ಭದ್ರಾವತಿ ಹಳೇನಗರದ ಕೋಟೆ ಏರಿಯಾದಲ್ಲಿ ಮನೆ-ಮನೆಗೆ ತೆರಳಿ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಫಾರ್ಮ್ಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಕರ್ತವ್ಯನಿರತ ಬಿಎಲ್ಒ ರಹಮತುಲ್ಲಾ (50) ಅವರ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ದಾಳಿಯಲ್ಲಿ ಅವರ ಕಾಲಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಗಾಯಾಳು ರಹಮತುಲ್ಲಾ ಅವರನ್ನು ಉಪ ತಹಶೀಲ್ದಾರ್ ಮಂಜನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಎಸ್ಐಆರ್ ಕರ್ತವ್ಯದ ವೇಳೆ ಬಿಎಲ್ಒ ಮೇಲೆ ನಾಯಿ ದಾಳಿ ನಡೆದಿರುವುದು ಇದು ಎರಡನೇ ಘಟನೆ. ಎರಡು ವಾರಗಳ ಹಿಂದೆ ಸಾಗರದಲ್ಲಿಯೂ ಬಿಎಲ್ಒ ಲಕ್ಷ್ಮೀ ಸಿಂಗ್ ಅವರ ಮೇಲೆ ಇದೇ ರೀತಿಯ ನಾಯಿ ದಾಳಿ ನಡೆದಿತ್ತು.
ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್ಐಆರ್ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮನೆ-ಮನೆಗೆ ತೆರಳುವ ಸಿಬ್ಬಂದಿಗೆ ಅಗತ್ಯ ಭದ್ರತಾ ಕ್ರಮಗಳನ್ನು ಒದಗಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
