klive Special Article ಗೀತಾಜಯಂತಿ ಆಚರಿಸಿ ಶ್ರೀಕೃಷ್ಣನ ಸ್ಮರಿಸಿ ಕೃತಾರ್ಥರಾದ ಈ ಹೊತ್ತಿನಲ್ಲೇ ಆವರಣದಲ್ಲಿ ಶ್ರೀಕೃಷ್ಣಲೋಕದ ಅನಾವರಣ ಎಂಬ ಟ್ಯಾಗ್ ಲೈನ್ ನಲ್ಲಿ “ಅವತರಿಸು ಬಾ” ಎಂಬ ಕುವೆಂಪು ರಂಗಮಂದಿರದಲ್ಲಿನ ಕಾರ್ಯಕ್ರಮ ಮನಸೆಳೆಯಿತು.
ಆಯೋಜಕರು ಕಾರ್ಯಕ್ರಮಕ್ಕೆ ಇಟ್ಟ ಹೆಸರಿನಿಂದಲೇ ಅರ್ಧ ಗೆದ್ದರೆಂದರೆ ತಪ್ಪಾಗಲಿಕ್ಕಿಲ್ಲ. ಆವರಣದೊಳಗೆ ಕೃಷ್ಣನ ಅನಾವರಣ ಮಾಡಿದ ರೀತಿಯಂತೂ ಹೊಸದಾದ ಭಾವ ಪ್ರಪಂಚಕ್ಕೆ ನಮ್ಮೆಲ್ಲರನ್ನೂ ಕೊಂಡೊಯ್ದಿತು. ಕಲಾರಾಧಕರಿಗೆ ವಿಶಿಷ್ಟ ರಸಾನುಭೂತಿಯಾಗಿ ಅವರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುವ ಕಾರ್ಯಕ್ರಮವಾಯಿತು ಎನ್ನುವಲ್ಲಿ ಸಂಶಯವೇ ಇಲ್ಲಾ.
ನಾನು ಕಾರ್ಯಕ್ರಮಕ್ಕೆ ಬರುವ ವೇಳೆಗೆ ರಂಗಮಂದಿರದಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಕಲಾರಸಿಕರು ಬಂದು ಸೇರಿದ್ದರು. ಸರಿಯಾದ ಸಮಯಕ್ಕೆ ಆರಂಭಿಸುವುದು ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಶಿಸ್ತು. ಅದರಂತೆ ನಿಗದಿತ ಸಮಯದಲ್ಲಿ ಆರಂಭವಾಗಿದ್ದು, ಕೃಷ್ಣನ ಜನನದಿಂದ ಆರಂಭಗೊಂಡು ಅವನ ಅಂತ್ಯದವರೆಗಿನ ಎಲ್ಲ ಪ್ರಮುಖ ಘಟನೆಗಳನ್ನೂ ಗೀತೆ, ನೃತ್ಯ, ರೂಪಕಗಳಿಂದ ಕಟ್ಟಿಕೊಡುವಲ್ಲಿ ಬಹಳ ಚಂದದ ಪ್ರಯತ್ನ ಮಾಡಿದ್ದಾರೆ.
ಕೃಷ್ಣ ಎಂದರೆ ಆಕರ್ಷಣೆ ಎನ್ನುವ ಅರ್ಥದಂತೆ ಇಡೀ ಕಾರ್ಯಕ್ರಮ ಅತ್ಯುತ್ತಮವಾಗಿ ಆಕರ್ಷಣೀಯವಾಗಿತ್ತು. ವಿದ್ಯಾಲಯದ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ಪೋಷಕರವರೆಗೂ ಇದರಲ್ಲಿ ಪಾಲ್ಗೊಂಡು ಕೃಷ್ಣ ಲೋಕದಲ್ಲಿ ತಾವು ಒಂದಾಗಿ ಪುನೀತರಾಗಿ ನೋಡುಗರಾದ ನಮ್ಮನ್ನು ಪುಳಕಿತಗೊಳಿಸಿದರು.
ಈ ರೀತಿಯ ರೂಪಕ ನನಗನ್ನಿಸಿದ ಹಾಗೆ ಶಿವಮೊಗ್ಗದ ರಂಗಮಂದಿರದಲ್ಲಿ ಇದೇ ಮೊದಲು. ನ ಭೂತೋ, ನ ಭವಿಷ್ಯತಿ… ಎಂಬ ರೂಪದಲ್ಲಿ ಸೊಬಗು ತುಂಬಿ ಕಣ್ಮನಗಳಿಗೆ ಆನಂದ ನೀಡಿತು. ಅಂದಿನ ಅನೇಕ ಸಂಗತಿಗಳು ಅದ್ಭುತವಾದ ರಸಾನುಭವ ನೀಡಿದವು.
ವೇದಿಕೆಗೆ ಹೊಂದಿಕೊಂಡಂತೆ ಇರುವ LED ವಾಲ್, ಅದರಲ್ಲಿ ಪ್ರದರ್ಶಿತವಾಗುತ್ತಿದ್ದ ಚಿತ್ರಗಳು, ವಿಡಿಯೋಗಳು, ಅದಕ್ಕೆ ಪೂರಕವಾದ ವಿವರಣೆ, ಅದರ ಧ್ವನಿ, ಅಲ್ಲದೇ ಅದಕ್ಕೆ ಹೊಂದಿಕೊಂಡಂತೆ ಮಾಡುತ್ತಿದ್ದ ನೃತ್ಯ ವಾಹ್ ಏನದ್ಭುತ ಎನಿಸುವಂತೆ ಮಾಡಿತು.
ಪ್ರತಿಯೊಂದು ಸಣ್ಣ ಸಣ್ಣ ಸೂಕ್ಷ್ಮ ಸಂಗತಿಗಳನ್ನೂ ಸಹ ಗಮನಿಸಿ ಒಂದಿನಿತೂ ಲೋಪ ಬರದಂತೆ ನೋಡುಗನಿಗೆ ನೀಡಿದ್ದು ಆಯೋಜಕರ ಪರಿಪೂರ್ಣತೆಗೆ ಹಿಡಿದ ಕನ್ನಡಿಯಾಗಿತ್ತು.
ನಾ ನೋಡಿದ್ದು ಕೃಷ್ಣ ಕಂಸ ನನ್ನು ಸಂಹಾರ ಮಾಡುವ ಸಮಯದಿಂದ… ಆ ಮುದ್ದು ಮುಖದ ಕೃಷ್ಣನ ಪಾತ್ರಧಾರಿ ಚೆನ್ನಾಗಿ ಕಂಡರೆ, ಕಂಸನ ಅಭಿನಯ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿತು. ಅದಾದ ಮೇಲೆ ಕನಕದಾಸರ ಕೀರ್ತನೆಯಾದ ರಂಗನೊಲಿದಾ ನಮ್ಮ ಕೃಷ್ಣನೊಲಿದಾ… ಅಂಗನೆ ದ್ರೌಪದಿಗೆ ಅಕ್ಷಯ ವಸ್ತ್ರವನಿತ್ತು ಎನ್ನುವುದಕ್ಕೆ ಮಾಡಿದ ರೂಪಕವಂತೂ ಅದೆಷ್ಟು ಏಕಾಗ್ರವಾಗಿ ನೋಡಿದೆನೋ… ಕಣ್ತುಂಬಿ ಬರುವಷ್ಟು ಸೊಗಸಾದ ದೃಶ್ಯ ನಿರೂಪಣೆ, ಅದರಲ್ಲಿನ ಶಕುನಿ, ಭೀಮರೇ ಮೊದಲಾಗಿ ಅದ್ಭುತ ಅಭಿನಯ ಮಾಡಿದರೆ, ದ್ರೌಪದಿಯ ಪಾತ್ರಧಾರಿಯಂತೂ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ಅಭಿನಯ ಮಾಡಿ ಗೆದ್ದಳು.
klive Special Article ಹಿಂದಿನ ಪರದೆಯಲ್ಲಿ ತೋರಿಸುವ ಚಿತ್ರಕ್ಕೂ ದ್ರೌಪದಿಯ ಪಾತ್ರಕ್ಕೂ ಬಹಳ ಸಾಮ್ಯತೆಗಳಿದ್ದವು. ಕಣ್ಣ ಮುಂದೆಯೇ ಎಲ್ಲವೂ ನಡೆಯುತ್ತಿದೆಯೇನೋ ಎನ್ನುವಂತ ರೀತಿಯಲ್ಲಿ ನಾವೇ ಮಹಾಭಾರತದ ಕಾಲಕ್ಕೆ ಹೋದ ಹಾಗೆ ಭಾಸವಾಯಿತು. ಅದರಂತೆ ನಂತರ ಹಾಡಿದ ‘ಧರ್ಮದಾ ಕ್ಷೇತ್ರಕ್ಕೆ ಕೌರವರ ಕರಿನೆರಳು ಧರ್ಮ ಉಳಿಸಲು ಮೊಳಗೆ ಶ್ರೀಪಾಂಚಜನ್ಯವು’ ಎನ್ನುವ ಗೀತೆಯ ಸಾಹಿತ್ಯವಂತೂ ಮನಮುಟ್ಟುವಂತೆ ಇತ್ತು.
ಕಥಕ್ ಶೈಲಿಯ ನೃತ್ಯಗಳಾದ ‘ನಾರಾಯಣ ರಮಾಧವನ’ ಹಾಗೂ ಕೊನೆಯಲ್ಲಿನ ‘ಬಾ ಇಲ್ಲಿ ಸಂಭವಿಸು ಇಂತೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ’ಕ್ಕೆ ಮಾಡಿದ ನೃತ್ಯ ಸಂಯೋಜನೆ ಕಲಾತ್ಮಕವಾಗಿತ್ತು.
ಬಲರಾಮರ ಅಂತ್ಯವಾಗಿ ಕೃಷ್ಣನ ಅವಸಾನಕ್ಕೆ ಬರುವಾಗಿನ ದೃಶ್ಯ ಕಟ್ಟಿಕೊಟ್ಟದ್ದು ಮತ್ತು ಅಲ್ಲಿ ಬರುವ ಮರ, ಅವನಿಗೆ ತಾಕುವ ಬಾಣ, ನಂತರ ಅವನು ಸ್ಮರಿಸುವ ತಾಯಂದಿರು ಅಲ್ಲಿ ಪೂತನಿಗೂ ನೀಡಿದ ಸ್ಥಾನ ಇವೆಲ್ಲವೂ ಸಹೃದಯರ ಕಣ್ಣಾಲಿಗಳಲಿ ನೀರು ತರಿಸದೇ ಇರಲಿಲ್ಲ…. ಒಟ್ಟಾರೆ ಹೇಳುವುದಾದರೆ ಇಡೀ ಕಾರ್ಯಕ್ರಮ ಅದರ ಪರಿಕಲ್ಪನೆ ಹೊಸತನದ ಚಿಂತನೆ, ಕೃಷ್ಣ ಲೋಕವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸಿತು.
ದಶಾವತಾರದಲ್ಲಿ ಬಹು ಮುಖ್ಯವಾದ ಹಾಗೂ ಪೂರ್ಣತೆಯನ್ನು ಹೊಂದಿರುವ ಅವತಾರವಾದ ಕೃಷ್ಣಾವತಾರವನ್ನು ಆರಂಭದಿಂದ ಕೊನೆಯವರೆಗೂ ಎಳೆ ಎಳೆಯಾಗಿ ನಾನಾ ರೀತಿಯಿಂದ ಬಿಚ್ಚಿಟ್ಟ ಪರಿಕಲ್ಪನೆ ಎಲ್ಲರ ಹೃದಯದಲ್ಲಿ ಒಂದು ಅದ್ಭುತದ ಪರಿಯನ್ನು ನೋಡಿ ಹಾಗೆ ಅದರ ಸವಿಯನ್ನು ಚಿರಕಾಲ ಮನದಂಗಳದಲ್ಲಿ ಹಸಿರಾಗಿ ಇಟ್ಟುಕೊಳ್ಳುವಂತೆ ಮಾಡಿತು.
ನಿಜವಾಗಿಯೂ ಹೇಳಬೇಕಂದ್ರೆ ಅದ್ಭುತವಾದ ಅನುಭೂತಿಗೆ ನಾವೆಲ್ಲ ಸಾಕ್ಷಿಯಾದೆವು. ಕಾರ್ಯಕ್ರಮದ ಶ್ರೇಷ್ಠತೆಯನ್ನು ಬಣ್ಣಿಸಲು ಪದಗಳು ಸಾಲುತ್ತಿಲ್ಲ ಎಂಬ ಭಾವದಿಂದಲೇ ಇಷ್ಟು ಸುಂದರವಾದ ಕಲಾತ್ಮಕವಾದ ಈ ಕಾರ್ಯಕ್ರಮವನ್ನು ಶಿವಮೊಗ್ಗದ ಜನತೆಗೆ ನೀಡಿದ, ಈ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಗುರುಗಳಾದ ವಿದ್ವಾನ್ ಅರುಣ್ ಕುಮಾರ್ ಮೊದಲಾಗಿ ಸರ್ವರಿಗೂ ಸಹ ಅನಂತಾನಂತ ಧನ್ಯವಾದಗಳು.
ಅದ್ಭುತವಾದ ನೃತ್ಯ ರೂಪಕವನ್ನು ಮಿಸ್ ಮಾಡಿಕೊಂಡವರು ಚಿಂತಿಸಬೇಕಿಲ್ಲ https://www.youtube.com/live/vidEavJPc3s?feature=shared ಈ ವೆಬ್ಸೈಟ್ನಲ್ಲಿ ಮತ್ತೆ ನೋಡಿ ಕಣ್ತುಂಬಿಸಿಕೊಳ್ಳಬಹುದು.
ನಾನಂತೂ ಅದೆಷ್ಟು ಬಾರಿ ನೋಡಿದ್ದೇನೋ… ನೀವು ನೋಡಿ ನಿಮ್ಮ ಮನೆಯ ಮಕ್ಕಳಿಗೆ ತಪ್ಪದೇ ತೋರಿಸಿ. ಭಾರತೀಯ ಸಂಗೀತ ನೃತ್ಯ ಪರಂಪರೆಯ ಶ್ರೀಮಂತಿಕೆಯನ್ನು ಅವರಿಗೂ ಪರಿಚಯಿಸಿ.
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್
ಶಿವಮೊಗ್ಗ