Saturday, August 1, 2026
Saturday, August 1, 2026

ಸಂಘರ್ಷಕ್ಕೆ ಬದಲು ಸಮನ್ವಯತೆ, ಮಾನವೀಯತೆ : ಇದು ಮಾಸ್ತಿ ಸಾಹಿತ್ಯದ ವಿಶೇಷ : ನಟರಾಜ ಅರಳಸುರಳಿ

Date:

ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಾಹಿತ್ಯದಲ್ಲಿ ಸಂಘರ್ಷಕ್ಕೆ ಬದಲು ಸಮನ್ವಯತೆ, ಮಾನವತಾವಾದ ಮತ್ತು ಬದುಕನ್ನು ಪ್ರೀತಿಸುವುದು ಎದ್ದು ಕಾಣುತ್ತದೆ ಎಂದು ಲೇಖಕ ನಿವೃತ್ತ ಪ್ರಾಂಶುಪಾಲ ನಟರಾಜ್ ಅರಳಸುರುಳಿ ಅವರು ಅಭಿಪ್ರಾಯಪಟ್ಟರು.
ಜು.30 ರಂದು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಭಾಗ, ತುಂಗಾ ಮಹಾವಿದ್ಯಾಲಯ ಮತ್ತು ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಜರಗಿದ ಮಾಸ್ತಿ ಅವರ ಸಾಹಿತ್ಯ ಚಿಂತನೆ ಕುರಿತ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ನಟರಾಜ್ ಅವರು, ಮಾಸ್ತಿಯವರ ಕಥೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸುತ್ತದೆ. ಅವರ ಸಾಹಿತ್ಯ ಕೃತಿಗಳು ದುಃಖಾಂತ್ಯದತ್ತ ಸಾಗಿದರೂ, ಕೊನೆಯಲ್ಲಿ ಅದಕ್ಕೊಂದು ಟ್ವಿಸ್ಟ್ ನೀಡಿ ಸುಖಾಂತ್ಯದಲ್ಲಿ ಕೊನೆಗೊಳಿಸುತ್ತಿದ್ದರು. ಅವರಿಗೆ ಬದುಕನ್ನು ಪ್ರೀತಿಸುವುದು ಮುಖ್ಯವಾಗಿತ್ತು ಎಂದರು.
ಮಾಸ್ತಿಯವರಿಗೆ ಇಂಗ್ಲೀಷ್ ಸಾಹಿತ್ಯದ ಪ್ರಭಾವವಾಗಿತ್ತು. ಅವರು ಬರೆಯುವ ಕಾಲದಲ್ಲಿ ಅವರಿಗೆ ಮಾದರಿಗಳಿರಲಿಲ್ಲ. ಅವರು ಎಲ್ಲಾ ವರ್ಗದವರನ್ನೂ ಗೌರವಿಸುತ್ತಿದ್ದರು. 95 ವರ್ಷಗಳ ತುಂಬು ಜೀವನ ನಡೆಸಿದ ಅವರು ಕೊನೆಯ ದಿನದವರೆಗೂ ನೆಮ್ಮದಿಯಲ್ಲೇ ಬದುಕಿದವರು ಎಂದು ನಟರಾಜ್ ಹೇಳಿದರು.
ಶ್ರೀಮತಿ ಪ್ರಭಾವತಿ ಶಾಮಣ್ಣ ಅವರು ನೀಡಿರುವ ಸಾಹಿತಿ ಎಂ.ಕೆ. ಇಂದಿರಾ ಸ್ಮಾರಕ ದತ್ತಿಯಾಗಿರುವ ಇಂದಿರಾ ಅವರ ಸಾಹಿತ್ಯ ಅವಲೋಕನ ಎನ್ನುವ ವಿಷಯವಾಗಿ ಮಾತನಾಡಿದ ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಎಲ್. ಸಿ.ಸುಮಿತ್ರಾ ಅವರು, ವಿದ್ಯಾರ್ಥಿಗಳು ಎಂ.ಕೆ. ಇಂದಿರಾ ಅವರನ್ನು ಮಾದರಿಯಾಗಿ ಇರಿಸಿಕೊಂಡು ಕಲಿಯುವುದು ಬಹಳಷ್ಟಿದೆ ಎಂದರು.
ಅವರು ಓದಿದ್ದು ಕೇವಲ ಎರಡನೆ ತರಗತಿಯಾದರೂ, ಆಗಿನ ಎರಡನೆ ತರಗತಿಯೆಂದರೆ ತುಂಬಾ ಮೌಲ್ಯಯುತವಾದುದಾಗಿತ್ತು. ಇಂದಿರಾ ಬಹಳ ಧೈರ್ಯಶಾಲಿ ಮಹಿಳೆಯಾಗಿದ್ದವರು. ಆಗಿನ ಕಾಲದಲ್ಲಿ ಇದ್ದ ಜಾತಿ ಧರ್ಮಗಳ ಕಟ್ಟುಪಾಡು, ಮೂಡನಂಬಿಕೆ, ಅಂಧಶ್ರದ್ದೆಗಳು ಮತ್ತು ಮಹಿಳೆಯರ ದುಸ್ಥಿತಿಯ ಕುರಿತು ಪ್ರಶ್ನಿಸುತ್ತಾರೆ. ಇಂದಿರಾ ಅವರು ತಮ್ಮ 45 ನೇ ವರ್ಷದ ಬಳಿಕ ಮೊದಲ ಕಾದಂಬರಿ ‘ತುಂಗಾಭದ್ರಾ’ ಬರೆಯುತ್ತಾರೆ. ಹಿಂದಿಯಿಂದ ಸಾಕಷ್ಟು ಭಾಷಾಂತರ ಮಾಡುತ್ತಾರೆ. ಬಳಿಕ ಸಾಹಿತಿ ತ್ರಿವೇಣಿಯವರು ಇವರಿಗೆ ಸಾಹಿತ್ಯ ರಚಿಸುವ ಕುರಿತು ಪ್ರೇರಣೆ ನೀಡುತ್ತಾರೆ. ‘ ಸದಾನಂದ’ , ‘ ಗೆಜ್ಜೆಪೂಜೆ’, ಪಣಿಯಮ್ಮ ( ಇವು ಸಿನಿಮಾ ಆದವು) ಸೇರಿದಂತೆ 51 ಕಾದಂಬರಿಗಳು ಹಾಗೂ 6 ಕಥಾ ಸಂಕಲಗಳನ್ನು ರಚಿಸಿದ್ದಾರೆ. ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕುರಿತು ‘ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್’ ಎನ್ನುವ ಕೃತಿ ಹೊರತಂದಿದ್ದರು. ಇವುಗಳಲ್ಲಿ ಬಹುತೇಕ ಇವರು ನೋಡಿದ ವಿಷಯಗಳನ್ನೇ ಆಧರಿಸಿ ಸಾಹಿತ್ಯ ಕೃತಿಯಾಗಿಸಿದ್ದರು. ಎಂದು ಸುಮಿತ್ರಾ ಹೇಳಿದರು.
ಇಂದಿರಾ ಅವರದ್ದು ತೂಕವಾದ ಬರಹ. ವಸ್ತು ವಿಷಯವೇ ಪರಿಣಾಮಕಾರಿಯಾಗಿದ್ದವು. ವಿದ್ಯಾರ್ಥಿಗಳು ಇವರ ಕನಿಷ್ಟ ಒಂದೆರಡು ಪುಸ್ತಕಗಳನ್ನಾದರೂ ಕಾಲೇಜಿನ ಗ್ರಂಥಾಲಯದಿಂದ ಪಡೆದು ಓದಬೇಕು. ಓದು ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಾಧನವಾಗಿದೆ ಎಂದು ಸುಮಿತ್ರಾ ನುಡಿದರು.
ಮಾಸ್ತಿ ಹಾಗೂ ಇಂದಿರಾ ಅವರ ಪುಸ್ತಕಗಳಿದ್ದ ಬಟ್ಟೆಯ ಕಟ್ಟನ್ನು ಬಿಚ್ಚುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ದತ್ತಿ ದಾನಿ ಹಾಗೂ ಸಾಹಿತ್ಯಾಭಿಮಾನಿಯಾಗಿರುವ ಕೂಳೂರು ಸತ್ಯನಾರಾಯಣರಾವ್ ಅವರು, ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ದೇಶದಲ್ಲಿ ನೂರಾರು ಜಾತಿ, ಪಂಗಡಗಳಿಂದಾಗಿ ದೇಶದಲ್ಲಿ ಸಂಕಷ್ಟ ತಲೆದೋರಿದೆ. ಮೊದಲಿಗೆ ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಬೆಳೆಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಕುಮಾರಸ್ವಾಮಿಯವರು ಸಾಹಿತ್ಯ ಪರಿಷತ್ತಿನಿಂದ ಸಾಹಿತಿಗಳನ್ನು ಕರೆಯಿಸಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಕುರಿತ ಆಸಕ್ತಿ ಬೆಳೆಯುತ್ತದೆ ಎಂದರು. ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಣುಕಾ ಎಂ.ಹೆಗಡೆ ಅವರು, ಸಾಹಿತಿಗಳಾದ ಮಾಸ್ತಿ ಹಾಗೂ ಇಂದಿರಾ ಕುರಿತು ಸ್ವಾರಸ್ಯಕರ ಮಾಹಿತಿಗಳು ವಿದ್ಯಾರ್ಥಿಗಳಿಗೆ ಲಭಿಸಿತು ಎಂದರು. ಐ ಕ್ಯೂ ಎ ಸಿ ಸಂಚಾಲಕರಾದ ಡಾ.ನಾಗರಾಜ ಎಂ. ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಡಿ. ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಅವರು ಆಶಯ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಾದ ನಯನ ಮತ್ತು ಸುನಿಧಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕ ಕೆ.ಎಲ್. ಪ್ರಸನ್ನ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

ಕೊನೆಯಲ್ಲಿ…

ಬರಹ ಕೃಪೆ: ಟಿ.ಕೆ.ರಮೇಶ ಶೆಟ್ಟಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...

Klive Special Article ವ್ಯಸನಮುಕ್ತ ಸಮಾಜದ ಕನಸು ಕಂಡ ಸಂತ. ಡಾ.ಮಹಾಂತ ಶಿವಯೋಗಿ.ವಿಶೇಷ ಬರಹ- ಬಿ.ವಿ.ತುಕಾರಾಂ. ಶಿವಮೊಗ್ಗ

Klive Special Article ದೇಶ ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿನ ದುಶ್ಚಟಗಳನ್ನೇ...