Saturday, December 27, 2025
Saturday, December 27, 2025

ಇಂದಿನ ಕವಿತೆ… ಕವಿ: ಡಾ. ರವಿ. ಎಮ್. ಸಿದ್ಲಿಪುರ

Date:

ಯಾರೋ ಗೀಚಿದ ಹಳೆಯ ನಕ್ಷೆಯಲಿ
ನೆಲದ ಒಡಲು ಸೀಳಿ ಹೋಗಿದೆ,
ತನ್ನ ಸೀಮೆಯ ದಾಟದಂತೆ ಗಾಳಿಗೆ
ಸಂಪ್ರದಾಯದ ಬೇಲಿ ಬಿದ್ದಿದೆ.

ಒಂದೇ ಮಣ್ಣಿನಲಿ ಮೊಳೆತ ಎರಡು ಕುಡಿಗಳು
ಬಣ್ಣ ಬೆರೆಸಿ ಅರಳಲೆಂದು ಹಂಬಲಿಸಿದರೆ,
ತಾಯಿ ಬೇರೇ ಸರ್ಪವಾಗಿ ಎದೆಯುಬ್ಬಿಸಿ
ಹಸಿರು ಉಸಿರನ್ನೇ ಹಿಸುಕಿ ನಕ್ಕಿದೆ.

ಬಿಳಿ ಬಟ್ಟೆಯ ಮಡಿಕೆ ಮಲಿನವಾಗಬಾರದೆಂದು
ಕೆಂಪು ರಕ್ತವನ್ನೇ ಸುರಿದು ತೊಳೆದವರು,
ಮರ್ಯಾದೆಯ ಮುರುಕು ಪೇಟದ ಅಡಿಯಲ್ಲಿ
ತಮ್ಮದೇ ಕುಡಿಯ ಹೆಣವ ಹೂತಿಟ್ಟರು.

ಮನೆಯ ಹಜಾರದಲ್ಲಿ ಈಗ ನೀರವ ಮೌನ
ಸಿಂಹಾಸನವೇರಿ ವಿಜೃಂಭಿಸುತ್ತಿದೆ,
ಗೌರವದ ಹಳೆಯ ಗೋಡೆಗಳ ಮೇಲೆ
ಕಂದಮ್ಮಗಳ ಆರ್ತನಾದ ಚಿತ್ರವಾಗಿ ಉಳಿದಿದೆ.

ಜಾತಿಯ ಜೇಡರಬಲೆಯಲ್ಲಿ ಸಿಲುಕಿದ ಕನಸು
ರೆಕ್ಕೆ ಬಡಿದು ಬಡಿದು ಸುಸ್ತಾಗಿದೆ,
ಪ್ರೀತಿ ಸತ್ತ ಸಮಾಧಿಯ ಮೇಲೆ ನಿಂತು
ಜಗವಿದು ಇನ್ನೂ ‘ಗೌರವ’ದ ಪಾಠ ಓದಿದೆ..

ಡಾ. ರವಿ ಎಂ. ಸಿದ್ಲಿಪುರ, ಇವರು ಶಿವಮೊಗ್ಗೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಸಂಶೋಧನೆಗೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಲೇಖನಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪರ್ಯಾಯ’, ‘ವಿಮರ್ಶೆ ಓದು’ ಮತ್ತು ‘ಶಾಸನ ಓದು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವವಿರುವ ಇವರು, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಶಿವಶಂಕರಪ್ಪ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕರು- ಸಿದ್ಧರಾಮಯ್ಯ

CM Siddharamaiah ಶಾಮನೂರು ಶಿವಶಂಕರಪ್ಪ ಅವರು ದೇಶ ಕಂಡ ಹಿರಿಯ ಶಾಸಕ,...

B.Y. Raghavendra ಬ್ಯಾಂಕ್ ಗಳು ಮೂಲಕ ಜಾರಿಯಾಗುವ ಕೇಂದ್ರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು- ಬಿ.ವೈ.ರಾಘವೇಂದ್ರ

B.Y. Raghavendra ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 'ಜಿಲ್ಲಾ ಮಟ್ಟದ ಸಲಹಾ...