Department of Agricultural Research and Education ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಮೇ 29 ರಿಂದ ಜೂನ್ 12 ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ವನ್ನು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ.
ಈ ಅಭಿಯಾನದ ಉದ್ಘಾಟನೆಯನ್ನು ಮೇ 29 ರಂದು ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10.30 ಕ್ಕೆ ಆಯೋಜಿಸಲಾಗಿದೆ.
ಈ ಅಭಿಯಾನದ ಅಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗವು ಮೇ 29 ರಿಂದ ಜೂನ್ 12 ರವರೆಗೆ ಜಿಲ್ಲೆಯಾದ್ಯಂತ 15 ದಿನಗಳವರೆಗೆ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಕಾರ್ಯಕ್ರಮವನ್ನು ಕೃಷಿ ಮುಂಗಾರು ಹಂಗಾಮಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ದೇಶದ ಶ್ರಮಜೀವಿ ರೈತ ಬಾಂಧವರಿಗಾಗಿ ಈ ಮುಂಗಾರು ಹಂಗಾಮಿನಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ, ಸಮಗ್ರ ಕೃಷಿ ಪದ್ದತಿ, ಜಾನುವಾರು ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಇತ್ಯಾದಿಗಳನ್ನು ಒಳಗೊಂಡಂತೆ ರೈತರಿಗೆ ಅರಿವು ಮೂಡಿಸುವುದು, ಮಣ್ಣಿನ ಆರೋಗ್ಯ ಕಾರ್ಡ್ ಆಧಾರಿತ ಸಮತೋಲಿತ ರಸಗೊಬ್ಬರಗಳ ಬಳಕೆ, ಬೆಳೆಗಳ ಆಯ್ಕೆ, ಸುಧಾರಿತ ತಳಿಗಳು, ಬೀಜೋಪಚಾರ ಮತ್ತು ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಅಯೋಜಿಸಲಾಗುವುದು.
Department of Agricultural Research and Education ಈ ಅಭಿಯಾನದಲ್ಲಿ ಕೃಷಿ ಬೆಳೆಗಳ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ರೈತ-ವಿಜ್ಞಾನಿಗಳ ನೇರ ಸಂವಾದವನ್ನು ಕೂಡ ಆಯೋಜಿಸಲಾಗುತ್ತಿದ್ದು, ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ, ಸಂಶೋಧನಾ ಕೇಂದ್ರಗಳು, ಐಸಿಎಆರ್ ಕೇಂದ್ರೀಯ ಸಂಸ್ಥೆಗಳ ವಿಜ್ಞಾನಿಗಳು ನೇರವಾಗಿ ಭಾಗವಹಿಸುವರು. ಜಿಲ್ಲೆಯ ಎಲ್ಲಾ ಹೋಬಳಿಗಳ ರೈತ ಸಂಪರ್ಕ ಕೇಂದ್ರದ ಮೂಲಕ ಈ ಅಭಿಯಾನದ ತಂಡ ಭೇಟಿ ನೀಡುವುದನ್ನು ಆಯಾ ಗ್ರಾಮ ವ್ಯಾಪ್ತಿಯ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ತಂಡ ಗ್ರಾಮಕ್ಕೆ ಬಂದಾಗ ಕಾರ್ಯಕ್ರಮದಲ್ಲಿ ಹೆಚ್ಚಿನ ರೈತರು ಭಾಗವಹಿಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕೆಂದು ಐಸಿಎಆರ್-ಕೆವಿಕೆ ಹಿರಿಯ ವಿಜ್ಞಾನಿ ಮತ್ತು ಕೆವಿಕೆ ಮುಖ್ಯಸ್ಥರಾದ ಡಾ.ಸುನಿಲ್ ಸಿ ತಿಳಿಸಿದ್ದಾರೆ.
