Inner Wheel Club of Shimoga ಯಾವುದೇ ದಿನಾಚರಣೆಗಳು ಹಾಗೂ ಹುಟ್ಟು ಹಬ್ಬಗಳು ಮತ್ತು ವಿವಾಹ ವಾರ್ಷಿಕೋತ್ಸವಗಳು ಸಮಾಜಮುಖಿಯಾಗಿರಬೇಕು ಹಾಗೂ ಅರ್ಥಪೂರ್ಣವಾಗಿರಬೇಕು. ಸಡಗರ ಸಂಭ್ರಮದ ಜೊತೆಗೆ ಮನುಕುಲದ ಸೇವೆಯು ಸಹ ಮುಖ್ಯ ಎಂದು ಇನ್ನರ್ವಿಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.
ಆಕಾಶ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಸಾಕಷ್ಟು ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಇದ್ದಾರೆ. ಅವರಿಗೆ ಸಲಹೆ ಸಹಕಾರ ನೀಡುವುದರಿಂದ ಅವರ ಬದುಕು ಹಸನವಾಗುತ್ತದೆ. ಹಾಗೂ ನಮ್ಮ ಸಂಸ್ಥೆಯ ಗೌರವವು ಹೆಚ್ಚಾಗುತ್ತೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಖ್ಯಾತ ಮೂಳೆ ತಜ್ಞ ಡಾ. ಆಕಾಶ್ ಮಾತನಾಡಿ, ಮಹಿಳೆಯರಲ್ಲಿ ಸಾಮಾನ್ಯವಾಗಿ ಕೀಲು ಮೂಳೆಗಳ ಸಮಸ್ಯೆ ಜಾಸ್ತಿ ಇರುತ್ತದೆ. ಆದ್ದರಿಂದ ಅವರು ದೈಹಿಕ ಚಟುವಟಿಕೆ ಹಾಗೂ ನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ದೇಹದ ತೂಕವನ್ನು ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು ಒತ್ತಡದಿಂದ ದೂರವಿರಬೇಕು ಎಂದು ಅನೇಕ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಸಂಸ್ಥೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮೂರು ಜನ ಮಹಿಳೆಯರಾದ ಅಂಕಿತ, ಕಾಮಾಕ್ಷಿ ಹಾಗೂ ಭಾಗ್ಯ ಇವರಿಗೆ ಹೊಲಿಗೆ ಯಂತ್ರಗಳನ್ನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಇನ್ನರ್ ವೀಲ್ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್, ನಿಯೋಜಿತ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್,
ಕಾರ್ಯದರ್ಶಿ ಲತಾ ಸೋಮಣ್ಣ, ನಮಿತಾ ಸೂರ್ಯನಾರಾಯಣ ರಾವ್, ವಿಜಯ ರಾಯ್ಕರ್, ವೀಣಾ ಸುರೇಶ್, ವೇದಾ ನಾಗರಾಜ್, ಶಿಲ್ಪಾ ಗೋಪಿನಾಥ್ ಹಾಗೂ ಇನ್ನರ್ವಿಲ್ ಸದಸ್ಯರು ಉಪಸ್ಥಿತರಿದ್ದರು.