Klive Special Article ಚೆಲುವರಂಗಪ್ಪನು ದಿಡಗೂರಿನಿಂದ ಬೆಳಗುತ್ತಿಯನ್ನು ಆಳ್ವಿಕೆ ನಡೆಸಿದ, ದಿಡಗೂರು 150ವರ್ಷಗಳ ಕಾಲರಾಜಧಾನಿಯಾಗಿದ್ದು ಮೊದಲು ಹೊನ್ನಾಳಿ ನಂತರ ಬೆಳಗುತ್ತಿ ಗೆ ಸ್ಥಳಾಂತರವಾಯಿತು. ರಂಗಪ್ಪನು ದಿಡಗೂರಿನಿಂದ ಆಳ್ವಿಕೆ ಮಾಡುವಾಗ ಕ್ರಿ.ಶ.1361 ರಲ್ಲಿ ಹೊನ್ನಾಳಿ ಕೋಟಯನ್ನು ಕಟ್ಟಲು ಆರಂಭಿಸಿ ಕ್ರಿ.ಶ.1381 ರಲ್ಲಿ ಮುಗಿಸಿ ನಂತರ ಚಂದ್ರ ಗುತ್ತಿ, ಕವಲೇದುರ್ಗ, ಉಡುಗಣಿ ಯಲ್ಲೂ ಕೋಟೆ ನಿರ್ಮಿಸಿದನು.ಇವನು ಹಲವಾರು ಅಗ್ರಹಾರ ನಿರ್ಮಿಸಿ ಜಮೀನಿಗೆ ಕಂದಾಯವನ್ನು ನಿಗದಿಗೊಳಿಸಿ ರಾಯರೇಖೆ ಎಂಬ ಕಂದಾಯವನ್ನು ಜಾರಿಗೆ ತಂದನು. ಇವನು ಕ್ರಿ.ಶ. 1361ರಿಂದ ಕ್ರಿ.ಶ.1383 ರವರೆಗೆ ಆಡಳಿತ ನಡೆಸಿದನು. ಇವನ ನಂತರ ಕ್ರಿ.ಶ.1383 ರಿಂದ ಕ್ರಿ.ಶ. 1456 ರ ವರೆಗೆ ಮಾರಭೂಪ, ಸುರಭೂಪ, ದೇವರಾಯ, ಅಭ್ರಮಾಧವರು ಬೆಳಗುತ್ತಿ ಯಿಂದ ಆಳುತ್ತಿದ್ದರು, ಅಭ್ರಮಾಧವನ ಮಗನಾದ ಬೆವುಲೆ ವೆಂಕಟಾದ್ರಿಯು (ಕ್ರಿ.ಶ.1460ರಿಂದ ಕ್ರಿ.ಶ. 1487 ರ ವರೆಗೆ )ಇಕ್ಕೇರಿಯಲ್ಲಿ ಅಘೋರೇಶ್ವರ ನ ದೇವಾಲಯ ಕಟ್ಟಿಸಿದ್ದನೆಂದು ಹೇಳಲಾಗಿದ್ದು ಇದರ ಬಗ್ಗೆ ತೆಲುಗು ಶಾಸನವೊಂದು ತಿಳಿಸುತ್ತದೆ (ನಂತರ ಇದನ್ನು ಕೆಳದಿಯ ದೊಡ್ಡ ಸಂಕಣ್ಣನಾಯಕರು ಜೀರ್ಣೋದ್ಧಾರ ಮಾಡಿ ಹೊಸ ಮೂರ್ತಿಯನ್ನು ಸ್ಥಾಪಿಸುತ್ತಾರೆ)( ಕೆ.ನೃ.ವಿ) . ವೆಂಕಟಾದ್ರಿ ಯ ತರುವಾಯ ರಾಮರಾಯನು(ಕೋಟೆ), ಕ್ರಿ.ಶ. 1460 ರಿಂದ ಕ್ರಿ.ಶ.1515 ರ ವರೆಗೆ ಆಳ್ವಿಕೆ ನಡೆಸಿದ. ಆಗ ಬೆಳಗುತ್ತಿ ಮತ್ತು ಹೊನ್ನಾಳಿ ಯಲ್ಲಿ ಎರಡು ಅರಸು ಮನೆತನಗಳ ಆಡಳಿತ ನಡೆಯುತ್ತಿತ್ತು, ಇದನ್ನು ಒಪ್ಪದ ಆನೆಗೊಂದಿಯ ಪ್ರೌಢದೇವರಾಯನು ಹೊನ್ನಾಳಿ ಯನ್ನು ವಶಪಡಿಸಿಕೊಂಡು ರಾಮರಾಯನೇ(ಕೋಟೆ) ಬೆಳಗುತ್ತಿ ಯ ಅಧಿಕೃತ ಅರಸನೆಂದು ಮನ್ನಣೆಮಾಡಿದನು.
ರಾಮರಾಯ(ಕೋಟೆ) ನ ನಂತರ ಅವನ ಮಗನಾದ ಯಲ್ಲಣ್ಣನು ಕ್ರಿ.ಶ. 1516 ರಿಂದ ಕ್ರಿ.ಶ. 1551 ರ ವರೆಗೆ ಆಳಿದನೆಂದು ಕುದುರೆ ರಾಯರ ವೃತ್ತಾಂತದಲ್ಲಿದೆ. ಕೈಫಿಯತ್ತಿನಲ್ಲಿ ಯಲ್ಲಣ್ಣನ ಹೆಸರನ್ನು ಕೈಬಿಟ್ಟು ದಾಸಪ್ಪ ನೆಂಬುವವನ ಹೆಸರು ಸೇರಿಸಲಾಗಿದೆ.
ಬೆಳಗುತ್ತಿಯ ಇತಿಹಾಸದಲ್ಲೇ ಒಂದು ರೋಚಕ ತಿರುವು ಪಡೆದು ವಿಜಯನಗರದ ಅರಸ ತಿರುಮಲರಾಯನನ್ನು ಬೀಜಾಪುರದವರು ಸೋಲಿಸಿ ವಿಜಯನಗರಕ್ಕೆ ವಾರಸುದಾರ ಇಲ್ಲದಿದ್ದಾಗ ವಿಜಯನಗರದ ಮಂತ್ರಿಗಳು ಬೆಳಗುತ್ತಿ ಗೆ ಬಂದು ವೆಂಕಟರಾಯನನ್ನು (ಯಲ್ಲಣ್ಣ / ದಾಸಪ್ಪನ ಮಗ) ವಿಜಯನಗರದ ಆಡಳಿತಕ್ಕಾಗಿ ಆನೆಗೊಂದಿಯಲ್ಲಿ ವೀರವೆಂಕಟರಾಯನಿಗೆ ಪಟ್ಟಾಭಿಷೇಕ ಮಾಡಿದರು. ಹೀಗೆ ಬೆಳಗುತ್ತಿ ಅರಸ ವಂಶದವರಿಂದ ವಿಜಯನಗರದ ರಾಜವಂಶವು ಮತ್ತೆ ಬೆಳಗಿಸಿದ್ದು ಬೆಳಗುತ್ತಿ. ಇದಕ್ಕೆ ಪೂರಕವೆಂಬಂತೆ ಬೆಳಗುತ್ತಿ ಅರಸನು ತನ್ನ ಕೈಕೆಳಗಿನ ನಾಯಕರಾದ ಹಾಲಪ್ಪನಿಗೆ ಆಯನೂರು, ಗಂಗೂರು, ಅಣ್ಣಿಗೇರಿ(ಆನವೇರಿ)ಯನ್ನೂ, ಬೊಮ್ಮಣ್ಣನಿಗೆ ಕುಂಸಿಯನ್ನೂ, ಕೆಂಗ ಹನುಮಂತ ನಾಯಕನಿಗೆ ಸಂತೆಬೆನ್ನೂರು, ಹೊಸೂರು, ಚಿನ್ನಿಕಟ್ಟೆ ಯನ್ನು ಜಾಗೀರಾಗಿ ನೀಡಿದನು.

Klive Special Article (ಸಾಗರದ ಕೈಫಿಯತ್ತಿನಲ್ಲಿ ದೊಡ್ಡ ಸಂಕಣ್ಣನಾಯಕರು ಪೈಠಣದಿಂದ(ಮಹಾರಾಷ್ಟ್ರ)/ದಿಂದ ವೀರಭದ್ರನ (ಅಘೋರನ) ಪಟ ಬರಸಿಕೊಂಡು ಇಕ್ಕೇರಿಗೆ ಬಂದು ಅಘೋರ, ವೀರಭದ್ರ ಮೂರ್ತಿಯನ್ನು ಮೂವತ್ತೆರಡು ಹಸ್ತ(ಅಂದಿನಕಾಲದ ಅಳತೆಯ ಪ್ರಮಾಣ) ಆಯುಧ ವಿಶಿಷ್ಟ ವಾಗಿ ಶಿಲ್ಪಶಾಸ್ತ್ರ ದ ಮೇರೆಗೆ ಲಿಂಗಪ್ರತಿಷ್ಠೆ ಮಾಡಿದನೆಂದೂ ತಿಳಿದಿದ್ದು, ವೆಂಕಟಾದ್ರಿ ಯು ಕಟ್ಟಿಸಿದ್ದ ದೇವಾಲಯ ಹಾಳುಬಿದ್ದಾಗ ದೊಡ್ಡಸಂಕಣ್ಣನಾಯಕರು ಹೊಸದಾಗಿ ಪ್ರತಿಷ್ಠೆ ಮಾಡಿಸಿ ಹೊಂಬುಜದ ವಕಪ್ಪಯ್ಯನಿಂದ ಮಂಟಪವನ್ನು ನಿರ್ಮಿಸಿದನೆಂದು ಉಲ್ಲೇಖವಾಗಿದೆ).
ಮುಂದುವರೆಯುತ್ತದೆ.
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ (ನೋಂ), ಶಿವಮೊಗ್ಗ.
6361124316.
