Chamber of commerce Shivamogga ಶಿವಮೊಗ್ಗ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದ ಪ್ರಾಯೋಗಿಕ ಜ್ಞಾನ ಹಾಗೂ ಅನುಭವವನ್ನು ಒದಗಿಸುವ ಉದ್ದೇಶದಿಂದ ಗಾಜನೂರಿನ ಎಕೊವಿನ್ ನಿಯೋಧ್ಯಂ ನವೋದ್ಯಮ ಜೈವಿಕ ಪ್ಲಾಸ್ಟಿಕ್ ಉತ್ಪಾದನಾ ತಯಾರಿಕಾ ಘಟಕಕ್ಕೆ ಒಂದು ದಿನದ ಕೈಗಾರಿಕಾ ಭೇಟಿಯನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್.ಮನೋಹರ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ. ಶಿವಮೊಗ್ಗದಲ್ಲಿ ಇಂತಹ ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ನವೋದ್ಯಮಗಳು ನಾವೀನ್ಯತೆಗೆ ಉತ್ತೇಜನ ನೀಡಲು ಅನುದಾನಗಳು ಮತ್ತು ಪ್ರೋತ್ಸಾಹಕಗಳ ಅವಶ್ಯಕತೆಯಿದೆ. ನಾವ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಕಡಿಮೆ ಮಾಡಿ ಬಯೋ ರಿಫಾರ್ಮ್ ಬ್ಯಾಗ್ ಬಳಸಿ ಪರಿಸರ ಮಾಲಿನ್ಯ ಕಡಿಮೆ ಮಾಡಬೇಕಿದೆ. ವಿದ್ಯಾರ್ಥಿಗಳೇ ನಿಮ್ಮ ಮೇಲೆ ನೀವು ನಂಬಿಕೆ ಇಡಬೇಕು. ನಿಮ್ಮ ಕನಸುಗಳನ್ನು ಸಾಧಿಸಿ ಮತ್ತು ನಿಮ್ಮ ದೃಢನಿಶ್ಚಯದಿಂದ ಸಾಧನೆ ಮಾಡಿರಿ. ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಮಾಲೀಕರಾದ ಗಣೇಶ್ ಅಂಗಡಿಯವರು ಇದು ಮೆಕ್ಕೆಜೋಳವನ್ನು ಬಳಸಿಕೊಂಡು ಜೈವಿಕ ವಿಘಟನೀಯ ಪ್ಲಾಸ್ಟಿಕ್ ಉತ್ಪಾದನಾ ಘಟಕವಾಗಿದೆ. ಇದು ಪ್ಲಾಸ್ಟಿಕ್ಗೆ ಬಾಳಿಕೆ ಬರುವ ಮತ್ತು ಆಹಾರ-ಸುರಕ್ಷಿತ ಪರ್ಯಾಯವನ್ನು ನೀಡುತ್ತದೆ. ಈ ಚೀಲಗಳು 180 ದಿನಗಳಲ್ಲಿ ಕೊಳೆಯುತ್ತವೆ ಎಂದು ಹೇಳಿದರು.
ಎಂಎಸ್ಎಂಇ ಯ ಬ್ರಾಂಚ್ ಮ್ಯಾನೇಜರ್ ರುದ್ರಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಕಾರ್ಯವೈಖರಿ, ಉದ್ಯಮಶೀಲತೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅವಕಾಶಗಳು ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ಕೈಗಾರಿಕಾ ಭೇಟಿಯು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕಲಿತ ವಿಷಯಗಳನ್ನು ಕೈಗಾರಿಕಾ ಕ್ಷೇತ್ರದ ನೈಜ ಅನುಭವದೊಂದಿಗೆ ಸಂಯೋಜಿಸಿಕೊಳ್ಳಲು ಹಾಗೂ ಪರಿಸರ ಸಂರಕ್ಷಣೆ ಮತ್ತು ಉದ್ಯಮಶೀಲತೆಯ ಕುರಿತು ಅರಿವು ಮೂಡಿಸಿಕೊಳ್ಳಲು ಸಹಕಾರಿಯಾಯಿತು.
Chamber of commerce Shivamogga ಕೈಗಾರಿಕಾ ಭೇಟಿಯಲ್ಲಿ ಕಾಲೇಜಿನ ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆ ಹಾಗೂ ಕೈಗಾರಿಕಾ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳು ನೇರವಾಗಿ ಮಾಹಿತಿ ಪಡೆದುಕೊಂಡರು. ವಿಶೇಷವಾಗಿ ಭೂಮಿಯಲ್ಲಿ ಸುಲಭವಾಗಿ ಕರಗುವಂತಹ ಪರಿಸರ ಸ್ನೇಹಿ ಕವರ್ ಗಳ ಉತ್ಪಾದನಾ ಪ್ರಕ್ರಿಯೆ, ಕಚ್ಚಾ ವಸ್ತುಗಳ ಬಳಕೆ, ಉತ್ಪಾದನಾ ವಿಧಾನ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡರು.
ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕರುಗಳಾದ ಅರುಣ್ ಕುಮಾರ್ ಎಂ.ಎಸ್. ಹಾಗೂ ಈಶ್ವರ್ ಎಸ್.ಎಂ. ಅವರು ವಿದ್ಯಾರ್ಥಿಗಳೊಂದಿಗೆ ಕೈಗಾರಿಕಾ ಭೇಟಿಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಸಮನ್ವಯಗೊಳಿಸಿದರು.
