ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಟಾಣಿಜಡ್ಡು ಗ್ರಾಮದ ಬಳಿ ರೈಲು ಹಳಿ ಮೇಲೆ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ.
ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಸಂಚರಿಸಿದ್ದ ಮೈಸೂರು–ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಪ್ರಯಾಣಿಸುವ ವೇಳೆ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೋ ಅಥವಾ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೋ ಎಂಬ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಮೃತನ ಹೆಸರು ಹಾಗೂ ವಿಳಾಸ ಇದುವರೆಗೆ ಪತ್ತೆಯಾಗಿಲ್ಲ. ಮಾಹಿತಿ ತಿಳಿದ ತಕ್ಷಣ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತನ ಗುರುತು ಪತ್ತೆಯಾದ ಬಳಿಕ ಹಾಗೂ ತನಿಖೆ ಪೂರ್ಣಗೊಂಡ ನಂತರವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
