Village Accountant Recruitment ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಪರೀಕ್ಷೆ ನಡೆದಿದ್ದು, ಪರೀಕ್ಷೆ ಬರೆಯಲು ಹಿಜಾಬ್ ಧರಿಸಿ ಬಂದಿದ್ದ ಯುವತಿ, ಹಿಜಾಬ್ ತೆಗೆಯಲು ಒಪ್ಪದೇ ಯುವತಿ ಪೊಲೀಸರ ಜತೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ದಾವಣಗೆರೆ ನಗರದ ಎಸ್‌ಎಸ್ ಲೇಔಟ್ ನ ರಾಘವೇಂದ್ರ ಕಾಲೇಜ್ ನಲ್ಲಿ ಈ ಘಟನೆ ನಡೆದಿದೆ.
ರಾಜ್ಯದಲ್ಲಿ ಹಿಜಾಬ್ ವಿಷಯ ಭಾರೀ ಸದ್ದು ಮಾಡಿತ್ತು. ದಾವಣಗೆರೆಯಲ್ಲಿ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಪರೀಕ್ಷೆ ಆಯೋಜಿಸಿತ್ತು. ಈ ವೇಳೆ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ವಹಿಸಿತ್ತು. ಈ ಹಿನ್ನೆಲೆ ಹಿಜಾಬ್ ಧರಿಸಲು ಅವಕಾಶ ಇರಲಿಲ್ಲ.
ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅವಕಾಶ ಇಲ್ಲದಿದ್ದರೂ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಯೊಬ್ಬಳನ್ನು ತಡೆದಿದ್ದಾರೆ.
Village Accountant Recruitment ಹಿಜಾಬ್ ತೆಗೆಯಲು ಯುವತಿ ಒಪ್ಪದೆ, ಹಠ ಹಿಡಿದಿದ್ದಾಳೆ. ಆಗ ಪರಿಕ್ಷೆ ಬರೆಯಲು ಅವಕಾಶ ಮಾಡಿಕೊಡದಿದ್ದಾಗ ಹೈಡ್ರಾಮ ನಡೆಸಿದ್ದಾಳೆ. ಆ ಬಳಿಕ ಯುವತಿಯ ಕುಟುಂಬಸ್ಥರು ಕೂಡ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪೊಲೀಸರು ವಿರುದ್ಧ ವಾಗ್ವಾದ ನಡೆಸಿದ್ದಾರೆ.
ಆನಂತರ ಸ್ಥಳಕ್ಕೆ ಎಎಸ್ಪಿ ವಿಜಯಕುಮಾರ್ ಭೇಟಿ ನೀಡಿ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಪಟ್ಟು ಹಿಡಿದಿದ್ದ ಯುವತಿಯ ಮನವೊಲಿಸಿದ್ದಾರೆ. ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಹಿಜಾಬ್ ಕೂಡ ಧರಿಸುವಂತಿಲ್ಲ. ಹೀಗಾಗಿ ಪರೀಕ್ಷೆ ಕೊಠಡಿಗೆ ಯುವತಿಗೆ ಅನುಮತಿ ನೀಡಿಲ್ಲ ಎಂದು ಯುವತಿಗೆ ಪರೀಕ್ಷಾ ನಿಯಮಗಳನ್ನ ತಿಳಿಸಿ ಯುವತಿಯ ಮನವೊಲಿಸಲು ಯಶಸ್ವಿಯಾದರು. ಆ ಬಳಿಕ ಹಿಜಾಬ್ ತೆಗೆದು ಯುವತಿ ಪರೀಕ್ಷೆ ಬರೆದಿದ್ದಾಳೆ.