Thursday, March 19, 2026
Thursday, March 19, 2026

Madhu Bangarappa ಕ್ಯಾನ್ಸರ್‌ ಬಾದಿತ ಮಕ್ಕಳ ಶಿಕ್ಷಣ ಮತ್ತು ಸಕಾಲಿಕ ಚಿಕಿತ್ಸೆಗೆ ವಿಶೇಷ ವಸತಿ ಶಾಲೆ : ಎಸ್.ಮಧು ಬಂಗಾರಪ್ಪ

Date:

Madhu Bangarappa ರಾಜ್ಯದಲ್ಲಿ ಮಾರಣಾಂತಿಕ ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಹಾಗೂ ಒಂದರಿಂದ ಹತ್ತನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರಲು ಹಾಗೂ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರವು ವಿಶೇಷ ಕಾಳಜಿ ವಹಿಸಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೊಂದಿಕೊಂಡಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ವಸತಿ ಶಾಲೆಯೊಂದನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಶಿವಮೊಗ್ಗದ ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ವಿವರ ನೀಡಿ ಮಾತನಾಡುತ್ತಿದ್ದರು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ಪೂರಕ ಮಾಹಿತಿಯನ್ನು ಸಂಗ್ರಹಿಸಿ, ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸುವಂತೆ ಸೂಚಿಸಲಾಗಿತ್ತು. ಈಗಾಗಲೇ ಪಡೆದುಕೊಳ್ಳಲಾಗಿರುವ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ರಾಜ್ಯದಲ್ಲಿ ಕ್ಯಾನ್ಸರ್‌ ಖಾಯಿಲೆಯಿಂದ ಬಾಧಿತರಾಗಿರುವ ಸುಮಾರು 3500ಮಕ್ಕಳು ಇರಬಹುದೆಂದು ಅಂದಾಜಿಸಲಾಗಿದೆ. ಕ್ಯಾನ್ಸರ್‌ ಗುಣಪಡಿಸಬಹುದಾದ ಕಾಯಿಲೆ ಆಗಿರುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರಲು ಹಾಗೂ ಅವರಿಗೆ ಸಕಾಲದಲ್ಲಿ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಲು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ಕ್ಯಾನ್ಸರ್‌ ಬಾದಿತ ಮಕ್ಕಳ ಲಾಲನೆ, ಪಾಲನೆ ದೃಷ್ಠಿಯಿಂದ ಪೋಷಕರಿಗೂ ವಸತಿ ಸೌಲಭ್ಯ ಕೊಡಿಸಲು ಗಮನಹರಿಸಲಾಗಿದೆ. Madhu Bangarappa ಆರಂಭಿಸಲು ಉದ್ದೇಶಿಸಲಾಗಿರುವ ಕ್ಯಾನ್ಸರ್‌ ಬಾದಿತ ಮಕ್ಕಳ ಶಾಲೆಗೆ ಆರಂಭದ ಹಂತದಲ್ಲಿ ಸುಮಾರು 1500ಮಕ್ಕಳು ದಾಖಲಾಗಬಹುದಾದ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಎಂದರು.
ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದ ಆರುದಿನಗಳ ಕಾಲ ಮೊಟ್ಟೆ ನೀಡಲು ಈ ಹಿಂದೆ ಅಜೀಂ ಪ್ರೇಮ್‌ಜಿ ಫೌಂಡೇಶನ್‌ ವತಿಯಿಂದ ಆರ್ಥಿಕ ಸಹಕಾರ ಪಡೆದುಕೊಳ್ಳಲಾಗಿತ್ತು. ಅಲ್ಲದೇ ಅದಕ್ಕೆ ಪೂರಕವಾಗಿ ಸರ್ಕಾರದಿಂದಲೂ ಪೂರಕ ಅನುದಾನ ಬಿಡುಗಡೆಗೊಳಿಸಲಾಗುತ್ತಿತ್ತು. ಅದರಂತೆಯೇ ಈಗಾಗಲೇ ಇನ್‌ಫೋಸಿಸ್‌ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ರಾಜ್ಯದ ಸುಮಾರು 50,000 ಶಿಕ್ಷಕರಿಗೆ ಕಲಿಕೆಯಲ್ಲಿ ಕೌಶಲ್ಯವನ್ನು ಬಳಸಿಕೊಂಡು ಬೋದಿಸಲು ಹಾಗೂ ದ್ವಿಭಾಷಾ ನೀತಿಗನುಗುಣವಾಗಿ ಬೋಧನಾ ಕ್ರಮವನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ತರಬೇತಿ ಕೊಡಿಸಲು ಕೋರಲಾಗಿದೆ. ಇನ್‌ಫೋಸಿಸ್‌ ಫೌಂಡೇಶನ್‌ ವತಿಯಿಂದ ಈಗಾಗಲೇ ರಾಜ್ಯದ 15000 ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ ಎಂದವರು ತಿಳಿಸಿದರು.
ಅಲ್ಲದೇ ಇನ್‌ಫೋಸಿಸ್‌ ಸಂಸ್ಥೆಯ ವತಿಯಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಅತ್ಯಾಧುನಿಕ ಪಾಠೋಪಕರಣಗಳನ್ನು ಒದಗಿಸುವ ನಿಟ್ಟಿನಲ್ಲಿ 200ಕೋಟಿ ರೂ.ಗಳ ಸಹಾಯಧನವನ್ನು ಪಡೆದು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ ಇನ್ನಷ್ಟು ಅನುದಾನವನ್ನು ಸಿ.ಎಸ್.ಆರ್.ನಿಧಿಯಿಂದ ಪಡೆದು, ಜಿಲ್ಲೆಯ ಸರ್ಕಾರಿ ಶಾಲೆಗಳ ಸರ್ವಾಂಗೀಣ ವಿಕಾಸಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಡಯಟ್‌ ಶಿಕ್ಷಕರ ತರಬೇತಿ ಕೇಂದ್ರಗಳನ್ನು ಸಂಶೋಧನಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಕೇಂದ್ರದಲ್ಲಿನ ಉಪನ್ಯಾಸಕರಿಗೆ ಆಯಾ ಜಿಲ್ಲೆಯಲ್ಲಿ ಅತ್ಯಂತ ಕನಿಷ್ಟ ಫಲಿತಾಂಶ ಪಡೆದ ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ಉಸ್ತುವಾರಿ ಹೊಣೆಯನ್ನು ನೀಡಲಾಗುವುದು. ಇದರೊಂದಿಗೆ ಕೇಂದ್ರಗಳಲ್ಲಿ ಆಹ್ವಾನಿತ ಹಾಗೂ ವಿಷಯಾಧಾರಿತ ಶಿಕ್ಷಕರನ್ನು ಆಹ್ವಾನಿಸಿ ಅವರಿಂದ ವಿಶೇಷ ತರಗತಿಗಳನ್ನು ಆನ್‌ಲೈನ್‌ ಮೂಲಕ ನಡೆಸಲಾಗುವುದು. ಅದಕ್ಕಾಗಿ ರಾಜ್ಯದ ಆಯ್ದ 08ಸ್ಥಳಗಳಲ್ಲಿ ಸ್ಟುಡಿಯೋಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುವುದನ್ನು ನಿಯಂತ್ರಿಸಲು ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ತರಗತಿಗಳನ್ನು ನಡೆಸಲು ಅಳವಡಿಸಿಕೊಳ್ಳಲು ಸೂಚಿಸಲಾಗಿದ್ದು, ಪ್ರಥಮ ಹಂತದ ಕಾರ್ಯ ಪ್ರಗತಿಯಲ್ಲಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುವಲ್ಲಿಯೂ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯ ಸೊರಬ, ಸಾಗರ, ಶಿಕಾರಿಪುರ, ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕುಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಹೊಸದಾದ 05ಹಾಸ್ಟೆಲ್‌ಗಳನ್ನು ಆರಂಭಿಸಲು ಮಂಜೂರಾತಿ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ, ಅವರಿಗೆ ತರಗತಿಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಸಿಮ್ಸ್‌ನ ಆಡಳಿತ ಮತ್ತು ಉಸ್ತುವಾರಿಯಲ್ಲಿರುವ ಜಿಲ್ಲಾ ಆಸ್ಪತ್ರೆಯ ನಿರ್ವಹಣೆ ಮತ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳ ಅಳಲನ್ನು ಆಲಿಸಲಾಗಿದ್ದು, ಸಿಮ್ಸ್‌ನ ವೈದ್ಯಕೀಯ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಗ್ಗಾನ್‌ ಆಸ್ಪತ್ರೆಯನ್ನು ಇರುವಂತೆಯೇ ಬಿಟ್ಟು ಪ್ರತ್ಯೇಕವಾದ ಜಿಲ್ಲಾ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು, ಪ್ರತ್ಯೇಕ ಕಟ್ಟಡ ನಿರ್ಮಿಸುವ ಉದ್ದೇಶ ಈಡೇರಲಿದೆ ಎಂದರು.
ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೊರತೆ ಇರುವ ಶಿಕ್ಷರನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದ್ದು, ಸುಮಾರು 18000ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರಲ್ಲಿ 87,330ವಿದ್ಯಾರ್ಥಿಗಳು ಅದರಲ್ಲಿಯೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಠಿಯೊಂದಿಗೆ ಅನೇಕ ಮಹತ್ವದ ಬದಲಾವಣೆಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದ ಅವರು, ಅತ್ಯಂತ ದೊಡ್ಡದಾಗಿರುವ ಶಿಕ್ಷಣ ಇಲಾಖೆಗೆ ಹೆಚ್ಚು ಪ್ರಮಾಣದ ಹಣ ಬಳಸಿಕೊಳ್ಳಲಾಗುತ್ತಿದೆ ಎಂದರು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗದ ಮಕ್ಕಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸದೇ ಮುಂದವರೆಸಲು ಅನುಕೂಲವಾಗುವಂತೆ ಮೂರು ಹಂತದಲ್ಲಿ ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಲ್ಕರಹಿತವಾಗಿ ಪರೀಕ್ಷೆಗಳಲ್ಲಿ ಪ್ರವೇಶಾವಕಾಶ ನೀಡಲಾಗುತ್ತಿರುವುದು ದೇಶದಲ್ಲಿಯೇ ಕರ್ನಾಟಕ ಮೊದಲು ಎಂದವರು ನುಡಿದರು.
ಒಟ್ಟಾರೆಯಾಗಿ ಶಿಕ್ಷಣ ಸಚಿವನಾಗಿ ಎರಡು ವರ್ಷಗಳ ಅವಧಿಯಲ್ಲಿ ಸಲ್ಲಿಸಿರುವ ಸೇವೆ ತೃಪ್ತಿಕರವಾಗಿದೆ. ಉಳಿದ ಅವಧಿಯಲ್ಲಿ ಇನ್ನಷ್ಟು ರಚನಾತ್ಮಕ ಬದಲಾವಣೆಗಳೊಂದಿಗೆ ಶಿಕ್ಷಣ ಕ್ಷೇತ್ರವನ್ನು ಮುನ್ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಪ್ರಸನ್ನಕುಮಾರ್‌, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ ಮತ್ತಿತರರು ಉಪಸ್ಥಿತರಿದ್ದರು.
ಛಾಯಾಚಿತ್ರ ವಿವರ : ನಗರದ ಹೊರವಲಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಭದ್ರಾವತಿ-ಶಿವಮೊಗ್ಗ-ಬೊಮ್ಮನಕಟ್ಟೆ ಮಾರ್ಗವಾಗಿ ಸಂಚರಿಸುವ ಹೊಸ ಮಾರ್ಗಕ್ಕೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಬೊಮ್ಮನಕಟ್ಟೆಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೋವಿ ನಿಗಮದ ರಾಜ್ಯ ಅಧ್ಯಕ್ಷ ಎಸ್.ರವಿಕುಮಾರ್, ಯೋಗೀಶ್‌, ಆರ್.ಪ್ರಸನ್ನಕುಮಾರ್‌, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ದಿನೇಶ್‌, ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...