Bharat Scouts and Guides ಆತ್ಮವಿಶ್ವಾಸ ಮತ್ತು ಭರವಸೆ ಮೂಡಿಸುವಲ್ಲಿ ಯುವ ಸಮುದಾಯಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ಶಿವಮೊಗ್ಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ದಳಗಳ ರ‍್ಯಾಲಿಯಲ್ಲಿ ಮಾತನಾಡಿ, ಮಕ್ಕಳಿಗೆ ಶಿಸ್ತು, ಸಂಘಟನೆ ಮತ್ತು ಸೇವೆಯ ಮಹತ್ವವನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಅರಿವು ಮೂಡಿಸುತ್ತದೆ. ಮಕ್ಕಳಲ್ಲಿ ನಿಸರ್ಗದ ಒಲವು ಮೂಡಿಸಿ ಅವರು ಸದಾ ಉತ್ಸಾಹಿತರಾಗಿ ಇರುವಂತೆ ಮಾಡುವ ಒಂದು ವಿಶಿಷ್ಟ ಶಿಕ್ಷಣವೇ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಪಾಠ ಪ್ರವಚನಗಳ ಜತೆಗೆ ನಿಸರ್ಗದ ಪರಿಸರದಲ್ಲಿ ಆಡಿ ನಲಿಯುವ, ನೋಡಿ ಕುಣಿಯುವ ಅವಕಾಶವನ್ನು ಕಲ್ಪಿಸುತ್ತದೆ. ಶಾಲೆ ಮತ್ತು ಮನೆ ಇವೆರಡೂ ಪೂರೈಸದ ಅನೇಕ ಅಗತ್ಯಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣವು ಯುವ ಜನಾಂಗಕ್ಕೆ ಪೂರೈಸುವಲ್ಲಿ ಪರಿಣಾಮಕಾರಿಯಾಗಿದೆ.
ಈ ನಿಟ್ಟಿನಲ್ಲಿ ಇಂದು ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಇಂತಹ ರಾಜ್ಯ ಮಟ್ಟದ ರ‍್ಯಾಲಿಗಳು ಹೊಸ ಭರವಸೆ ಮೂಡಿಸುವುದರ ಜತೆಗೆ ಅವರಲ್ಲಿ ಜೀವನೋತ್ಸಾಹ ಹೆಚ್ಚಿಸುತ್ತದೆ ಎಂದು ಹೇಳಿದರು.
ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್ ಮಾತನಾಡಿ, ಬಾಲ್ಯದಲ್ಲಿ ದೈಹಿಕವಾಗಿ, ಬೌದ್ಧಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಶಾಲೆಗಳಲ್ಲೂ ಸಹ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಸ್ಥಾಪಿಸುವುದರ ಮುಖಾಂತರ ಪ್ರತಿಯೊಂದು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಅವರು ವಹಿಸಿ ಮಾತನಾಡಿ, ನಮ್ಮ ಸ್ಕೌಟ್ಸ್ ಮತ್ತು ಗೈಡ್ಸ್ಗಳು ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಸಾಕ್ಷರತೆ, ಸಸಿ ನೆಡುವುದು ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಸಮುದಾಯ ಸೇವೆಗಳಲ್ಲಿ ತೊಡಗಿಸಿಕೊಂಡು ಮನುಕುಲದ ಸೇವೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ಇಂದಿಗೂ ತನ್ನ ಮೌಲ್ಯಗಳನ್ನು ಉಳಿಸಿಕೊಂಡಿದೆ ಎಂದು ನುಡಿದರು.
Bharat Scouts and Guides ಆಯುಕ್ತರಾದ ಎಸ್.ಜಿ.ಆನಂದ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ
ಕೆ.ವಿ.ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಲಕ್ಷ್ಮೀ ರವಿ, ಆಯುಕ್ತರಾದ ಕೆ.ರವಿ, ಸರಸ್ವತಿ ನಾಗರಾಜ್, ಶಿವಶಂಕರ್, ರಾಜೇಶ್ ಅವಲಕ್ಕಿ, ಮೀನಾಕ್ಷಮ್ಮ, ಗೀತಾ ಚಿಕ್ಕಮಠ, ವೈ ಆರ್ ವೀರೇಶಪ್ಪ, ಚೂಡಾಮಣಿ ಇ ಪವಾರ್, ಜ್ಯೋತಿ. ಕಾತ್ಯಾಯಿನಿ, ಮಲ್ಲಿಕಾರ್ಜುನ್, ವೇಣುಗೋಪಾಲ್, ದೀಪು, ಸ್ಕೌಟ್ಸ್ ಅಂಡ್ ಗೈಡ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.