು ಕಟು ವಾಸ್ತವದ ಜಾಗೃತಿಯನ್ನು ಅನಾವರಣಗೊಳಿಸುತ್ತದೆ. ತನ್ನ ಸೇವಾವಧಿಯುದ್ದಕ್ಕೂ ನಿಯಮ, ಶಿಸ್ತು, ಮತ್ತು ‘ಪ್ರೊಸೀಜರ್’ಗಳನ್ನು ಅಂತಿಮ ಸತ್ಯವೆಂದು ನಂಬಿ ಬದುಕಿದ ಅಧಿಕಾರಿಗೆ ತನ್ನ ನಿವೃತ್ತಿಯ ದಿನದಂದು ಆ ವ್ಯವಸ್ಥೆಯ ನಿಜವಾದ ಕ್ರೌರ್ಯ ಅರಿವಿಗೆ ಬರುತ್ತದೆ. ನಿನ್ನೆಯವರೆಗೆ ತನಗೆ ಜೀ ಹುಜೂರ್ ಎನ್ನುತ್ತಿದ್ದ ಕೆಳಹಂತದ ಸಿಬ್ಬಂದಿ ನಾಗಪ್ಪ, ಶಿವರಾಮಯ್ಯ ಮತ್ತು ಪಿ.ಎ. ನೇತ್ರಾವತಿ ಇಂದು ಆತನನ್ನು ಸಂಪೂರ್ಣವಾಗಿ ಕಡೆಗಣಿಸುವುದು ಅಧಿಕಾರ ಕೇಂದ್ರಿತ ಸಂಬಂಧಗಳ ನಶ್ವರತೆಯನ್ನು ತೋರಿಸುತ್ತದೆ. ತನ್ನ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಕೆಲಸ ಕಳೆದುಕೊಂಡ ಮಂಜಯ್ಯನೆಂಬ ಬಡ ನೌಕರನ ಹೆಂಡತಿ ಮತ್ತು ಐದು ಮಕ್ಕಳ ದೀನ ಮುಖಗಳು, ಆತ ಎಂದೂ ಗಮನಿಸದ ಕಚೇರಿಯ ಹೊರಗಿನ ಬಾಟಲ್‌ಫಾಂ ಮರಗಳು, ನೀಲಾಂಬರಿ ವೃಕ್ಷಗಳು ಹಾಗೂ ಹೂವಿನ ಗಿಡಗಳು ಅಧಿಕಾರಿಯ ಜಡ ಮನಸ್ಸಿಗೆ ಕೊನೆಗಳಿಗೆಯಲ್ಲಿ ಇರಿಯುತ್ತವೆ. ಕಾರ್ಯಾಂಗದ ನಿಯಮಾವಳಿಗಳ ಹಿಡಿತದಲ್ಲಿ ಮನುಷ್ಯನ ಪ್ರೀತಿ, ಸ್ವಾರ್ಥ, ದ್ವೇಷ ಮತ್ತು ಅಂತಃಕರಣಗಳು ಹೇಗೆ ನಜ್ಜುಗುಜ್ಜಾಗುತ್ತವೆ ಎಂಬುದಕ್ಕೆ ಈ ಕಥೆಯು ಅಪೂರ್ವ ಸಾಕ್ಷಿಯಾಗಿದೆ. ನಿವೃತ್ತಿಯ ಕ್ಷಣದಲ್ಲಿ ಕಚೇರಿಯಿಂದ ದೊರೆಯುವ ನಿರ್ಗಮನವು ಕೇವಲ ಹುದ್ದೆಯಿಂದಾಗುವ ನಿರ್ಗಮನವಲ್ಲ, ಬದಲಿಗೆ ಆತ ಕಟ್ಟಿಕೊಂಡಿದ್ದ ಅಹಂಕಾರ ಮತ್ತು ಅಧಿಕಾರಪ್ರಜ್ಞೆಯ ನಿರ್ಗಮನವೂ ಆಗಿದೆ.

‘ಆಕೃತಿಗಳು’ ಕಥೆಯು ‘ನಿರ್ಗಮನ’ದ ನಿರೂಪಣೆಯನ್ನು ಇನ್ನೊಂದು ಆಯಾಮಕ್ಕೆ ವಿಸ್ತರಿಸುತ್ತದೆ. ಇಲ್ಲಿ ಅಧಿಕಾರದ ಮೌನವು ಒಂದು ಮಾರಕ ಅಸ್ತ್ರವಾಗಿ ರೂಪುಗೊಳ್ಳುತ್ತದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಿಂದ ತಮ್ಮ ಕಲಾತಂಡಕ್ಕೆ ಸಣ್ಣ ಪ್ರೋತ್ಸಾಹವನ್ನು ನಿರೀಕ್ಷಿಸಿ ರಾಜಧಾನಿಯ ಕಚೇರಿಗೆ ಬರುವ ಯುವಕರ ಉತ್ಸಾಹ ಮತ್ತು ಅವರ ಕ್ರಿಯಾಶೀಲತೆಯನ್ನು, ಅಧಿಕಾರ ವರ್ಗದ ಜಡ ಮತ್ತು ಕೃತಕ ಮೌನವು ಹೇಗೆ ನಿಷ್ಕ್ರಿಯಗೊಳಿಸುತ್ತದೆ ಎಂಬುದನ್ನು ಕಥೆ ಚಿತ್ರಿಸುತ್ತದೆ. ‘ಭಾಮೆ’ ಎಂಬ ಕಲ್ಪಿತ ಅಥವಾ ಗತಿಸಿದ ಪಾತ್ರದೊಂದಿಗೆ ನಡೆಸುವ ಆಂತರಿಕ ಸಂಭಾಷಣೆಯ ಮೂಲಕ, ಕಚೇರಿಯ ಗೋಡೆಗಳ ನಡುವೆ ಅಡಗಿರುವ ಒಂಟಿತನ ಮತ್ತು ಅಸಂವೇದನಾಶೀಲತೆಯನ್ನು ಲೇಖಕರು ಅನಾವರಣಗೊಳಿಸುತ್ತಾರೆ. ದೂರದ ಗ್ರಾಮೀಣ ಭಾಗದ ಮಳೆಯಿಲ್ಲದ ಎತ್ತರದ ಮೋಡಗಳ ಕೆಳಗೆ ಜೀವಿಸುವ ಜನರ ಅಪಾರ ಭರವಸೆ ಮತ್ತು ಆಸೆಯನ್ನು, ರಾಜಧಾನಿಯ ನೌಕರಶಾಹಿಯ ‘ಪ್ರೊಸೀಜರ್’ ಮತ್ತು ಮೌನದ ಬಂಡೆಗಳು ಹೇಗೆ ಕರಗಿಸಿಬಿಡುತ್ತವೆ ಎಂಬುದನ್ನು ಈ ಕಥೆಯು ಸಾಂಕೇತಿಕವಾಗಿ ಧ್ವನಿಸುತ್ತದೆ.

‘ಹಮೀದಾಯಣ’ ಕಥೆಯು ವ್ಯವಸ್ಥೆಯು ತೋರ್ಪಡಿಕೆಯ ಪ್ರಗತಿಪರತೆಯ ಹಿಂದೆ ಎಸಗುವ ಸಾಂಸ್ಥಿಕ ದೌರ್ಜನ್ಯದ ಧಗಧಗಿಸುವ ಉದಾಹರಣೆಯಾಗಿದೆ. ಬಸವಣ್ಣನವರ ಜಾತ್ಯತೀತತೆ ಮತ್ತು ಸಮಾನತೆಯ ಸಂದೇಶ ಸಾರುವ ಮಹಾನ್ ಜಯಂತ್ಯುತ್ಸವದ ವೇದಿಕೆಯ ಸಿದ್ಧತೆಗೆ ಹಮೀದ ಮತ್ತು ಆತನ ಹೆಂಡತಿ ತಮ್ಮ ಬೆವರನ್ನಷ್ಟೇ ಅಲ್ಲ, ಜೀವವನ್ನೇ ತೇಯುತ್ತಾರೆ. ಹಮೀದನು ನಿಷ್ಠೆಯಿಂದ ತೊಳೆದ ದೀಪದ ಕಂಬಗಳು ಮತ್ತು ಆತ ಶ್ರಮಿಸಿ ಸಿದ್ಧಗೊಳಿಸಿದ ವೇದಿಕೆಯ ಮೇಲೆ ಬುದ್ಧಿಜೀವಿಗಳು, ಅಧಿಕಾರಿಗಳು ಮತ್ತು ಪೊಲೀಸರು ಸಮಾನತೆಯ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ, ಅತಿಥಿಗಳಿಗೆ ಕುಡಿಯಲು ಇಟ್ಟಿದ್ದ ಮಡಕೆಯ ನೀರು ಚೆಲ್ಲಬಾರದೆಂದು ಅದನ್ನು ನೆಟ್ಟಗೆ ಮಾಡಲು ಹೋದ ಹಮೀದನನ್ನು ‘ಈಡಿಯಟ್’ ಎಂದು ಜರೆದು, ಪೊಲೀಸರಿಂದ ಹೊಡೆಸಿ ಈಚೆಗೆ ತಳ್ಳಲಾಗುತ್ತದೆ. ವೇದಿಕೆಯ ಮೇಲಿನ ಶಬ್ದಜಾಲಕ್ಕೂ, ವೇದಿಕೆಯ ಕೆಳಗಿನ ಹಮೀದನಂತಹ ಶ್ರಮಿಕರ ನೈಜ ಬದುಕಿಗೂ ಇರುವ ಕಂದರವನ್ನು ಲೇಖಕರು ಇಲ್ಲಿ ಕಟುವಾದ ವಿಡಂಬನೆಯ ಮೂಲಕ ತೆರೆದಿಡುತ್ತಾರೆ. ಲೈಂಗಿಕ, ಸಾಮಾಜಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನು ಮೀರಿ ಪ್ರೀತಿಸಿ ಮದುವೆಯಾದ ಹಮೀದ ಮತ್ತು ಆತನ ಹೆಂಡತಿಯ ಉನ್ನತ ಮನಸ್ಸು, ವೇದಿಕೆಯ ಮೇಲಿರುವ ಪ್ರಗತಿಪರರ ಕೃತಕ ಚಹರೆಗಿಂತ ಎಷ್ಟೋ ಪಟ್ಟು ಶ್ರೇಷ್ಠವಾದುದು ಎಂಬುದನ್ನು ಕಥೆಯು ತೆರೆದಿಡುತ್ತದೆ.

‘ದೊರೆ’ ಕಥೆಯು ಗ್ರಾಮೀಣ ತಳಸಮುದಾಯದ ಮಗುವಿನ ಮುಗ್ಧತೆ ಮತ್ತು ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯದ ನಡುವಿನ ಸಂಘರ್ಷವನ್ನು ಹೃದಯವಿದ್ರಾವಕವಾಗಿ ಚಿತ್ರಿಸುತ್ತದೆ. ಹಡ್ಡಲಿನಲ್ಲಿ ದನ ಕಾಯುವ ಅನಾಥ ಹುಡುಗ ‘ದೊರೆ’ ಪೇಟೆಗೆ ಹೋಗಿ ಹೊಸ ಬಟ್ಟೆ, ದೊಣ್ಣೆಯನ್ನು ಪಡೆದು, ಸಿಹಿ ತ ತಿಂದು ಬರುವ ಸಂಭ್ರಮವು ಆತನ ಬಾಲ್ಯದ ಅತ್ಯುನ್ನತ ಕ್ಷಣವಾಗಿರುತ್ತದೆ. ಆದರೆ, ಸರ್ಕಾರ ನೀಡುವ ಜೀತ ಪರಿಹಾರದ ಹಣದ ಸುತ್ತ ಬೆಣೆಚಿಕೊಳ್ಳುವ ಗ್ರಾಮ ಪಂಚಾಯತಿ ಸೆಕ್ರೆಟರಿ, ಉರಿಯಪ್ಪನೋರು ಹಾಗೂ ನರಸಪ್ಪನವರ ಸ್ವಾರ್ಥಕ್ಕೆ ಈ ಹುಡುಗ ದಾಳವಾಗುತ್ತಾನೆ. ತನ್ನ ಜೀತದಾಳು ತನಗೆ ತಿಳಿಯದೆ ಪೇಟೆಗೆ ಹೋಗಿ ಪರಿಹಾರ ಪಡೆದನೆಂಬ ಅಹಂನಿಂದ ಉರಿಯಪ್ಪನೋರು ಆ ಮಗುವಿಗೆ ಹೊಡೆಯುವ ಏಟುಗಳು, ಮತ್ತು ಪೇಟೆಯಿಂದ ತಂದ ಆತನ ಪ್ರೀತಿಯ ನುಣ್ಣನೆಯ ದೊಣ್ಣೆ ತುಂಡಾಗುವ ದೃಶ್ಯವು ಬಡವರ ಆಶೋತ್ತರಗಳನ್ನು ಧ್ವಂಸಗೊಳಿಸುವ ಧನಿಶಾಹಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಮಕ್ಕಳ ನಡುವಿನ ಕಲ್ಮಶವಿಲ್ಲದ ಒಡನಾಟ ಹಾಗೂ ಗೌರಿಯಂತಹ ಹೆಣ್ಣುಮಗುವಿನ ಸಾಂತ್ವನವು, ಹಿರಿಯರ ಪ್ರಪಂಚದ ಕ್ರೌರ್ಯಕ್ಕೆ ಪ್ರತಿರೋಧದಂತೆ ಕಾಣಿಸುತ್ತದೆ.

‘ಎದೆಗೂಡೊಳಗೆ ಮುಗಿಯದ ಮಾತುಗಳು’ ಕಥೆಯು ಆಧುನಿಕ ಮನುಷ್ಯನು ತನ್ನ ಆಂತರಿಕ ಆದರ್ಶಗಳು ಮತ್ತು ಬಾಹ್ಯ ಪ್ರಾಪಂಚಿಕ ಆಮಿಷಗಳ ನಡುವೆ ಅನುಭವಿಸುವ ತಲ್ಲಣಗಳನ್ನು ಸೂಕ್ಷ್ಮವಾಗಿ ಹಿಡಿದಿಡುತ್ತದೆ. ಕಚೇರಿಯ ಸತ್ಯಾನಂದನಂತಹ ಚಾಣಾಕ್ಷ, ಸ್ವಾರ್ಥಿ ನೌಕರರ ನಡುವೆ, ನೇರ ನಡೆಯ ಬೀರಪ್ಪನಂತಹ ಜನಪದ ಮನಸ್ಸನ್ನು ಹೊಂದಿರುವ ನಿರೂಪಕನಿಗೆ ಎದುರಾಗುವ ನೈತಿಕ ಪ್ರಶ್ನೆಗಳು ಇಡೀ ಮಧ್ಯಮ ವರ್ಗದ ಸಾಕ್ಷಿಪ್ರಜ್ಞೆಯನ್ನು ಪ್ರತಿನಿಧಿಸುತ್ತವೆ. ಆದರ್ಶವೆಂಬುದು ಹಲವು ಬಾರಿಗೆ ಅಂಜಿಕೆಯ ಮುಖವಾಡವೋ ಅಥವಾ ಹೇಡಿತನದ ಇನ್ನೊಂದು ರೂಪವೋ ಎಂಬ ವಕೀಲರ ಲೇವಡಿಯು, ಮಾನವನ ಅಂತರಂಗದ ಬೂಟಾಟಿಕೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಕಚೇರಿಯ ಕಡತಗಳ ರಾಶಿ, ಬಟ್ಟಲುಗಣ್ಣಿನ ಹುಡುಗಿಯ ತೀವ್ರ ನೋಟ ಮತ್ತು ರಸ್ತೆಯಂಚಿನಲ್ಲಿ ಮಳೆಗೆ ತೊಯ್ದು ನಳನಳಿಸುವ ಮರ- ಇವೆಲ್ಲವೂ ಮನುಷ್ಯನ ಅಂತರಂಗದ ಸಂಕೀರ್ಣತೆಯನ್ನು ಸಂಕೇತಿಸುತ್ತವೆ.

Klive Special Article ಕಾ.ತ.ಚಿಕ್ಕಣ್ಣನವರ ಕಥಾಸೃಷ್ಟಿಯ ಅತಿ ದೊಡ್ಡ ಶಕ್ತಿಯಿರುವುದು ಅವರ ಭಾಷೆಯ ನಾಡಿಸ್ಪಂದನದಲ್ಲಿ ಮತ್ತು ವಿವರಣೆಗಳ ಜೀವಂತಿಕೆಯಲ್ಲಿ. ಅವರ ಕಥೆಗಳಲ್ಲಿ ಬರುವ ಪ್ರಕೃತಿಯ ರೂಪಕಗಳು ಕೇವಲ ಹಿನ್ನೆಲೆಯಾಗಿ ಉಳಿಯದೆ, ಪಾತ್ರಗಳ ಅಂತರಂಗದ ಭಾವನೆಗಳಿಗೆ ಕನ್ನಡಿಯಾಗಿ ಕೆಲಸ ಮಾಡುತ್ತವೆ. ‘ನಿರ್ಗಮನ’ದ ಬಾಟಲ್‌ಫಾಂ ಹಾಗೂ ನೀಲಾಂಬರಿ ಮರಗಳು, ‘ಹಮೀದಾಯಣ’ದ ಮರಳ ರಾಶಿ ಹಾಗೂ ನೀರು ಜಿನುಗುವ ಮಡಕೆ, ‘ದೊರೆ’ಯ ಸೀಮೆಚುಜ್ಜಲ ಮರ ಹಾಗೂ ಕೆಂಧೂಳೆಬ್ಬಿಸುವ ದಾರಿ- ಇವೆಲ್ಲವೂ ಕಥೆಯ ವಸ್ತುವಿನೊಂದಿಗೆ ತಾದಾತ್ಮ್ಯ ಹೊಂದಿವೆ.

ಲೇಖಕರು ಈ ಐದೂ ಕಥೆಗಳಲ್ಲಿ ನೌಕರಶಾಹಿ, ಧನಿಶಾಹಿ ಮತ್ತು ಆಧುನಿಕ ಸಂಸ್ಥಾಗತ ವ್ಯವಸ್ಥೆಗಳು ಮನುಷ್ಯನ ಅಂತಃಕರಣವನ್ನು ಹೇಗೆ ಅಪಹರಿಸುತ್ತವೆ ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾರೆ. ಕಥೆಗಾರರಾಗಿ ಚಿಕ್ಕಣ್ಣನವರು ಯಾವುದೇ ಸಿದ್ಧಾಂತದ ಲೇಪನವನ್ನು ಪಾತ್ರಗಳ ಮೇಲೆ ಹೇರದೆ, ಘಟನೆಗಳ ನೈಜ ನಿರೂಪಣೆಯ ಮೂಲಕವೇ ಓದುಗನಲ್ಲಿ ತೀವ್ರವಾದ ಅಪರಾಧಪ್ರಜ್ಞೆಯನ್ನು ಹಾಗೂ ಕರುಣೆಯನ್ನು ಜಾಗೃತಗೊಳಿಸುತ್ತಾರೆ. ವ್ಯವಸ್ಥೆಯು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅದರ ತಳಭಾಗದಲ್ಲಿ ಕಟು ವಾಸ್ತವವನ್ನು ಸಹಿಸಿಕೊಂಡು ಜೀವಿಸುವ ತಳಸಮುದಾಯದ ಮನುಷ್ಯರ ಜೀವಪರತೆಯೇ ಈ ಕಥೆಗಳ ಆತ್ಯಂತಿಕ ಆಶಯವಾಗಿದೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಕಾ.ತ.ಚಿಕ್ಕಣ್ಣನವರ ಈ ಕಥೆಗಳು ಕೇವಲ ಒಂದು ಕಾಲಘಟ್ಟದ ದಾಖಲೆಯಾಗಿ ಉಳಿಯದೆ, ಅಧಿಕಾರ ಮತ್ತು ಮನುಷ್ಯ ಸಂಬಂಧಗಳ ನಡುವಿನ ನಿರಂತರ ಸಂಘರ್ಷವನ್ನು ವ್ಯಾಖ್ಯಾನಿಸುವ ಜಾಗರೂಕ ಸಾಕ್ಷಿಪ್ರಜ್ಞೆಯಾಗಿ ಬಹುಕಾಲದವರೆಗೆ ಪರಾಮರ್ಶಿಸಲ್ಪಡುವ ಸತ್ವವನ್ನು ಹೊಂದಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...

S.N. Channabasappa “ಮನರಂಜನೆ” ಮನುಷ್ಯ ಜೀವನದ ಭಾಗ.ಆ ಸಾಂಸ್ಕೃತಿಕ ಸೊಬಗು ಜೀವನದಲ್ಲಿ ಅಡಕವಾಗಿರಬೇಕು- ಎಸ್.ಎನ್.ಚನ್ನಬಸಪ್ಪ

S.N. Channabasappa ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ...

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...