ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ಎಂ ಎಸ್ ರವರು ಮಂಗಳವಾರದಂದು ಶಿಕಾರಿಪುರ ತಾಲೂಕಿಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ವೈದ್ಯಕೀಯ ಸೇವೆಗಳ ಬಗ್ಗೆ ಲ್ಯಾಬೋರೇಟರಿ ಸೇವೆಗಳ ಬಗ್ಗೆ ಔಷದ ವಿತರಣೆಯ ಬಗ್ಗೆ ಹಾಗೂ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ಅಲ್ಲಿನ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವಂತಹ ಮಕ್ಕಳು ಮತ್ತು ತಾಯಂದಿರೊಂದಿಗೆ ಮಾತನಾಡಿ ಕುಂದು ಕೊರತೆಗಳನ್ನು ಆಲಿಸಿದರು. ಈ ಸಮಯದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದ ಮಕ್ಕಳು ಮತ್ತು ತಾಯಂದಿರಿಗೆ ನೀಡಲಾಗುತ್ತಿರುವ ಆಹಾರದ ತಪಾಸಣೆ ಮತ್ತು ಆರೈಕೆದಾರರಿಗೆ ವ್ಯವಸ್ಥೆ ಮಾಡಲಾದ ಭೋಜನಾಲಯದ ಸ್ಥಳವನ್ನು ಪರಿಶೀಲಿಸಿದರು.
ಇದೇ ವೇಳೆ ಅವರು ಶಿಕಾರಿಪುರ ನ್ಯಾಯಾಲಯದ ಆವರಣದಲ್ಲಿ ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ತಾಲೂಕ ಪಂಚಾಯತ್ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ಎನ್ ರಮೇಶ್ ಬಾಬು ರವರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಎಸ್ ರವರು ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀ ಧನಂಜಯ ಹೆಗಡೆ ರವರೊಂದಿಗೆ ಸಭೆಯನ್ನು ನಡೆಸಿ ಮುಂಬರುವ ಉಭಯ ಲೋಕ ಅದಾಲತ್ ತಯಾರಿಯ ಬಗ್ಗೆ ಹಾಗೂ ಕೆರೆಗಳ ಪುನರುಜ್ಜೀವನ ಮತ್ತು ಸಸಿ ನೆಡುವ ಅಭಿಯಾನದ ಕುರಿತು ಮಾಹಿತಿಯನ್ನು ನೀಡಿ ಪ್ರಗತಿಯನ್ನು ಪರಿಶೀಲನೆ ಮಾಡಿದರು.
ತದನಂತರದಲ್ಲಿ ಶಿಕಾರಿಪುರ ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರೊಂದಿಗೆ ವಕೀಲರ ಸಂಘದ ಎಲ್ಲಾ ಸದಸ್ಯರಿಗೆ ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ಹಾಗೂ ವಿಶೇಷ ಲೋಕ ಅದಾಲತ್ ವಿಚಾರವಾಗಿ ವಿಸ್ತೃತವಾದ ಮಾಹಿತಿಯನ್ನು ನೀಡಿ ಅದರ ಯಶಸ್ಸಿಗೆ ಸಹಕಾರ ನೀಡುವಂತೆ ಕೋರಿಕೊಂಡು ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾದ ಅಭಿಯಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ತದನಂತರ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾಪ್ತಕೋತರ ಅಧ್ಯಯನ ಕೇಂದ್ರದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ ಹಾಗೂ ಕಾಲೇಜಿನಿಂದ ಜಂಟಿಯಾಗಿ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಕಾಯ್ದೆ, ಮಾದಕ ವಸ್ತುಗಳ ವ್ಯಸನದಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿ ವಿದ್ಯಾರ್ಥಿ ಜೀವನದಲ್ಲಿ ಇರುವಂತಹ ಸಮಯವನ್ನು ಮತ್ತು ಶಕ್ತಿಯನ್ನು ಕೇಂದ್ರೀಕರಿಸಿ ಎಲ್ಲರೂ ಉತ್ತಮ ಪ್ರಜೆಗಳಾಗುವಂತೆ ಮತ್ತು ದೇಶ ಸೇವೆಗಾಗಿ ಸದೃಢ ದೇಹ ಮತ್ತು ಮನಸ್ಸನ್ನು ಹೊಂದಿರುವ ಯುವಕರು ಮತ್ತು ಯುವತಿಯರು ಸದೃಢ ಭಾರತದ ಪ್ರಗತಿಗೆ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
