Shiralakoppa Police ನಾಪತ್ತೆ ಪ್ರಕರಣ ವ್ಯಕ್ತಿಯೊಬ್ಬನ ಕೊಲೆಯ ಕೇಸ್ ಆಗಿ ಬಯಲಿಗೆ ಬಂದಿದೆ. ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆ ಪೊಲೀಸರ ಬೇಧಿಸಿದ್ದು, ಈ ಸಂಬಂಧ ಸುಮೊಟೋ ಕೇಸ್ ದಾಖಲಿಸಿದ್ದಾರೆ.
ಶಿಕಾರಿಪುರ ತಾಲ್ಲೂಕು ನಾಗೀಹಳ್ಳಿ ಗ್ರಾಮದ ನಿವಾಸಿ ಕೃಷ್ಣಪ್ಪ ಕೊಲೆಯಾದವನು. ಈತನ ಮೃತದೇಹವನ್ನು ಕೂಡ ಛಿದ್ರ ಛಿದ್ರ ಮಾಡಿ ನದಿಗೆ ಎಸೆಯಲಾಗಿದೆ.
ಪ್ರಕರಣದ ಸಂಬಂಧ ಶಿರಾಳಕೊಪ್ಪ ಪೊಲೀಸರು ಮೂವರ ವಿರುದ್ಧ ಎಫ್ ಐ ಆರ್ ಮಾಡಿದ್ದಾರೆ.
ಕೊಲೆ, ಸಾಕ್ಷ್ಯ ನಾಶ, ಕ್ರಿಮಿನಲ್ ಸಂಚು ಆರೋಪಗಳನ್ನು ಹೊರಿಸಲಾಗಿದೆ.
ಸೆಪ್ಟೆಂಬರ್ 7 ರಂದು ಈ ಘಟನೆ ನಡೆದಿದೆ. ಆದರೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಪತ್ತೆ ಪ್ರಕರಣ ದಾಖಲಾದ ಬಳಿಕ. ನಾಗೀಹಳ್ಳಿ ನಿವಾಸಿ 33 ವರ್ಷದ ಕೃಷ್ಣಪ್ಪ ಎಂಬವರ ಪತ್ನಿ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ತಮ್ಮ ಪತಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ಕೃಷ್ಣಪ್ಪರ ಪತ್ನಿ ನೀಡಿದ ಸಂಶಯದ ಸುಳಿವನ್ನು ಆಧರಿಸಿ ನಾಗೀಹಳ್ಳಿ ಗ್ರಾಮದ ಕಿರಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃಷ್ಣಪ್ಪನ ಕೊಲೆಯ ರಹಸ್ಯ ಬಯಲಾಗಿದೆ.
ಎಫ್‌ಐಆರ್ ಪ್ರಕಾರ, ಕೃಷ್ಣಪ್ಪನ ಪತ್ನಿ ಜೊತೆ ಕಿರಣ್ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ ಎಂದು ದೂರಲಾಗಿದೆ. ಇದೇ ವಿಚಾರದಲ್ಲಿ ಕೃಷ್ಣಪ್ಪ ಕಿರಣನನ್ನು ಕರೆದು ಬೈದು ಎಚ್ಚರಿಕೆ ನೀಡಿದ್ದನಂತೆ. ಈ ಕಾರಣಕ್ಕೆ ಕೃಷ್ಣಪ್ಪನನ್ನೇ ಕೊಲೆ ಮಾಡಲು ನಿರ್ಧರಿಸಿದ ಕಿರಣ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್ ಹಾಗೂ ಗಣೇಶನ ಸಹಾಯ ಪಡೆದಿದ್ದಾನೆ. ಕೊಲೆಯ ಸ್ಕೆಚ್ ರೂಪಿಸಿಕೊಂಡ ಕಿರಣ, ಕಂದ್ಲಿ ಹಾಗೂ ಕುಡುಗೋಲು ಮತ್ತು ಪ್ಲಾಸ್ಟಿಕ್ ಕೊಪ್ಪೆಗಳನ್ನು ಬೈಕ್‌ವೊಂದರ ಬ್ಯಾಗ್‌ನಲ್ಲಿ ಇರಿಸಿಕೊಂಡು ಕೊಲೆ ಮಾಡಲು ಮುಂದಾಗಿದ್ದಾನೆ.
Shiralakoppa Police ತನ್ನ ಸ್ನೇಹಿತರಾದ ಗಣೇಶ ಹಾಗೂ ಪ್ರತಾಪನ ಮೂಲಕ ಕೃಷ್ಣಪ್ಪನಿಗೆ ಬೇರೆ ಊರಿನಲ್ಲಿ ಚೆನ್ನಾಗಿ ಕುಡಿಸಿ ತಡರಾತ್ರಿ ಗ್ರಾಮಕ್ಕೆ ವಾಪಸ್ ಕರೆ ತರುವಂತೆ ಹೇಳಿದ್ದೇನೆ. ಆತನ ಸ್ನೇಹಿತರು ಸಹ ಕಿರಣನ ಪ್ಲಾನಿನಂತೆ ಕೃಷ್ಣಪ್ಪನಿಗೆ ಚೆನ್ನಾಗಿ ಕುಡಿಸಿ ನಾಗಿಹಳ್ಳಿ ಕ್ರಾಸ್ ಬಳಿಗೆ ಕರೆತಂದಿದ್ದಾರೆ. ಅಲ್ಲಿಗೆ ಬಂದ ಕಿರಣ ಕೃಷ್ಣಪ್ಪನಿಗೆ ಹೊಡೆದು, ಬೈದು ನಂತರ ಕುಡುಗೋಲಿನಿಂದ ಕುತ್ತಿಗೆಗೆ ಏಟು ಕೊಟ್ಟಿದ್ದಾನೆ. ಆ ಬಳಿಕ ಅಲ್ಲಿಯೇ ಇದ್ದ ಗುಂಡಿಯೊಂದಕ್ಕೆ ಕೃಷ್ಣಪ್ಪನನ್ನು ಶಿಫ್ಟ್ ಮಾಡಿ ಆತನ ಅಂಗಾಂಗಗಳನ್ನು ಕತ್ತರಿಸಿ ಎರಡು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿಕೊಂಡಿದ್ದಾರೆ. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನು ಹಿಡಿದು ಕೊರಟೆಗೆರೆ , ಚಿಕ್ಕೇರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್ ಬಳಿಗೆ ತೆರಳಿದ್ದಾರೆ. ಅಲ್ಲಿ ನದಿಗೆ ಎರಡು ಚೀಲದಲ್ಲಿದ್ದ ಕೃಷ್ಣಪ್ಪನ ಅಂಗಾಂಗಗಳನ್ನು ಸುರಿದು ಪರಾರಿ ಆಗಿದ್ದಾರೆ.