Friday, March 14, 2025
Friday, March 14, 2025

Klive Special Article ಶ್ರೀ ಸತ್ಯಾತ್ಮತೀರ್ಥರ ಅನುಗ್ರಹ ಭಾಷಣ‌ಕ್ಕೆ ಯುವ ಸ್ಪಂದನ ಮತ್ತು ವರ್ತಮಾನದ ಸತ್ಯಗಳು ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್

Date:

Klive Special Article ನಮ್ದು ಪೇಸ್ ಕಾಲೇಜ್. ಹೇಳಿ ಕೇಳಿ ಪಿ ಯು ಮಕ್ಕಳು ಓದುತ್ತಿರೋ ಕಾಲೇಜ್. ಇಲ್ಲಿಗೆ ವಾರ್ಷಿಕೋತ್ಸವದ ನಿಮಿತ್ತ ಗುರುಗಳು ಕಾಲೇಜ್ ಗೆ ಬಂದು ಮಕ್ಕಳನ್ನು ನಮ್ಮನ್ನೂ ಅನುಗ್ರಹಿಸಿದ್ದರು. ಅದೊಂದು ಐತಿಹಾಸಿಕ ದಾಖಲೆಯ ಕಾರ್ಯಕ್ರಮ ಆಯ್ತು. ಏಕೆಂದರೆ ಎಂದೂ ಈ ರೀತಿಯ ಕಾಲೇಜುಗಳಿಗೆ ತೆರಳದ ಗುರುಗಳು ನಮ್ಮಲ್ಲಿಗೆ ಬಂದು ಅನುಗ್ರಹಿಸಿ ಅವರು ಉಪದೇಶಿಸಿದ ಮಾತುಗಳಿವೆಯಲ್ಲ ಅವು ಸಮಾಜಮುಖಿಯಾಗಿ ಆಲೋಚನೆ ಮಾಡುವ ಗುರುಗಳು ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಖ್ಯ ಎಂದು ಭಾವಿಸಿ ಭವಿಷ್ಯತ್ತಿನ ಭವ್ಯ ಭಾರತ ನಿರ್ಮಾಣಕ್ಕೆ ಯುವಕರು ಯಾವ ರೀತಿ ಇರಬೇಕು ಎಂದು ಮಾರ್ಗದರ್ಶನ ಮಾಡಿದ್ದೇ ಆಗಿದೆ. ಹಾಗಾಗಿ ಅವರ ಅನುಗ್ರಹ ಸಂದೇಶದ ನುಡಿಗಳು ಮತ್ತು ಅದನ್ನು ಕೇಳಿದ ಮಕ್ಕಳ ಅಭಿಪ್ರಾಯಗಳನ್ನೂ ಈ ಲೇಖನದಲ್ಲಿ ಸಂಗ್ರಹಿಸಿದ್ದೇನೆ.

ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥರು ಅಂದು ದಿವ್ಯ ಸಾನಿಧ್ಯವಹಿಸಿ ಅನುಗ್ರಹಿಸಿದ್ದು ನಮ್ಮ ಜೀವನದ ಮರೆಯದ ದಿನವಾಯಿತು. ಪ್ರಸ್ತುತ ದಿನಮಾನಗಳಿಗೆ ಒಪ್ಪುವ ಮಕ್ಕಳು ಯಶಸ್ಸು ಸಾಧಿಸಲು ಅಗತ್ಯವಾಗಿ ಅನುಸರಿಸಲೇ ಬೇಕಾದ ಸಂಗತಿಗಳನ್ನೇ ಆರಿಸಿ ಅಂದು ಅನುಗ್ರಹ ಸಂದೇಶ ನೀಡಿದರು. ಏಕೆಂದರೆ ಆರಂಭದಲ್ಲಿಯೇ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಈಶ್ವರಪ್ಪನವರು ತಮ್ಮ ಮಾತಿನಲ್ಲಿ ವಿದ್ಯಾರ್ಥಿಗಳ ಮುಂದಿನ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಗುರುಗಳ ಮಾರ್ಗದರ್ಶನ ಬೇಕು ಎಂದು ಹೇಳಿದ್ದಕ್ಕೆ ಅನುಗುಣವಾಗಿಯೇ ಗುರುಗಳು ಪ್ರವಚನ ನೀಡಿದರು.

ಬಹುಮುಖ್ಯವಾಗಿ ಧರ್ಮ, ಏಕಾಗ್ರತೆ, ಬ್ರಹ್ಮಚರ್ಯ ಪಾಲನೆ, ಉತ್ತಮ ವ್ಯಕ್ತಿತ್ವ ನಿರ್ಮಾಣ ಈ ಸಂಗತಿಗಳನ್ನು ಮಕ್ಕಳಿಗೆ ರಾಮಾಯಣ ಮಹಾಭಾರತದ ಆದರ್ಶಗಳನ್ನು ಅನುಸರಿಸಿ ಹೇಳಿದರು.
ಭಾರತೀಯ ಸನಾತನ ಧರ್ಮದ ಕುರಿತಾಗಿ ಅಪಾರ ಅಭಿಮಾನ ಹಾಗೂ ಪ್ರೀತಿಯನ್ನು ಹೊಂದಿರುವ ಗುರುಗಳು ತಮ್ಮ ಮಾತಿನುದ್ದಕ್ಕೂ ಧರ್ಮದ ವಿವಿಧ ಆಯಾಮಗಳ ಕುರಿತಾಗಿ ಬಹು ಸರಳವಾಗಿ ವಿದ್ಯಾರ್ಥಿಗಳಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಮಹಾಭಾರತದದಲ್ಲಿ ಹೇಳಿದ ‘ಧರ್ಮೋ ರಕ್ಷತಿ ರಕ್ಷಿತಃ ಧರ್ಮ ಏವ ಹತೋ ಹಂತಿ….’ ಎಂದು ಹೇಳುತ್ತಾ ನಾವು ಧರ್ಮದ ಕೊಲೆ ಮಾಡಿದರೆ ಧರ್ಮ ನಮ್ಮನ್ನು ಕೊಲ್ಲುತ್ತದೆ. ನಾವು ಧರ್ಮದ ರಕ್ಷಣೆ ಮಾಡಿದರೆ ಆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮದ ರಕ್ಷಣೆ ಅಂದರೆ ಅದರ ಅನುಷ್ಠಾನ ಮಾಡುವುದು. ಬದಲಾಗಿ ಮುತ್ತು ರತ್ನಗಳನ್ನು ರಕ್ಷಿಸಿದಂತೆ ಅಲ್ಲ. ತಂದೆ ತಾಯಿಗಳ ಸೇವೆ ಮಾಡುವುದು, ದೇವಸ್ಥಾನಗಳಿಗೆ ಹೋಗಿ ದೇವರಿಗೆ ನಮಸ್ಕಾರ ಮಾಡುವುದು, ಕಷ್ಟದಲ್ಲಿದ್ದ ವ್ಯಕ್ತಿಗೆ, ಬಡವರಿಗೆ ಸಹಾಯ ಮಾಡಿದರೆ, ಹಸಿದ ಹೊಟ್ಟೆಗೆ ಅನ್ನ ಕೊಟ್ಟರೆ, ನೆಲೆ ಅಥವಾ ಆಸರೆ ಇಲ್ಲದವರಿಗೆ ಮನೆ ಕೊಟ್ಟರೆ, ಅಥವಾ ತನ್ನ ಮನೆಯಲ್ಲಿಯೇ ಅವಕಾಶ ಕೊಟ್ಟರೆ, ಬಟ್ಟೆ ಇಲ್ಲದವನಿಗೆ ಬಟ್ಟೆ ನೀಡಿದರೆ, ವಿದ್ಯೆ ಇಲ್ಲದವನಿಗೆ ವಿದ್ಯೆ ನೀಡಿದರೆ, ಹೆದರಿದವನಿಗೆ ಧೈರ್ಯ, ಅಭಯ ನೀಡಿದರೆ ಧರ್ಮವನ್ನು ರಕ್ಷಿಸಿದ ಹಾಗೆ ಎಂದು ಧರ್ಮದ ನಾನಾ ಆಯಾಮಗಳನ್ನು ತಿಳಿಸಿದರು. Klive Special Article ಕೇವಲ ಧಾರ್ಮಿಕ ಕಾರ್ಯಗಳು ಮಾತ್ರವಲ್ಲ, ಧರ್ಮಕ್ಕೆ ಬಹಳ ಮುಖಗಳಿವೆ. ದಾಸರು ಹೇಳಿದಂತೆ ‘ ಚೇತನಾ ಚೇತನಗಳೆರಡು ಸಂಪ್ರೀತಿಯಲಿ ಸಂರಕ್ಷಿಸುವುದು ಪೂಜೆ ಎಂದು. ಪರಮಾತ್ಮನ ಅಪ್ರತಿಮವಾದ ಪ್ರತಿಮೆ ಎಂದರೆ ಅದು ಚೇತನ. ಅದು ಮಾನವ, ಜೀವರಾಶಿಗಳು. ಪರಮಾತ್ಮ ಕಲ್ಲು ಮಣ್ಣುಗಳಲ್ಲಿ ಮಾತ್ರವಲ್ಲ ಎಲ್ಲೆಡೆಯೂ ಇದ್ದಾನೆ. ಭಗವಂತನು ನನ್ನನ್ನು ಸಂತೋಷಪಡಿಸಬೇಕಾದರೆ ನನ್ನ ಅಧಿಷ್ಠಾನ, ನನ್ನ ಮಕ್ಕಳನ್ನು ನನ್ನ ಸೃಷ್ಟಿಯಲ್ಲಿರುವ ಚೇತನಗಳನ್ನು ಜೀವರಾಶಿಗಳನ್ನು ಸಂತೋಷಪಡಿಸಿ ಎಂದಿದ್ದಾನೆ. ಆ ದೃಷ್ಟಿಯಲ್ಲಿಯೇ ಪರಮಾತ್ಮ ಹೇಳಿದ ಮಾತಂದರೆ, ಭಗವದ್ಗೀತೆಗೆ ಮದ್ವರು ಮಾಡಿದ ವ್ಯಾಖ್ಯಾನದಲ್ಲಿ -‘ ನಾನಾ ತರಹದ ಜನರ ಸೇವೆ ಮಾಡುವುದೇ ಕರ್ಮ. ಕಂಪಲ್ಸರಿ ಮಾಡಲೇ ಬೇಕಾದದ್ದು. ಒಂದು ರಾಜ್ಯದಲ್ಲಿದ್ದ ಮೇಲೆ ಹೇಗೆ ನಾವೆಲ್ಲ ತೆರಿಗೆ ಕಟ್ಟಲೇಬೇಕೋ ಆ ರೀತಿಯಲ್ಲಿ ದೇವರ ರಾಜ್ಯದಲ್ಲಿರುವ ನಾವು ಕರ ನೀಡಲೇಬೇಕು. ಜಗತ್ತಿನ ಜೀವರಾಶಿಗಳಲ್ಲಿ ಕಷ್ಟದಲ್ಲಿದ್ದವರಿಗೆ ಸೇವೆ ಮಾಡಿ ಉಪಕಾರ ಮಾಡಿ, ಜನರೊಳಗೆ ಜನಾರ್ದನ ಇದ್ದಾರೆ ಎಂದು ತಿಳಿದು, ಮಾನವನಲ್ಲಿ ಮಾಧವನಿದ್ದಾನೆ ಎಂದು ಭಾವಿಸಿ ಮಾಡಿದಂತಹ ಸೇವೆ ಅದು ಭಗವಂತನ ಸೇವೆ ಎಂದು ಹೇಳಿದ್ದಾನೆ. ಅದು ಜನರು ಬದುಕಿದ್ದಕ್ಕೆ ಕೊಡುವಂತಹ ತೆರಿಗೆ ಎಂಬುದಾಗಿ ಪರಮಾತ್ಮ ಹೇಳಿದ್ದಾನೆ. ಸೇವೆ ಮಾಡಿದರೆ ಮಾತ್ರ ಉದ್ಧಾರ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಮನುಷ್ಯರಿಗೆ ಸುಖವಾಗಿರಲು ಏನು ಬೇಕು ಅದನ್ನು ನಾನು ನೀಡುತ್ತಿದ್ದೇನೆ. ಹಣಗಳಿಸಿದ ಮಾತ್ರಕ್ಕೆ ಮನುಷ್ಯ ಸುಖವಾಗಿರುವುದಿಲ್ಲ, ಮನೆ ವಾಹನ ಬ್ಯಾಂಕ್ ಡೆಪಾಸಿಟ್ ಗಳು, ಬೇಕಾದಷ್ಟು ಆಸ್ತಿ ಪಾಸ್ತಿ ಇವುಗಳಿದ್ದರೆ ಮಾತ್ರ ನಾವು ಸುಖವಾಗಿರ್ತೇವೆ ಅಂತ ಮನುಷ್ಯ ತಿಳಿದಿದ್ದರೆ ಅದು ತಪ್ಪು. ನಾವೆಷ್ಟು ಪುಣ್ಯಕರ್ಮಗಳನ್ನು ಮಾಡುತ್ತೇವೋ ಅಷ್ಟು ಸುಖವಾಗಿರುತ್ತೇವೆ. ಎಂತಹ ಆಸ್ತಿಪಾಸ್ತಿಗಳನ್ನು ಗಳಿಸಿದವರೆಲ್ಲ ಮಣ್ಣು ಪಾಲಾಗಿ ಹೋಗಿದ್ದಾರೆ ಯಾರು ಉಳಿದಿಲ್ಲ ಎಂದು ಭೋಜರಾಜನ ಒಂದು ಸುಭಾಷಿತವಾದ ಮಾಂಧ ತಾ ಚ ಮಹಿಪತಿಃ ಕೃತಯುಗಾಲಂಕಾರೋಭೂತಃ…. ನೈಕೇನಾಪಿ ಸಮಂ ಗತಃ ವಸುಮತಿ ಮುಂಜ ತ್ವಯಾ ಯಾಸ್ಯತಿ… ಎನ್ನುವಲ್ಲಿ ಭೋಜನ ಚಿಕ್ಕಪ್ಪ ಅವನಿಗೆ ಮೋಸ ಮಾಡಿ ತಾನು ರಾಜ್ಯ ಪಡೆದುಕೊಳ್ಳಬೇಕೆಂದು ಭೋಜನನ್ನು ಅರಣ್ಯಕ್ಕೆ ಕಳಿಸ್ತಾನೆ. ಜೊತೆಯಲ್ಲಿ ನಾಲ್ಕು ಜನರನ್ನು ಕಳಿಸಿ ತಾನು ರಾಜ್ಯ ತೆಗೆದುಕೊಳ್ಳಬೇಕೆಂಬ ಆಸೆಯಿಂದ ಅವನನ್ನು ಕೊಲೆ ಮಾಡಲು ಆದೇಶಿಸುತ್ತಾನೆ. ಆದರೆ ಭೋಜನ ಜೊತೆಯಲ್ಲಿಯೇ ಬೆಳೆದು ಅವನ ಅನ್ನ ತಿಂದಂತಹ ಕೆಲಸದವರಿಗೆ ಅವನನ್ನು ಕೊಲೆ ಮಾಡುವ ಮನಸ್ಸು ಬರದೇ ದುಃಖಿತರಾಗಿ ಯಾವುದೋ ಬಟ್ಟೆಗೆ ನಿನ್ನ ರಕ್ತ ಹಚ್ಚಿ ನಿನ್ನನ್ನು ಕೊಂದಿದ್ದೇವೆ ಎಂದು ಸುಳ್ಳು ಹೇಳುತ್ತೇವೆ ನೀನು ಸುಖವಾಗಿ ಅರಣ್ಯದಲ್ಲಿ ಜೀವನ ಮಾಡೆಂದು ಹೇಳಿದಾಗ. ಅಲ್ಲೇ ಇದ್ದ ಒಂದು ಬಟ್ಟೆಯ ಮೇಲೆ ಮೇಲೆ ಹೇಳಿದ ಶ್ಲೋಕವನ್ನು ಬರೆದು ಕೊಡುತ್ತಾನೆ ಅದರರ್ಥ- “ಅನೇಕ ಯುಗಗಳಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳು ರಾಜ ಮಹಾರಾಜರುಗಳು ಆಗಿ ಹೋಗಿದ್ದಾರೆ. ಅಷ್ಟೇ ಅಲ್ಲ ಇಡೀ ಭೂಮಂಡಲವನ್ನೇ ಆಳಿದಂತಹವರಿದ್ದಾರೆ. ಆದರೆ ಯಾರ ಹೆಸರೂ ಇಂದು ಉಳಿದಿಲ್ಲ. ಯಾವ ವ್ಯಕ್ತಿ ಇಡೀ ಭೂಮಿ ನನ್ನದು ಎಂದು ಹೇಳಿಕೊಂಡವರಿದ್ದರು ಅವರೆಲ್ಲರೂ ಇಂದು ನಾಶವಾಗಿದ್ದಾರೆ ಅವರು ಈಗ ಇಲ್ಲ. ಭೂಮಿ ಅವರ ಕೈಯಲ್ಲಿಲ್ಲ, ಅವರ ಹೆಸರು ಈಗ ಉಳಿದಿಲ್ಲ. ಅಂತಹ ಸ್ಥಿತಿ ಬಂದಿದೆ. ಹೀಗಿರುವಾಗ ನೀನೊಬ್ಬ ಶಾಶ್ವತ ಅಂತ ಅನ್ಕೊಂಡಿದ್ದೀಯಾ” ಎಂದು ವ್ಯಂಗ್ಯವಾಗಿ ಹೇಳಿದಾಗ ಭೋಜನ ಚಿಕ್ಕಪ್ಪನಿಗೆ ಪಶ್ಚಾತ್ತಾಪವಾಗಿ ತಾನು ಮಾಡಿದ್ದು ತಪ್ಪು ಎಂದು ತಿಳಿದು ಮತ್ತೆ ಅವನಿಗೆ ರಾಜ್ಯ ಹಿಂದಿರುಗಿಸುತ್ತಾನೆ ಎಂಬುದು ಇತಿಹಾಸದಲ್ಲಿ ನಾವು ಕೇಳುವ ಕಥೆ. ಇದರಿಂದ ತಿಳಿಯಬೇಕಾದದ್ದು ನಾವು ನಿಜವಾಗಿ ಮಾಡಬೇಕಾದ ಆಸ್ತಿ ಯಾವುದು ಎಂದರೆ ಧರ್ಮ ಅದು ಪುಣ್ಯ. ಧರ್ಮ ಒಂದೇ ಮನುಷ್ಯನ ಜೊತೆಯಲ್ಲಿ ಬರುವಂತದ್ದು ಉಳಿದದ್ದು ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುತ್ತೇವೆ. ಈ ದೃಷ್ಟಿಯಲ್ಲಿ ಯಾರೇ ಆಗಿರಲಿ ತಿಳುವಳಿಕೆ ಬಂದಾಗಿನಿಂದ ಅವರ ಗುರಿ ಒಂದೇ ಆಗಿರಬೇಕು. ಅದೇನೆಂದರೆ ಧರ್ಮ ಹಾಗೂ ಪುಣ್ಯಗಳಿಸುವುದು. ಹಣ ಇತ್ಯಾದಿ ಐಷಾರಾಮದ ಜೀವನ ಅನುಭವಿಸಿದರೂ ಸಹ ಅದಕ್ಕೆ ಧರ್ಮದ ಚೌಕಟ್ಟಿರಬೇಕು. ಅನ್ಯಾಯಮೋಸ ವಂಚನೆ ಲಂಚ ತೆಗೆದುಕೊಳ್ಳುವುದು ಇತ್ಯಾದಿ ಅನಾಚಾರದ ಕೆಲಸಗಳನ್ನು ಮಾಡದೆ ಪರೋಪಕಾರ ಮಾಡಿ ತಾನು ಸುಖವಾಗಿರಬೇಕು ಎನ್ನುವುದು ಮನುಷ್ಯನ ಪರಮ ಗುರಿಯಾಗಿರಬೇಕು ಆ ರೀತಿಯಲ್ಲಿ ಧರ್ಮ ಸಂಪಾದಿಸಿದ ವ್ಯಕ್ತಿ ಮಾತ್ರ ಸುಖವಾಗಿರಲು ಸಾಧ್ಯವಿದೆ ಎಂದು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ.

ಯುವಕ ಯುವತಿಯರು ಅಧ್ಯಯನ ಮಾಡಬೇಕಾದಾಗ ಇರಬೇಕಾದದ್ದು ಏಕಾಗ್ರತೆ. ಅಧ್ಯಯನದ ಕಡೆಗೆ ಮನಸ್ಸು ಏಕಾಗ್ರವಾಗಿ ಇಟ್ಟುಕೊಳ್ಳಬೇಕು. ಆ ವಿದ್ಯೆಯಿಂದ ಉತ್ತಮನಾಗಿ ಬದುಕಬೇಕೆಂಬುದರ ಜೊತೆಗೆ ಉಪಕಾರವನ್ನು ಸಹ ಮಾಡಬೇಕು ಎಂಬಂತೆ ಇರಬೇಕು. ಜೀವನದಲ್ಲಿ ಸುಖವಾಗಿದ್ದು ಒಂದು ದೊಡ್ಡ ಸ್ಥಾನಕ್ಕೇರಿ ಪರೋಪಕಾರವನ್ನು ಮಾಡಬೇಕೆಂಬ ಹೆಗ್ಗುರಿಯನ್ನು ಇಟ್ಟುಕೊಳ್ಳಬೇಕಾದದ್ದು ಬಹು ಮುಖ್ಯ. ಗುರಿ ಹೇಗಿರುತ್ತೋ ಅದಕ್ಕೆ ತಕ್ಕಂತೆ ಮನುಷ್ಯ ಪ್ರಯತ್ನ ಮಾಡುತ್ತಾನೆ. ಓದಿನಲ್ಲಿ ಬೇಜವಾಬ್ದಾರಿತನ ಯಾರಿಗೂ ಇರಬಾರದು. ಓದಿದರೂ ಅದು ಕೇವಲ ಸ್ಪರ್ಧೆಗಾಗಿ ಅಂತ ಇರಬಾರದು,ಮನಸ್ಸಿನ ಏಕಾಗ್ರತೆಯನ್ನು ಕಳೆದುಕೊಳ್ಳಬಾರದು. ಮನುಷ್ಯ ಎಷ್ಟು ದೊಡ್ಡ ಗುರಿಯನ್ನು ಇಟ್ಟುಕೊಳ್ಳುತ್ತಾನೋ ಅಷ್ಟು ಮುಂದೆ ಸಾಗುತ್ತಾನೆ.
ಶ್ರೀಮನ್ ಮಧ್ವಾಚಾರ್ಯರು ಹೇಳಿದ ಈ ಮಾತು ಎಲ್ಲ ಸಾಧಕರಿಗೆ, ಪ್ರತಿಯೊಬ್ಬ ಉತ್ಸಾಹಿಗಳಾದ ಯುವಕ ಯುವತಿಯರೆಲ್ಲರಿಗೂ ಅನುಕರಣಯೋಗ್ಯ. ಆ ಮಾತು ಹೀಗಿದೆ -“ಪ್ರಯತ್ನಮೇವ ಅಗ್ರತೋಯಾಂತಿ ಅಂದರೆ ಮನುಷ್ಯ ಜೀವನದಲ್ಲಿ ಎರಡು ‘ಪ್ರ’ಗಳಿಗೆ ವಿಶೇಷ ಮಹತ್ವ ನೀಡಬೇಕು. ಒಂದು ‘ಪ್ರಯತ್ನ’ ಮತ್ತೊಂದು ‘ಪ್ರಾರ್ಥನೆ’. ಆಲಸ್ಯ ತೊರೆದು ಪ್ರಯತ್ನ ಮಾಡಬೇಕು. ಏಕೆಂದರೆ ಆಲಸ್ಯವೇ ಮೊದಲ ಶತ್ರು. ಪ್ರಯತ್ನದ ಜೊತೆಗೆ ಭಗವಂತನಿಗೆ ಪ್ರಾರ್ಥನೆಯನ್ನು ಮಾಡಬೇಕು. ನಾನು ಮಾಡುವ ಕಾರ್ಯದಲ್ಲಿ ಯಶಸ್ಸು ಬರುವಂತೆ ದೇವರ ಅನುಗ್ರಹವನ್ನು ಪೂರ್ಣವಾಗಿ ಪಡೆದು ಅಧ್ಯಯನ ಮಾಡಬೇಕು. ದೇವರಿಗೆ ಬೇಡಿಕೊಂಡಿದ್ದೇನೆ ಎಂದು ಹೋದದೇ ಇರದೆ ಶ್ರದ್ಧೆಯಿಂದ ಅಧ್ಯಯನ ಮಾಡಿ, ಉದ್ಯೋಗ ಗಳಿಸಿ, ಪರೋಪಕಾರ ಮಾಡುತ್ತೇನೆ ಎಂಬ ಭಾವನೆ ಇರುವುದು ಒಳ್ಳೆಯದು. ಅದು ಸಮಾಜದ ಒಂದು ದೊಡ್ಡ ಆಧಾರಸ್ತಂಭವಾಗುವಂತೆ ಆಗಬೇಕು.

ಏಕಾಗ್ರತೆ ಬರಲು ಅಡ್ಡಿಯಾಗುವ ಮೊಬೈಲ್ ಗೇಮ್ಸ್ ಗಳ ಆಕರ್ಷಣೆಗೆ ಒಳಗಾಗದೆ ನಿಯಂತ್ರಣದಲ್ಲಿಟ್ಟುಕೊಂಡು ಮನಸ್ಸಿಗೆ ಉಲ್ಲಾಸ ಬರುವಂತೆ ಶ್ರಮ ಪರಿಹಾರವಾಗಲು ಎಷ್ಟು ಬೇಕೋ ಅಷ್ಟು ಆಟದಲ್ಲಿ ಸಮಯ ಕಳೆಯಬೇಕು. ಶಾರೀರಿಕ ಸದೃಢತೆಗೆ ಮಾನಸಿಕ ಉಲ್ಲಾಸಕ್ಕೆ ವಿಕಾಸಕ್ಕೆ ಎಷ್ಟು ಬೇಕು ಅಷ್ಟು ಸಮಯದಲ್ಲಿ ಆಟ ಆಡಿ ಉಳಿದ ಸಮಯ ವ್ಯರ್ಥ ಮಾಡಬಾರದೆಂಬ ದೃಢ ನಿರ್ಧಾರ ಇರಬೇಕು.

ಈ ಮಧ್ಯ ವಯಸ್ಸಿನಲ್ಲಿ ಗಂಡು-ಹೆಣ್ಣು ಇಬ್ಬರೂ ಕೂಡ ಯಾವುದೇ ವಿಧವಾದ ತಮ್ಮ ಮುಂದಿನ ವೈವಾಹಿಕ ಜೀವನದ ನಾಂದಿಯನ್ನು ಈಗ ಪ್ರಾರಂಭ ಮಾಡದೆ ಕೇವಲ ಅಧ್ಯಯನದ ಕಡೆಗೆ ಮನಸ್ಸನ್ನು ಇಡಬೇಕು. ಯಾವುದೇ ರೀತಿಯ ಆಕರ್ಷಣೆಗೆ ಬಲಿಯಾಗಿ ದಾರಿ ತಪ್ಪಬಾರದು. ಎಂದು ಹೇಳುವಾಗ ರಾಮಾಯಣದ ಸೀತೆಯನ್ನು ರಾವಣ ಕರೆದೊಯ್ಯುತ್ತಿರುವಾಗ ತನ್ನ ಮೈ ಮೇಲಿನ ಆಭರಣಗಳನ್ನೆಲ್ಲ ಆಕೆ ಕೆಳಗೆಸೆಯುತ್ತಾಳೆ. ಅದನ್ನು ಸುಗ್ರೀವ ಮೊದಲ ಕಪಿಗಳು ತೆಗೆದಿಟ್ಟು ಯಾರಾದರೂ ಬಂದು ಕೇಳಿದರೆ ಕೊಡೋಣ ಎಂದು ಕೊಂಡಿರುತ್ತಾರೆ. ಸ್ವಲ್ಪ ದಿನ ಕಳೆದ ಮೇಲೆ ರಾಮ ಲಕ್ಷ್ಮಣರು ಅದನ್ನು ಹುಡುಕುತ್ತಾ ಬಂದಾಗ ಲಕ್ಷ್ಮಣನಿಗೆ ಆಭರಣ ತೋರಿಸಿ ಇದು ಸೀತೆಯ ದ ಎಂದು ಕೇಳಿದಾಗ ಆಕೆ ನನ್ನ ಅಣ್ಣನ ಹೆಂಡತಿ ನನಗೆ ಪೂಜ್ಯಳು ತಾಯಿಯ ಸ್ಥಾನದಲ್ಲಿದ್ದಾಳೆ ನಿತ್ಯದಲ್ಲಿ ತಲೆಬಾಗಿ ಅವಳಿಗೆ ನಾನು ವಂದಿಸುವಾಗ ಅವಳ ಮುಖ ನೋಡಿ ಮಾತನ್ನೇ ಆಡಿಲ್ಲ. ಹಾಗಾಗಿ ಆಭರಣಗಳ ಕುರಿತಾಗಿ ಅಣ್ಣ ರಾಮ ಹೇಳುತ್ತಾನೆ. ಈ ರೀತಿಯ ಸಂಯಮ ನಮಗೆ ಆದರ್ಶವಾಗಬೇಕು. ಸಂಯಮ, ಬ್ರಹ್ಮಚರ್ಯದ ಪರಿಪಾಲನೆ ಮಾಡುವ ಪದ್ಧತಿ ನಮ್ಮ ಭಾರತ ದೇಶದಲ್ಲಿ ಯಾವ ಉನ್ನತ ಮಟ್ಟದಲ್ಲಿತ್ತು ಎನ್ನುವುದನ್ನು ವಾಲ್ಮೀಕಿ ರಾಮಾಯಣ ನಮಗೆ ತಿಳಿಸಿಕೊಡುತ್ತದೆ. ಈ ರೀತಿಯಲ್ಲಿ ಜೀವನ ನಡೆಸುವುದರಿಂದ ಅಧ್ಯಯನ ಪರಿಪೂರ್ಣವಾಗುತ್ತದೆ. ಇದು ಅಧ್ಯಯನ ಕಾಲದಲ್ಲಿಯೂ ವಿವಾಹದ ನಂತರವೂ ಇರಬೇಕು. ಮಡದಿಯ ಹೊರತಾಗಿ ಇನ್ನಾರನ್ನು ಕೂಡ ಕಾಮ ದೃಷ್ಟಿಯಿಂದ ನೋಡಬಾರದು. ಅದಕ್ಕೆ ಹೊರತಾಗಿ ಏನಾದರೂ ನಡೆದರೆ ಅದಕ್ಕಾಗಿಯೇ ದೊಡ್ಡ ದೊಡ್ಡ ಸಂಗ್ರಾಮಗಳೇ ನಡೆದು ಹೋಗಿವೆ. ರಾವಣ ಸೀತೆ ಅಪಹರಿಸುವ ಕೆಲಸ ಮಾಡಿದ್ದು ಅಷ್ಟೇ ಮತ್ತಾವುದೇ ತಪ್ಪು ಕೆಲಸವನ್ನು ಮಾಡಿಲ್ಲ ಆ ಕಾರಣಕ್ಕಾಗಿ ಯುದ್ಧವಾಗಿ ರಾವಣನೇ ಮೊದಲಾದ ಎಲ್ಲರ ಸಂಹಾರವಾಯಿತು. ಅದೇ ರೀತಿ ಮಹಾಭಾರತದಲ್ಲಿಯೂ ಸಹ ದ್ರೌಪದಿಯ ವಿಚಾರವಾಗಿ ನಡೆದದ್ದು. ಅವುಗಳನ್ನು ನೋಡಿದಾಗ ಜೀವನದಲ್ಲಿ ಸ್ತ್ರೀ ಮಾನದ ಸಂರಕ್ಷಣೆಯ ಮಹತ್ವ ನಮಗೆ ಗೊತ್ತಾಗುತ್ತದೆ. ಈ ಸಂಯಮ ಎಲ್ಲರಿಗೂ ಇರಬೇಕು.

ನಮ್ಮ ನಮ್ಮ ಕೆಲಸಗಳನ್ನು ನಾವು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಲೇ ಪರೋಪಕಾರದ ಗುಣವನ್ನು ಸಹ ಬೆಳೆಸಿಕೊಳ್ಳಬೇಕು. ಜಗತ್ತನ್ನು ಹುಟ್ಟಿಸಿದವನು ದೇವರು. ಬ್ರಹ್ಮಾಂಡದೊಳಗೆ ಅದೆಷ್ಟು ಅದ್ಭುತವಾದ ಡಿಸೈನ್ ಇದೆ ಎಂದರೆ ಒಬ್ಬೊಬ್ಬರ ಶರೀರ ರಚನೆಯಲ್ಲಿಯೂ ಭಿನ್ನವಾಗಿರುವುದು ಕಾಣುತ್ತದೆ. ಈ ಡಿಸೈನ್ ಮಾಡಿದವರು ತಂದೆ ತಯಾರಿ ಆಗಿದ್ದರೆ ಅವರಿಗೆ ಒಂದು ಪೇಪರ್ ಪೆನ್ ಕೊಟ್ಟರೆ ಮಗುವಿನ ಶರೀರ ರಚನೆಯನ್ನು ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಾಗಿ ತಂದೆ ತಾಯರು ಭಗವಂತನ ಕಾರ್ಯಕ್ಕೆ ಒಂದು ಇನ್ಸ್ಟ್ರುಮೆಂಟ್ ಅಷ್ಟೇ. ಒಬ್ಬ ಆರ್ಕಿಟೆಕ್ಟ್ ಪೆನ್ ಹಿಡಿದು ಡಿಸೈನ್ ಮಾಡ್ತಾನೆ ಅಂದ್ರೆ ಆ ಪೆನ್ನಿಗೆ ಡಿಸೈನ್ ಏನೆಂದು ತಿಳಿದಿರುವುದಿಲ್ಲ ಅದು ಆರ್ಕಿಟೆಕ್ಟ್ ಗೆ ಮಾತ್ರ ಗೊತ್ತು. ಆ ರೀತಿಯಲ್ಲಿ ಪರಮಾತ್ಮನೇ ನಿಜವಾದ ಡಿಸೈನರ್. ಅವನಿಲ್ಲದೆ ವಿಶ್ವವಿಲ್ಲ ಆದ್ದರಿಂದ ಸರ್ವೋತ್ತಮನಾದ ಜಗತ್ತಿನ ಸೃಷ್ಟಿಕರ್ತನಾದ ದೇವರು ನಮ್ಮನ್ನು ಹುಟ್ಟಿಸಿ ಅವನ ಪ್ರೇರಣೆಯಂತೆ ನಾವು ಸೇವೆ ದಾನವನ್ನು ಮಾಡಬೇಕು. ಅದಕ್ಕೆ ಫಲ ಕೊಡುವವನು ಭಗವಂತ ಎನ್ನುವ ನಂಬಿಕೆ ವಿಶ್ವಾಸ ಶ್ರದ್ಧೆ ಇಟ್ಟುಕೊಳ್ಳಬೇಕು. ಮನುಷ್ಯ ಎಲ್ಲಿದ್ದರೂ ತನ್ನನ್ನು ನೋಡುವವ ದೇವರಿದ್ದಾನೆ ಎಂಬ ಪ್ರಜ್ಞೆ ಇದ್ದರೆ ಮಾತ್ರ ಆತ ಏಕಾಂತದಲ್ಲಿಯೂ ತಪ್ಪು ಮಾಡುವುದಿಲ್ಲ. ಬಾಗಿಲು ಹಾಕಿಯೂ ತಪ್ಪನ್ನೆಸಗುವುದಿಲ್ಲ. ಆತ ಎಲ್ಲೆಡೆಯೂ ಎಲ್ಲಡಿ ಇದ್ದಾನೆ, ಎಲ್ಲವನ್ನ ತಿಳಿದಿದ್ದಾನೆ ಅವನ ಕಣ್ಣು ತಪ್ಪಿಸಿ ನಾವೇನು ಮಾಡಲು ಸಾಧ್ಯವಿಲ್ಲ ಹಾಗೇನಾದರೂ ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆ ಕೊಡುವ ಶಕ್ತಿ, ಸಾಮರ್ಥ್ಯ ಅವನಲ್ಲಿದೆ. ಅಂತಹ ಪರಮಾತ್ಮನ ಕಣ್ಣಿನಲ್ಲಿ ನಾವು ಸರಿಯಾದ ಕೆಲಸ ಮಾಡಿ ಧರ್ಮ ಮಾರ್ಗದಲ್ಲಿ ನಡೆಯಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಬದುಕು ಸಾಗಿಸಬೇಕು ಎಂದು ಅನುಗ್ರಹಿಸಿದರು.

ಇಷ್ಟೊಂದು ಧೀರ್ಘವಾಗಿ ಮಾತನಾಡಿದ ಗುರುಗಳ ಕುರಿತಾಗಿ ಮಕ್ಕಳಲ್ಲಿ ನಾನು ಕೇಳಿದಾಗ ದ್ವಿತೀಯ ಪಿಯು ವಿದ್ಯಾರ್ಥಿಯಾದ ನಂದನ್ ಕೆ ಕೌಡಿಕಿ ಶ್ರೀಗಳವರ ಹಿತೋಪದೇಶ ನಮ್ಮೆಲ್ಲರನ್ನು ಪಾವನ ಮಾಡಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತವಾದ ಮಾತುಗಳು ಹಾಗೂ ಸನಾತನ ಧರ್ಮದಲ್ಲಿರುವ ಅಗಾಧವಾದ ಜ್ಞಾನ ನಮ್ಮ ಕಣ್ಮನ ತೆರೆಸಿದೆ. ಅವರು ಮಾತನಾಡಿದ ಒಂದೊಂದು ವಿಷಯಗಳು ವಿದ್ಯಾರ್ಥಿಗಳಿಗೆ ಬಹಳ ಸೂಕ್ತ. ಇಂತಹ ಧರ್ಮ ಕೇಂದ್ರದ ಕಾರ್ಯಕ್ರಮಗಳು ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮನೋಭಾವದ ಅಭಿವೃದ್ದಿಗೆ ಕಟ್ಟಿಟ್ಟ ಬುತ್ತಿ.
ಇನ್ನೋರ್ವ ವಿದ್ಯಾರ್ಥಿಯಾದ ನಚಿಕೇತ್ ಶ್ರೀ ಗಳವರು ವಿದ್ಯಾರ್ಥಿಗಳಿಗೆ ಅವರ ಜೀವನದಲ್ಲಿ ಯಶಸ್ಸು ಸಾಧಿಸಲು ಪಾಲಿಸಬೇಕಾದ ಸಜೀವ ತತ್ವಗಳನ್ನು ಎಲ್ಲರ ಮನಮುಟ್ಟುವಂತೆ ಸಾರಿದರು. ಅಷ್ಟೇ ಅಲ್ಲದೆ ಅತ್ಯಂತ ಶ್ರೇಷ್ಠವಾದ ಸನಾತನವಾದ ಹಿಂದೂ ಧರ್ಮದ ಇತಿಹಾಸ ಸಂಸ್ಕೃತಿ ವೇದ ತತ್ವಗಳು ಶ್ರೇಷ್ಠ ಭಾರತೀಯ ಚಿಂತನೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಮುಂದಿನ ಪೀಳಿಗೆಯಲ್ಲಿ ಭಾರತದ ಭವ್ಯತೆ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಮೆರೆಸುವಂತೆ ರಾಮಾಯಣ ಮಹಾಭಾರತಗಳ ಆಧಾರದಿಂದ ಮನುಷ್ಯನು ಪರಿಪೂರ್ಣತೆ ಹೊಂದಲು ಧರ್ಮದ ಮೂಲಕವೇ ಸಾಧ್ಯ ಎಂದು ಸಾರಿದರು.
ಗುರುಗಳ ಆಶೀರ್ವಾದ ಪಡೆದದ್ದು ನಮ್ಮ ಪುಣ್ಯ. ಅವರ ಆಶೀರ್ವಚನಗಳನ್ನು ಕೇಳಿ ನನಗೆ ತುಂಬಾ ಪ್ರೇರಣೆ ಸಿಕ್ಕಿತು. ಅವರು ನೀಡಿದ ಕರ್ಮ ಬ್ರಹ್ಮಚರ್ಯದ ಮೇಲಿನ ಬೋಧನೆ ನಮ್ಮ ಮೇಲೆ ಪ್ರಭಾವ ಬೀರಿತು ಎಂಬುದು ಸನಕನ ಅಭಿಪ್ರಾಯ.
ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ಕುಮಾರಿ ಹರ್ಷಿತ ಗುರುಗಳ ಮಾತಿನಿಂದ ಪ್ರೇರಣೆಯಾದ ನಾನು ಜೀವನದಿದ್ದಕ್ಕೂ ಧರ್ಮ ಪಾಲನೆಯನ್ನು ಮತ್ತು ಹಿಂದೂ ಧರ್ಮದ ಸಂಸ್ಕಾರವನ್ನು ಎಲ್ಲೇ ಇದ್ದರೂ ಪಾಲಿಸುತ್ತೇನೆ ಮತ್ತು ಅಳವಡಿಸಿಕೊಳ್ಳುತ್ತೇನೆ. ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯವನ್ನು ಮಾಡುತ್ತೇನೆ ಎನ್ನುವ ಸಂಕಲ್ಪ ಮಾಡುವಂತೆ ಪ್ರೇರೇಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾಳೆ.
ಇನ್ನೋರ್ವ ವಿದ್ಯಾರ್ಥಿಯಾದ ಸುಹಾಸ್ ಗುರುಗಳು ಧರ್ಮದ ಪ್ರಾಮುಖ್ಯತೆಯನ್ನು ಹೇಳಿದಾಗ ನಾವು ನಡೆಸುವ ಜೀವನ ಅಪೂರ್ಣವೆನಿಸಿತು. ನಮ್ಮ ಜೀವನದ ಗುರಿ ನಾವು ತಲುಪಬೇಕಾದರೆ ಹಣ ಸಂಪಾದನೆ ಒಂದೇ ಅಲ್ಲ ಪರೋಪಕಾರ ಬಹು ಮುಖ್ಯ. ಮನುಷ್ಯತ್ವದಿಂದ ನಾವು ನಡೆದುಕೊಳ್ಳಬೇಕು ಎಂಬೆಲ್ಲ ಮಾತುಗಳನ್ನು ತಿಳಿದ ಮೇಲೆ ಧರ್ಮ ಮಾರ್ಗವನ್ನು ನಾನು ಅನುಸರಿಸಬೇಕೆಂಬ ಸಂಕಲ್ಪ ಮಾಡಿದ್ದೇನೆ.
ಒಟ್ಟಾರೆ ಹೇಳಬೇಕೆಂದರೆ ಶ್ರೀ ಶ್ರೀ ಸತ್ಯಾತ್ಮರು ನಮ್ಮ ಕಾಲೇಜಿಗೆ ಬಂದದ್ದೇ ಒಂದು ಐತಿಹಾಸಿಕ ಸಂಗತಿ ಆದರೆ, ಅವರ ಅನುಗ್ರಹ ಸಂದೇಶ ಅನೇಕ ಮಕ್ಕಳ ಮೇಲೆ ಪ್ರಭಾವ ತಪ್ಪಾಗಲಾರದು. ಈ ರೀತಿಯ ಸಂಸ್ಕಾರ ನೀಡುವ ಕಾರ್ಯಕ್ರಮ ಮಕ್ಕಳನ್ನು ಪ್ರಬೋಧಗೊಳಿಸುತ್ತದೆ. ಗುರುಗಳು ಕೇವಲ ಮಠ ಮಂದಿರಗಳಿಗೆ ಸೀಮಿತರಾಗದೇ ಸಮಾಜೋದ್ಧಾರದ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವುದು ಅವರು ಸಮಾಜಮುಖಿಯಾಗಿರುವುದನ್ನು ತೋರಿಸುತ್ತದೆ.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್
ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Senior Chamber International Organization ಪುಷ್ಪ ಎಸ್ ಶೆಟ್ಟಿಅವರಿಗೆ ‌ಸೀನಿಯರ್ ಚೇಂಬರ್ ಉನ್ನತ ಪ್ರಶಸ್ತಿ

Senior Chamber International Organization ಬ್ರಹ್ಮಾವರದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್...

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...