Saturday, July 11, 2026
Saturday, July 11, 2026

Klive Special Article ಗೋರಕ್ಷಕ ಸಂತ ಕಬೀರಾನಂದ ಸ್ವಾಮೀಜಿ. ಲೇ: ಪ್ರಸಾದ ಶ್ರೀವತ್ಸ. ದಾವಣಗೆರೆ

Date:

´               ಗೋ ರಕ್ಷಕ ಸಂತ – ಸದ್ಗುರು ಶ್ರೀ ಶ್ರೀ ಶ್ರೀ ಕಬೀರಾನಂದ ಮಹಾಸ್ವಾಮಿಗಳು

Klive Special Article ಚಿತ್ರದುರ್ಗ ಜಿಲ್ಲೆ ತತ್ತ್ವಜ್ಞಾನಿಗಳ ಬೀಡು ಎಂದರೆ ತಪ್ಪಾಗಲಾರದು. ಏಕೆಂದರೆ ಪಿಪೀಲಕ, ಅಚಲ, ಹೀಗೆ ಹಲವಾರು ಪರಂಪರೆಗಳ ಮೂಲಕ ಆಧ್ಯಾತ್ಮಿಕ ಸೌರಭವನ್ನು ಸೂಸುತ್ತಾ ಜನರಿಗೆ ನಿಜ ಜೀವನದ ಅರ್ಥವನ್ನು ಪದಗಳಿಂದ, ಮಾತುಗಳಿಂದ, ಹಾಗೂ ವಿಶಿಷ್ಟ ಕೈಂಕರ್ಯಗಳ ಮೂಲಕ ನಡೆಸುತ್ತಾ ಬಂದಿರುವುದು ಈ ಜಿಲ್ಲೆಯ ವಿಶೇಷತೆ. ಗಮನಿಸಿದಾಗ ಕಾಣ ಸಿಗುವ ಹಲವಾರು ಅವಧೂತರು, ಸಂತರು, ಮಠಗಳು, ದೇವಾಲಯ-ಗದ್ದುಗೆಗಳಂತೆ, ಜನರ ತಾತ್ಸಾರಕ್ಕೊಳಗಾಗಿರುವ ಸಂತರೂ, ದೇವಾಲಯಗಳು, ವಿಶೇಷ ತಾಣಗಳೂ ಕೂಡ ನಮ್ಮಲ್ಲಿವೆ. ನಾನು ಇದೇ ಚಿತ್ರದುರ್ಗ ಜಿಲ್ಲೆಯವನು ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಏಕೆಂದರೆ ಚಿತ್ರದುರ್ಗ ಜಿಲ್ಲೆ ಬಯಲು ಸೀಮೆಯಾಗಿದ್ದು, ಬಡತನ, ನಿರುದ್ಯೋಗಗಳು ನಮ್ಮ ಅಣ್ಣ ತಮ್ಮಂದಿರಂತಿವೆ. ಮಳೆಯಾಶ್ರಿತ ಜಮೀನುಗಳಲ್ಲಿ ಆಯಾ ಭಾಗಗಳ ಅದರಲ್ಲಿಯೂ ರಾಗಿ, ಶೇಂಗಾ, ಜೋಳ ಅಪರೂಪಕ್ಕೊಮ್ಮೆ ಭತ್ತ ಬೆಳೆಯುವ ನಾವು ದುಡ್ಡಿನಿಂದ ಬಡವರಾಗಿರಬಹುದು ಬಿಟ್ಟರೆ ಇನ್ನುಳಿದಂತೆ ಎಲ್ಲಾ ವಿಧದಲ್ಲಿಯೂ ಅದರಲ್ಲಿ ಗೌರವಾದರಣೆಯಲ್ಲಿ, ಸ್ನೇಹದಲ್ಲಿ, ಸಹಾಯದಲ್ಲಿ ಶ್ರೀಮಂತರು. ಹಾಗೇ ಅತಿಥಿ ಸತ್ಕಾರದಲ್ಲಿಯೂ ನಮ್ಮ ಜಿಲ್ಲೆಯ ಜನ ಶ್ರೀಮಂತರು. ಯಾರೇ ಮನೆಗೆ ಬಂದರೂ ಅವರನ್ನು ಹಾಗೇ ಬರಿಯ ಕೈಯಲ್ಲಿ ಹಿಂತಿರುಗಿಸಬಾರದು ಎಂಬ ವಾಡಿಕೆಯಿರುವ ಭಾವುಕರು. ಹಾಗಾಗಿ ಸಾಧು-ಸಂತರು, ಅವಧೂತರು, ಮಠ ಮಂದಿರಗಳನ್ನು ನಾವು ನಮ್ಮಲ್ಲಿ ಕಾಣಬಹುದು. ಇದೇ ರೀತಿಯಾಗಿ ಅದರಂತೆ ಚಿತ್ರದುರ್ಗದ ಪಾಳೆಯಗಾರರೂ ಸಹಾ ಸಾಧು ಸಂತರಿಗೆ ಆಶ್ರಯ ನೀಡುತ್ತಾ ಬಂದವರು. ನಾಯಕನ ಹಟ್ಟಿಯ ತಿಪ್ಪೇರುದ್ರ ಸ್ವಾಮಿಗಳು, ಚಿತ್ರದುರ್ಗದ ಮುರುಘರಾಜೇಂದ್ರ ಸ್ವಾಮಿಗಳು, ಹೀಗೇ ಸಾಧು-ಸಂತರ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳು ಆಳ್ವಿಕೆ ನಡೆಸಿ ಜನಮಾನಸದಲ್ಲಿ ಮನೆಮಾಡಿ ಇಂದಿಗೂ ಸಂಪ್ರದಾಯಗಳ ಆಚರಣೆ ನಡೆಯುತ್ತಿದೆ. ಜನರನ್ನು ಮೌಢ್ಯಗಳಿಂದ ಹೊರತಂದು ಅದ್ವೈತ ಸಿದ್ಧಾಂತ ಪ್ರತಿಪಾದನೆಯಲ್ಲಿ ಆರೂಢ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವುದು ಚಿತ್ರದುರ್ಗದ ಶ್ರೀ ಸದ್ಗುರು ಕಬೀರಾನಂದ ಆಶ್ರಮ. ಭಜನೆ, ಪೂಜೆ, ಸತ್ಸಂಗ, ಪ್ರವಚನ, ವಿದ್ಯಾದಾನ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಜನರಿಗೆ ನೆರವಾಗಿರುವ ಶ್ರೀ ಮಠವು ಆರೂಢ ಪರಂಪರೆಯ ಆಕರ್ಷಣೀಯ ಬಿಂದುವಾಗಿದೆ. 1929-30ರ ಸುಮಾರಿಗೆ ಚಿತ್ರದುರ್ಗದಲ್ಲಿ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳು ಚಿತ್ರದುರ್ಗಕ್ಕೆ ಬಂದರು. ನಿಜಕ್ಕೂ ಸಂತನೆಂದರೆ ಯಾರು ? ಶಿಷ್ಯನೆಂದರೆ ಯಾರು ? ಎಂದು ತೋರಿಸಿಕೊಟ್ಟವರು ಇವರೇ.

ಮಲ್ಲಪ್ಪ ಮತ್ತು ರುದ್ರಮ್ಮ ಎಂಬ ದಂಪತಿಗಳ ಸುಪುತ್ರರಾಗಿ ಆಶ್ವಯುಜ ಶುದ್ಧ ದಶಮಿ ಅಂದರೆ ವಿಜಯ ದಶಮಿಯಂದು ಜನಿಸಿದ ಇವರು ಮೂಲತಃ ಉತ್ತರಕನ್ನಡ ಜಿಲ್ಲೆಯ ವಿರಾಟಪುರ ಎಂಬ ಒಂದು ಹಳ್ಳಿಯವರು. ಬಡತನದಲ್ಲಿಯೇ ಹುಟ್ಟಿ, ಬೆಳೆದು, ದೊಡ್ಡವನಾದ ಈ ಹುಡುಗ ಶಿವಾನಂದ ಹುಟ್ಟಿದ ಮೂರು ತಿಂಗಳಿಗೇ ತಂದೆ-ತಾಯಿಯರು ಕೈಲಾಸವಾಸಿಗಳಾದರು. ನಂತರ ಈ ಮಗು ಊರಿನವರ ಕೈಯಲ್ಲಿ ಬಿತ್ತು. ಮೊಲೆಯುಣಿಸಿದವರೇ ಮಾತೆಯರು, ತನ್ನ ಎತ್ತಿ ಆಡಿಸಿದವರೇ ಬಂಧುಗಳು ಎಂಬಂತೆ ಬೆಳೆದ ಮಗು ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತಿತ್ತು. ಆದರೆ ಮಲ್ಲಪ್ಪನ ದಾಯಾದಿಗಳು ಆ ಮಗುವಿಗಾಗಿ ಆಡೊಂದನ್ನು ತಂದು ಅದರ ಹಾಲಿನಿಂದ ಮಗುವನ್ನು ಸಾಕಹತ್ತಿದರು. ದೊಡ್ಡವನಾದ ಶಿವಾನಂದ ಈಗ ಅನ್ನವನ್ನುಣ್ಣುವಂತಾದ ಕೆಲ ಸಾತ್ವಿಕ ಮಹಿಳೆಯರು ಪ್ರೀತಿಯಿಂದ ಉಣಬಡಿಸಿದರೆ, ಕೆಲವರು ನಿರ್ದಯವಾಗಿ ಕಂಡರು, ಎಲ್ಲ ಪರಿಸ್ಥಿತಿಗಳಿಂದ ಬೆಳೆದ ಇವನು ಊರ ಆಂಜನೇಯನ ಪರಮ ಭಕ್ತನಾಗಿದ್ದನು. ಹನುಮನ ಪರಮ ಭಕ್ತ ಹಗಲೆಲ್ಲ ರಾಮ ರಾಮ ಅನ್ನುತ್ತಿದ್ದನು. ತನ್ನ ವಯಸ್ಸಿನ ಹುಡುಗರು ಕೊಡುವ ಹಿಂಸೆಗಳು-ಕೀಟಲೆಗಳನ್ನು ಸಾವಧಾನದಿಂದ ಸಹಿಸಿದ ಈ ಹುಡುಗ ಸ್ಥಿತಪ್ರಜ್ಞ ಹೇಗಿರಬೇಕೆಂದು ಎಲ್ಲರಿಗೂ ತೋರಿಸುವಂತಾದ. ಶಿವಾನಂದನನ್ನು ಹಿಂಸಿಸಿದವರಿಗೆ, ನೋವು ನೀಡಿದವರಿಗೆ ಆಗಿಂದಾಗ್ಗೆ ಶಿಕ್ಷೆಗಳಾಗುತ್ತಿರುವುದನ್ನು ಕಂಡು ಊರಿನ ಜನರು ಈತ ಸಾಮಾನ್ಯನಲ್ಲ ಎಂದು ಮನಗಂಡರು.

 Klive Special Article ಒಂಭತ್ತನೇ ವಯಸ್ಸಿನಲ್ಲಿ ಗುರುಶೋಧಾರ್ಥವಾಗಿ ಊರಿನಿಂದ ಹೊರಟ ಈ ಬಾಲಕ ತಾನು ಉಳಿದ ಜಾಗಗಳಲ್ಲೆಲ್ಲ ಭಗವಂತನ ಪ್ರೇಮದ ಪ್ರಸಾರ ಮಾಡುತ್ತಿದ್ದನು. ಹೀಗಿರುವಾಗ ಗುರುವಿಗಾಗಿ ಊರೂರು ತಿರುಗುತ್ತಾ ಬೆಳಗಾವಿಗೆ ಬಂದಾಗ ಒಂದು ಮರದಡಿಯಲ್ಲಿ ಕುಳಿತಿದ್ದ ಸಾಧುವಿನ ಕಡೆಗೆ ದೃಷ್ಟಿಹಾಯಿತು. ಆ ಸಾಧುವಿನ ಅಲೌಕಿಕತೆಯನ್ನು ಕಂಡು ಸಾಷ್ಟಾಂಗ ನಮಸ್ಕಾರ ಮಾಡಿದ ಹುಡುಗ “ಬಾಬಾ | ನಾನೂ ಸಹಾ ನಿಮ್ಮಂತೆ ಸಂನ್ಯಾಸಿಯಾಗಲು ಇಚ್ಛಿಸಿದ್ದೇನೆ ದಯವಿಟ್ಟು ಅನುಗ್ರಹಿಸಿ”ಎನ್ನಲು ಸಾಧುವು ಯಾರು, ಏನು ಎಂಬುದಾಗಿ ವಿಚಾರಿಸಿ, ಅವನ ಮುಗ್ಧತೆ ಮತ್ತು ಅಚಲ ನಿಷ್ಠೆಯನ್ನು ಕಂಡು ಬೆರಗಾಗಿ ತಾನು ಓರ್ವ ಪೊಳ್ಳು ಸಂನ್ಯಾಸಿ ಎಂದು ಮನದಲ್ಲಿಯೇ ನಾಚಿದ. ನಂತರ ನೋಡು ಸಂನ್ಯಾಸಕ್ಕೆ ಮೊದಲು ಕಲಿಯಬೇಕಾದ್ದು ಭಿಕ್ಷಾಟನೆ ಎಂದು ಜೋಳಿಗೆಯನ್ನು ನೀಡಿ ಭಿಕ್ಷೆಬೇಡಿ ಬರಲು ತಿಳಿಸಿದ. ಈ ಸಮಯದಲ್ಲಿ ಆದ ಅವಮಾನಗಳನ್ನು ಶಿವಾನಂದ ಸಮಾಧಾನದಿಂದ ಅನುಭವಿಸಿದನು.ಕಾಶಿ, ಹರಿದ್ವಾರಗಳಂತಹ ತೀರ್ಥಗಳಲ್ಲಿ ಸಂಚರಿಸುತ್ತಾ, ಮುಂದೆ ಹಲವಾರು ಕ್ಷೇತ್ರಗಳನ್ನು ನೋಡುತ್ತಾ, ಗುರುಗಳಾದ ಶ್ರೀ ಅಡವೀಶರ ಪರಿಚಯವಾಯಿತು. ಅಡವೀಶರ ಶಿಷ್ಯನಾದ ಶಿವಾನಂದ. ಅಡವೀಶರ ಗುರುಗಳು ಮಳೆ ಮಲ್ಲಪ್ಪಜ್ಜನವರು. ಅವರು ಅಡವೀಶರಿಗೆ ಗುರುದಕ್ಷಿಣೆ ಬೇಕು ಎಂದಾಗ ಏನು ಗುರುದಕ್ಷಿಣೆ ಬೇಕು ಕೇಳಿ ಗುರುವೇ ಎಂದರು. ಆಗ ಮಲ್ಲಪ್ಪಜ್ಜನವರು “ನಾನು ಸಾಧನೆಯ ಕಾಲದಲ್ಲಿದ್ದಾಗ, ಪ್ರತಿದಿನವೂ ಹಸುವೊಂದು ನನ್ನ ಹಸಿವು ನೀಗಿಸುತ್ತಿತ್ತು, ಆದ್ದರಿಂದ ನೀನು ನನ್ನ ಶಿಷ್ಯನಾಗಿ ಗೋರಕ್ಷಣೆ-ಗೋಸೇವೆಯನ್ನು ಮಾಡಲು ಗೋಶಾಲೆ ನಿರ್ಮಿಸಿದರೆ ನನಗೆ ಮುಕ್ತಿಯಾಯಿತು.”ಎಂದರು. ಕೂಡಲೇ ಅಡವೀಶರು ಗದುಗಿನ ಸಚ್ಚಿದಾನಂದ ಮಠಕ್ಕೆ ಬಂದಾಗ ಶಿವಾನಂದನ ಭಕ್ತಿಪರತೆಯನ್ನು ಕಂಡು ತಮ್ಮ ಆಗಮನದ ಕೆಲಸವನ್ನು ತಿಳಿಸುತ್ತಾರೆ. ಶಿವಾನಂದರ ಇನ್ನೊಬ್ಬ ಗುರುಗಳಾದ ಸಚ್ಚಿದಾನಂದರ ಒರಟು ಮಾತು ಅಡವೀಶರಿಗೆ ಕೋಪ-ದುಃಖ ಎರಡನ್ನೂ ಹೆಚ್ಚಿಸುತ್ತದೆ. ಆದರೆ ಆ ಜವಾಬ್ದಾರಿಯನ್ನು ಮನಃಪೂರ್ವಕವಾಗಿ ಶಿವಾನಂದನು ವಹಿಸಿಕೊಂಡು ನಿಂತಾಗ ಅಡವೀಶರು ಅತ್ಯಂತ ಪ್ರಸನ್ನರಾಗುತ್ತಾರೆ. ಲೋಕೋದ್ಧಾರಕ್ಕಾಗಿ ಅವರ ಅಧ್ಯಾತ್ಮ ಶಕ್ತಿಯನ್ನೆಲ್ಲ ಒಟ್ಟಾಗಿ ಧಾರೆಯೆರೆದ “ಬ್ರಹ್ಮಾನಂದ”ಎಂದು ಹೆಸರಿಟ್ಟು ʼತನ್ನಂತೆ ಮಾಡಿದನೆನ್ನ ಕಾಯ | ಭ್ರಾಂತಿ ಕಳೆದಾನೊ ಗುರು ಮಹನೀಯ ||ʼ ಎಂಬ ಅಂತಃಕರುಣಿ ಗುರುನಾಥನು ದೈಹಿಕವಾಗಿ ಬ್ರಹ್ಮಾನಂದರಿಂದ ದೂರವಾದರು. ನಂತರ ಸಚ್ಚಿದಾನಂದರಿಗೆ ಈ ವಿಷಯದಲ್ಲಿ ಅಸಹನೆಯುಂಟಾಗಿ ಬ್ರಹ್ಮಾನಂದರು ಅಲ್ಲಿಂದ ಹೊರನಡೆದರು. ಅಲ್ಲಿ ಬ್ರಹ್ಮಾನಂದರ ಭಕ್ತೆ ವೀರ ಬಸವ್ವ ಎಂಬ ಹೆಣ್ಣು ಮಗಳೋರ್ವಳು ತನ್ನ ಮನೆಯನ್ನು ಇವರಿಗೆ ಬಿಟ್ಟುಕೊಟ್ಟಳು. ಅಂದಿನಿಂದ ಆ ಮನೆಯೇ ಬ್ರಹ್ಮಾನಂದರ ಮಠವಾಯಿತು. ಪ್ರತಿದಿನ ಭಜನೆ, ಪ್ರವಚನ, ಸ್ವಾಧ್ಯಾಯ, ಎಲ್ಲವೂ ನಡೆಯುತ್ತಿರುವಾಗ ಜನ ಈ ಕಡೆಗೆ ಬರಹತ್ತಿದರು. ಗಹನವಾದ ವೇದಾಂತ ವಿಚಾರಗಳನ್ನು ಅತ್ಯಂತ ಸುಲಲಿತವಾಗಿ ಎಲ್ಲರಿಗೂ ಅರ್ಥವಾಗುವಂತಿದ್ದ ಬ್ರಹ್ಮಾನಂದರ ಪ್ರೇಮಳ ವಾಣಿಯು ಎಲ್ಲರನ್ನೂ ಆಕರ್ಷಿಸುವುದರೊಟ್ಟಿಗೆ, ತತ್ತ್ವಲೋಕದ ಹಾದಿ ಹೋಕರಿಗೆ ಮೈಲಿಗಲ್ಲಾಯಿತು. ನಂತರ ಸಂನ್ಯಾಸಿಗಳು ಸಂಸಾರಿಗಳ ಜಾಗದಲ್ಲಿರಲು ಸಧ್ಯವಿಲ್ಲ ಎಂದು ನಿರ್ಧರಿಸಿ ಬ್ರಹ್ಮಾನಂದರು ವೀರಬಸವ್ವನ ಮನೆಯಿಂದ ಹೊರನಡೆದರು. ಅಲ್ಲಿಂದ ಬ್ರಹ್ಮಾನಂದರು ಬಂದಿದ್ದು ಆರೂಢ ಜಗದ್ಗುರು ಶ್ರೀ ಸಿದ್ಧಾರೂಢರ ಸನ್ನಿಧಾನಕ್ಕೆ. ಅಲ್ಲಿ ಬಂದು ಸಿದ್ಧಾರೂಢರ ಪ್ರವಚನಗಳನ್ನು ಆಲಿಸುತ್ತಿರುವಾಗ, ಆರೂಢರ ದೃಷ್ಟಿ ಇವರೆಡೆಗೆ ನೆಟ್ಟಿತು. ಯಾರು ? ಏನು ? ಎಂದು ವಿಚಾರಿಸಿದಾಗ, ಸವಿವರವಾಗಿ ಎಲ್ಲವನ್ನೂ ತಿಳಿಸಿದರು. ನಂತರ ಬ್ರಹ್ಮಜ್ಞಾನದ ಹಂಬಲ ತಿಳಿಸಿದಾಗ ಆರೂಢರು ನುಡಿದರು “ಅಯ್ಯಾ ಸಾಧು ! ಸುಮ್ಮನೆ ಬ್ರಹ್ಮಾನುಭವಾಗುವುದಿಲ್ಲ. ಅರಿವಿನಿಂದಲೇ ಮುಕ್ತಿ,ಅದರ ಜೊತೆಗೆ ಉತ್ತಮ ಗುಣ ನಡವಳಿಕೆಗಳೂ ಅತ್ಯಾವಶ್ಯಕ.ಗುರುಸೇವೆ, ನಿಷ್ಠೆ, ಇಂದ್ರಿಯ ನಿಗ್ರಹ, ಶಮೆ, ದಮೆ ಶಾಂತಿ ಹೀಗೆ ಹಲವಾರು ವಿಧಿಗಳು-ನಿಯಮಗಳುಂಟು” ಎಂದರು. ಅದಕ್ಕೆ ಬ್ರಹ್ಮಾನಂದರು “ತಂದೆ ನಿನ್ನ ಕರುಣೆಯಿದ್ದರೆ ಇವೆಲ್ಲವುಗಳಲ್ಲಿ ನಾನು ಉತ್ತೀರ್ಣನಾಗುತ್ತೇನೆ “ಎಂದು ವಿನಮ್ರರಾಗಿ ನುಡಿದರು. ಹುಬ್ಬಳ್ಳಿಯ ಮಠದಲ್ಲಿ ನಿತ್ಯವೂ ಜನ ಜಂಗುಳಿಯೇ, ಜಾತಿ-ಮತ, ಗಂಡು-ಹೆಣ್ಣು, ವಿದ್ವಾಂಸ-ದಡ್ಡ, ಉತ್ತಮ-ಹೀನ, ಹೀಗೆ ಯಾವುದೇ ಭೇದವಿಲ್ಲ. ಸಮಸ್ತ ಮಾನವ ಕಲ್ಯಾಣವೇ ಗುರಿಯಾಗಿತ್ತು. ಮಠದಲ್ಲಿ ಅದರಲ್ಲಿಯೂ ಸದ್ಗುರುಗಳ ಸೇವೆಯಲ್ಲಿ ಸೈ ಎನಿಸಿಕೊಂಡ ಬ್ರಹ್ಮಾನಂದರ ಸೇವೆ ಮತ್ತಾರಿಂದಲೂ ಸಾಧ್ಯವಿಲ್ಲ ಎಂಬಂತಹುದು.

                                                                                                            (ಮುಂದುವರೆಯುವುದು)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...