Klive Special Article “ರಾಣಿ ಚೆನ್ನಭೈರಾದೇವಿಯ ಧೈರ್ಯ, ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ, ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು”
ಇದು, ಗೌರವಾನ್ವಿತ ರಾಷ್ಟ್ರಪತಿ ಸನ್ಮಾನ್ಯ ಡಾ. ದ್ರೌಪದಿ ಮುರ್ಮುರವರು ಇಂದು ರಾಷ್ಟ್ರಪತಿ ಭವನದಲ್ಲಿ ರಾಣಿಯ ನೆನಪಿನ ಅಂಚೆಚೀಟಿ ಬಿಡುಗಡೆಯ ಸಂದರ್ಭದಲ್ಲಿ ನುಡಿದ ಮಾತು….
ಇದೊಂದು ಅವಿಸ್ಮರಣೀಯ ಘಟನೆ. ನಿಜವೇ ಎಂದು ಮೈ ಚಿವುಟಿ ನೋಡಿಕೊಳ್ಳಬೇಕಾದ ಸಂಗತಿ. ಯಾಕೆಂದರೆ ನನ್ನಂಥವರಿಗೆ ರಾಷ್ಟ್ರಪತಿ ಭವನವನ್ನು ಪ್ರವೇಶಿಸುವ ಅವಕಾಶವೇ ದೊಡ್ಡದು. ಇನ್ನು ಅವರನ್ನು ಸಮೀಪದಲ್ಲಿ ಕಾಣುವ ಭಾಗ್ಯ ಮತ್ತಷ್ಟು ಹಿರಿದಾದುದು.
ಯಾವ ಮಹಾರಾಣಿ ದೇಶದಲ್ಲಿ ಇನ್ನಾವ ಮಹಾರಾಣಿಯೂ ಆಳದಷ್ಟು ಸುದೀರ್ಘ ಐವತ್ನಾಲ್ಕು ವರ್ಷಗಳಷ್ಟು ಕಾಲ ರಾಜ್ಯವಾಳಿದ್ದಳೋ, ಯಾವ ಮಹಾರಾಣಿ ಇಡಿಯ ಯುರೋಪಿನ ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಶುಂಠಿ ವ್ಯವಹಾರಗಳನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದಳೋ, ಯಾವ ರಾಣಿ ಪೂರ್ಚುಗೀಸರು ದಕ್ಷಿಣ ಕೊಂಕಣಕ್ಕೆ ಕಾಲಿಟ್ಟು ರಾಜಕೀಯ ಮತ್ತು ಮತೀಯ ಅತಿರೇಕಗಳನ್ನು ಎಸಗದಂತೆ ಅವರನ್ನು ಕಾಳಿ ನದಿಯಾಚೆಯ ತೀರದಲ್ಲೇ ತಡೆದು ನಿಲ್ಲಿಸಿದ್ದಳೋ, ಯಾವ ರಾಣಿ ಸ್ವತಃ ಯಾರ ಮೇಲೂ ತಾನಾಗಿ ಯುದ್ದ ಸಾರದಿದ್ದರೂ ತಾವಾಗಿ ಮೇಲೆ ಬಿದ್ದ ಯಾರನ್ನೂ ಬಗ್ಗು ಬಡಿಯದೆ ಬಿಟ್ಟಿರಲಿಲ್ಲವೋ, ಯಾವ ಮಹಾರಾಣಿ ಸರ್ವಸಮನ್ವಯತೆಯಿಂದ ಎಲ್ಲರನ್ನೂ ಒಳಗೊಂಡು ಆಡಳಿತ ನಡೆಸಿ, ನಾಡಿನ ಸರ್ವೋದಯಕ್ಕೆ ಕಾರಣಳಾಗಿದ್ದಳೋ, ಯಾವ ರಾಣಿ ತನ್ನ ವ್ಯಾಪಾರ, ವ್ಯವಹಾರ ಮತ್ತು ಆಡಳಿತ ಕೌಶಲ್ಯಗಳಿಂದ ರಾಜ್ಯವನ್ನು ಸಮೃದ್ಧವಾಗಿ, ಶ್ರೀಮಂತವಾಗಿ ಸುರಕ್ಷಿತವಾಗಿ ಕಟ್ಟಿದ್ದಳೋ ಆ ಮಹಾರಾಣಿಯ ಘನತೆಗೆ ತಕ್ಕ ಗೌರವ ನೀಡಿದ ಕಾರ್ಯಕ್ರಮವಾಗಿತ್ತು ಇಂದು ನಡೆದ ಸಮಾರಂಭ.

Klive Special Article ಅವಳ ಕುರಿತು ಅಮೆರಿಕೆಯ ಟೆಕ್ಸಾಸ್ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಚಾರ್ಯೆ ಡಾ. ಹನ್ನಾ ಚಾಪೆಲ್ ವೋಜೋಸ್ಕಿ ತನ್ನ ಪ್ರಬಂಧವೊಂದರಲ್ಲಿ ಹೀಗೆ ಬರೆದಿದ್ದಾರೆ.
Her story—what little we know of it today—is important for a variety of reasons, not least because it counters the masculinist narratives of conquest and dominance penned by European chroniclers from the beginning of the colonial period. Chennabhairadevi was almost an exact contemporary of Queen Elizabeth I of England, and in many ways she was her counterpart. Chennabhairadevi succeeded in holding onto her kingdom for over 50 years, outwitting multiple adversaries through shrewd alliances, and in leveraging a great deal of political, cultural, and economic power.
ದೌರ್ಭಾಗ್ಯವೆಂದರೆ ವಿದೇಶೀಯರಿಂದ ಇಂತಹ ಶ್ಲಾಘನೆ ಪಡೆದ ರಾಣಿ ಚೆನ್ನಭೈರಾದೇವಿ ಅದೇಕೋ ನಮ್ಮ ಇತಿಹಾಸದ ಮುಖ್ಯ ವಾಹಿನಿಯ ಪುಟಗಳನ್ನು ಅಲಂಕರಿಸಲೇ ಇಲ್ಲ. ಅವಳನ್ನು ನಾವು ಬದಿಗಿಟ್ಟೆವು. ಯಾವ ಪೋರ್ಚುಗೀಸರೊಂದಿಗೆ ಆಕೆ ಘೋರ ಸಂಗ್ರಾಮಕ್ಕೆ ಇಳಿದಿದ್ದಳೋ ಆ ಪೋರ್ಚುಗೀಸರೇ ಆಕೆಗೆ ರೈನಾ ದಿ ಪೆಮೆಂಟಾ ಅರ್ಥಾತ್ “ಕಾಳುಮೆಣಸಿನ ರಾಣಿ” ಎಂಬ ಬಿರುದನ್ನಿತ್ತು ಗೌರವಿಸಿದ್ದರು.
ಅವಳ ಕುರಿತು ಪೋರ್ಚುಗೀಸರಿಗೆ ಅದೆಷ್ಟು ಅಂಜಿಕೆ ಇತ್ತೆಂದರೆ 1590ರ ದಶಕದಲ್ಲಿ ಪೋರ್ಚುಗಲ್ಲಿನ ರಾಜಪ್ರಮುಖರು ಗೋವೆಯ ಗವರ್ನರ್ ಸಾಹೇಬನಿಗೆ ಹೀಗೆ ಬರೆದಿದ್ದರು…
“We must deal with her most carefully and diplomatically. We must be courteous, polite, and diplomatic to win her to our side.”
ಹೀಗೆ ಪೋರ್ಚುಗೀಸರು ತಮ್ಮ ಉಚ್ಛ್ರಾಯ ಕಾಲದಲ್ಲೇ ತನ್ನ ಕುರಿತು ಭಯಪಡುವಂತೆ ಅವರನ್ನು ನಡುಗಿಸಿದ್ದ ನಮ್ಮ ನೆಲದ ದಿಟ್ಟ ಹೆಣ್ಣಿನ ಕುರಿತು, ಈ ರಾಷ್ಟ್ರದ ಪ್ರಥಮ ಪ್ರಜೆಯೇ ಇಂದು ಸ್ವತಃ ಅವಳ ಸಾಧನೆಗಳನ್ನು ವಜ್ರಾಕ್ಷರಗಳಲ್ಲಿ ಕೆತ್ತಿಡಬೇಕೆಂದು ಹೇಳಿದರೆಂದರೆ ಅದು ಆಕೆಗೆ ಸಂದ ಪರಮ ಗೌರವ.
1552 ರಿಂದ 1606 ರವರೆಗೆ ಒಟ್ಟು 54 ವರ್ಷಗಳ ಕಾಲ ಹೈವ, ತುಳುವ, ಕೊಂಕಣ ಪ್ರದೇಶಗಳನ್ನು ಹಾಡುವಳ್ಳಿ ಗೇರುಸೊಪ್ಪೆ ಅವಳಿ ಪಟ್ಟಣಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಆಳಿದ ವೀರ ರಾಣಿ ಚೆನ್ನಭೈರಾದೇವಿ ಸರ್ವಧರ್ಮ ಸಮನ್ವಯ ಸಾಧಿಸಿದ ಜಿನಮಾನಿನಿ. ಎಲ್ಲ ಸಮಾಜದ ಎಲ್ಲ ಪ್ರಜೆಗಳಿಗೂ ಕೃಷಿ, ವ್ಯಾಪಾರ ಮತ್ತು ವ್ಯವಹಾರವನ್ನು ಕಲಿಸಿ ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಿದ್ದಳು. 1606ರಲ್ಲಿ ಕೆಳದಿ ಅರಸರ ತಂತ್ರಗಾರಿಕೆಯಿಂದ ಬಂಧನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಳೆದುಕೊಂಡು ಹಳೆ ಇಕ್ಕೇರಿಯಲ್ಲಿ ಬಂಧನದಲ್ಲಿದ್ದು, ಜಿನಪದ್ಧತಿಗೆ ಅನುಗುಣವಾಗಿ ನಿರಾಹಾರ ವ್ರತಧಾರಿಯಾಗಿ ಸಲ್ಲೇಖದ ಮೂಲಕ ಇಹಲೋಕ ತ್ಯಜಿಸಿದ್ದಳು.
ಸನ್ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮುರವರು, ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಪೂಜ್ಯ ವೀರೇಂದ್ರ ಹೆಗಡೆಯವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಪೋಸ್ಟ್ ಮಾಸ್ಟರ್ ಜನರಲ್ಲರು, ಎಕ್ಸಲೆಂಟ್ ಅಕಾಡೆಮಿಯ ಯುವರಾಜ್ ಮತ್ತು ಅವರ ಪತ್ನಿ ರಶ್ಮಿಕಾರವರು, ಮಹೇಂದ್ರಸಿಂಗ್ ರವರು, ಮಹಾವೀರ ಕುಂದೂರ್, ಸುರದ್ರ ಹೆಗ್ಗಡೆಯವರು, ಸಂಪತ್ ಕಮಾರ್ ಹಾಲೆಮನೆ ಸಂತೋಷ್ ಪಾಟೀಲ್ ಮುಂತಾದ ಗಣ್ಯರ ಸಮಕ್ಷಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಜೊತೆಗೂಡಿ ಅಂಚೆಚೀಟಿ ಬಿಡುಗಡೆ ಮಾಡಿ, “ಭವ್ಯ ಭಾರತದ ಇತಿಹಾಸದಲ್ಲಿ ರಾಣಿ ಚೆನ್ನಭೈರಾದೇವಿಯಂತಹ ಹಲವು ಧೀರ ವನಿತೆಯರು ನಮ್ಮ ದೇಶದ ಪ್ರಾಂತ್ಯ ಪ್ರಾಂತ್ಯಗಳಲ್ಲಿ ಅದೆಷ್ಟು ಮಂದಿ ಆಗಿಹೋಗಿದ್ದಾರೋ…ನಾವು ಒಬ್ಬಿಬ್ಬರನ್ನಷ್ಟೇ ಕೊಂಡಾಡಿ, ಇಂತಹ ಅನೇಕ ಮಹಾನ್ ವನಿತೆಯರನ್ನು ಮರೆತುಬಿಟ್ಟಿದ್ದೇವೆ. ಇತಿಹಾಸದ ಮುಖ್ಯ ವಾಹಿನಿಯಿಂದ ಇಂಥವರನ್ನು ಬದಿಗಿಟ್ಟು ನಮ್ಮ ಇತಿಹಾಸದ ಮಹತ್ವವನ್ನು ನಾವೇ ಕಡಿಮೆ ಮಾಡಿಕೊಂಡಿದ್ದೇವೆ. ಕೊನೆಯ ಪಕ್ಷ ಈಗಲಾದರೂ ಈ ಮಹಾನ್ ಆಡಳಿತಗಾರ್ತಿ, ವ್ಯವಹಾರ ನಿಪುಣೆ, ವೀರ ಧೀರ ಮಹಿಳೆಗೆ ನ್ಯಾಯ ಸಿಗುತ್ತಿದೆ. ಅಂಥದ್ದೊಂದು ಪ್ರಯತ್ನಕ್ಕೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು “ಚೆನ್ನಭೈರಾದೇವಿ ಕರ್ನಾಟಕದ ಹೆಮ್ಮೆ. ಆಕೆ ನಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರಿಗೆ ಸ್ಫೂರ್ತಿಯ ಚಿಲುಮೆ. ಐನೂರು ವರ್ಷಗಳ ಹಿಂದೆಯೇ ನಮ್ಮ ಮಹಿಳೆಯರ ಸ್ವಾವಲಂಬನೆ ಮತ್ತು ಆತ್ಮರಕ್ಷಣೆಗೆ ಬೇಕಾದ ಕಲಿಕೆಗೆ ಅವಕಾಶ ಕಲ್ಪಿಸಿ ಅವರ ಸಬಲೀಕರಣಕ್ಕೆ ಕಾರಣಳಾದ ಜಿನ ಮಹಿಳೆ ಆಕೆ. ವಾಣಿಜ್ಯ ವ್ಯವಹಾರದಲ್ಲಿ ನಮ್ಮ ನೆಲಕ್ಕೆ ನೈಪುಣ್ಯತೆ ಗಳಿಸಿಕೊಟ್ಟವಳು. ಕೌಶಲದ ಜೊತೆಗೆ ಹೃದಯವಂತಿಕೆ, ಶೌರ್ಯದ ಜೊತೆಗೆ ದಯೆ ಕರುಣೆ ಇಟ್ಟುಕೊಂಡ ಘನ ವ್ಯಕ್ತಿತ್ವ ಆಕೆಯದು” ಎಂದರು. ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಪೂಜ್ಯ ವೀರೇಂದ್ರ ಹೆಗಡೆವರು, ಇತಿಹಾಸದ ಗರ್ಭದಲ್ಲಿ ಅಡಗಿಹೋದ ಚೆನ್ನಭೈರಾದೇವಿಯಂತಹ ವ್ಯಕ್ತಿತ್ವಕ್ಕೆ ನ್ಯಾಯ ಸಂದಾಯವಾಗುತ್ತಿರುವ ಈ ಸಂದರ್ಭದಲ್ಲಿ ಆಕೆಯ ಸಾಧನೆಯನ್ನು ಸ್ಮರಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ಇದೆಲ್ಲದರ ನಡುವೆ ಚೆನ್ನಭೈರಾದೇವಿಯ ಕುರಿತು ಕಾದಂಬರಿಯೊಂದನ್ನು ರಚಿಸಿದ ನನಗೂ ಇಂದಿನ ಸಮಾರಂಭಕ್ಕೆ ಆಹ್ವಾನಿಸಿ, ಭಾಗಿಯಾಗಲು ಅವಕಾಶ ದೊರೆಯುವಂತೆ ಮಾಡಿದ ಚೆನ್ನಭೈರಾದೇವಿಯ ದಿವ್ಯ ಚೈತನ್ಯ ನಾನು ಸಂತೃಪ್ತಿ ಮತ್ತು ಧನ್ಯತೆಯ ಭಾವದೊಂದಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತಿದ್ದೇನೆ..

