Monday, February 2, 2026
Monday, February 2, 2026

Klive Special Article ಶ್ರೀಮದ್ಭಗವದ್ಗೀತೆ ಮತ್ತುಅಪರಾಧ ಶಾಸ್ತ್ರ

Date:


ಭಾಗ: 3
ಲೇ: ಡಾ.ರಾಮಕೃಷ್ಣ ಮುದ್ದೇಪಾಲ.

Klive Special Article ಅಪರಾಧ ನಿಯಂತ್ರಣದ ದೃಷ್ಟಿಯಿಂದ ಹಲವು ಆಯಾಮಗಳಲ್ಲಿ ಭಗವದ್ಗೀತೆಯನ್ನು ಪ್ರಯೋಗಿಸಬಹುದು.
೧. ನೈತಿಕ ಮೌಲ್ಯಗಳಿಂದ ವ್ಯಕ್ತಿತ್ವ ಪರಿವರ್ತನೆ:
ಅಭಯಂ ಸತ್ವಸಂಶುದ್ಧಿರ್ಜ್ಞಾನಯೋಗವ್ಯವಸ್ಥಿತಿಃ
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್‌
ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಮ್‌
ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್‌
ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋ ನಾತಿಮಾನಿತಾ
ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತII 16.1,2,3II
ದೈವೀಸಂಪತ್ತುಗಳೆಂದು ಕರೆಯಲ್ಪಡುವ ೨೬ ಗುಣಗಳು ನೈತಿಕ ಮೌಲ್ಯಗಳಾಗಿದ್ದು ಅವುಗಳಲ್ಲಿ ಕೆಲವನ್ನು ಅಳವಡಿಸಿಕೊಂಡರೂ ಅವು ವ್ಯಕ್ತಿತ್ವ ಪರಿವರ್ತನೆ ಮಾಡಬಲ್ಲವು ಅಥವಾ ಆದರ್ಶ ವ್ಯಕ್ತಿತ್ವವನ್ನು ರೂಪಿಸಿ ಅಪರಾಧೀ ಮಾನಸಿಕತೆಯನ್ನು ತೊಡೆಯಬಲ್ಲವು. ಇವುಗಳಿಗೆ ವಿರುದ್ಧವಾಗಿರುವ ಆಸುರೀ ಸಂಪತ್ತುಗಳು ಅಪರಾಧಕ್ಕೆ ಪೂರಕ ಅಂಶಗಳಾಗಿವೆ.
ದಂಭೋ ದರ್ಪೋತಿಮಾನಶ್ಚ ಕ್ರೋಧಃ ಪಾರುಷ್ಯಮೇವಚ‌I
ಅಜ್ಞಾನಂ ಚಾಭಿಜಾತಸ್ಯ ಪಾರ್ಥಸಂಪದಮಾಸುರೀಮ್II16.4II

  1. ಅಪರಾಧ ಮೂಲದ ವಿಶ್ಲೇ಼ಷಣೆ: ೧೪ನೇ ಅಧ್ಯಾಯದಲ್ಲಿ ತ್ರಿಗುಣಗಳನ್ನು ವಿಶ್ಲೇಷಿಸಲಾಗಿದೆ. ಸತ್ವಗುಣ ನೈತಿಕ ಬದುಕಿಗೆ ಪೂರಕವಾದರೆ ರಜೋಗುಣ ಕಾಮ, ಕ್ರೋಧದಿಂದ ಮತ್ತು ತಮೋಗುಣ ಅಜ್ಞಾನದಿಂದ ಅಪರಾಧವನ್ನು ಪ್ರೇರೇಪಿಸುತ್ತವೆ.
    ೩. ನಿಷ್ಕಾಮ ಕರ್ಮಯೋಗ, ಕರ್ತವ್ಯ ಪ್ರಜ್ಞೆ : ಗೀತೆಯ ಪ್ರಸಿದ್ಧ ವಾಕ್ಯವಾದ ” ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” (೨.೪೭) ವ್ಯಕ್ತಿಗೆ ಕರ್ತವ್ಯಪ್ರಜ್ಞೆಯನ್ನು ಮೂಡಿಸಿ ಅಪರಾಧ ಪ್ರಜ್ಞೆಯನ್ನು ಹಿಮ್ಮೆಟ್ಟಿಸುತ್ತದೆ. ಪ್ರತಿಯೊಂದು ಕೃತ್ಯಕ್ಕೂ ಫಲವಿದೆ ಎಂಬ ಭಾವನೆ ವ್ಯಕ್ತಿಯನ್ನು ಅಪರಾಧ ಮಾಡಲು ಹಿಂಜರಿಯುವಂತೆ ಮಾಡುತ್ತದೆ.
    ೪. ಧರ್ಮಾಧರ್ಮ ವಿವೇಚನೆ: ನೈತಿಕ ಮೌಲ್ಯಗಳ ಸಾರವೆಂದು ಗುರುತಿಸಲ್ಪಡುವ “ಧರ್ಮ” ವನ್ನು ಭಗವದ್ಗೀತೆ ಬೋಧಿಸುತ್ತದೆ.
    ಶ್ರೇಯಾನ್‌ ಸ್ವಧರ್ಮೋ ವಿಗುಣಃ ಪರಧರ್ಮಾತ್‌ ಸ್ವನುಷ್ಠಿತಾತ್‌I
    ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃII3.35II
    ಸ್ವಧರ್ಮವು ವಿಗುಣವಾಗಿದ್ದರೂ ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕ್ಕಿಂತ ಒಳ್ಳೆಯದು. ಸ್ವಧರ್ಮದಲ್ಲಿ ಮರಣವು ಶ್ರೇಯಸ್ಕರವಾದದ್ದು; ಪರಧರ್ಮವು ಭಯಂಕರವಾದದ್ದು.
    ಸ್ವಧರ್ಮಾನುಷ್ಠಾನವು ವ್ಯಕ್ತಿಯು ಅಪರಾಧದಂತಹ ಅಧಃಪಾತಕ್ಕೆ ಈಡಾಗುವುದನ್ನು ತಡೆಗಟ್ಟುತ್ತದೆ.
    ೫.ಭಕ್ತಿಮಾರ್ಗ: ಭಕ್ತಿಮಾರ್ಗವನ್ನು ಆಶ್ರಯಿಸಿದವನು ದುಷ್ಪ್ರವೃತ್ತಿಯವನಾದರೂ ಪರಿವರ್ತನೆ ಹೊಂದಿ ಪಾಪ ಬುದ್ಧಿಯನ್ನು ಕಳೆದುಕೊಳ್ಳುತ್ತಾನೆ.
    ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್‌I
    ಸಾಧುರೇವ ಸ ಮಂತವ್ಯ: ಸಮ್ಯಗ್ವ್ಯವಸಿತೋ ಹಿ ಸಃII9.30II
    ಅತ್ಯಂತ ದುರಾಚಾರಿಯಾಗಿದ್ದರೂ ಅನನ್ಯಭಕ್ತಿಯಿಂದ ನನ್ನನ್ನು ಭಜಿಸಿದರೆ ಅವನು ಸಾಧುವೆಂದೇ ತಿಳಿಯತಕ್ಕದ್ದು, ಯಾಕೆಂದರೆ ಅವನು ನಿಶ್ಚಯ ಬುದ್ಧಿಯುಳ್ಳವನು.
    ಕ್ಷಿಪ್ರಂ ಭವತಿ ಧರ್ಮತ್ಮಾ ಶಶ್ವಚ್ಛಾಂತಿಂ ನಿಗಚ್ಛತಿI
    ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿII9.31II
    Klive Special Article ಅಂಥವನು ಬೇಗ ಧರ್ಮಾತ್ಮನಾಗಿ ಶಾಶ್ವತವಾದ ಶಾಂತಿಯನ್ನು ಹೊಂದುತ್ತಾನೆ. ನನ್ನ ಭಕ್ತನು ನಾಶವಾಗುವುದಿಲ್ಲ ಎಂದು ತಿಳಿದುಕೊ.
    ೬. ಜ್ಞಾನಯೋಗ: ಒಂದು ದೃಷ್ಟಿಯಿಂದ ನೋಡಿದರೆ ಅಪರಾಧಕ್ಕೆ ಅಜ್ಞಾನವೇ ಮೂಲವಾಗಿರುತ್ತದೆ. ” ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ (೪.೩೮)” ಎಂದರೆ ಈ ಲೋಕದಲ್ಲಿ ಜ್ಞಾನಕ್ಕೆ ಸಮನಾದ ಪವಿತ್ರವಸ್ತುವು ಯಾವುದೂ ಇರುವುದಿಲ್ಲ. ಜ್ಞಾನವನ್ನು ಪಡೆದವನು ಪರಮಶಾಂತಿಯನ್ನು ಪಡೆಯುತ್ತಾನೆ.
    ೭. ಮನೋನಿಯಂತ್ರಣ: ಇದು ಅಪರಾಧನಿಯಂತ್ರಣದಲ್ಲಿ ಅತಿ ಮಹತ್ವದ ವಿಷಯ ಆಗಿದ್ದು ಮನುಷ್ಯ ಯಾಕೆ ಪಾಪ ಮಾಡುತ್ತಾನೆ ಎನ್ನುವ ಅರ್ಜುನನ ಪ್ರಶ್ನೆಗೆ ಉತ್ತರ ಕೊಡುತ್ತ ಶ್ರೀಕೃಷ್ಣನು “ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ(೩.೩೭)” ಅಂದರೆ ರಜೋಗುಣದಿಂದ ಹುಟ್ಟಿದ ಕಾಮ ಕ್ರೋಧಗಳೇ ಪಾಪಕ್ಕೆ ಕಾರಣವೆಂದು ವಿವರಿಸಿ ಇವುಗಳ ಆಶ್ರಯವಾಗಿರುವ ಇಂದ್ರಿಯ, ಮನಸ್ಸು ಬುದ್ಧಿಗಳನ್ನು ನಿಯಂತ್ರಿಸಿದರೆ ಅವುಗಳನ್ನು ನಿಯಂತ್ರಿಸಬಹುದೆಂದು ತಿಳಿಸುತ್ತಾನೆ.
    ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್‌I
    ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇII6.35II
    ಮನಸ್ಸು ದುರ್ನಿಗ್ರಹವಾದದ್ದು ಮತ್ತು ಚಂಚಲವಾದದ್ದು. ಅಭ್ಯಾಸದಿಂದಲೂ ಮತ್ತು ವೈರಾಗ್ಯದಿಂದಲೂ ಅದನ್ನು ನಿಗ್ರಹಿಸಬಹುದು.
    ೮.ಸಮದರ್ಶಿತ್ವ: ವಿದ್ಯಾವಿನಯಸಂಪನ್ನೇ…..(೫.೧೮) ಮುಂತಾದ ಶ್ಲೋಕಗಳಲ್ಲಿ ಗೀತೆಯು ಎಲ್ಲರನ್ನು ಸಮನಾಗಿ ನೋಡುವುದನ್ನು ಬೋಧಿಸುತ್ತದೆ. ಸಮದರ್ಶಿತ್ವ, ಸಹಾನುಭೂತಿ, ಸೌಹಾರ್ದತೆ ಮತ್ತು ಸಹಕಾರಗಳಿಂದ ಅಪರಾಧವನ್ನು ತೊಡೆಯಬಹುದು. ಸಮದರ್ಶಿತ್ವವನ್ನು ೬ನೇ ಅಧ್ಯಾಯದ ೨೯,೩೦,೩೧,೩೨ನೇ ಶ್ಲೋಕಗಳಲ್ಲಿ ಚೆನ್ನಾಗಿ ವಿವರಿಸಲಾಗಿದೆ.
    ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋsರ್ಜುನI
    ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃII6.32II
    ಯಾವನು ಎಲ್ಲ ಪ್ರಾಣಿಗಳಲ್ಲಿಯೂ ಸುಖವನ್ನಾಗಲಿ ದುಃಖವನ್ನಾಗಲಿ ತನ್ನಂತೆಯೇ ಸಮವಾಗಿ ನೋಡುವನೋ ಆ ಯೋಗಿಯು ಶ್ರೇಷ್ಠನೆಂದು ನನ್ನ ಅಭಿಪ್ರಾಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...