ಯಾವಾಗಲೂ ಭೇತಾಳ ಕತೆಗಳನ್ನು ಓದುತ್ತಿದ್ದ, ಬರೆಯುತ್ತಿರುವ ನಾನು ಈ ದೆವ್ವ ಭೂತಗಳೆಂದರೆ ನಂಬದವನು. ಯಾರಾದರೂ ದೆವ್ವ ಮೆಟ್ಟಿದ ವಿಷಯ ತಿಳದರೆ ತಾರ್ಕಿಕವಾಗಿ ವಿಚಾರಿಸಿ, ಅದನ್ನು ವೈಜ್ಞಾನಿಕವಾಗಿ ಅಲ್ಲಗಳೆಯುವ, ಹಾಗೂ ಅನುಭವವನ್ನು ಮಾತ್ರ ಸತ್ಯವೆಂದು ತಿಳಿಯುತ್ತಾ ಜೀವನದ ಇಪ್ಪತ್ತಾರು ಸಂವತ್ಸರಗಳನ್ನು ಕಳೆದವನು. ಮೊನ್ನೆ ನಮ್ಮ ಕಾಲೇಜಿನ ಒಂದು ಕಾರ್ಯಕ್ರಮವೊಂದನ್ನು ಮುಗಿಸಿ ಸಂಜೆ ನಾಲ್ಕಕ್ಕೆ ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ನಂತರ ಏಳು ಗಂಟೆಗೆ ಶಿರಾ ಗೆ ಹೋಗಿಬರುವುದಾಗಿ ತಿಳಿಸಿ ಹೊರಟೆ. ಅಲ್ಲಿ ಪಕ್ಕದ ಹಳ್ಳಿಯೊಂದರಲ್ಲಿ ಯಾರೋ ಒಬ್ಬರನ್ನು ಭೇಟಿಯಾಗುವುದಿತ್ತು. ನಾನು ಶಿರಾ ಗೆ ಹೊರಟದ್ದು ನನ್ನ ಮಿತ್ರರಾದ ಶ್ರೀ ರಘುನಾಥ್ ರನ್ನು ನೋಡಲು, ಅವರು ನಮ್ಮ ಊರಿಗೆ ಬರುವುದಾಗಿ ತಿಳಿಸಿದರು. ಬಹಳ ವರ್ಷಗಳ ತರುವಾಯ ಖುಷಿಯಿಂದ ಹೊರಟೆ. ಎಂಟು ಗಂಟೆಗೆ ಶಿರಾ ಸೇರಿದೆ ಅದು ನನ್ನ ಬೈಕ್ ನಲ್ಲಿಯೇ. ಅವರು ಬೆಂಗಳೂರು ಬಿಡುವುದು ತಡವಾದ್ದರಿಂದ ಒಂಭತ್ತು ಗಂಟೆಗೆ ಬಂದು ಶಿರಾದ ಬಸ್ ಸ್ಟ್ಯಾಂಡ್ ನಲ್ಲಿಳಿದು ನನಗೆ ಕರೆ ಮಾಡಿದರು. ನಾನೂ ಅವರೂ ಇಬ್ಬರು ಅವರ ಹಳೆಯ ಮಿತ್ರರೊಬ್ಬರನ್ನು ಭೇಟಿ ಮಾಡಿ, ಹತ್ತು ಗಂಟೆಗೆ ಶಿರಾದಿಂದ ಹೊರಟು ಬಂದೆವು. ಅರೆ ಇದರಲ್ಲೇನಿದೆ.? ಎಲ್ಲರು ಮಾಡಿದ್ದನ್ನೇ ನೀವು ಮಾಡಿದಿರಿ ಎನ್ನುವಿರಾ…? ಅಲ್ಲೇ ಇರೋದು ಟ್ವಿಸ್ಟ್.
ಬರುತ್ತಾ ಅವರು ಶಿರಾದಿಂದಲೂ ನನ್ನೊಟ್ಟಿಗೆ ಮಾತನಾಡುತ್ತಾ ಬಂದರು. ಏಕೆಂದರೆ ನನ್ನ ಮೇಲೆ ಅವರಿಗೆ ಪ್ರೀತಿ ಬಹಳ. ” ಏನಪಾ ಹೇಗಿದೆ ಕಾಲೇಜ್. ನಾಳೆ ನಾನು ನಿಮ್ಮ ಕಾಲೇಜಿಗೆ ಬರ್ತೀನಿ ಹಾಗೇ ಚಳ್ಳಕೆರೆಗೆ ಹೋಗ್ಬೇಕು. ನಿಮ್ ಕಾಲೇಜನ್ನೂ ನೋಡಿದ್ಹಾಗಾಗುತ್ತೆ. ” ಎಂದರು. ಮೊದಲೇ ನಾನು ಸ್ವಲ್ಪ ಮೂಡಿ ಕೆಲವೊಮ್ಮೆ ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದರೂ ಸಹಾ ನನ್ನ ಗಮನ ಬೇರೆಡೆಯೇ ಇರುತ್ತದೆ. ಅದರಲ್ಲಿ ರಾತ್ರಿ ಬೈಕ್ ರೈಡಿಂಗ್ ನಲ್ಲಿ ಅಂತೂ ಮಾತು ಸಂಪೂರ್ಣ ನಿಂತಿರುತ್ತದೆ. ಅದೇ ರೀತಿ ಅವರು ಏನನ್ನೋ ಹೇಳುತ್ತಿದ್ದರು, ನಾನೂ ಹ್ಞೂಂ, ಉಹ್ಞೂಂ ಎಂದೇ ಹೇಳುತ್ತಾ ಬೈಕ್ ಚಲಾಯಿಸಿದೆ. ಶಿರಾದಿಂದ ಕಗ್ಗಲಡುವಿಗೆ ಬಂದೆ ಆ ಊರಿನಲ್ಲಿ ಪಕ್ಷಿಧಾಮವಿದೆ ಹಲವಾರು ಬಗೆಯ ಪಕ್ಷಿಗಳು ಅಲ್ಲಿಗೆ ವಲಸೆ ಬರುತ್ತವೆ. ಅದನ್ನೇ ನೆನೆಯುತ್ತಾ ಬರುತ್ತಿರುವಾಗ, ಆ ಊರಿನಿಂದ ಬರುತ್ತಿರುವಾಗ ಇದ್ದಕ್ಕಿದ್ದಂತೆ ಜರ್ಕ್ ಹೊಡೆಯಿತು, ಆಗ ಅದು ಸಹಜವೇ ಆಗುವ ಪ್ರಕ್ರಿಯೆಯೆಂದುಕೊಂಡೆ ಮುಂದೆ ಬಂದೆ. ನೂರು ಮೀಟರ್ ಬರುವ ಹೊತ್ತಿನಲ್ಲಿ, ಒಂದು ಅಪ್ಪಟ ಬಿಳಿಯ ಬಣ್ಣದ ನಾಯಿ ರೋಡ್ ಕ್ರಾಸ್ ಮಾಡಿತು. ನಾನು ಅರೇ ಇದೇನಿದು ನಾಯಿ…? ಇಷ್ಟು ಬೆಳ್ಳಗೆ ಎಂದುಕೊಂಡೆ ಮತ್ತೆ ಮುಂದೆ ಹೊರಟೆ.
ಅಲ್ಲಿಂದ ಎರಡು ಮೀಟರ್ ಬರುವುದರೊಳಗೆ ಸಣ್ಣದಾಗಿ ಏನೋ ಒಂದು ರೀತಿಯ ಮಂಕು ಕವಿದಂತಾಯ್ತು, ಹೊರಟೆ, ಹೊರಟೆ, ಅವರು ಮಾತನಾಡುವುದನ್ನು ಕ್ರಮೇಣ ಕಡಿಮೆ ಮಾಡಿದರು, ನಂತರ ಇದ್ದಕ್ಕಿದ್ದ ಹಾಗೆ ಕಪಾಳಕ್ಕೆ ಹೊಡೆದಂತಾಯಿತು. ತಟ್ಟನೆ ನೋಡಿದರೆ ತಾವರೆಕೆರೆಯ ರಂಗನಾಥ ದೇವಾಲಯದ ಮುಂದೆ ನನ್ನ ಬೈಕ್ ನಿಂತಿದೆ. ಆಶ್ಚರ್ಯವಾಯ್ತು. ಅರೆರೆ ಶಿರಾದಿಂದ ನಮ್ಮೂರಿಗೆ ಎಲ್ಲಿಯೂ ಡೀವಿಯೇಷನ್ ಇಲ್ಲ ಕಗ್ಗಲಡುವೆಲ್ಲಿ,,,? ತಾವರೆಕೆರೆಯೆಲ್ಲಿ….? ಎಂದು ಚಿಂತಿಸಿದೆ.
ಕೊನೆಗೆ ತಾವರೆಕೆರೆಯ ಡಾಬಾ ಒಂದರಲ್ಲಿ ನಾನೂ ಅವರೂ ಟೀ ಕುಡಿದು. ಹೊರಟು ಬಂದೆವು, ಅಂತೂ ಇಂತೂ ರಾತ್ರಿ 01.00ಕ್ಕೆ ಮನೆ ಸೇರಿದೆವು.
ಅಷ್ಟರಲ್ಲಿ ಅಪ್ಪನಿಂದ 18-20 ಕಾಲ್ ಬಂದಿತ್ತು. ಮನೆಗೆ ಬಂದು ಹೇಳಿದೆ. ಬೈದರು, ಆಮೇಲೆ ಹೇಳಿದರು ಏನೋ confusion ಆಗಿರಬೇಕು. ಅಂತ. ಈಗಲೂ ನಮಗೆ ಹೇಗೆ ದಾರಿ ತಪ್ಪಿದೆನೆಂದು ತಿಳಿಯುತ್ತಿಲ್ಲ. ಬಂದದ್ದು ನಾಯಿಯೇ ಆಗಿದ್ದರೆ. ಅದರಿಂದ ನಾನು ಹೇಗೆ ದಾರಿ ತಪ್ಪಲು ಸಾಧ್ಯ….? ಅಥವಾ ಅದು ದೆವ್ವ ಎಂದಾದಲ್ಲಿ ಅದಕ್ಕೆ ನನ್ನ ಮೇಲೇನು ಸಿಟ್ಟು….?
ಒಟ್ಟಾರೆ ಇದೊಂದು ಉತ್ತಮ ಮೋಜಿನ ಕ್ಷಣವಾಯ್ತು. ಏಕೆಂದರೆ ನನ್ನ ಊರಿಗೂ ತಾವರೆಕೆರೆಗೂ ಸುಮಾರು 60-70ಕಿ.ಮೀ ಅಂತರವಿದೆ. ಅಷ್ಟೇ ಅಲ್ಲದೇ ನನ್ನ ಊರಿಗೆ ಹೋಗುವ ಮಾರ್ಗದಲ್ಲಿ ಯಾವುದೇ ಡೀವಿಯೇಷನ್ ಇಲ್ಲ. ಒಂದೇ ರಸ್ತೆ. ನಾನು ದಾರಿ ತಪ್ಪಿದ್ದಾದರೂ ಹೇಗೆ ?ಅದಕ್ಕೆ ಉತ್ತರ ಸಿಗುವುದು ಸಾಧ್ಯವೇ ಎಂಬುದೇ ನನ್ನ ಸಂದೇಹ.
