Thursday, July 23, 2026
Thursday, July 23, 2026

ಮಲಗಿದ್ದ ವ್ಯಕ್ತಿ ಏಳದಿದ್ದರೆ, ಉಸಿರಾಟದಲ್ಲಿ ಏರುಪೇರಾದರೆ ,ಪ್ರಜ್ಞೆ ತಪ್ಪಿದರೆ‌…ತಡಮಾಡದೇ ತಕ್ಷಣ ತಜ್ಞ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ- ಡಾ.ಹಂಸ

Date:

ಚಿಕ್ಕಮಗಳೂರಿನ ಕಡೂರಿನ 65 ವರ್ಷದ ಆ ವೃದ್ಧರಿಗೆ ಅಂದು ಎಂದಿನಂತೆಯೇ ಸಾಧಾರಣ ದಿನ. ರಾತ್ರಿ ಊಟ ಮುಗಿಸಿ ಆರಾಮಾಗಿ ನಿದ್ದೆಗೆ ಜಾರಿದ್ದರು.

ಆದರೆ, ಮರುದಿನ ಮುಂಜಾನೆ ಎಷ್ಟೇ ಹೊತ್ತಾದರೂ ಅವರು ಏಳಲಿಲ್ಲ. ಮನೆಯವರು ಎಷ್ಟೇ ಬಲವಂತವಾಗಿ ಎಬ್ಬಿಸಿದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ; ಕೇವಲ ಅಸ್ಪಷ್ಟ ಶಬ್ದವಷ್ಟೇ ಹೊರಬರುತ್ತಿತ್ತು.

ಇದನ್ನು ಕಂಡು ಗಾಬರಿಯಾದ ಕುಟುಂಬದವರಿಗೆ, ಇದು ಯಾವುದೋ ವಿಷದ ಪರಿಣಾಮವೋ ಅಥವಾ ಬೇರೆ ಕಾಯಿಲೆಯೋ ಎಂಬ ಅನುಮಾನ ಶುರುವಾಯಿತು. ಅವರನ್ನು ಹೇಗಾದರೂ ಮಾಡಿ ಎಬ್ಬಿಸಲೇಬೇಕು ಎಂದು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಾ, ಅತ್ಯಮೂಲ್ಯವಾದ ಸಮಯವನ್ನು ಕಳೆದುಬಿಟ್ಟರು. ಕೊನೆಗೆ ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿವಾಗಿ ಶಿವಮೊಗ್ಗದ ‘ಸಹ್ಯಾದ್ರಿ ನಾರಾಯಣ ಆಸ್ಪತ್ರೆ’ಗೆ ಕರೆತಂದರು.

ಆಸ್ಪತ್ರೆಗೆ ಬಂದ ತಕ್ಷಣ ನರರೋಗ ತಜ್ಞರಾದ ಡಾ. ಹಂಸ ಕೆ.ಎಂ. ಅವರು ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದಾಗ ಅಸಲಿ ಸತ್ಯ ಹೊರಬಿತ್ತು. ಆ ವೃದ್ಧರಿಗೆ ‘ಆರ್ಟರಿ ಆಫ್ ಪೆರ್ಚೆರಾನ್ ಇನ್ಫಾರ್ಕ್ಷನ್’ (Artery of Percheron infarction) ಎಂಬ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂತು ! ಇದರಿಂದಾಗಿ ಮೆದುಳಿನ ಎಚ್ಚರಗೊಳಿಸುವ ಪ್ರಮುಖ ವ್ಯವಸ್ಥೆಗೆ ಭಾರೀ ಪೆಟ್ಟು ಬಿದ್ದು, ಅವರು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು.

ಸ್ಟ್ರೋಕ್ (ಪಾರ್ಶ್ವವಾಯು) ರೋಗಿಗಳಿಗೆ ಚಿಕಿತ್ಸೆ ನೀಡಲು ಇರುವ ‘ಗೋಲ್ಡನ್ ಅವರ್’ (ನಾಲ್ಕೂವರೆ ಗಂಟೆಗಳ ಅಮೂಲ್ಯ ಸಮಯ) ಮೀರಿಹೋಗಿತ್ತು ಹಾಗೂ ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ, ಉಸಿರಾಟದ ತೊಂದರೆಯಾಗದಿರಲು ತಕ್ಷಣವೇ ಅವರನ್ನು ವೆಂಟಿಲೇಟರ್‌ನಲ್ಲಿರಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಶುರುಮಾಡಲಾಯಿತು. ಅವರು ತಡವಾಗಿ ಬಂದಿದ್ದರಿಂದ, ಮೆದುಳಿನ ಊತ ಕಡಿಮೆ ಮಾಡುವ ಹಾಗೂ ರಕ್ತದೊತ್ತಡ-ಸಕ್ಕರೆ ಕಾಯಿಲೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಔಷಧಗಳನ್ನು ನೀಡಿ ಅತ್ಯಂತ ಎಚ್ಚರಿಕೆಯಿಂದ ಆರೈಕೆ ಮಾಡಲಾಯಿತು.

ವೈದ್ಯರ ಸತತ ಪ್ರಯತ್ನದಿಂದ ಕೇವಲ 48 ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು. ವೆಂಟಿಲೇಟರ್‌ ತೆಗೆದುಹಾಕಿ, ಉಸಿರಾಟದ ಮತ್ತು ದೇಹದ ಸಮತೋಲನ ಕಾಯ್ದುಕೊಳ್ಳುವ ವ್ಯಾಯಾಮಗಳನ್ನು ಮಾಡಿಸಲಾಯಿತು. ಆಸ್ಪತ್ರೆಗೆ ಸೇರಿದ ಕೇವಲ ನಾಲ್ಕೇ ದಿನಗಳಲ್ಲಿ ಅವರು ಯಾರ ಸಹಾಯವೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ನಡೆದಾಡುವಷ್ಟು ಗುಣಮುಖರಾಗಿ ಮನೆಗೆ ಮರಳಿದರು!

ಗಾಢ ನಿದ್ರೆಯಂತೆ ಕಾಡುವ ಈ ಸ್ಟ್ರೋಕ್ ಪತ್ತೆಹಚ್ಚುವುದು ಕಷ್ಟವೇಕೆ?

ಸಾಮಾನ್ಯವಾಗಿ ನಮ್ಮ ಮೆದುಳಿಗೆ ರಕ್ತ ಪೂರೈಸಲು ಎರಡು ಪ್ರತ್ಯೇಕ ರಕ್ತನಾಳಗಳಿರುತ್ತವೆ. ಆದರೆ ಶೇ. 4 ರಿಂದ 12 ರಷ್ಟು ಜನರಲ್ಲಿ ಮಾತ್ರ ಎರಡೂ ಕಡೆಗೆ ರಕ್ತ ಪೂರೈಸಲು ಒಂದೇ ಒಂದು ರಕ್ತನಾಳವಿರುತ್ತದೆ. ಆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಕಟ್ಟಿಕೊಂಡಾಗ (ಬ್ಲಾಕ್ ಆದಾಗ), ಮೆದುಳಿನ ಎರಡೂ ಭಾಗಗಳಿಗೆ ರಕ್ತ ಪೂರೈಕೆ ಒಮ್ಮೇಲೆ ನಿಂತುಹೋಗಿ, ಮನುಷ್ಯ ಹಠಾತ್ತನೆ ದೀರ್ಘ ನಿದ್ದೆಗೆ ಅಥವಾ ಕೋಮಾ ಸ್ಥಿತಿಗೆ ಜಾರುತ್ತಾನೆ ಎಂದು ಡಾ. ಹಂಸ ವಿವರಿಸಿದರು.

ಸಾಮಾನ್ಯ ಸ್ಟ್ರೋಕ್‌ನಂತೆ ಇದರಲ್ಲಿ ಮುಖ ಸೊಟ್ಟಗಾಗುವುದು, ಕೈಕಾಲು ಸ್ವಾಧೀನ ಕಳೆದುಕೊಳ್ಳುವುದು ಅಥವಾ ಮಾತು ತೊದಲುವ ಯಾವುದೇ ಲಕ್ಷಣಗಳಿರುವುದಿಲ್ಲ. ಹಾಗಾಗಿಯೇ, ಇದನ್ನು ಪತ್ತೆಹಚ್ಚುವುದು ಸವಾಲು. ಮನೆಯವರು ಇದನ್ನು ‘ಅತಿಯಾದ ಆಯಾಸದ ನಿದ್ದೆ’ ಎಂದೋ ಅಥವಾ ಬೇರೆಯದ್ದೇ ಸಮಸ್ಯೆ ಎಂದೋ ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೇ ಹೆಚ್ಚು.

“ಮಲಗಿದ ವ್ಯಕ್ತಿಯನ್ನು ಎಬ್ಬಿಸಿದಾಗ ಏಳದಿದ್ದರೆ ಮತ್ತು ಅದರ ಜೊತೆಗೆ ಉಸಿರಾಟದಲ್ಲಿ ಏರುಪೇರು, ಬಾಯಲ್ಲಿ ಜೊಲ್ಲು ಸುರಿಯುವುದು ಅಥವಾ ಪ್ರಜ್ಞೆ ತಪ್ಪಿದಂತೆ ಕಂಡುಬಂದರೆ, ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ. ಅದನ್ನು ತುರ್ತು ವೈದ್ಯಕೀಯ ಪರಿಸ್ಥಿತಿ ಎಂದು ಪರಿಗಣಿಸಿ, ತಕ್ಷಣವೇ ಆಸ್ಪತ್ರೆಗೆ ಕರೆತನ್ನಿ. ಸರಿಯಾದ ಸಮಯಕ್ಕೆ ಸಿಗುವ ಚಿಕಿತ್ಸೆ ಎಂತಹ ಅಪರೂಪದ ಸ್ಟ್ರೋಕ್‌ನಿಂದಲೂ ವ್ಯಕ್ತಿಯನ್ನು ಪಾರುಮಾಡಬಲ್ಲದು” ಎನ್ನುತ್ತಾರೆ ಡಾ. ಹಂಸ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...