Samanvaya Trust ಜೀವನದಲ್ಲಿ ಉನ್ನತ ಸಾಧನೆ ಮಾಡಲು ನಿರಂತರ ಪರಿಶ್ರಮ ವಹಿಸುವುದು ಅತ್ಯಂತ ಅವಶ್ಯಕ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಜ್ಞಾನ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಹಂತದಲ್ಲೇ ದೊಡ್ಡ ಕನಸುಗಳನ್ನು ಕಾಣಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಬೇಕು. ಪೂರಕವಾಗಿ ಅಗತ್ಯವಿರುವ ತರಬೇತಿ ಮತ್ತು ಕೌಶಲಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಎಂತಹ ಕಷ್ಟದ ಪರಿಸ್ಥಿತಿ ಇದ್ದರೂ ಕನಸು ಸಾಧಿಸಲು ಅಡ್ಡಿ ಆಗಬಾರದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಬೆಳಗಿನ ಜಾವದ ಕಲಿಕೆ ಹೆಚ್ಚು ನೆರವಾಗುತ್ತದೆ. ಓದು, ಮನನ ಹಾಗೂ ಮತ್ತೆ ಮತ್ತೆ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಮಾಹಿತಿ ಹೆಚ್ಚಾಗಿ ಸಿಗುತ್ತಿದ್ದರೂ ಸದ್ಭಳಕೆ ಮಾಡಿಕೊಳ್ಳುವಲ್ಲಿ ಯುವಜನರು ವಿಫಲರಾಗುತ್ತಿದ್ದಾರೆ. ಮಾಹಿತಿಯ ಸತ್ಯಾಸತ್ಯತೆ ಕೂಡ ಪರಿಶೀಲಿಸದೆ ತಕ್ಷಣಕ್ಕೆ ಪ್ರತಿಕ್ರಿಯಿಸಿ ಸಮಸ್ಯೆ ಮಾಡಿಕೊಳ್ಳುತ್ತಿದ್ದಾರೆ. ಸುಳ್ಳು ಮಾಹಿತಿ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮೌಲ್ಯ ಇಲ್ಲದ ಶಿಕ್ಷಣ ವ್ಯರ್ಥ ಆಗಿದ್ದು, ಜೀವನದಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಗುರಿ ಸಾಧನೆಗೆ ಶ್ರದ್ಧೆ, ಛಲ ಹಾಗೂ ನಿರಂತರತೆ ಬಹಳ ಮುಖ್ಯ ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಇಪ್ಪತ್ತು ವರ್ಷಗಳಿಂದ ಸಮನ್ವಯ ಸಮಾಜಮುಖಿ ಕೆಲಸ ಮಾಡುತ್ತಿದ್ದು, ಪರಿಸರ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪರಿಸರ ಕುಟುಂಬ ಪ್ರಶಸ್ತಿ ನೀಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಯುವ ಜನರಿಗೆ ತರಬೇತಿ ನೀಡುತ್ತಿದೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸೇವೆ ನಡೆಸುತ್ತಿದೆ ಎಂದು ಹೇಳಿದರು.
Samanvaya Trust ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಧಕರ ಜೀವನದಿಂದ ಪ್ರೇರಣೆ ಪಡೆಯಬೇಕು. ನಿಮ್ಮ ಇಷ್ಟದ ಕ್ಷೇತ್ರವನ್ನು ಶಿಕ್ಷಣ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಹಿರೋಗಳಾಗಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಲೈಫ್ ಇಸ್ ಬ್ಯೂಟಿಫುಲ್ ವಿಷಯ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ದುರ್ಗಪ್ಪ ಅಂಗಡಿ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ , ಕಲಾ ದಸರಾ ಕಾರ್ಯದರ್ಶಿ ಕೆ.ಪಿ.ವಸಂತಕುಮಾರಿ , ಅಂತರಾಷ್ಟ್ರೀಯ ಈಜುಪಟು ಧ್ಯಾನ್ ಕಶ್ಯಪ್, ಉದ್ಯಮಿ ಸುಜಿತ್ ನಾಡಿಗ್, ಅಜಯ್ ಗೋಪಿ, ನಂದಿನಿ ಸಾಗರ, ಸಮನ್ವಯ ಸ್ವಯಂ ಸೇವಕರು ಹಾಜರಿದ್ದರು.
