Narayana Health Shimoga ಕಣ್ಣು ಮಸುಕಾಗಿವೆ, ದೃಷ್ಟಿ ಸಮಸ್ಯೆ ಏನೋ ವಯಸ್ಸಿನ ಕಾರಣವಾಗಿರಬಹುದು” ಎಂದು ಶಂಕಿಸಿ, ಸುಮ್ಮನಾಗಿದ್ದ ಮಹಿಳೆಯೊಬ್ಬರು ಕೆಲವೇ ದಿನಗಳಲ್ಲಿ ತಮ್ಮ ಬಲಗಣ್ಣಿನ ದೃಷ್ಟಿಕಳೆದುಕೊಂಡು ಮತ್ತೆ ದೃಷ್ಟಿ ಪಡೆದ ಅಪರೂಪದ ವೈದ್ಯಕೀಯ ಸಾಧನೆಯ ಕಥೆ ಇದು.
47 ವರ್ಷದ ಆ ಮಹಿಳೆಗೆ ಆರಂಭದಲ್ಲಿ ಬಲಕಣ್ಣಿನಲ್ಲಿ ಸ್ವಲ್ಪ ಮಸುಕಾದ ದೃಷ್ಟಿ ಕಾಣಿಸಿತು. ಆದರೆ ಅದು ನಿಧಾನವಾಗಿ ಬೆಳಕನ್ನೂ ಕಾಣದಷ್ಟು ಕಗ್ಗತ್ತಲಾಗಿ ಮಾರ್ಪಟ್ಟಿತು. ಮೊದಲಿಗೆ ಇದು ಕಣ್ಣಿನ ಸಮಸ್ಯೆ ಅಂದುಕೊಂಡಿದ್ದ ಅವರಿಗೆ ಇದು ಮೆದುಳಿನಲ್ಲಿ ಬೆಳೆಯುತ್ತಿದ್ದ ಅಪಾಯಕಾರಿ ಟ್ಯೂಮರ್ (ಗೆಡ್ಡೆ) ನಿಂದ ಅಂದು ತಿಳಿದಾಗ ತಡವಾಗಿತ್ತು.
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ನ್ಯೂರೋಸರ್ಜನ್ ಡಾ. ಅನಿಲ್‌ಕುಮಾರ್ ಎಂ.ಎಸ್. ಅವರನ್ನು ಭೇಟಿಯಾದರು. ತೀವ್ರ ಪರೀಕ್ಷೆಯ ಬಳಿಕ, ಆಕೆಯ ಮೆದುಳಿನಲ್ಲಿ 5 x 4 x 3.5 ಸೆಂ.ಮೀ ಗಾತ್ರದ ಮೆನಿಂಜಿಯೋಮಾ ಎಂಬ ಮೆದುಳಿನ ಗೆಡ್ಡೆ ಕಂಡುಬಂತು. ಇದು ಕಣ್ಣುಗಳಿಗೆ ಸಂಬಂಧಿಸಿದ “ಆಪ್ಟಿಕ್ ನರ್ವ್” ಮೇಲೆ ಒತ್ತಡ ಹಾಕುತ್ತಿದ್ದು, ಮೆದುಳಿನ ಮುಖ್ಯ ರಕ್ತನಾಳವಾದ “ಮಿಡಲ್ ಸೆರಿಬ್ರಲ್ ಆರ್ಟರಿ”ಗೂ ಕೂಡಾ ತುಂಬಾ ಹತ್ತಿರದಲ್ಲಿತ್ತು.
ಇದನ್ನು ಹಾಗೆಯೇ ಬಿಟ್ಟಿದ್ದರೆ, ಟ್ಯೂಮರ್ ಮುಂದುವರೆದು ಮೆದುಳಿನ “ಹೈಪೊಥಾಲಮಸ್” ಭಾಗವನ್ನು ಒತ್ತಿ, ತಮ್ಮ ನೆನಪಿನ ಶಕ್ತಿ ಕಳೆದುಕೊಳ್ಳುವುದಲ್ಲದೆ, ಅವರ ಹಾರ್ಮೋನ್ ವ್ಯವಸ್ಥೆ ಏರುಪೇರಾಗಿ ಕೋಮಾಗೆ ಜಾರುವ ಸಾಧ್ಯತೆಗಳೂ ಇದ್ದವು ಎಂದು ಚಿಕಿತ್ಸೆ ನೀಡಿದ ಡಾ. ಅನಿಲ್‌ಕುಮಾರ್ ಅವರು ತಿಳಿಸಿದರು.
ಇದೊಂದು ಜಟಿಲ ಹಾಗೂ ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿತ್ತು. ಏಕೆಂದರೆ — ಈ ಭಾಗಗಳು ದೃಷ್ಟಿ, ನೆನಪು ಮತ್ತು ದೇಹದ ಚೇತನತೆ ಸಂಬಂಧಿಸಿದಾಗಿದೆ, ಒಂದು ಚಿಕ್ಕ ತಪ್ಪು ಆಕೆಯಲ್ಲಿ ಶಾಶ್ವತವಾದ ದೋಷಕ್ಕೆ ಕಾರಣವಾಗುತ್ತಿತ್ತು. ಆದರೂ, ಡಾ. ಅನಿಲ್‌ಕುಮಾರ್ ಅವರ ನೇತೃತ್ವದಲ್ಲಿ 12 ಗಂಟೆಗಳ ಕಾಲ ನಡೆದ ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ, ಮೈಕ್ರೋಸ್ಕೋಪ್ ಮತ್ತು ನ್ಯೂರೋ ನ್ಯಾವಿಗೇಶನ್ ತಂತ್ರಜ್ಞಾನ ಬಳಸಿಕೊಂಡು ಟ್ಯೂಮರ್ ಅನ್ನು ತೆಗೆದುಹಾಕಲಾಗಿದೆ.
Narayana Health Shimoga ಶಸ್ತ್ರಚಿಕಿತ್ಸೆಯ ಎರಡು ವಾರಗಳ ಬಳಿಕ, ಬೆಳಕನ್ನೂ ಕಾಣದೆ ಇದ್ದ ಕಣ್ಣಿನಿಂದಲೇ ರೋಗಿಯು 6 ಅಡಿ ದೂರದಿಂದ ಬೆರಳು ಎಣಿಸಲು ಸಾಧ್ಯವಾಗಿರುವುದು, ಅಚ್ಚರಿ ಹಾಗೂ ಸಂತೋಷಕ್ಕೆ ಕಾರಣವಾಗಿದೆ ಎನ್ನುತ್ತಾರೆ ಡಾ.ಅನಿಲ್‌ಕುಮಾರ.
ಇಂತಹ ಟ್ಯೂಮರ್‌ಗಳಿಂದ ದೃಷ್ಟಿ ಮತ್ತೆ ಬರುತ್ತದೆ ಎಂಬುದು ಅಪರೂಪ. ಜಾಗತಿಕ ಅಧ್ಯಯನಗಳ ಪ್ರಕಾರ, ಈ ರೀತಿಯ ಟ್ಯೂಮರ್‌ಗಳಿಂದ ದೃಷ್ಟಿ ಮರುಪಡೆಯುವ ಸಾಧ್ಯತೆ ಕೇವಲ 5–8% ಮಾತ್ರ. ಬದಲಾಗಿ, ದೃಷ್ಟಿ ಇನ್ನಷ್ಟು ಕುಗ್ಗುವ ಸಂಭವ 22–35% ರಷ್ಟು ಇದೆ ಎಂದರು.
“ಆಪ್ಟಿಕ್ ನರ್ವ್ ಇಡೀ ಟ್ಯೂಮರ್‌ನೊಳಗೆ ಸಿಕ್ಕಿಹಾಕಿದಾಗ ದೃಷ್ಟಿ ಮರುಪಡೆಯುವುದು ಬಹಳ ಅಪರೂಪ. ಆದರೆ ಈ ಮಹಿಳೆ ಅದನ್ನೆಲ್ಲ ಮೀರಿ ಗೆದ್ದಿದ್ದಾರೆ” ಎಂದು ಡಾ. ಅನಿಲ್‌ಕುಮಾರ್ ಹೇಳಿದರು.
ಆಕೆ ಕೇವಲ ದೃಷ್ಟಿಯನ್ನಷ್ಟೇ ಮರುಪಡೆಯದೆ, ಮೆದುಳಿನ ನೆನಪು, ಹಾರ್ಮೋನ್ಗಳು ಇತ್ಯಾದಿಗಳ ಕಾರ್ಯವಿಧಾನಗಳು ಕೂಡಾ ಉಳಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಅವರು ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದಾರೆ, ಮುಂದಿನ ಫಾಲೋ-ಅಪ್ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಪ್ರಕರಣವು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. “ದೃಷ್ಟಿಯ ಸಮಸ್ಯೆ, ಅದು ನಿಧಾನವಾಗಿದ್ದರೂ ಸಹ, ಕಣ್ಣಿನ ಸಮಸ್ಯೆ ಎಂಬುದಾಗಿ ಊಹಿಸಿ ನಿರ್ಲಕ್ಷಿಸಬಾರದು, ಪ್ರತಿ ಬಾರಿಯೂ ಕಣ್ಣಿನ ಸಮಸ್ಯೆ ಇರುವುದಿಲ್ಲ — ಕೆಲವೊಮ್ಮೆ, ಸಮಸ್ಯೆ ಮೆದುಳಿನಲ್ಲಿ ಉದ್ಭವಿಸಿರಲೂ ಬಹುದು ಅದಕ್ಕೆ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ತುಂಬಾ ಮುಖ್ಯ. ಎಂದರು ಡಾ. ಅನಿಲ್‌ಕುಮಾರ್.
