Tuesday, March 11, 2025
Tuesday, March 11, 2025

Klive Special Article “ನೃತ್ಯ ವಿದ್ಯಾಧರಣಿ”ವಿದುಷಿ ಭ್ರಮರಿ ಶಿವಪ್ರಕಾಶ್, ಅರ್ಥಪೂರ್ಣ ನೃತ್ಯ‌ ಪ್ರದರ್ಶನ

Date:

Klive Special Article ಅದೊಂದು ವಿಶೇಷವಾದ ಕಾರ್ಯಕ್ರಮ. ಶಿವಮೊಗ್ಗದ ಖ್ಯಾತ ಹಿರಿಯ ಉಪನ್ಯಾಸಕರುಗಳಾದ ಡಾ. ವಿಘ್ನೇಶ್ ಭಟ್ ಹಾಗೂ ಡಾ. ಸುಮಿತ್ರಾ ವಿ. ಭಟ್ ದಂಪತಿಗಳು ಕಳೆದ ನಾಲ್ಕು ದಶಕಗಳಿಂದಲೂ ರಥಸಪ್ತಮಿ ಸಮಯದಲ್ಲಿ ಜನಿಸಿದ ತಮ್ಮ ಮಕ್ಕಳ ಜನ್ಮದಿನವನ್ನು ವಸುಧಾ ವೈಶಾಲಿ ಜನ್ಮದಿನೋತ್ಸವ ಎಂದು ಆಯೋಜಿಸಿ, ಕಲೆಯಲ್ಲಿ ಸಾಧನೆಗೈದವರನ್ನು ಆಯ್ಕೆ ಮಾಡಿ ಅವರಿಗೊಂದು ಬಿರುದು ನೀಡಿ ಸನ್ಮಾನಿಸುವ ಕಾರ್ಯಕ್ರಮವನ್ನು ನಿರಂತರ ಯಜ್ಞದ ಹಾಗೆ ಮಾಡುತ್ತಾ ಬಂದಿದ್ದಾರೆ. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಆಯೋಜನೆಯಾಗಿತ್ತು. ಅಂದು ವಿಶೇಷ ಕಲಾಸನ್ಮಾನಕ್ಕೆ ಭಾಜನರಾದವರು ಡಾ. ವಿದುಷಿ ಭ್ರಮರಿ ಶಿವಪ್ರಕಾಶ್. ಇವರು ಕನ್ನಡದ ಪ್ರಸಿದ್ಧ ಲೇಖಕರೂ, ರಂಗಕರ್ಮಿಗಳೂ ಹಾಗೂ ಶಿಕ್ಷಣ ತಜ್ಞರೂ ಆದ ಉದ್ಯಾವರ ಮಾಧವ ಆಚಾರ್ಯರ ಸುಪುತ್ರಿ. ಹಾಗೆಯೇ ಅಂತರಾಷ್ಟ್ರೀಯ ಖ್ಯಾತಿಯ ಡಾ. ವಸುಂಧರ ದೊರೆಸ್ವಾಮಿಯರಲ್ಲಿ ಶಿಷ್ಯೆಯಾಗಿ ಶಾಸ್ತ್ರೀಯ ನೃತ್ಯದಲ್ಲಿ ವಿದ್ವತ್ ಪದವಿಗಳಿಸಿ ಪ್ರಸ್ತುತ ಮಂಗಳೂರಿನ `ನಾದ ಡ್ಯಾನ್ಸ್ ಅಂಡ್ ಕಲ್ಚರಲ್ ಟ್ರಸ್ಟ್’ನ ನಿರ್ದೇಶಕಿಯಾಗಿದ್ದಾರೆ. ತಮ್ಮ ಅಪೂರ್ವ ನಾಟ್ಯ ಸಾಧನೆಯ ಕಾರಣದಿಂದಾಗಿ ಡಾಕ್ಟರೇಟ್ ಪದವಿ ಪಡೆದಿದ್ದೇ ಅಲ್ಲದೇ ಕೇಂದ್ರ ಸಂಸ್ಕೃತಿ ಸಚಿವಾಲಯದ ಜೂನಿಯರ್ ಮಾನ್ಯತೆ ಪಡೆದವರಾಗಿದ್ದಾರೆ. ಅವರಿಗೆ ಪ್ರೊ. ಶಂಕರನಾರಾಯಣ ಶಾಸ್ತ್ರಿಯವರು ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ “ನೃತ್ಯ ವಿದ್ಯಾಧಾರಿಣಿ” ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಅದೊಂದು ಅಪೂರ್ವದ ಕಾರ್ಯಕ್ರಮವಾಗಿತ್ತು.
ಸಭಾ ಕಾರ್ಯಕ್ರಮದ ನಂತರ ಗದುಗಿನ ನಾರಣಪ್ಪನ ‘ಕರ್ಣಾಟ ಭಾರತ ಕಥಾಮಂಜರಿ’ ಯಿಂದ ಆಯ್ದ ಪದ್ಯಗಳನ್ನು ಶಾಸ್ತ್ರೀಯ ಭರತನಾಟ್ಯದ ಚಿತ್ರ ಚೌಕಟ್ಟಿನಲ್ಲಿ ಕಲಾತ್ಮಕವಾಗಿ ತೋರಿಸುವ ಪ್ರಯತ್ನ ನೃತ್ಯದ ಮೂಲಕ ಮಾಡಿದರು. ಇದು ಶಾಸ್ತ್ರೀಯ ಭರತನಾಟ್ಯದ ನೃತ್ಯಬಂಧಗಳ ಚೌಕಟ್ಟಿನಲ್ಲಿ ಪ್ರಸ್ತುತಪಡಿಸಿದ್ದು ಒಂದು ಹೊಸ ಪರಿಕಲ್ಪನೆಯಾಗಿತ್ತು. ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾದ ಈ ನಡುಗನ್ನಡ ಕಾವ್ಯದ ಮಂಗಳಾಚಾರಣೆಯಿಂದ ಆರಂಭಿಸಿ ಪಟ್ಟಾಭಿಷೇಕದ ವರೆಗಿನ ಆಯ್ದ ಸನ್ನಿವೇಶಗಳನ್ನು ಭರತನಾಟ್ಯದ ತೊಡೆಯಂ, ಸ್ವರ, ಜತಿ, ಪದ, ವರ್ಣ, ಪದಂ, ಜಾವಳಿ, ತಿಲ್ಲಾನಗಳ ಬಂಧಕ್ಕೆ ಅಳವಡಿಸಿದ್ದಂತೂ ತುಂಬಾ ರಂಜನೀಯವಾಗಿತ್ತು.
ವಾಚನ ಪ್ರವಚನವೇ ಮುಖ್ಯ ಪ್ರದರ್ಶನ ವಿಧಾನವಾಗಿ ಇತ್ತೀಚಿನವರೆಗೂ ಪ್ರಚಲಿತದಲ್ಲಿದ್ದ ಈ ಕಾವ್ಯ ಶಾಸ್ತ್ರೀಯ ನೃತ್ಯ ಪ್ರದರ್ಶನದ ಚೌಕಟ್ಟಿಗೆ ತಂದದ್ದು ಮಾತ್ರವಲ್ಲದೆ ಪ್ರೇಕ್ಷಕರ ಅರಿವಿನ ವ್ಯಾಪ್ತಿ ವಿಸ್ತರಿಸುವಂತೆಯೂ ಇತ್ತು. ಗಮಕವಾಚನ ಹಾಗೂ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯ ತುಲನಾತ್ಮಕ ನೋಟ ಬೌದ್ಧಿಕ ಪ್ರಜ್ಞೆಯು ಜಾಗೃತಗೊಳಿಸುವಂತಾದರೆ, ಕುಮಾರವ್ಯಾಸನ ಪದ್ಯದ ಸಾಲು ನೃತ್ಯ ಚಿತ್ರವಾಗಿ ನಮ್ಮನ್ನು ಭಾವಲೋಕದಲ್ಲಿ ತೇಲುವಂತೆ ಮಾಡಿದವು. ನೃತ್ಯಗಾತಿಯ ಸಂದರ್ಭೋಚಿತ ಅಭಿವ್ಯಕ್ತಿ, ಅಭಿನಯ, ಹಾವ ಭಾವ, ತಾಳ ಲಯಗಳ ಹೆಜ್ಜೆ ಗತಿ ಮತ್ತು ಆವರ್ತವಾಗುವ ಅನೇಕ ಸಂಗತಿಗಳೊಂದಿಗೆ ಕಾವ್ಯಕ್ಕೆ ದೃಶ್ಯದ ಮೆರುಗು ತಂದಿತು. ಅವರದು ನೃತ್ಯಕ್ಕೆ ಹೇಳಿ ಮಾಡಿಸಿದ ಮೈಮಾಟ, ನಿಲುವು, ಬಹುಮುಖ ಪ್ರತಿಭೆ ಈ ಮೂರರ ಸಂಗಮಗೊಂಡ ನೃತ್ಯ ಕಲಾಪ್ರತಿಭೆ ಭ್ರಮರಿಯವರು.
Klive Special Article ಆರಂಭದ ಮಂಗಳಾಚರಣೆಯಲ್ಲಿ ವೀರನಾರಾಯಣಸ್ವಾಮಿ, ಗಣಪತಿ ಹಾಗೂ ವೇದವ್ಯಾಸರ ಸ್ತುತಿ ನೃತ್ಯ ಮಾಡಿದರೆ, ಎರಡನೆಯ ನೃತ್ಯ ಬಂಧದಲ್ಲಿ ಕುಮಾರವ್ಯಾಸ ಹೇಳಿದ ಹಾಗೆ ಕೃಷ್ಣನ ಕಥೆ. ಅಲ್ಲಿ ಕೃಷ್ಣನ ವಿಶ್ವ ವ್ಯಾಪಕತೆಯನ್ನು ಭೀಷ್ಮ ಸ್ತುತಿಸಿದ ರೀತಿಯಲ್ಲಿ ಸ್ವರಗಳ ಜೊತೆಯಲ್ಲಿ ಮನೋಜ್ಙ ನೃತ್ಯ ಪ್ರಸ್ತುತಿ ಮಾಡಿದರು. ನಂತರ ಹಿಡಿಂಬೆಯ ಪ್ರಣಯ ಪ್ರೇಮಾಂಕುರ, ಭೀಮನ ವ್ಯಕ್ತಿತ್ವವನ್ನು ನೋಡಿ ಅವನನ್ನು ಒಲಿಸಿಕೊಳ್ಳುವ ಅವಳ ಪ್ರಯತ್ನ ಕಾಡಿನ ಒರಟು ಸ್ವಭಾವದ ರಕ್ಕಸಿ ನಾಡಿನ ಸುಭಗತೆಯನ್ನು ನಿರೀಕ್ಷಿಸುವಂತಹ ಕ್ಷಣಗಳು ಚೇತೋಹಾರಿಯಾಗಿತ್ತು.
ಕೃಷ್ಣ ಸಂಧಾನದ ಸಂದರ್ಭದಲ್ಲಿ ಕೌರವನೊಬ್ಬನಿಗೆ ಬಿಟ್ಟು ಉಳಿದವರಿಗೆ ತೋರಿದ ವಿಶ್ವರೂಪ ದರ್ಶನ ಅದರಿಂದ ಕೋಪಗೊಂಡ ಕೌರವ ತನ್ನಪ್ಪನಲ್ಲಿ ತನ್ನ ಮನದ ಇಂಗಿತ ಹೇಳಿಕೊಳ್ಳುವ ದೃಶ್ಯ ಅಲ್ಲಿನ ಕೃಷ್ಣ ನನ್ನೊಳಗೆ ಇದ್ದು ಇದನ್ನೆಲ್ಲ ನಡೆಸಿದ್ದಾನೆ ಆತ ಸರ್ವಾಂತರ್ಯಾಮಿ ಹಾಗಾಗಿ ನನ್ನ ಮನಸ್ಥಿತಿ ಏನು ಎಂದರೆ ಇವನನ್ನು ಕೆಣಕಿಯೇ ನನಗೆ ಕೈವಲ್ಯ ಎಂದು ಸವಾಲೆಸಗುತ್ತಾನೆ. ನೀ ನಗು ಹೋಗು ಕದನವಕೊಂದು ಬಾ ಎಂದ… ಆಗ ಇಡೀ ತನ್ನ ಸಾಮ್ರಾಜ್ಯದಲ್ಲಿ ಒಂದು ಸೂಜಿ ಮೊನೆಯಷ್ಟು ನಾನು ಕೊಡುವುದಿಲ್ಲ ನಾನು ಯುದ್ಧಕ್ಕೆ ಸಿದ್ದ ಎಂದು ಹೇಳಿ ಸಂಧಾನ ಮುರಿಯುವಂತಹ ಸನ್ನಿವೇಶವಂತೂ ನೃತ್ಯಗಾತಿಯ ನೈಜ ಅಭಿನಯದಲ್ಲಿ ಮನಸೂರೆಗೊಂಡಿತು.
ನಂತರ ಗಾಂಧಾರಿ ತನ್ನೆಲ್ಲ ನೂರು ಮಕ್ಕಳನ್ನು ಕಳೆದುಕೊಂಡಂತಹ ಆಕೆಯ ಮಿಶ್ರಮನೋಭಾವ ಅಲ್ಲಿ – ನಿನ್ನ ಲೀಲೆಯ ಸಿರಿ ಸೊಬಗಿನ ಮಾಯ ರಚನೆ ಇದು ಗದುಗಿನ ವೀರನಾರಾಯಣ ಎನ್ನುತ್ತಾ ಅವಳು ದುಃಖವನ್ನು ತೋಡಿಕೊಂಡಿದ್ದಂತೂ ಮನಮುಟ್ಟುವಂತೆ ಅಭಿನಯಿಸಿ ತೋರಿಸಿದರು. ಇನ್ನು ತಿಲ್ಲಾನದಲ್ಲಿ ಪಟ್ಟಾಭಿಷೇಕದ ಸಂದರ್ಭ ಮತ್ತು ಕೃಷ್ಣನನ್ನು ಬೀಳ್ಕೊಡುವುದನ್ನು ಪ್ರದರ್ಶನ ಮಾಡಿದರೆ ಅಂತಿಮದಲ್ಲಿ ಫಲಶ್ರುತಿಯಾಗಿ ಮಂಗಳಾಚಾರಣೆ ವೇದ ಪಾರಾಯಣದ ಫಲ, ತಪಸಿನ ಫಲ, ಯಾಗ ಫಲಗಳು ಮೇದಿನಿ ಕನ್ಯಾದಾನ ಮಾಡಿದ ಫಲ ಈ ಭಾರತದಲ್ಲಿನ ಒಂದೊಂದು ಅಕ್ಷರ ಕೇಳಿದವರಿಗೂ ಸಿಗುತ್ತದೆಂದು ಕುಮಾರವ್ಯಾಸ ಹೇಳಿದುದನ್ನೇ ಹೇಳಿ ಈ ಎಲ್ಲವನ್ನು ಮುಕುಂದಾರ್ಪಣ ಮಾಡಿ ಆ ಕೃಷ್ಣನಿಂದ ಆರಂಭವಾದದ್ದನ್ನ ಕೃಷ್ಣನಿಗೆ ಸಮರ್ಪಿಸಿದ ರೀತಿ ರಸಿಕರ ಮೆಚ್ಚುಗೆಯನ್ನು ಪಡೆದವು.
ಇವೆಲ್ಲಕ್ಕೂ ಹಿನ್ನೆಲೆಯಾಗಿ ಹಿಮ್ಮೆಳದಲ್ಲಿನ ಚಂದ್ರಶೇಖರ ಕೆದಿಲಾಯರ ಹಾಡುಗಾರಿಕೆಯೇ ಪ್ರದರ್ಶನದ ವಾತಾವರಣವನ್ನು ಸಮರ್ಥವಾಗಿ ಹಿಡಿದಿಟ್ಟಂತಹ ಅಂಶಗಳಾಗಿದ್ದವು. ಈ ಎಲ್ಲವನ್ನ ನೋಡಿ ನನ್ನ ಮಗ ತಾನು ಅದ್ಭುತವಾಗಿ ಸವಿದ ನೃತ್ಯ ಪ್ರದರ್ಶನ ಇದು ಎಂದಿದ್ದು ಕೂಡ ನಮಗೆ ವಿಶೇಷವೇ ಆಗಿತ್ತು. ಅಲ್ಲದೇ ಕುಮಾರವ್ಯಾಸ ಭಾರತವನ್ನು ಕಣ್ಣೆದುರಿಗೆ ಕಟ್ಟುವಂತೆ ಅಭಿನಯಿಸಿದ್ದಾರೆ ಎಂದು ಹೇಳಿದ್ದನ್ನ ನಾನಿಲ್ಲಿ ಹೇಳಲೇಬೇಕು. ಆ ಮಟ್ಟಿಗಿನ ತಲ್ಲೀನತೆಯನ್ನು ಪ್ರೇಕ್ಷಕರಲ್ಲಿ ಮೂಡಿಸಿದ್ದನ್ನು ನೆನೆಯಲೇಕು. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಎನ್ನುವಂತೆ ಇಡೀ ಭಾರತವನ್ನು ನಮ್ಮ ಕಣ್ಣೆದುರಿಗೆ ಕುಣಿಯುವಂತೆ ಮಾಡಿದಂತಹ ನೃತ್ಯ ಕಲಾವಿದೆಗೆ ‘ನೃತ್ಯ ವಿದ್ಯಾಧರಣಿ’ ಎನ್ನುವಂತಹ ಬಿರುದು ಸಾರ್ಥಕವಾಯಿತು ಎನ್ನುವುದರಲ್ಲಿ ಸಂಶಯವೇ ಇಲ್ಲ.

– ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು, ಶಿವಮೊಗ್ಗ.

ಚಿತ್ರಕೃಪೆ : ಸಿದ್ಧಾರ್ಥ ಎ. ಕಶ್ಯಪ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...

Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ.‌ ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್

Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ,...