DC shivamogga ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾದ ಡಾ.ಕೆ.ವಿ.ತ್ರಿಲೋಕ್ ಚಂದ್ರ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಕ್ಕೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)ವನ್ನು ತಗ್ಗಿಸಲು ಹಾಗೂ ಯುವ ಮತದಾರರ ನೋಂದಣಿ ಹೆಚ್ಚಿಸಲು ಪಾರ್ಟ್ ವಾರು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದರು.
ಇಪಿ ರೇಷಿಯೋ ಜಿಲ್ಲೆಯಲ್ಲಿ 78.84 ಇದೆ. ಇದು ರಾಜ್ಯ ಸರಾಸರಿಗಿಂತ ಹೆಚ್ಚಿದೆ ಆದ್ದರಿಂದ ಎಲ್ಲ ಕ್ಷೇತ್ರವಾರು ಮತ್ತು ಪಾರ್ಟ್ವಾರು ಅಗತ್ಯವಾದ ವಿಶ್ಲೇಷಣೆ ನಡೆಸಿ ಹಾಗೂ ಇ-ಜನ್ಮ ಪೋರ್ಟಲ್‌ನಿಂದ ಮಾಹಿತಿ ಪಡೆದು ಕಡಿಮೆ ಮಾಡಬೇಕು.
ಇದೇ ರೀತಿ ಪಾರ್ಟ್ ವಾರು ವಿಶ್ಲೇಷಣೆ ಮಾಡಿ ಯುವ ಮತದಾರರ ನೋಂದಣಿಯನ್ನು ಹೆಚ್ಚಿಸಬೇಕು. ಕೆಲವೆಡೆ 20 ವರ್ಷ ತುಂಬಿದವರು ಇನ್ನೂ ನೋಂದಣಿಯಾಗಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕೆಂದರು.
ಗೈರು ಮತದಾರರು, ಮರಣ ಹೊಂದಿದ ಮತ್ತು ಇತರೆಡೆ ವರ್ಗಾವಣೆಯಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಫಾರಂ ಸಂಖ್ಯೆ 7 ಅಪ್‌ಡೇಟ್ ಆಗಬೇಕು.
ಮರಣ ಹೊಂದಿದವರ ಮಾಹಿತಿಯನ್ನು ಪ್ರತಿ ತಾಲ್ಲೂಕಿನಲ್ಲಿ ವಿಎ ಮತ್ತು ಪಿಡಿಒ ಗಳಿಂದ ಪಡೆದು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬೇಕು ಎಂದ ಅವರು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಅಗತ್ಯವಾದ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
DC shivamogga ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಆದ ಎನ್.ಹೇಮಂತ್ ಮಾತನಾಡಿ, ದಿ. 27-12-2024 ಕ್ಕೆ ಜಿಲ್ಲೆಯಲ್ಲಿ 1032 ಲಿಂಗಾನುಪಾತ ಇದೆ.
ಜಿಲ್ಲೆಯಲ್ಲಿ ಮಹಿಳೆ 746679, ಪುರುಷ 770827 ಮತ್ತು ಲಿಂಗತ್ವ ಅಲ್ಪಸಂಖ್ಯಾತ 37 ಸೇರಿ 1517543 ಮತದಾರರಿದ್ದಾರೆ. 21224 ಯುವ ಮತದಾರರು ನೋಂದಣಿಯಾಗಿದ್ದಾರೆ.
ದಿ.01-01-2025 ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಕ್ಕೆ ಕ್ರಮ ವಹಿಸಲಾಗುವುದು. ದಿ;06-01-2025 ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಚುನಾವಣಾ ತಹಶೀಲ್ದಾರ್ ಪ್ರದೀಪ್, ತಾಲ್ಲೂಕುಗಳ ತಹಶೀಲ್ದಾರರು, ತಾ.ಪಂ ಗಳ ಇಓ ಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.