Sunday, August 9, 2026
Sunday, August 9, 2026

Madhu Bangarappa ಗ್ರಾಮೀಣರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮನವರಿಕೆ ಮಾಡಿ, ಹೆಚ್ಚಿನ ಜನಕ್ಕೆ ಕೆಲಸ ನೀಡಿ- ಮಧು ಬಂಗಾರಪ್ಪ

Date:

Madhu Bangarappa ಬರಗಾಲದ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹಾಗೂ ಯೋಜನೆ ಕುರಿತು ಗ್ರಾ.ಪಂ. ಮಟ್ಟದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಜಿ.ಪಂ ಸಿಇಓ ರವರಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ತಾಲೂಕು ವ್ಯಾಪ್ತಿಯ ಅತಿವೃಷ್ಟಿ/ಅನಾವೃಷ್ಟಿ ಸಂಬಂಧ ಅಧಿಕಾರಿಗಳೊಂದಿಗೆ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನ: ಬರಗಾಲದ ಪರಿಸ್ಥಿತಿಯಿಂದ ಜನರಿಗೆ ತೊಂದರೆಯಾಗಿದ್ದು ಗ್ರಾಮೀಣ ಭಾಗದಲ್ಲಿ ಯೋಜನೆಯಡಿ ಕೆಲಸ ನೀಡಬೇಕು. ಹಾಗೂ ಯೋಜನೆ ಕುರಿತಂತೆ ಗ್ರಾಮ ಸಭೆಗಳಲ್ಲಿ, ಪಿಡಿಓ ಮೂಲಕ ಹಾಗೂ ಕರಪತ್ರಗಳ ಮೂಲಕ ವ್ಯಾಪಕ ಅರಿವು ಮೂಡಿಸಬೇಕು ಎಂದರು.

ಜಿ.ಪಂ. ಸಿಇಓ ಹೇಮಂತ್ ಎನ್ ಮಾತನಾಡಿ, ಜಿಲ್ಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯು ಜುಲೈ 1 ರಿಂದ ಜಾರಿಯಲ್ಲಿದ್ದು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕಡ್ಡಾಯವಾಗಿ ಕನಿಷ್ಠ 1 ಪ್ರಮುಖ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದ್ದು, ಜನರಿಗೆ ಕೆಲಸ ನೀಡಲಾಗುತ್ತಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿ ಟಾಪ್ 5 ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ತಡೆಗಾಗಿ 82 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಮತ್ತು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಮಳೆಗಾಲದ ಹಿನ್ನೆಲೆ ಕಾಮಗಾರಿ ವಿಳಂಬವಾಗುತ್ತಿದ್ದು ಈ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲಿಸಿ ತ್ವರಿತ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ನೀರಿನ ಮಟ್ಟ: ಪ್ರಸ್ತುತ ತುಂಗಾ ಜಲಾಶಯ ಶೇ.100, ಭದ್ರಾ ಜಲಾಶಯ ಶೇ.50 ರಷ್ಟು ಭರ್ತಿಯಾಗಿದೆ. ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳ ಮಟ್ಟ ಶೇ45 ರಿಂದ 50 ರಷ್ಟಿದೆ. ಭದ್ರಾ ನೀರು 170 ಅಡಿಗೆ ತಲುಪಿದರೆ ಮಾತ್ರ ಒಂದು ಬೆಳೆಗೆ ನೀರು ನೀಡಲು ಸಾಧ್ಯ. ಈ ಬಾರಿ ಬೆಳೆಗೆ ನೀರನ್ನು ಕೊಡಲಾಗುವುದಿಲ್ಲ ಎಂಬ ಕುರಿತು ರೈತರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.

ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೆಳೆಗಳಿಗೆ ಅನುಕೂಲವಾಗುವಂತೆ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರನ್ನು ಎತ್ತಿ ಹರಿಸುವ (ಲಿಫ್ಟ್) ಪ್ರಸ್ತಾವನೆ ಕುರಿತು ಶಾಸಕರಾದ ಶಾರದಾ ಪೂರ್ಯಾನಾಯ್ಕ್ ಮತ್ತು ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಚರ್ಚಿಸಿದರು. ನೀರನ್ನು ಲಿಫ್ಟ್ ಮಾಡಿದಲ್ಲಿ ರೈತರಿಗೆ ಬೆಳೆ ಬೆಳೆಯಲು ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದರು.

ಅಪ್ಪರ್ ತುಂಗಾ ಕಾಲುವೆ: ಕಾಲುವೆ ಮತ್ತು ಕೆರೆಗಳನ್ನು ತುಂಬಿಸಲು ಅಪ್ಪರ್ ತುಂಗಾದಿAದ ನೀರು ಬಿಡಲಾಗಿದೆ. ತಾಲೂಕಿನಲ್ಲಿ 2 ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಯುತ್ತಿದ್ದು, ಹೊಸಹಳ್ಳಿಯಲ್ಲಿ 23 ಕೆರೆಗಳು ಭರ್ತಿಯಾಗಿವೆ.
ಕಾಲುವೆ ಸ್ವಚ್ಛತೆ: ಕಾಲುವೆಗಳಲ್ಲಿ ಹೂಳು ತೆಗೆಸಿ ಸ್ವಚ್ಛಗೊಳಿಸಬೇಕು. ಏತ ನೀರಾವರಿ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ರೈತರಿಗೆ ಅನುಕೂಲವಾಗಲಿದ್ದು, ಪೈಪ್‌ಲೈನ್ ಯೋಜನೆಗೆ ನೀಲನಕ್ಷೆ ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಏತ ನೀರಾವರಿ ರಿಪೇರಿ: ಉಬ್ರಾಣಿ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಘಟಕಗಳಲ್ಲಿ ಡಿಸೆಂಬರ್ ವರೆಗೆ ನೀರು ನೀಡಲು ಅವಕಾಶವಿದ್ದರೂ, ಕರೆಂಟ್ ಹಾಗೂ ಮೋಟಾರ್ ಸಮಸ್ಯೆಗಳಿವೆ ಎಂದು ನೀರು ಹರಿಸುತ್ತಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಸಭೆ ಗಮನಕ್ಕೆ ತಂದರು.

ರೈತರಿಗೆ ತೊಂದರೆಯಾಗದಂತೆ ಕೂಡಲೇ ರಿಪೇರಿ ಮಾಡಿಸಿ ನೀರು ಹರಿಸುವಂತೆ ಸಚಿವರು ಎಚ್ಚರಿಕೆ ನೀಡಿದರು.
ಅನಧಿಕೃತ ಪಂಪ್‌ಸೆಟ್ ತೆರವು: ಮಳೆ ಕೊರತೆಯಿದ್ದು, ನೀರಿನ ಸಂಗ್ರಹಕ್ಕೆ ಆದ್ಯತೆ ನೀಡಬೇಕಿದೆ. ಭಾಗಶಃ ತುಂಬಿರುವ ಕೆರೆಗಳಿಂದ ಅನಧಿಕೃತವಾಗಿ ನೀರು ಎತ್ತುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರ ಮತ್ತು ಪೊಲೀಸ್ ರಕ್ಷಣೆಯೊಂದಿಗೆ ತಕ್ಷಣ ತೆರವುಗೊಳಿಸಲು ಕ್ರಮ ವಹಿಸಬೇಕೆಂದು ಸಚಿವರು ಆದೇಶಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಜೂನ್ ನಿಂದ ಇಲ್ಲಿವರೆಗೆ ವಾಡಿಕೆಗಿಂತ ಶೇ.32 ರಷ್ಟು ಮಳೆ ಕೊರತೆ ಇದೆ. ಶೇ.58 ಭತ್ತ ಬಿತ್ತನೆ ವ್ಯಾಪ್ತಿಯಲ್ಲಿ ಶೇ.47 ಬಿತ್ತನೆಯಾಗಿದೆ. ಮೆಕ್ಕೆಜೋಳ ಶೇ. 40 ಆಗಿದ್ದು ಒಟ್ಟು ಶೇ.69 ಬಿತ್ತನೆಯಾಗಿದೆ. ಆಗಸ್ಟ್ ಅಂತ್ಯದವರೆಗೆ ನಾಟಿ ಮಾಡಲು ಅವಕಾಶವಿದೆ. ಬೆಳೆಗಳ ಬಿತ್ತನೆಗೆ ಅಗತ್ಯವಿರುವ ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿದೆ. ರಸಗೊಬ್ಬರ ದಾಸ್ತಾನು ಸಹ ಸಾಕಾಗುವಷ್ಟಿದ್ದು ‘ಬಗರ್ ಹುಕುಂ’ ಜಮೀನುಗಳಿಗೂ ರಸಗೊಬ್ಬರ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ 60 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಯಾವುದೇ ಅಭಾವವಿಲ್ಲ ಎಂದರು.

ಮಳೆ ಹಾನಿ ಪರಿಹಾರ: ಬೆಳೆ ಹಾನಿಗೊಳಗಾದ ರೈತರಿಗೆ ಮಾರ್ಗಸೂಚಿಯಂತೆ ಭಾಗಶಃ ಹಾಗೂ ಪೂರ್ಣ ಪರಿಹಾರ ವಿತರಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಬಿರುಗಾಳಿಗೆ ಅಡಿಕೆ ಹಾನಿಗೆ ಸಂಬಂಧಿಸಿದಂತೆ ಈ ಹಿಂದೆ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಬಲಾಗಿತ್ತು. ಇದೀಗ ಶಾಸಕರೊಂದಿಗೆ ನೂತನ ಮುಖ್ಯಮಂತ್ರಿಗಳ ಬಳಿ ಅಡಿಕೆ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.

ಪರಿಹಾರ ಧನ ವಿತರಣೆ: ತೀರ್ಥಹಳ್ಳಿ ಭೂಕುಸಿತದಿಂದ ದುರ್ಮರಣ ಹೊಂದಿದ ಕೊಪ್ಪಳ ಮೂಲದ ಒಂದೇ ಕುಟುಂಬದ 3 ಜನರಿಗೆ ಹಾಗೂ ಹೊಸನಗರದಲ್ಲಿ ಮೃತಪಟ್ಟ ಒಬ್ಬರಿಗೆ ತಲಾ ರೂ. 5 ಲಕ್ಷ ಪರಿಹಾರದ ಚೆಕ್ ಈಗಾಗಲೆ ವಿತರಿಸಲಾಗಿದೆ.
ಮನೆ ಹಾನಿ: ನಗರದಲ್ಲಿ ಮಳೆಯಿಂದ ಹಾನಿಗೊಳಗಾದ 8 ಅಧಿಕೃತ ಮನೆಗಳಿಗೆ ಮಾರ್ಗಸೂಚಿಯನ್ವಯ ಪರಿಹಾರ ನೀಡಲಾಗಿದೆ. ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದಂತೆ ಅನಧಿಕೃತ ಮನೆಗಳಲ್ಲಿದ್ದ ಸಂತ್ರಸ್ತರು ಪ್ರಸ್ತುತ ಬಾಡಿಗೆ ಮನೆಯಲ್ಲಿದ್ದು, ಅನಧಿಕೃತ ಮನೆಗಳಿಗೆ ಪರಿಹಾರ ನೀಡುವ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕುಡಿಯುವ ನೀರಿನ ಅಭಾವ: ಜಿಲ್ಲೆಯ 25 ಗ್ರಾ.ಪಂ. ವ್ಯಾಪ್ತಿಯ 31 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಆನವಟ್ಟಿ ಮತ್ತು ಶಿರಾಳಕೊಪ್ಪದಲ್ಲೂ ಕುಡಿಯುವ ನೀರಿನ ಅಭಾವವಿದೆ.
ಹುಣಸೂರು ಗ್ರಾಮ ವೀಕ್ಷಣೆ: ಹುಣಸೂರು ಗ್ರಾಮದಲ್ಲಿರುವ ನೀರಿನ ಸಮಸ್ಯೆ ಕುರಿತು ಗ್ರಾಮಾಂತರ ಶಾಸಕರಾದ ಶಾರದಾ ರ‍್ಯಾನಾಯ್ಕ್ ಸಚಿವರ ಗಮನಕ್ಕೆ ತಂದಾಗ, ಸಚಿವರು ಜಿ.ಪಂ. ಸಿಇಒ ವೈಯಕ್ತಿಕವಾಗಿ ಭೇಟಿ ನೀಡಿ ಪರಿಶೀಲಿಸಲು ಸೂಚಿಸಿದರು.

ಹಾಗೂ ಜಿಲ್ಲೆಯ ಯಾವುದೇ ಭಾಗದಲ್ಲಿ ನೀರಿಸ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಬಹುಗ್ರಾಮ ಯೋಜನೆ: ಪ್ರಸ್ತುತ ಅಂತರ್ಜಲ ಮಟ್ಟ ಸಹ ಕುಸಿದಿದೆ. ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು. ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.

ಶಾಸಕ ಚನ್ನಬಸಪ್ಪ ಮತ್ತು ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಮಾತನಾಡಿ, ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರಿಲ್ಲದೆ ಮೀನು ಸಾಕಾಣಿಕೆ ಕಷ್ಟವಾಗಿದ್ದು, ಸಾಕಾಣಿಕೆಯನ್ನು ಅವಲಂಬಿಸಿರುವವರ ಜೀವನ ಕಷ್ಟದಿಂದ ಕೂಡಿದೆ. ಹಿಂದೆ ಸರ್ಕಾರವೇ ಮೀನು ಮರಿ ಖರೀದಿ ಮಾಡುತ್ತಿತ್ತು, ಪ್ರಸ್ತುತ ಖರೀದಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ಮೀಸಲಿಡಬೇಕೆಂದು ಮನವಿ ಮಾಡಿದರು. ಸಚಿವರು ಪ್ರತಿಕ್ರಿಯಿಸಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಳೆ ಮಾಪನ ಕೇಂದ್ರಗಳ ಸ್ಥಾಪನೆ : ಜಿಲ್ಲೆಯಲ್ಲಿ 20 ಹೊಸ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ಸ್ಥಾಪಿಸಿ, ನಿಖರವಾದ ಮಳೆ ಪ್ರಮಾಣದ ದತ್ತಾಂಶ ಪಡೆದುಕೊಳ್ಳಬೇಕು. ಸೂಕ್ತವಾಗಿ ಸ್ಥಾಪಿಸದಿದ್ದರೆ ಅತಿವೃಷ್ಟಿ/ಅನಾವೃಷ್ಟಿ ನಿರ್ವಹಣೆ ಕಷ್ಟವಾಗುತ್ತದೆ. ರೈತರು ಸಹ ಬೆಳೆ ವಿಮೆ ಕಟ್ಟಲು ಹಿಂದೇಟು ಹಾಕುತ್ತಾರೆ ಎಂದು ಸಚಿವರು ಎಚ್ಚರಿಸಿದರು.

ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ:
ಶಿಥಿಲಗೊಂಡ ಮತ್ತು ಸುರಕ್ಷಿತವಲ್ಲದ ಅಂಗನವಾಡಿ ಕಟ್ಟಡಗಳಿಗೆ ಮಕ್ಕಳನ್ನು ಕಳುಹಿಸಬಾರದು. ಅಂತಹ ಕಟ್ಟಡಗಳ ಮರುನಿರ್ಮಾಣ ಅಥವಾ ತಕ್ಷಣದ ರಿಪೇರಿ ಕಾಮಗಾರಿ ಕೈಗೊಳ್ಳಬೇಕು.ಜಿಲ್ಲೆಯ 997 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಸರಬರಾಜಾಗಿದ್ದು, ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ.
ಶಾಸಕ ಚನ್ನಬಸಪ್ಪ ಮಾತನಾಡಿ, ನಗರ ವ್ಯಾಪ್ತಿಯ ಅಂಗನವಾಡಿಗಳಿಗೆ ಪಾತ್ರೆ, ಹೊದಿಕೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ರೂ. 25 ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಕೆಯಾಗಿದ್ದು, ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.
ಸಚಿವರು, ರೈತರು ಬೆಳೆ ವಿಮೆ ಕಂತು ಕಟ್ಟಲು ಆ.14 ರವರೆಗೆ ಅವಕಾಶವಿದ್ದು, ಕೋ ಆಪರೇಟಿವ್ ಸೊಸೈಟಿಗಳು ಮತ್ತು ಬ್ಯಾಂಕುಗಳು ಬೆಳೆ ವಿಮೆ ಕಂತು ಕಟ್ಟಿಸಿಕೊಳ್ಳಲು ನಿರಾಕರಿಸುವಂತಿಲ್ಲ. ಈ ಕುರಿತು ಕೃಷಿ ಜಂಟಿ ನಿರ್ದೇಶಕರು ಬ್ಯಾಂಕ್ op ನವರೊಂದಿಗೆ ಸಮನ್ವಯ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
Madhu Bangarappa ಶುದ್ಧೀಕರಣ ಘಟಕ: ಶಾಸಕರಾದ ನಗರದಲ್ಲಿ ಹೊಸ ಶುದ್ಧೀಕರಣ ಘಟಕ ಆರಂಭಿಸುವ ಯೋಜನೆ ಸಿದ್ಧವಾಗಿದೆ. ಗಾಜನೂರಿನ ಬಳಿ ಜಾಗ ಗುರುತಿಸಲಾಗಿದ್ದು, ಬಜೆಟ್‌ನಲ್ಲಿ ಹಣ ನಿಗದಿಪಡಿಸಿ ಯೋಜನೆ ಮಂಜೂರು ಮಾಡಲು ಸಹಕರಿಸುವಂತೆ ಮನವಿ ಮಾಡಿದರು.
ಕೃಷಿ ಜಂಟಿ ನಿರ್ದೇಶಕರು, ಜಿಲ್ಲೆಯಲ್ಲಿ ಒಟ್ಟು 7,905.54 ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದ್ದು 5,125.36 ಕ್ವಿಂಟಾಲ್ ಸರಬರಾಜಾಗಿದೆ. ಇದರಲ್ಲಿ 2,639.93 ಕ್ವಿಂಟಾಲ್ ವಿತರಣೆಯಾಗಿದ್ದು, 2,485.43 ಕ್ವಿಂಟಾಲ್ ದಾಸ್ತಾನು ಲಭ್ಯವಿದೆ.
ರಸಗೊಬ್ಬರ ಪೂರೈಕೆ ಮತ್ತು ದಾಸ್ತಾನು ವಿವರ : ಜಿಲ್ಲೆಯಲ್ಲಿ ಒಟ್ಟು 88,060.0 ಮೆಟ್ರಿಕ್ ಟನ್ ಲಭ್ಯತೆಯ ಪೈಕಿ 57,701.0 ಮೆಟ್ರಿಕ್ ಟನ್ ಮಾರಾಟವಾಗಿದ್ದು, ಪ್ರಸ್ತುತ 34,898.8 ಮೆಟ್ರಿಕ್ ಟನ್ ಒಟ್ಟು ದಾಸ್ತಾನು ಲಭ್ಯವಿದೆ. ರಸಗೊಬ್ಬರದ ಅಭಾವ ಉಂಟಾಗದAತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ, ರೈತರ ಹಿತರಕ್ಷಣೆ, ಕುಡಿಯುವ ನೀರಿನ ಪೂರೈಕೆ, ಕೃಷಿ ಹಾಗೂ ಮಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ಚೇತನ್, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ, ಜಿಲ್ಲಾಧಿಕಾಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಸಿಇಒ ಎನ್ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಸಿಸಿಎಫ್ ಹನುಂತಪ್ಪ ಹಾಗೂ ಡಿಸಿಎಫ್ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿ, ತಹಶೀಲ್ದಾರರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ತೀರ್ಥಹಳ್ಳಿ ಬಳಿ ಗುಡ್ಡ ಕುಸಿತದಿಂದ ಸಾವಿನ ಅವಘಡ: ಸಚಿವ ಮಧು ಬಂಗಾರಪ್ಪ ಮೌಖಿಕ ಪರಿಶೀಲನೆ, ಪರಿಹಾರಕ್ಕೆ ಶೀಘ್ರ ಕ್ರಮ

Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ...

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...