Friday, August 21, 2026
Friday, August 21, 2026

ಡಿ.ದೇವರಾಜು ಅರಸುರವರ ಆಡಳಿತದ ಕೊಡುಗೆಗಳು ಚಿರಸ್ಥಾಯಿ- ಸಿ.ಎಸ್.ಚಂದ್ರಭೂಪಾಲ್

Date:

ಅರಸು ಎಂದರೆ ಒಂದು ಶಕ್ತಿ. ‘ಉಳುವವನೇ ಭೂಮಿಯ ಒಡೆಯ’ ಕಲ್ಪನೆಯ ಮೂಲಕ ಲಕ್ಷಾಂತರ ಶೋಷಿತರ ಬದುಕಿಗೆ ಬೆಳಕಾದ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಕೊಡುಗೆಗಳು ಚಿರಸ್ಥಾಯಿ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಡಿ. ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಉದ್ದಾರಕ, ಸಾಮಾಜಿಕ ಹರಿಕಾರ ಡಿ.ದೇವರಾಜ ಅರಸುರವರು ಕೇವಲ ಆಡಳಿತಗಾರನಾಗಿ ಉಳಿಯದೆ, ಶೋಷಿತ ಸಮುದಾಯಗಳಿಗೆ ರಾಜಕೀಯ ಮತ್ತು ಸಾಮಾಜಿಕ ಧ್ವನಿ ನೀಡುವ ಮೂಲಕ ಕರ್ನಾಟಕದ ರಾಜಕಾರಣದ ದಿಕ್ಕನ್ನೇ ಬದಲಿಸಿದ ಅಪರೂಪದ ಜನನಾಯಕ ಡಿ. ದೇವರಾಜ ಅರಸು. ಭೂಸುಧಾರಣೆ, ಮೀಸಲಾತಿ ಹಾಗೂ ಜೀತಪದ್ಧತಿ ನಿರ್ಮೂಲನೆಯಂತಹ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಅವರು ಬರೆದ ಸಾಮಾಜಿಕ ನ್ಯಾಯದ ಇತಿಹಾಸ ಇಂದಿಗೂ ಸಾರ್ವಕಾಲಿಕ.
ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಉದ್ಯೋಗ ಪ್ರಗತಿಗಾಗಿ ಎಲ್. ಜಿ. ಹಾವನೂರು ಆಯೋಗವನ್ನು ರಚಿಸಿ, ಅದರ ವರದಿಯನ್ನು ಅನುಷ್ಟಾನಗೊಳಿಸಿ ದೇಶದಲ್ಲೇ ಮೊದಲ ಬಾರಿಗೆ ವ್ಯವಸ್ಥಿತ ಮೀಸಲಾತಿ ಜಾರಿಗೆ ತಂದು ಹಿಂದುಳಿದವರ ಬಾಳಿಗೆ ಆಶಾಕಿರಣವಾಗಿದ್ದಾರೆ. ಮಲ ಹೊರುವ ಪದ್ದತಿ, ಜೀತ ಪದ್ದತಿಯನ್ನು ಮುಕ್ತಗೊಳಿಸಿದರು. ಕಾರ್ಮಿಕ ವರ್ಗಕ್ಕಾಗಿ ಅನೇಕ ಕಾಯ್ದೆಗಳನ್ನು ತಂದು ಅವರ ಬೆಳಕಿಗೆ ದಾರಿದೀಪವಾದರು ಎಂದ ಅವರು ಅವರ ಸಮಾಜವಾದ, ಸಮತಾವಾದ ತತ್ವಗಳನ್ನು ಅಳವಡಿಸಿಕೊಂಡು ಹೋಗಬೇಕೆಂದರು.
ನಗರದಲ್ಲಿ ಡಿ.ದೇವರಾಜ ಅರಸುರವರ ಭವನ ಪೂರ್ಣಗೊಳ್ಳಬೇಕಿದೆ.ನಾನೂ ಸಹ ಸರ್ಕಾರಕ್ಕೆ ಈ ಕುರಿತು ಮನವಿ ಮಾಡುತ್ತೇನೆ ಎಂದರು.

ಶಿವಮೊಗ್ಗ ಶಂಕರಘಟ್ಟ, ಜ್ಞಾನಸಹ್ಯಾದ್ರಿಯ ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯದ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಇವರು ಉಪನ್ಯಾಸ ನೀಡಿ ಮಾತನಾಡಿ, ಮುಂದಣ ಅಭಿವೃದ್ಧಿಗೆ ಹಿಂದಣ ಅವಲೋಕನ ಅತಿ ಅಗತ್ಯ. ಡಿ.ದೇವರಾಜ ಅರಸುರವದ್ದು ಜೀವಂತ ಚರಿತ್ರೆ. ಅವರದ್ದು ಅನುಭವ ರೂಪಿತ, ತೆಂಗಿನ ಮರದಂತಹ ವ್ಯಕ್ತಿತ್ವ. ಅರಸುರವ ಜೀವನ ಚರಿತ್ರೆಗೆ ವಿಶಿಷ್ಟ ಸ್ಥಾನ ಇದೆ. ರೈತರು, ಕಾರ್ಮಿಕರು, ಜಲಗಾರರು, ಕುಶಲಕರ್ಮಿ ಸ್ಭೆರಿದಂತೆ ಎಲ್ಲ ಹಿಂದುಳಿದ ವರ್ಗಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು. ಅರಸರ ಕುಟುಂಬದವರಾದರೂ ಮಧ್ಯಮ ವರ್ಗದ ಕುಟುಂಬದಲ್ಲಿ ಸಾಮಾನ್ಯ ವಾತಾವರಣದಲ್ಲಿ ಬೆಳೆದ ಹುಡುಗ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದ ಅರಸು ಅವರು, ಸ್ವಾತಂತ್ರ‍್ಯ ಚಳವಳಿಯ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು. 1972ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಇವರು, ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದರು. ‘ಮೈಸೂರು ರಾಜ್ಯ’ ಎಂಬ ಹೆಸರನ್ನು 1973ರ ನವೆಂಬರ್ 1 ರಂದು ಅಧಿಕೃತವಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಇವರದ್ದು.

1952ರಲ್ಲಿ ಮೈಸೂರು ಸಂಸ್ಥಾನದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. ನಂತರ ಸತತವಾಗಿ ಹಲವು ಅವಧಿಗಳಿಗೆ ಶಾಸಕರಾಗಿ ಮರುಆಯ್ಕೆಯಾದರು. ಸಾರಿಗೆ, ಕಾರ್ಮಿಕ, ವಾರ್ತಾ ಮತ್ತು ಪಶುಸಂಗೋಪನೆ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿ ಉತ್ತಮ ಆಡಳಿತಗಾರರೆನಿಸಿಕೊಂಡರು.

ಸಾಹಿತ್ಯ ಅಭಿಮಾನಿಗಳು. ಅಪಾರ ಸಾಹಿತ್ಯವನ್ನು ಓದಿಕೊಂಡುವರು. ಕೌಟಿಲ್ಯ, ಮಾರ್ಕ್ಸ್, ಗಾಂಧಿ, ಲೋಹಿಯಾ, ಅಂಬೇಡ್ಕರ್ ಇತತರ ಜೀವನದಿಂದ ಪ್ರಭಾವಿತರಾಗಿದ್ದರು.
ಕೃಷಿ ಮತ್ತು ಹಳ್ಳಿ ಬದುಕನ್ನು ಪ್ರೀತಿಸಿದ ಇವರು ಜನರ ನೋವು, ನಲಿವಿಗೆ ಸ್ಪಂದಿಸಿದ ವಿಶೇಷ ವ್ಯಕ್ತಿ. ಪ್ರಪ್ರಥಮವಾಗಿ ಜೀತ ಮುಕ್ತಗೊಳಿಸಿದ ಇವರು ಕನಿಷ್ಟ ಕೂಲಿ, ಋಣ ಪರಿಹಾರ ಕಾಯ್ದೆ, ನೀರಾವರಿಗೆ ಪ್ರೋತ್ಸಾಹ, ಮಣ್ಣು ಸಂರಕ್ಷಿಸುವ ಕಾಯ್ದೆ, ಗೃಹ ನಿರ್ಮಾಣ, ಸರ್ವರಿಗೂ ಶಿಕ್ಷಣ, ಮಲ ಹೊರುವ ಪದ್ದತಿ ನಿಷೇಧ, ಪೌರ ಕಾರ್ಮಿಕವೇತನ, ವೃದ್ಧಾಪ್ಯ ವೇತನ, ಮಾಸಾಶನ, ವೃಕ್ಷ ಸಂರಕ್ಷಣೆ ಕಾಯ್ದೆ ಹೀಗೆ ಹಿಂದುಳಿದವರ ಉದ್ದಾರಕ್ಕೆ ನಾನಾ ಕಾಯ್ದೆ ಜಾರಿಗೆ ತಂದರು. ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಿತ್ರಣವನ್ನು ಬದಲಿಸಿದ ಇವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಶಾಶ್ವತವಾಗಿ ಇತಿಹಾಸದ ಪುಟ ಸೇರಿದ್ದಾರೆ. ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ನೂರಾರು ಸಣ್ಣ ನೀರಾವರಿ ಕೆರೆಗಳು, ಪಿಕಪ್ ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳ ನಿರ್ಮಾಣ, ಮೈಸೂರು, ಹಾಸನ, ಮಂಡ್ಯ, ತುಮಕೂರು, ಕೋಲಾರ ಮತ್ತು ಉತ್ತರ ಕರ್ನಾಟಕ ಭಾಗದ ನೂರಾರು ಹಳೆಯ ಕೆರೆಗಳ ಜೀರ್ಣೋದ್ಧಾರ ಮತ್ತು ಹೂಳೆತ್ತುವ ಕಾಮಗಾರಿಗಳನ್ನು ಕೈಗೊಂಡಿದ್ದರು.

ಇಂತಹ ನವಚಿಂತಕ ವೈಚಾರಿಕ ವ್ಯಕ್ತಿತ್ವದ ಜೀವನ ಚರಿತ್ರೆ ಒಂದು ವಿಶ್ವಕೋಶ ಇದ್ದಂತೆ. ಇಂತಹ ವ್ಯಕ್ತಿಯ ತತ್ವಗಳ ಅನುಷ್ಟಾನಕ್ಕೆ ನಾವೆಲ್ಲ ಶ್ರಮಿಸಿದರೆ ಅವರ ಜಯಂತಿ ಆಚರಣೆ ಸಾರ್ಥಕವಾದಂತೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಅರಸುರವರ ಜೀವನ ಚರಿತ್ರೆ, ತತ್ವಗಳನ್ನು ಮನನ ಮಾಡುವ ಉದ್ದೇಶದಿಂದ ನಾವೆಲ್ಲ ಇಲ್ಲಿ ಸೇರಿದ್ದೇವೆ. ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮುತ್ಸದ್ದಿಯಾದ ಅವರು ಹಿಂದುಳಿದ ವರ್ಗಗಳಿಗೆ ನೀಡಿರುವ ಕಾಯ್ದೆಗಳು, ಸೌಲಭ್ಯಗಳು ಅನನ್ಯ. ಫಲಾನುಭವಿಗಳಿಗೆ ಈ ಸೌಲಭ್ಯ ಕೊಟ್ಟವರ ಪರಿಕಲ್ಪನೆ ಮೂಡಬೇಕು.ತಿಳಿದುಕೊಳ್ಳಬೇಕು. ಭೂ ಸುಧಾತಣೆ ಎಂದರೆ ನೆನಪಾಗುವುದು ಅರಸುರವರು.

ಜಾತಿಯನ್ನು ಮೀರಿ ಹೇಗೆ ನಿಲ್ಲಬಹುದೆಂದು ತೋರಿಸಿಕೊಟ್ಟವರು ಅರಸು. ಎಲ್ಲ ಹಿಂದುಳಿದ ವರ್ಗಗಳ ಆಶಾದೀಪ. ಸಮಾನತೆಗಾಗಿ ಶ್ರಮಿಸಿದವರು ಎಂದ ಅವರು ಶಾಂತಿ, ಪ್ರಗತಿ ಮತ್ತು ಸಾಮರಸ್ಯಕ್ಕಾಗಿ ಅವರ ತತ್ವಗಳನ್ನು ನಾವೆಲ್ಲಾ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು ಮಾತನಾಡಿ, ಹಿಂದುಳಿದ ವರ್ಗಗಳು ಶೇ.60 ರಷ್ಟು ಶಿಕ್ಷಣದಿಂದ ಹಾಗೂ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಂಚಿತರಾಗಿದ್ದರು. ಅರಸುರವರ ಕ್ರಾಂತಿಕಾರಕ ಹೆಜ್ಜೆಗಳಿಂದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧ್ಯವಾಯಿತು. ಹಿಂದುಳಿದವರ ದಾರಿದೀಪವಾದ ಇವರು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಉದ್ಯೋಗ ನೀಡಿದ ಕಾರಣ ಸಾಮಾಜಿಕ ನ್ಯಾಯ ಒದಗುತ್ತಿದೆ ಎಂದ ಅವರು ನಗರದಲ್ಲಿ ಅರಸುರವರ ಭವನಕ್ಕೆ ಈಗಾಗಲೇ ರೂ.4 ಕೋಟಿ ಖರ್ಚಾಗಿದ್ದು, ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಇಲಾಖೆಯ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ ಆರ್ ಸ್ವಾಗತಿಸಿದರು.

ಹಿಂದುಳಿದ ವರ್ಗಗಳ, ದಲಿತ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...