ಸಮೂಹ ಮಾಧ್ಯಮಗಳು ಕೇವಲ ಮಾಹಿತಿ ಮನರಂಜನೆಗೆ ಬಳಕೆಯಾಗದೆ ಸಾಮಾಜಿಕ ಸುವ್ಯವಸ್ಥೆಗೆ ಸಾಧನವಾಗಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಆಶಯ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರುಗಳಿಗಾಗಿ ಏರ್ಪಾಡಾಗಿದ್ದ ಪುನಶ್ಚೇತನ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ‘ಸಾಮಾಜಿಕ ವ್ಯವಸ್ಥೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ’ ಎಂಬ ವಿಷಯವಾಗಿ ಮಾತನಾಡುತ್ತಾ ವ್ಯಕ್ತಿ ಗುಂಪು ಹಾಗೂ ಸಂಸ್ಥೆಗಳ ನಡುವಿನ ರಚನಾತ್ಮಕ ಸಂಬಂಧಗಳಿಂದ ಆಗುವ ಜಾಲಕ್ಕೆ ಸಮೂಹ ಮಾಧ್ಯಮಗಳು ಪೂರಕವಾಗಿ ಸ್ಪಂದಿಸಬೇಕಿದೆ, ಇದು ಸಮಾಜದ ಸುಸಂಘಟಿತ ಕಾರ್ಯನಿರ್ವಹಣೆಗೆ ಅವಶ್ಯ, ಈ ಪ್ರಕ್ರಿಯೆಯಲ್ಲಿ ಅನೂಚಾನವಾಗಿ ಬಂದ ನಂಬಿಕೆಗಳು ರೂಢಿಗಳಿಗೆ ಘಾಸಿಯಾಗದಂತೆ ನಾಗರೀಕತೆ ಸಂಸ್ಕೃತಿ ಹಾಗೂ ಸಂಸ್ಕಾರಗಳ ಮಹತ್ವವನ್ನು ಮನದಟ್ಟು ಮಾಡುವ ಮೂಲಕ ಕುಟುಂಬ ಸಮುದಾಯ ಊರು ಗ್ರಾಮ ನಗರ ದೇಶ ಪ್ರಪಂಚ ಹಂತದವರೆಗೂ ವ್ಯವಸ್ಥೆಯ ಸುಧಾರಣೆಯಲ್ಲಿ ಸಮೂಹ ಮಾಧ್ಯಮಗಳ ಬಳಕೆಯಾಗಬೇಕಿದೆ ಎಂಬುದನ್ನು ಅಂಕಿ ಅಂಶ ಹಾಗೂ ಉದಾಹರಣೆಗಳ ಸಹಿತ ವಿವರಿಸುತ್ತಾ ಈ ನಿಟ್ಟಿನಲ್ಲಿ ಸಮಾಜ ಶಾಸ್ತ್ರ ಉಪನ್ಯಾಸಕರುಗಳು ವಿಶೇಷವಾಗಿ ಸ್ವಯಂ ಸಿದ್ಧಗೊಂಡು ಪಠ್ಯೇತರವಾಗಿ ವಿದ್ಯಾರ್ಥಿಗಳಿಗೆ ತಿಳಿಸುವ ಕುರಿತಾಗಿಯೂ ವಿವರಿಸಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಏರ್ಪಾಡಾಗಿದ್ದ ಪುನಶ್ಚೇತನ ಕಾರ್ಯಾಗಾರದ ಸಂಚಾಲಕ ಜಿ ಎಂ ಸಂಗಮೇಶ್ವರಪ್ಪ ಉಪಸ್ಥಿತಿಯಲ್ಲಿ ಉಪನ್ಯಾಸಕ ಪಾಲಾಕ್ಷಿ ಸ್ವಾಗತ ಕೋರುತ್ತಾ ಪರಿಚಯ ಭಾಷಣ ಮಾಡಿದರು. ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಗಮಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕರುಗಳು ಭಾಗವಹಿಸಿದ್ದರು.
