Legal Services Authority ಕೌಟುಂಬಿಕ ದೌರ್ಜನ್ಯ ಕಾಯ್ದೆಯಿಂದಾಗಿ ಮಹಿಳೆಯರ ರಕ್ಷಣೆ ಮತ್ತು ಕಾಯ್ದೆಯು ಸಿವಿಲ್ ಮತ್ತು ಕ್ರಿಮಿನಲ್ ನಿಬಂಧನೆಗಳನ್ನು ಹೊಂದಿದ್ದರೂ ಸಂತ್ರಸ್ಥ ಮಹಿಳೆಯರು 60ದಿನಗಳಲ್ಲಿ ತಕ್ಷಣದ ನಾಗರೀಕ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ತಿಳಿಸಿದರು.
ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಆಲ್ಕೊಳದ ಮಲ್ಟಿಪರ್ಪಸ್ ಸೋಶಿಯಲ್ ಸೊಸೈಟಿ ಸಭಾಂಗಣದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸುರಕ್ಷತಾ ಕಾಯ್ದೆ -2005ರ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಎಂಬ ವಿಷಯದ ಕುರಿತು ವಿವಿಧ ತಾಲೂಕುಗಳ ಸಂಬಂಧಿತ ಇಲಾಖೆಗಳ ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೌರ್ಜನ್ಯಕ್ಕೊಳಗಾದ ಮಹಿಳೆಯರು ತನ್ನೊಂದಿಗೆ ಕೌಟುಂಬಿಕ ಸಂಬಂಧ ಹೊಂದಿರುವ ಯಾವುದೇ ಪುರುಷ ವಯಸ್ಕ ಅಪರಾಧಿಯ ವಿರುದ್ಧ ಈ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಬಹುದಾಗಿದೆ ಎಂದವರು ತಿಳಿಸಿದರು.
ಬಹುಮುಖ್ಯವಾಗಿ ಈ ಕಾಯ್ದೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ಇಲಾಖೆಗಳ ತಾಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಅರಿವು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಾಗಿದೆ. ಪ್ರಕರಣ ದಾಖಲಿಸುವ ಮುನ್ನ ವಿಷಯದ ಪ್ರಾಥಮಿಕ ಮಾಹಿತಿಯನ್ನು ಹೊಂದಿದ್ದು, ಪ್ರಕರಣ ಮತ್ತು ಅದರ ಸಂದರ್ಭವನ್ನು ತಿಳಿದುಕೊಳ್ಳಬೇಕು.
ಪ್ರಕರಣದ ಮುಕ್ತಾಯದ ನಂತರವೂ ಸಂತ್ರಸ್ಥ ವ್ಯಕ್ತಿಗೆ ನ್ಯಾಯ ಕೊಡಿಸಬೇಕಾದ ಬಗ್ಗೆಯೂ ಮಾಹಿತಿ ಹೊಂದಿರಬೇಕೆಂದವರು ನುಡಿದರು.
ಅಧಿಕಾರಿಗಳು ಕಾಯ್ದೆಯ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ತಕ್ಷಣದ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಹೊಂದಿರಬೇಕಲ್ಲದೇ ಕಾಯ್ದೆಯ ಸ್ವರೂಪ, ಅನುಕೂಲ ಮತ್ತು ಅನುಸರಣಾ ಕ್ರಮಗಳ ಮಾಹಿತಿ ಹೊಂದಿದ್ದು, ದೌರ್ಜನ್ಯದ ಕುರಿತು ಸ್ಪಷ್ಟವಾದ ಮಾಹಿತಿಯನ್ನು ದೂರಿನಲ್ಲಿ ದಾಖಲಿಸಬೇಕು. ಅಂತೆಯೇ ನ್ಯಾಯಾಲಯಗಳೂ ಕೂಡ ಪ್ರಕರಣವನ್ನು ಬಹುಸೂಕ್ಷ್ಮವಾಗಿ ಪರಿಶೀಲಿಸಿ ತೀರ್ಪು ನೀಡಬೇಕು ಎಂದರು.
Legal Services Authority ದೇಶದಲ್ಲಿ ಕೌಟುಂಬಿಕ ಹಿಂಸೆಯಿಂದ ದಾಖಲಾಗಿರುವ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯವೇ ಮುಂಚೂಣಿಯಲ್ಲಿರುವುದು ಅತ್ಯಂತ ನೋವಿನ ಸಂಗತಿ. – ಸಂತೋಷ್ ಎಂ.ಎಸ್., ಹಿರಿಯ ಸಿವಿಲ್ ನ್ಯಾಯಾಧೀಶರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಸ್.ನಟರಾಜ್ ಅವರು ಮಾತನಾಡಿ, ಕ್ಷುಲ್ಲಕ ಕಾರಣಗಳಿಂದಾಗಿ, ಹೊಂದಾಣಿಕೆಯ ಕಾರಣಗಳಿಂದಾಗಿ ಅನೇಕ ಪ್ರಕರಣಗಳಲ್ಲಿ ಕೌಟುಂಬಿಕ ವಿಘಟನೆಗಳು ನಡೆಯುತ್ತಿವೆ. ಬಹುಸಂಖ್ಯಾತ ಮಹಿಳೆಯರು ಕೌಟುಂಬಿಕ ಹಿಂಸೆ ಅನುಭವಿಸುವಂತಾಗಿದೆ. ವರದಕ್ಷಿಣೆ, ಆಸ್ತಿ ಹಂಚಿಕೆ, ಮತ್ತಿತರ ಕಾರಣಗಳಿಂದಾಗಿ ಮಹಿಳೆಯರಿಗೆ ಸಕಾಲಕ್ಕೆ ಸೂಕ್ತ ಸಹಾಯಹಸ್ತ ದೊರೆಯದೇ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರು.
ಪ್ರತಿ ಕುಟುಂಬದಲ್ಲಿ ಹೊಂದಾಣಿಕೆ, ನಂಬಿಕೆ ಇರಬೇಕಾದ ಅಗತ್ಯವಿದೆ. ಅಲ್ಲದೇ ಕುಟುಂಬದಲ್ಲಿ ಕಂಡುಬರುವ ಅನೇಕ ಸಮಸ್ಯೆಗಳಿಗೆ ಪರಸ್ಪರರಲ್ಲಿ ಮುಕ್ತ ಸಮಾಲೋಚನೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಚರ್ಚೆ, ಸಮಾಲೋಚನೆಗಳು ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಿವೆ ಎಂದರು.
ಕೌಟುಂಬಿಕ ಹಿಂಸೆ ನಿಯಂತ್ರಿಸುವಲ್ಲಿ ಅಧಿಕಾರಿಗಳಿಗೆ ತರಬೇತಿಯ ಮೂಲಕ ಮಾಹಿತಿ ಮತ್ತು ಅರಿವು ಮೂಡಿಸುವುದು, ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೌಟುಂಬಿಕ ಹಿಂಸೆತಡೆ ಕಾಯ್ದೆಯನ್ನು ಸಮರ್ಪಕ ಅನುಷ್ಠಾನಗೊಳಿಸಬಹುದಾಗಿದೆ. – ಬಿ.ಹೆಚ್.ಕೃಷ್ಣಪ್ಪ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ.
ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಶಿರೇಖಾ, ಮಹಿಳಾ ಪೊಲೀಸ್ ಇನ್ಸ್ಫೆಕ್ಟರ್ ಶ್ರೀಮತಿ ಕವಿತಾ ಸೇರಿದಂತೆ ಪೊಲೀಸ್, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.