Klive Special Article ಒಂದು ಕಾರ್ಯಕ್ರಮ ಆಗಿ ಬಹುದಿನಗಳೇ ಕಳೆದು ಹೋದರೂ ಅಲ್ಲಿನ ಹಾಡೊಂದು ಇನ್ನೂ ಕಿವಿಯಲ್ಲಿ ಅನುರಣನಗೊಳ್ಳುತ್ತಿದೆ ಎಂದೇ ಅದರ ಕುರಿತಾಗಿ ಬರೆಯಲಾರಂಭಿಸಿದೆ. ಆ ಹಾಡೇ ಹಸಿರು ಹಸಿರೆಂದರೆ ಹೆಸರಿಲ್ಲದ ಮರ ಎನ್ನುವ…. ಎಚ್.ಎಸ್. ವೆಂಕಟೇಶಮೂರ್ತಿ ಅವರ ಹಾಡು. ಅದನ್ನು ಹಾಡಿದ್ದು ನಮ್ಮನ್ನಗಲಿದ HSVಯವರಿಗೆ ಭಾವ ನಮನ ಸಲ್ಲಿಸಲು ಆಯೋಜಿತವಾದ ಕಾರ್ಯಕ್ರಮ. ಅದರದಲ್ಲಿ ಎಲ್ಲವೂ ವಿಶೇಷ ಅದೇನೆಂದರೆ ಪುಸ್ತಕಗಳನ್ನು ಮಾರುವ ಅಂಗಡಿಯೊಂದು ಅದನ್ನು ಸರಸ್ವತೀ ಮಂದಿರವಾಗುವಂತೆ ಮಾಡಿದ್ದು. Klive Special Article ನಗರದ ಪ್ರಸಿದ್ಧ ಪುಸ್ತಕದ ಅಂಗಡಿಗಳಲ್ಲಿ ಒಂದಾದ ದುರ್ಗಿಗುಡಿಯಲ್ಲಿನ “ಪ್ರಜ್ಞಾ ಬುಕ್ ಗ್ಯಾಲರಿ” ಈ ರೀತಿಯ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಮನ ಸೆಳೆಯುತ್ತಿದೆ ಎಂದರೆ ತಪ್ಪೇನಿಲ್ಲ. ಅಂದಿನ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿತವಾಗಿದ್ದೇ ಅಲ್ಲದೆ ಪ್ರೇಕ್ಷಕರ ಆಸನ ವ್ಯವಸ್ಥೆಯಿಂದ ಹಿಡಿದು ಧ್ವನಿವರ್ಧಕಗಳ ವ್ಯವಸ್ಥೆಯವರೆಗೆ ಎಲ್ಲವೂ ಸುಸೂತ್ರವಾಗಿತ್ತು. ಕೇವಲ ವ್ಯಾಪಾರವೇ ಅಲ್ಲದೆ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯಕ್ರಮ ಕಳೆದ ಹಲವಾರು ತಿಂಗಳುಗಳಿಂದ ಪ್ರಜ್ಞಾ ಬುಕ್ ಗ್ಯಾಲರಿ ಆಯೋಜಿಸುತ್ತಾ ಬಂದಿದೆ. ಅದರಂತೆ ಅಂದು ಕನ್ನಡದ ಶ್ರೇಷ್ಠ ಕವಿಯಾದ ಶ್ರೀ ಹೆಚ್. ಎಸ್. ವಿ ಅವರಿಗೆ ಅವರ ಕುರಿತಾದ ವಿಷಯಗಳನ್ನು ತಿಳಿಯುತ್ತಲೇ ಅವರೇ ರಚಿಸಿದ ಹಾಡುಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ಅದಾಗಿತ್ತು. ಈ ಕಾರ್ಯಕ್ರಮದ ಇನ್ನೊಂದು ವಿಶೇಷತೆ ಎಂದರೆ ನಡೆಸಿಕೊಡುವವರಿಂದ ಹಿಡಿದು ಹಾಡುಗಳನ್ನು ಹಾಡುವವರೆಗೂ ಎಲ್ಲರೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರಗಳಿಗೆ ತವರೂರಾದಂತಹ ಶಿವಮೊಗ್ಗದವರೇ ಆಗಿದ್ದರು. HSV ಆಗಲಿದ 14ನೇ ದಿನಕ್ಕೆ ಆಯೋಜಿತವಾದ ಈ ಕಾರ್ಯಕ್ರಮ ಹಿಂದಿನ ಅವಿಭಜಿತ ಶಿವಮೊಗ್ಗ ಜಿಲ್ಲೆಯವರೇ ಆದ ಅವರಿಗೆ ಸಮರ್ಪಿಸಿದ, ಅದರಲ್ಲೂ ಮನೆಯವರೆಲ್ಲರೂ ಸೇರಿ ಮನೆಯ ಹಿರಿಯ ಸದಸ್ಯ ಅಗಲಿದಾಗ ಅವರ ಸದ್ಗುಣಗಳನ್ನು ಕೊಂಡಾಡುತ್ತಲೇ ಅವರಿಗಿಷ್ಟವಾದ ಆಹಾರಗಳನ್ನು ಬಂದಿರುವ ಇತರರಿಗೆ ಮಾಡಿ ಬಡಿಸಿ ಇಷ್ಟು ದಿನಗಳ ಕಾಲ ಜೊತೆಗಿದ್ದ ಜೀವಕ್ಕೆ ಸದ್ಗತಿ ದೊರೆಯಲೆಂದು ಮಾಡಿದ ವೈಕುಂಠ ಸಮಾರಾಧನೆಯ ಹಾಗೆಯೇ ಆದಂತಿತ್ತು.
ನಿಜವಾಗಿಯೂ ಅದೊಂದು ಅದ್ಭುತ ಕಾರ್ಯಕ್ರಮ ಶ್ರೀ ವಿನಯ್ ಶಿವಮೊಗ್ಗ ಅವರು ಸಾಕ್ಷಾತ್ ಸರಸ್ವತಿಯ ಪುತ್ರರಂತೆ HSV ಕುರಿತು ಅನೇಕ ವಿಷಯಗಳನ್ನು ಕಲೆ ಹಾಕಿ ನಮ್ಮೆದುರಿಗೆ ಪ್ರಸ್ತುತಪಡಿಸಿದರು. ಇದರಿಂದ HSV ಕುರಿತಾದ ಪ್ರೀತಿ ಗೌರವ ಹೆಮ್ಮೆ ಎಲ್ಲವೂ ಇಮ್ಮಡಿಗೊಳಿಸುವಂತೆ ಆಯಿತು. ಭಾವಗೀತೆ ಮತ್ತು ಸುಗಮ ಸಂಗೀತ ಕ್ಷೇತ್ರಗಳು ಅತ್ಯಂತ ಶ್ರೀಮಂತ ಗೊಳ್ಳಲು ಕೊಡುಗೆ ನೀಡಿದ ಮಹನೀಯರಲ್ಲಿ HSV ಕೂಡ ಒಬ್ಬರು. ಇವರ ಹಾಡು ಮನಸ್ಸಿಗೆ ಹಿತವಾಗುವಂತೆ ಆಗುತ್ತದೆ. ನಾಟಕ, ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ, ಅಂಕಣ, ಚಲನಚಿತ್ರ, ಭಾವಗೀತೆ, ಶಿಶು ಗೀತೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿ ಕನ್ನಡ ಸಾಹಿತ್ಯ ಲೋಕವನ್ನು ಅಚ್ಚರಿಗೊಳಿಸಿದವರು. ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು ಹೆಚ್. ಎಸ್. ವಿ. ಇಂತಹ ಮಹನೀಯರ ಕುರಿತಾಗಿ ವಿನಯಣ್ಣ ಹೇಳುವಾಗ ಅನೇಕ ಸಂಗತಿಗಳು ನಮಗೆ ತಿಳಿದೇ ಇರಲಿಲ್ಲವೇನೋ ಎನ್ನುವಂತಾಗಿತ್ತು. ಅವರಾಡಿದ ಬಹಳಷ್ಟು ಮಾತುಗಳು ವಿಶೇಷ ಎನಿಸಿದ್ದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಹೇಳುವುದಾದರೆ ಅವರೊಬ್ಬ ಕ್ಯಾಸೆಟ್ ಕವಿ ಅಲ್ಲ ಅಸೆಟ್ ಕವಿ ಎಂದ ಜೋಗಿಯ ಮಾತೇ ಆಗಿರಬಹುದು…, ಲೋಕ ತಿರುಗಲು ನೀಡಿದ ಪಾಸ್ಪೋರ್ಟ್ ನಂತೆ ಇದ್ದ ಗೀತೆಯೇ ಲೋಕದ ಕಣ್ಣಿಗೆ ರಾಧೆಯು ಕೂಡ… ಇಲ್ಲಿ ಬರುವ ಮಹಾ ಪ್ರವಾಹ ಎಂದರೆ ರಾಧೆಯ ಪ್ರೀತಿಯ ಪ್ರವಾಹ ಎಂಬುದು…, ವೇದ ಉಪನಿಷತ್ ಗಳಲ್ಲಿನ ಅಧ್ಯಯನ ಸಾವನ್ನೂ ಸಲೀಸಾಗಿ ತೋರಿಸುವ ವ್ಯಕ್ತಿತ್ವ ಅವರದು… ಎಂಬುದು, ತಾಯಿ ಹಾಗೂ ಅಜ್ಜಿಯ ಮಮತೆಯ ಮಡಿಲಲ್ಲಿ ಅವರು ಬೆಳೆದಿದ್ದರಿಂದ ತಾನು ಮಾತೃಗೋತ್ರದವನೆಂದು ಪರಿಚಯಿಸಿಕೊಳ್ಳುತ್ತಿದ್ದರೆಂಬುದು… ಅವರ ಪದ್ಯಗಳಿಗೆ ಮಲೆನಾಡಿನ ಭಾಷೆ ಆದರೆ ಗದ್ಯಗಳಿಗೆ ಬಯಲು ಸೀಮೆಯ ಭಾಷೆ ಎಂಬುದು… ಅವರ ಕೃತಿಗಳಲ್ಲಿ ಮಣ್ಣಿನ ಸೊಗಡನ್ನು ಎತ್ತಿ ಹಿಡಿಯುವ ಶಕ್ತಿ ಇತ್ತೆಂಬುದು…, ಪ್ರೀತಿ ಮತ್ತು ಸತ್ಯಕ್ಕೆ ಮನಸೋತ ಕವಿ ಅವರಲ್ಲಿನ ಸಮನ್ವಯತೆ, ಭಾವ ಶುದ್ಧತೆ, ಪರಿಸರ ಪ್ರಜ್ಞೆಯ ಕವಿ, ಸಂಜೆಯಾಗುತ್ತಿದೆ ನಡೆ-ನಡೆ ಗೆಳೆಯ ಬೃಂದಾವನದ ಕಡೆ ಎನ್ನುವುದಂತು ತಮ್ಮದೇ ಚರಮಗೀತೆಯಂತೆ ಎಂದಿರುವುದು…, ಬುದ್ಧ ಚರಣದಲ್ಲಿ ಬರುವ ಸಾಲುಗಳನ್ನು ಓದಿದ್ದು, ಅಭಿಜಾತ ಪ್ರತಿಭೆ, ಕೇವಲ ಹಿರಿಯರಷ್ಟೇ ಅಲ್ಲ ಪುಟ್ಟ ಮಕ್ಕಳಿಗೂ ಒದಗಿ ಬರುವ ಕವಿ, ಅವರು ಇಂದಿನ ತರುಣರನ್ನು ತಲುಪಿದ್ದು ಹೇಗೆ, ಚಿತ್ರಗೀತೆಗಳಿಗೆ ನೀಡಿದ ಸಂಗೀತದ ಕುರಿತಾಗಿ ಹೀಗೆ ಹತ್ತು ಹಲವು ಸಂಗತಿಗಳು ಅನಾವರಣಗೊಂಡ ಬಗೆಯಂತೂ ಸಾಹಿತ್ಯಾಸಕ್ತರ ಮನ ಗೆದ್ದಿತು.
Klive Special Article ಅಂದು ಹಾಡಿದ ಹಾಡುಗಳಾದ ಇಷ್ಟು ಕಾಲ ಒಟ್ಟಿಗಿದ್ದು, ಲೋಕದ ಕಣ್ಣಿಗೆ ರಾಧೆಯು ಕೂಡ, ಬಾನಲ್ಲಿ ಓಡೋ ಮೇಘ, ಹುಚ್ಚು ಕೊಡಿ ಮನಸು, ತೂಗು ಮಂಚದಲ್ಲಿ ಕೂತು, ಮುಕ್ತ ಮುಕ್ತ ಇತ್ಯಾದಿ ಎಲ್ಲಾ ಹಾಡುಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಆ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗದ ಪೃಥ್ವಿ ಗೌಡ, ಪಾರ್ಥ ಚಿರಂತನ್, ಸಂಗೀತ, ಸೋನಾಲಿಯೇ ಅಲ್ಲದೇ ವಿನಯಣ್ಣ ಸಹ ಹಾಡಿದ ಹಾಡುಗಳು HSV ಯವರ ಜನಪ್ರಿಯ ಗೀತೆಗಳೇ ಆದರೂ ನಮ್ಮೂರಿನ ಪ್ರತಿಭೆಗಳು ಹಾಡಿದ್ದರಿಂದ ಕೇಳಲು ಮುದ ಎನಿಸಿತು. ಸಂಗೀತದ ಅಬ್ಬರವಿಲ್ಲದೆ ಮನಮುಟ್ಟುವಂತೆ ಇದ್ದ ಹಾಡುಗಳು ಬಂದವರೆಲ್ಲರೂ ಭಾವಲೋಕದಲ್ಲಿ ಮಿಂದೇಳುವಂತೆ ಮಾಡಿತ್ತು.
ಹಾಗಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಿದ ಪ್ರಜ್ಞಾ ಬುಕ್ ಗ್ಯಾಲರಿ ಅವರಿಗೆ ವಿಶೇಷವಾದ ಅಭಿನಂದನಾ ಪೂರ್ವಕ ಕೃತಜ್ಞತೆಗಳು ಸಲ್ಲಲೇ ಬೇಕು. ಕಾರ್ಯಕ್ರಮ ಮುಗಿದ ಮೇಲೂ ಇನ್ನು ಇದೆಯೇನೋ ಎಂದು ಕುಳಿತು ಕೇಳೋಣ ಎನಿಸುವಂತೆ ಮಾಡಿದ ಎಲ್ಲ ಕಲಾವಿದರಿಗೂ ಅನಂತಾನಂತ ಧನ್ಯವಾದಗಳು.
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು ಪೇಸ್ ಕಾಲೇಜ್ ಶಿವಮೊಗ್ಗ.
