Sunday, June 14, 2026
Sunday, June 14, 2026

Shivamogga News ಶಿವಮೊಗ್ಗ ಜಿಲ್ಲೆಯಲ್ಲಿ ಶೇ 64 ಅರಣ್ಯ ಭೂಮಿಯಿದೆ.ಆದರೆ ಪಶ್ಚಿಮಘಟ್ಟಗಳಲ್ಲಿ ಸಾಮರಸ್ಯಕಿಂತ ಸಂಘರ್ಷವೇ ಹೆಚ್ಚಾಗಿದೆ- ಎ.ಎಂ.ಅಣ್ಣಯ್ಯ.

Date:

Shivamogga News ಕೃಷಿ ಮತ್ತು ಅರಣ್ಯ ಎರಡೂ ದೇಶದ ಪ್ರಗತಿಗೆ ಹಾಗೂ ಜೀವಸಂಕುಲದ ಉಳಿವಿಗೆ ಅತ್ಯಗತ್ಯವಾಗಿದ್ದು ಎರಡರ ನಡುವಿನ ಸಾಮರಸ್ಯ ಮತ್ತು ಸಹಬಾಳ್ವೆ ಇಂದಿನ ತುರ್ತಾಗಿದೆ. ಹಾಗೂ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕೃಷಿ ಆರ್ಥಿಕ ತಜ್ಞರು ಹಾಗೂ
ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಮತ್ತು ಅರಣ್ಯ ಸಂಪನ್ಮೂಲ ನಿರ್ವಹಣಾ ಸಂರಕ್ಷಣಾಧಿಕಾರಿಗಳಾದ ಎ.ಎಂ. ಅಣ್ಣಯ್ಯ ಹೇಳಿದರು.
ಬೆಂಗಳೂರಿನ ‘ಪೃಥ್ವಿ’ ಟ್ರಸ್ಟ್ ಹಾಗೂ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ ಮಲೆನಾಡಿನ ರೈತ, ಬುಡಕಟ್ಟು ಮತ್ತು ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಹಕಾರದಲ್ಲಿ ಶನಿವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮಲೆನಾಡು ಕೃಷಿ-ಅರಣ್ಯ ಸಂಘರ್ಷ ಮತ್ತು ಸಾಮರಸ್ಯ’ ಎಂಬ ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಶೇ. ೬೪ ಅರಣ್ಯ ಭೂಮಿ‌ ಇದೆ. ಆದರೆ ಪಶ್ಚಿಮ ಘಟ್ಟಗಳಲ್ಲಿ ಸಾಮರಸ್ಯಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಈ ಸಂಘರ್ಷವನ್ನು ತಗ್ಗಿಸಿ ಸಾಮರಸ್ಯದಿಂದ ಬದುಕುವ ಕ್ರಮಗಳನ್ನು ಹೆಚ್ಚಿಸಬೇಕು.
ಪರಿಸರ ನಮ್ಮ‌ಹಕ್ಕಾಗಿರುವ ರೀತಿಯಲ್ಲಿ ಈ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳೂ ಇದ್ದು, ಅದನ್ನು ನಾವು‌ ಪಾಲಿಸಬೇಕು.
ಮನುಷ್ಯ ಮಾತ್ರ ಈ ಪರಿಸರದಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲ ಪ್ರಾಣಿ, ಜೀವ ಸಂಕುಲವೂ ಬದುಕಬೇಕು.‌ ಸಹಬಾಳ್ವೆ ನಡೆಸಬೇಕು ಎಂದರು.
ಕಾಯ್ದೆ ಕಾನೂನು ಅರಣ್ಯ ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಪ್ರಕೃತಿ ಮತ್ತು ವನ್ಯಜೀವಿಗಳ ರಕ್ಷಣೆಗೆ ಕಟ್ಟುನಿಟ್ಟಾದ ಚೌಕಟ್ಟನ್ನು ಒದಗಿಸುತ್ತದೆ. ಕೃಷಿ-ಅರಣ್ಯ ಸಂಘರ್ಷದ ಸಂದರ್ಭದಲ್ಲಿ ಇದರ ಪಾತ್ರ ಪ್ರಮುಖವಾಗಿದೆ.
ಅರಣ್ಯ ಹಕ್ಕುಗಳ ಕಾಯ್ದೆಯು ಕೃಷಿ ಮತ್ತು ಅರಣ್ಯದ ನಡುವಿನ ಅನ್ಯಾಯವನ್ನು ಸರಿಪಡಿಸಲು ಜಾರಿಗೆ ಬಂದ ಅತ್ಯಂತ ಪ್ರಮುಖ ಕಾನೂನು.
Shivamogga News ಅರಣ್ಯ ಸಂರಕ್ಷಣಾ ಕಾಯ್ದೆಯು ಕೃಷಿ ಭೂಮಿ ವಿಸ್ತರಣೆಯ ಹೆಸರಿನಲ್ಲಿ ಅರಣ್ಯ ನಾಶವಾಗುವುದನ್ನು ತಡೆಯುತ್ತದೆ‌ ಎಂದು ಕಾಯ್ದೆಗಳ ಬಗ್ಗೆ ವಿವರಿಸಿದ ಅವರು ಅರಣ್ಯ ಮತ್ತು ಕೃಷಿ‌ ಕುರಿತು
ಸಂವಿಧಾನ ಏನು ಹೇಳುತ್ತದೆ, ಕಾಯ್ದೆ ಕಾನೂನುಗಳು ಹಾಗೂ
ಕೇಸ್ ಲಾ ಗಳು ಏನು ಹೇಳುತ್ತದೆ ಎಂದು ಪಿಪಿಟಿ ಪ್ರದರ್ಶನದ ಮೂಲಕ ತಿಳಿಸಿಕೊಟ್ಟರು.
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರಾದ ಡಾ. ಪ್ರಕಾಶ್ ಕಮ್ಮರಡಿ ಅವರು ಪ್ರಾಸ್ತಾವಿಕವಾಗಿ‌ ಮಾತನಾಡಿ ಪಶ್ಚಿಮ ಘಟ್ಟಗಳು ಪ್ರಸ್ತುತ ಜೀವ ವೈವಿಧ್ಯತೆಯ ಮಹಾತಾಣವಾಗಿಲ್ಲ. ಬದಲಾಗಿ ಸಂಘರ್ಷಗಳ ಹಾಟ್ ಸ್ಪಾಟ್ಟ್ ಆಗಿದೆ. ಒಕ್ಕಲೆಬ್ಬಿಸುವ ಕಾರ್ಯವು ಜನ ವಿರೋಧಿಯಾಗಿದೆ. ಪಂಪ್ಡ್ ಸ್ಟೋರೇಜ್ ವಿರುದ್ದ ಜನರು ಗಟ್ಟಿಯಾದ ಹೋರಾಟ ಮಾಡುತ್ತಿದ್ದಾರೆ.
ಒಂದು‌ ಕಡೆ ಅರಣ್ಯ ಇಲಾಖೆಯು ಪರಿಸರ ಉಳಿಸಲು ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದ್ದರೆ, ಜನರು ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಮೇಲೆ ಅವಲಂಬಿತರಾಗಿದ್ದು ವಿರೋಧಾಭಾಸಗಳನ್ನು ಕಾಣಬಹುದಾಗಿದೆ.
ವನ್ಯಜೀವಿ ಮತ್ತು ಮಾನವ ನಡುವೆ ಸಂಘರ್ಷ ಇದೆ. ಜನರ ನಡುವೆ ಸಹ ಸಂಘರ್ಷ ಇದೆ. ಕೃಷಿ‌ ಮತ್ತು ಅರಣ್ಯ ನಡುವಿನ ಬಾಂಧವ್ಯ ನಾಶವಾಗಿ ಸಂಘರ್ಷ ಆರಂಭವಾಗಿದೆ.
ವೈವಿಧ್ಯಮಯ ತೋಟಗಳು, ಹಿತ್ತಲು, ಸೊಪ್ಪಿನ ‌ಬೆಟ್ಟಗಳು ಸೇರಿದಂತೆ ಕಾಡು ಮತ್ತು ನಾಡಿನ ಜೀವ ವೈವಿಧ್ಯಗಳು, ಪರಿಸರ ಸಂಕ್ರಮಣ ನಾಶವಾಗ್ತಾ ಇದೆ. ಬ್ರಿಟಿಷರ ಅರಣ್ಯ ಧೋರಣೆಗಳು ಮುಂದುವರೆದಿವೆ. ಅಡಿಕೆ, ಕಾಫಿ ಮತ್ತು ಅಕೇಶಿಯ ದಂತಹ ವಾಣಿಜ್ಯ ಏಕಬೆಳೆ ತೋಟಗಳು ಪಾರಂಪರಿಕ ಬಫರ್ ವ್ಯವಸ್ಥೆಯನ್ನು ಧ್ವಂಸಗೊಳಿಸಿವೆ.
ಪಶ್ಚಿಮ ಘಟ್ಟಗಳು ಉಳಿಯಲೇಬೇಕಿದ್ದು, ಸಾಮರಸ್ಯ ಬದುಕನ್ನು ಹುಡುಕಬೇಕಿದೆ. ಕೃಷಿ ಮತ್ತು ಅರಣ್ಯದ ನಡುವಿನ ಸಂಘರ್ಷ ದೂರ ಮಾಡಿ ಸಹಬಾಳ್ವೆ ಮಾಡಬೇಕಿದೆ ಎಂದ ಅವರು ಇಂದಿನ ಕಾರ್ಯಾಗಾರದಲ್ಲಿ ಈ‌ ಎಲ್ಲದರ ಬಗ್ಗೆ ಚರ್ಚಿಸೋಣ. ರೈತರೊಂದಿಗೆ ಸಂವಾದ ನಡೆಸೋಣ, ಕಾಯ್ದೆ ಅನುಷ್ಟಾನ ಬಗ್ಗೆ ತಿಳಿದುಕೊಳ್ಳೋಣ ಎಂದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವರಾದ ಟಿ.ಎಸ್.ಹೂವಯ್ಯಗೌಡ ಮಾತನಾಡಿ, ಎಲ್ಲ ಜೀವಿಗಳು, ಪ್ರಾಣಿಗಳಿಗೂ ಬದುಕುವ ಹಕ್ಕು ಇದ್ದು, ಇವುಗಳ‌ ಬಗ್ಗೆ ಯೋಚಿಸಬೇಕಿದೆ. ಕೃಷಿ‌ ಮತ್ತು ಅರಣ್ಯ‌ ವಿಷಯಗಳಲ್ಲಿ ಹಲವಾರು ಕಾನೂನು ತೊಡಕು ಇವೆ. ಯಾಂತ್ರಿಕ ಅಭಿವೃದ್ಧಿಯಿಂದ ಪರಿಸರ ನಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮರಸ್ಯದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಉದ್ಘಾಟನೆಯ ನಂತರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಮಲೆನಾಡಿನ ಪ್ರಮುಖ ವಿಷಯಗಳ ಕುರಿತು ಸಂವಾದಗಳು ನಡೆದವು.
ಅರಣ್ಯ ನೀತಿಗಳು ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ವಿಷಯ ಕುರಿತು ಜನಾರ್ದನ ಜಿ.ಎಲ್., ನಿರ್ದೇಶಕರು, ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ 90.8 ಎಫ್.ಎಂ.
ಅಭಿವೃದ್ಧಿ ಯೋಜನೆಗಳು ಮತ್ತು ಸಂಘರ್ಷ ವಿಷಯ ಕುರಿತು ಅಖಿಲೇಶ್ ಚಿಪ್ಲಿ , ಪರಿಸರ ಹೋರಾಟಗಾರರು, ಸಾಗರ.
ಅರಣ್ಯ ಕಾಯಿದೆಗಳು ಮತ್ತು ಅವಾಂತರಗಳು‌ ವಿಷಯ ಕುರಿತು ರಮೇಶ್ ಹೆಗಡೆ , ಮಾಜಿ ಮಹಾಪೌರರು, ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಅಡಿಕೆ ಬೆಳೆಗಾರರ ಸಂಘಟನೆ.
ರಕ್ಷಿತಾರಣ್ಯ ಮತ್ತು ವನ್ಯಜೀವಿ ರೈತ ಸಂಘರ್ಷ ವಿಷಯ ಕುರಿತು ಡಾ. ವಿಜಯಕುಮಾರ್ , ವನ್ಯಜೀವಿ ಸಂರಕ್ಷಣಾ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ ಇವರು ಸಂಪನ್ಮೂಲ‌ ವ್ಯಕ್ತಿಗಳಾಗಿ ಪಾಲ್ಗೊಂಡು ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶಿವಮೊಗ್ಗದ ರೈತ ಸಂಘಟನೆಯ ಮುಖಂಡರಾದ ಕೆ.ಟಿ. ಗಂಗಾಧರ್ ವಹಿಸಿದ್ದರು.
ಕಾರ್ಯಾಗಾರದ ಸಮಾರೋಪ ಹಾಗೂ ‘ಮುಂದಿನ ಹೆಜ್ಜೆ’ಯ ಕುರಿತಾದ ಕೊನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಅಡಿಕೆ ಬೆಳೆಗಾರರ ಸಂಘಟನೆಯ ಬಿ.ಆರ್. ಜಯಂತ್ ವಹಿಸಿದ್ದು, ಡಾ. ಪ್ರಕಾಶ್ ಕಮ್ಮರಡಿ ಅವರು ಇದರ ನಿರ್ವಹಣೆ ಮಾಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಹೆಚ್.ಆರ್. ಬಸವರಾಜಪ್ಪ, ಬುಡಕಟ್ಟು ಸಂಘಟನೆಯ ಮುಖಂಡರಾದ ರಾಮಣ್ಣ ಹಸಲರ್, ಪರಿಸರ ಸಂಘಟನೆಯ ಶೈಲೇಂದ್ರ ಬಂದಗದ್ದೆ ಹಾಗೂ ತಾಳಗುಪ್ಪದ ರೈತ ಮಹಿಳೆ ಪೂರ್ಣಿಮಾ ಅವರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಮಂಡಿಸಿದರು. ಕವಿತಾ ಹಾಗೂ ಇನ್ನಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Veerendra Heggade ಕೂಡ್ಲಿಯಲ್ಲಿ ಸಾಮಾಜಿಕಜಾಗೃತಿ ಮೂಡಿಸುವ ಬೀದಿ ನಾಟಕದ ಯಶಸ್ವಿ ಪ್ರದರ್ಶನ

Veerendra Heggade ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...

Chess ಜುಲೈ 4 ರಿಂದ ದೀರ್ಘ ಆವಧಿಯ ಚೆಸ್ ತರಬೇತಿ ಆರಂಭ.

Chess ನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯು ಶಿವಮೊಗ್ಗ ನಗರದ ವಿವಿಧ...

KSRTC ಶಿವಮೊಗ್ಗದ ಸಾರಿಗೆ ಬಸ್ ಡಿಪೋ ಹಿಂಭಾಗವಿಶಾಲ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ಮನವಿ

KSRTC ನಗರದ ಕೆಎಸ್‌ಆರ್‌ಟಿಸಿ ಡಿಪ್ಪೋ ಹಿಂಭಾಗ ಉದ್ಯಾನವನಕ್ಕೆಂದೆ ಮೀಸಲಿಟ್ಟಿರುವ ೨ವರೆ ಎಕರೆ...