ಸೌಂಡ್ ಹೀಲಿಂಗ್, ಯೋಗ, ಧ್ಯಾನ ಮತ್ತು ವಿಶ್ರಾಂತಿಯ ಮೂಲಕ ಮಾನಸಿಕ ನೆಮ್ಮದಿ, ಒತ್ತಡ ಹಾಗೂ ಆಂತರಿಕ ಸಮತೋಲನವನ್ನು ಬೆಳೆಸಿಕೊಳ್ಳಬಹುದು ಎಂದು ಅಂತರರಾಷ್ಟ್ರೀಯ ಯೋಗ ಚಿಕಿತ್ಸಕಿ ಹಾಗೂ ಸೌಂಡ್ ಹೀಲರ್ ಸುಚಿರಾ ಗೌಡ ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ವಾರದ ಸಭೆಯನ್ನು ಕ್ಲಬ್ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, “ಸೌಂಡ್ ಹೀಲಿಂಗ್ ಮತ್ತು ಯೋಗ” ವಿಷಯದ ಕುರಿತು ವಿಶೇಷವಾಗಿ ಮಾಹಿತಿ ನೀಡಿದರು. ಅವರು ವಿವಿಧ ಸೌಂಡ್ ಹೀಲಿಂಗ್ ವಾದ್ಯಗಳು ಮತ್ತು ಉಪಕರಣಗಳನ್ನು ನೇರವಾಗಿ ಬಳಸಿಕೊಂಡು, ಅವುಗಳಿಂದ ಉಂಟಾಗುವ ಧ್ವನಿ ಹಾಗೂ ಕಂಪನಗಳು ದೇಹ ಮತ್ತು ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ವಿವರಿಸಿದರು. ವಿವಿಧ ವಾದ್ಯಗಳ ಧ್ವನಿ ಕಂಪನಗಳನ್ನು ಅನುಭವಿಸುವ ಮೂಲಕ ಸೌಂಡ್ ಹೀಲಿಂಗ್‌ನ ಕಾರ್ಯವಿಧಾನವನ್ನು ಉಪಯುಕ್ತ ಮಾಹಿತಿಯನ್ನು ರೋಟೇರಿಯನ್ನರಿಗೆ ಪರಿಚಯಿಸಿದರು. ಇದು ರೋಟೇರಿಯನ್ನರಿಗೆ ಹೊಸ ಅನುಭವ ಹಾಗೂ ಜ್ಞಾನವನ್ನು ನೀಡಿತು.
ಕಾರ್ಯಕ್ರಮದಲ್ಲಿ ಪಿಡಿಜಿ ರೋ. ಹೆಚ್.ಎಲ್.ರವಿ ಅವರು ಮಾತನಾಡಿ, ಇಂತಹ ಆರೋಗ್ಯ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರೋಟರಿಯ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡಿನ ಎಲ್ಲಾ ರೋಟೇರಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಸೌಂಡ್ ಹೀಲಿಂಗ್‌ನ ಪ್ರಾಯೋಗಿಕ ಪ್ರದರ್ಶನದಲ್ಲಿ ಸದಸ್ಯರು ಆಸಕ್ತಿಯಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ರೋ. ಜಯ ಗೋಪಾಲ್ ಪ್ರಾರ್ಥಿಸಿದರು. ರೋ. ಪ್ರೀತಮ್ ಅತಿಥಿಗಳನ್ನು ಹಾಗೂ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಪಿಡಿಜಿ ರೋ. ಹೆಚ್.ಎಲ್.ರವಿ ವಂದನಾರ್ಪಣೆ ಸಲ್ಲಿಸಿದರು.
