Reshme Batte Book .ರೇಷ್ಮೆ ಬಟ್ಟೆ ವಸುಧೇಂದ್ರ ರವರ ಈ ವರ್ಷ ಪ್ರಕಟವಾದ ಮಹತ್ವದ ಕಾದಂಬರಿ.472 ಪುಟಗಳ ಸುದೀರ್ಘ ಹಾದಿ ಕ್ರಮಿಸಿದ್ದೇ ಗೊತ್ತಾಗುವುದಿಲ್ಲ. ಅವರದ್ದೇ ಛಂದ ಪುಸ್ತಕ ಈ ಕೃತಿ ಪ್ರಕಟಿಸಿದ್ದು ಬೆಲೆ 450 ರೂಗಳು.
ಈಚೆಗೆ ವಸುಧೇಂದ್ರ ರವರ ತೇಜೋ ತುಂಗಭದ್ರ ಕಾದಂಬರಿಯ ಕುರಿತು ಮತ್ತು ಲೇಖಕರ ಕುರಿತೂ ಸಾಮಾಜಿಕ ಜಾಲತಾಣದಲ್ಲಿ ಓರ್ವರು ತುಂಬಾ ಕೆಟ್ಟದಾಗಿ ಬರೆದಿದ್ದರು. ವಸುಧೇಂದ್ರ ಜಾತಿ ಹಿಡಿದೂ ಕೀಳು ಟೀಕೆ ಮಾಡಲಾಗಿತ್ತು.ಇಂತಹದಕ್ಕೆ ಮತ್ತೊಂದು ಯಶಸ್ವೀ ಪುಸ್ತಕ ಬರೆದೇ ಉತ್ತರಿಸಿದ್ದಾರೆ ಲೇಖಕರು. ಪ್ರಕಟವಾದ ಗ್ರಂಥಗಳು ಅನೇಕವು ಲೇಖಕರ ಬೆಂಬಲಿಗರ ಪಡೆಯಿಂದ ಹೊಗಳಿಸಿಕೊಂಡು, ಪತ್ರಿಕಾ ವಿಮರ್ಶೆ ಪ್ರಕಟಿಸಿಕೊಂಡು ಸರ್ಕಸ್ ಮಾಡಿದರೂ ಅವು ಓದುಗರನ್ನು ತಲ್ಪಿರುವುದಿಲ್ಲ. ಅಂತಹ ಊರುಗೋಲು ಆಶ್ರಯಿಸದೇ ಜನರಿಗೆ ತಲ್ಪುವ ಲೇಖಕರನ್ನು ಕಂಡರೆ ಅಸೂಯೆ ಪಡುವವರು ಇಂತಹ ಬರಹ ಬರೆದು ಉತ್ಸಾಹ ಕುಗ್ಗಿಸಲು ನೋಡುತ್ತಾರೆ. ಮತ್ತೊಂದು ಗ್ರಂಥ ಪ್ರಕಟಿಸಿದ್ದು ಯಶಸ್ವಿ ಆದಾಗ ಮತ್ತಷ್ಟು ಟೀಕೆ ಸಹಜ.
ಕನ್ನಡ ಕಾದಂಬರಿಯ ಓದುಗರಿಗೆ ಈ ಹೊಸ ಕಾದಂಬರಿ ಖುಷಿ ಕೊಡುವಲ್ಲಿ ಅನುಮಾನವೇ ಇಲ್ಲ.
ಕಾದಂಬರಿಯು ಎರಡನೇ ಶತಮಾನದಲ್ಲಿ ಏಷ್ಯಾಖಂಡದಲ್ಲಿ ನಡೆದ ಸ್ಥಿತ್ಯಂತರವನ್ನು ಕಟ್ಟಿಕೊಡುತ್ತದೆ. ವಸುಧೇಂದ್ರ ಭೌಗೋಳಿಕ ಅಧ್ಯಯನದ ಜೊತೆಗೆ ಆಗಿನ ಚಾರಿತ್ರಿಕ ಸಂಗತಿ ಅಧ್ಯಯನ ಮಾಡಿ ಹೊಸದಕ್ಕೆ ಆ ಕಾಲ ತೆರೆದುಕೊಳ್ಳುವಾಗ ಆಗಿರಬಹುದಾದ ಸನ್ನಿವೇಶವನ್ನು ಕಲ್ಪಿಸಿ ಕಥೆ ಕಟ್ಟಿದ್ದಾರೆ. ಸಹಸ್ರಾರು ವರ್ಷದ ಹಿಂದಿನ ಕಥನ ಕಟ್ಟುವುದು ಸುಲಭವಲ್ಲ. ಓದುಗನನ್ನು ಗತಕ್ಕೆ ಕರೆದೊಯ್ಯಬೇಕು. ಈಗ ಓದುವಾಗ ಆ ಕಾಲದಲ್ಲೇ ಇರುವ ಅನುಭವ ಕೊಡಬೇಕು. ಬೇರೆ ಬೇರೆ ದೇಶಗಳ ಜನ,ಬೇರೆ ಬೇರೆ ಭಾಷೆ,ಧರ್ಮ, ವೃತ್ತಿ ಇತ್ಯಾದಿ ಕಲ್ಪಿಸೆಯೇ ಬರೆಯಬೇಕು. ಜನರ ಆಚಾರ ವಿಚಾರ ದೇಶ ಬದಲಾದಂತೆ ಬೇರೆ ಬೇರೆಯಾಗಿಯೇ ಚಿತ್ರಿತ ವಾಗಬೇಕು. ವಸುಧೇಂದ್ರ ಈ ಕ್ರಿಯೆಯಲ್ಲಿ ಯಶಸ್ವಿ ಆಗಿದ್ದಾರೆ.
Reshme Batte Book ಕಾದಂಬರಿಯು ಎರಡನೇ ಶತಮಾನದಲ್ಲಿ ಜಾಗತೀಕರಣ ಸೃಷ್ಟಿಸುವ ತಲ್ಲಣಗಳನ್ನು ತೆರೆದಿಟ್ಟಿದೆ.ಇದೊಂದು ಗಡಿರೇಖೆ ದಾಟಿ ಹೊಸ ಜಗತ್ತಿಗೆ ಹೊಸ ವೃತ್ತಿಗೆ ಹೊಸ ಬದುಕಿಗೆ ಸಾಗುವ ತಲೆಮಾರಿನ ಕಥೆ. ಇದ್ದ ಬದುಕನ್ನು ಬದಲಾಯಿಸಿಕೊಳ್ಳುವ ಈ ಸಾಹಸ ಆರಂಭವಾಗುವುದು ಹೆಣ್ಣಿನ ಮನಸಿನಲ್ಲಿ!. ವನಜೀವನವನ್ನೇ ತಲೆತಲಾಂತರದಿಂದ ಬಾಳಿದ್ದ ಹವಿನೇಮನಿಗೆ ಅದರಾಚೆಯ ಪ್ರಪಂಚಕ್ಕೆ ಕರೆತರುವುದು ಅವನ ಪತ್ನಿ ಸಗನೇಮಿ. ತನ್ನ ಮಗು ಋತನೇಮ ಈ ಕಾಡ ಬದುಕಲ್ಲೇ ಕಳೆದುಹೋಗದೇ ನವ ಬದುಕು ಬಾಳಬೇಕು ಎಂಬ ತಾಯಿಯ ಪ್ರಭಲ ಇಚ್ಛೆ ಆ ಕುಟುಂಬವನ್ನು ಲಕ್ಷ್ಮಣ ರೇಖೆ ದಾಟಿಸುತ್ತದೆ. ಕಾಡಿನಿಂದ ಆ ಕುಟುಂಬ ಊರಿಗೆ ಬರುತ್ತದೆ. ಇದೇ ಸಗನೇಮಿ ಮುಂದೆ ಬೌದ್ಧ ಭಿಕ್ಷು ಬುದ್ದಮಿತ್ರನನ್ನೂ ಗಡಿ ದಾಟಿಸುತ್ತಾಳೆ. ಮಹಿಳೆ ಅಂದರೆ ಸಮುದ್ರವಿದ್ದಂತೆ. ನದಿ ಸಮುದ್ರ ಸೇರಲೇ ಬೇಕು. ಬದಲಾಗಿ ಮದ್ಯವೇ ಸೊರಗಿಹೋದರೆ ಅದು ಅಪೂರ್ಣ. ಹೆಣ್ಣಿನ ಜೊತೆ ಸಮಾಗಮವೇ ಆಗದ ಸನ್ಯಾಸವೆಂದರೆ ನದಿ ತನ್ನ ಹಾದಿಯಲ್ಲೇ ಇಂಗಿ ಹೋದಂತೆ.ಇದು ಸಗನೇಮಿಯ ಸ್ಪಸ್ಟ ಅಭಿಪ್ರಾಯ. ಬುದ್ದಮಿತ್ರನಂತಹ ಮುಖ್ಯ ಭಿಕ್ಕುವಿಗೇ ಈ ಕಾಡ ಮಹಿಳೆ ಹೇಳುವ ಮಾತು ಪ್ರಭಾವಿಸಿ ಆತ ಗಡಿ ದಾಟುವಂತೆ ಮಾಡಿಸುತ್ತದೆ. ಪಾರಸೀಕ ಮಿತ್ರವಂದಕ ಕೃಷಿ ಬಿಟ್ಟು ವ್ಯಾಪಾರಕ್ಕೆ ಬರಲೂ ಆತನ ಪ್ರೇಯಸಿ ಮಧುಮಾಯಾ ಕಾರಣ ಆಗುತ್ತಾಳೆ. ತನ್ನ ಪ್ರಿಯಕರನಿಗೆ ವ್ಯಾಪಾರ ಬಂಡವಾಳ ಒದಗಿಸಲು ಆಕೆ ತನ್ನನ್ನು ತಾನೇ ಮಾರಿಕೊಳ್ಳುತ್ತಾಳೆ. ಚೈನಾದ ಯುವತಿ ಲೀಹ್ಯಾ ಸಹ ತನ್ನ ಮೇಲಿನ ದೌರ್ಜನ್ಯಕ್ಕೆ ಸೇಡುತೀರಿಸಿಕೊಂಡಿದ್ದು ಮಾತ್ರ ವಿಭಿನ್ನವಾಗಿ. ರೇಷ್ಮೆಯ ಗುಟ್ಟನ್ನು ಗಡಿ ದಾಟಿಸಲು ಅವಳೇ ಕಾರಣ.
ಮನುಷ್ಯ ಅಕ್ಷರ ಬರೆಯಲು ಕಾಗದ ಬಳಕೆ ಮಾಡಿದಾಗಲೂ ಒಂದು ಗೆರೆ ದಾಟಿ ಹೊಸ ಅಧ್ಯಾಯ ತೆರೆಯುತ್ತದೆ. ವಸ್ತುಗಳ ವಿನಿಮಯದ ಕಾಲದಿಂದ ನಾಣ್ಯದ ಕಾಲಕ್ಕೆ ಹೋಗುವಾಗಲೂ ಮತ್ತೊಂದು ಸೀಮೋಲ್ಲಂಘನವೇ. ಹೀಗೆ ಹಲವು ಸೀಮೋಲ್ಲಂಘನ ಆದಾಗ ಉಂಟಾಗುವ ಸಂಘರ್ಷ, ಸವಾಲುಗಳು,ಸಂಕಟಗಳನ್ನು ಕಾದಂಬರಿಯು ಅನಾವರಣಗೊಳಿಸಿದೆ.
ಪಾರ್ಥಿಯನ್ನರು,ಯುವನರು, ಹೂಣರು, ತುಷಾರರು, ಬೌದ್ದರು, ಚೀನೀಯರು, ಹೀಗೆ ಹಲವು ಧರ್ಮ, ಹಲವು ಆಚರಣೆ,ಹಲವು ಭಾಷೆ ಒಂದೇ ಕಾದಂಬರಿಯ ಹರಿವಿನಲ್ಲಿ ತೋರಿಸುವಾಗ ಅವರ ಭಿನ್ನತೆಯನ್ನು ಓದುವವರಿಗೆ ಕಟ್ಟಿಕೊಡುವ ಕ್ಲಿಷ್ಟ ಬರವಣಿಗೆ ಸ್ವಾರಸ್ಯ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದ್ದು ವಸುಧೇಂದ್ರರ ಸಾಮರ್ಥ್ಯ.
ಮುಂದೇನಾದೀತು ಎಂಬ ಕುತೂಹಲ ಕಾಯ್ದುಕೊಳ್ಳುವ ತಂತ್ರ ಅನುಸರಿಸುವುದು ಸವೆದ ಹಾದಿ.ಆದರೆ ಮುಂದೇನಾಗುತ್ತದೆ ಎಂದು ಹೇಳಿಯೇ ಸ್ವಾರಸ್ಯ ಉಳಿಸುವ ಹೊಸದಾರಿ ವಸುಧೇಂದ್ರರದ್ದು.
ತನ್ನ ಪ್ರಿಯಕರ ಮಿತ್ರವೃಂದಕನಿಗೆ ಆರ್ಥಿಕ ಸಹಾಯಮಾಡಲು ತನ್ನನ್ನೇ ಮಾರಿಕೊಳ್ಳುವ ಮಧುಮಾಯಾ ಚೈನಾದಲ್ಲಿ ಜೀತದಾಳಾಗಿ ಹೀ ಆಗಿ ಮಾರ್ಪಾಡಾಗಿರುತ್ತಾಳೆ. ಇತ್ತ ಅವಳ ಪ್ರಿಯಕರ ವಿವಿಧ ವ್ಯವಹಾರ ಮಾಡಿ ಮುತ್ತಿನ ವ್ಯಾಪಾರಿಯಾಗಿ ಚೈನಾದತ್ತ ಹೊರಟವ. ಅವನ ಕೋರಿಕೆ ತನ್ನ ಪ್ರಿಯತಮೆ ತನಗೆ ದೊರಕಬೇಕು ಎಂದು. ಅದನ್ನಾತ ಸುಗನೇಮಿಯ ಹತ್ತಿರ ಹೇಳಿದಾಗ ಅವಳೂ ತನ್ನ ದೇವರಿಗೆ ಮೊರೆ ಇಟ್ಟು ಅವರೀರ್ವರನ್ನು ಮತ್ತೆ ಜೊತೆಯಾಗಿಸು ಎಂದು ಪ್ರಾರ್ಥಿಸುತ್ತಾಳೆ. ಬಹುಬೇಗ ಮಧುಮಾಯಾ ಅವನಿದ್ದಲ್ಲಿಗೇ ಹುಡುಕಿಕೊಂಡು ಬಂದು ಸೇರುತ್ತಾಳೆ ಎಂದು ಅವನಿಗೆ ತಿಳಿದಿರುವುದಿಲ್ಲ ಎಂದು ಲೇಖಕರು ಹೇಳುತ್ತಾರೆ. ಓದುಗರಿಗೂ ಅವರೀರ್ವರ ಪುನರ್ ಮಿಲನದ ಸನ್ನಿವೇಶ ಸವಿಯುವ ಕಾತುರವೇನೋ ಇರುತ್ತದೆ. ಆದರೆ ಕಾದಂಬರಿಯಲ್ಲಿ ಅದರ ಚಿತ್ರಣವೇ ಇಲ್ಲ.
ಅರಸೊತ್ತಿಗೆಯಲ್ಲಿ ಸಾಮಾನ್ಯ ಜನರ ಸಂಕಟವನ್ನು ಅರಮನೆಗೆ ಭಲತ್ಕಾರವಾಗಿ ಒಯ್ಯಲ್ಪಟ್ಟ ಲೀಹ್ಯಾ ಪ್ರಕರಣ ಸಮರ್ಥವಾಗಿ ಚಿತ್ರಿಸಿದೆ. ಆಕೆ ಸೇಡು ತೀರಿಸುವ ಶಪಥ ತೊಟ್ಟೇ ಚೈನಾ ಹೊರಜಗತ್ತಿಗೆ ತೋರಿಸದೇ ಇದ್ದ ರೇಷ್ಮೆ ಉತ್ಪಾದನೆಯ ಗುಟ್ಟನ್ನು ಹೀ ಮೂಲಕ ರಟ್ಟು ಮಾಡಿಸುತ್ತಾಳೆ. ಚೈನಾದ ರಾಜ ಹೂಣರಿಗೆ ಯುದ್ದ ಮಾಡದಿರಲು ಕನ್ಯೆಯರನ್ನ ಒದಗಿಸುವ ಕರಾರಿರುತ್ತದೆ. ಹೆಣ್ಣು ಕೇವಲ ಒಂದು ಉಪಯೋಗಿಸುವ ವಸ್ತು ಪ್ರಭುತ್ವದ ದೃಷ್ಟಿಯಿಂದ. ಇದು ಶತಶತಮಾನದಿಂದಲೂ ಸ್ತ್ರೀಕುಲದ ಮೇಲೆ ನಡೆದ ದೌರ್ಜನ್ಯದ ಚಿತ್ರಣವೂ ಹೌದು.
ರೇಷ್ಮೆ ಹುಳುವಿನ ಜೀವನ ನೋಡಿದ ಲೀ ಜನಸಾಮಾನ್ಯರೂ ಈ ರೇಷ್ಮೆ ಹುಳುಗಳಂತೆ ಎಂದು ಯೋಚಿಸುವಾಗ ನಿಸಾರರ ಕುರಿಗಳು ಸಾರ್ ಕುರಿಗಳು ಕವನ ನೆನಪಾಗುತ್ತದೆ.
ಚೈನಾದ ಸಿಲ್ಕ್ ರೂಟ್ ಈ ಶತಮಾನದ ಮಹತ್ವದ ಯೋಜನೆ ಆದರೂ ಅವರು ಎರಡು ಸಾವಿರ ವರ್ಷದ ಹಿಂದೇ ಅಂತದೊಂದು ಸಿಲ್ಕ್ ರೂಟ್ ಮಾಡಿದ್ದರು ಎಂದು ಕಾದಂಬರಿ ಹೇಳುತ್ತಿದೆ. ಈ ಪ್ರಪಂಚಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆಯ ವಿವರ ಅತ್ಯಂತ ವಾಸ್ತವವಾಗಿ ಬರೆಯಲ್ಪಟ್ಟಿದೆ. ಸಾರ್ಥ ಎಂಬ ಭೈರಪ್ಪರವರ ಕಾದಂಬರಿಯನ್ನು ನೆನಪು ಮಾಡುವ ವ್ಯಾಪಾರ ದಾರಿಯ ಕ್ರಮಿಸುವಿಕೆ ಕುತೂಹಲಭರಿತವಾಗಿದೆ. ಏಷ್ಯಾಖಂಡದ ಚರಿತ್ರೆ ಆಗೂ ಕಾದಂಬರಿ ಯಶಸ್ವಿ ಆಗಿದೆ. ಕನ್ನಡದ ಕಾದಂಬರಿಯ ಲೋಕದ ಹೊಳಪಿಗೆ ರೇಷ್ಮೆಭಟ್ಟೆ ಮೆರಗು ನೀಡಿದೆ.