S N. Channabasappa ಶಿಕ್ಷಣ ಅತ್ಯಂತ ಮಹತ್ವವಾದ ಕ್ಷೇತ್ರ. ಶಿಕ್ಷಣದ ಮೌಲ್ಯದಿಂದಲೇ ಸಮಾಜದ ಉದ್ದಾರ ಸಾಧ್ಯವಾಗಿದ್ದು ಮೌಲ್ಯಾಧಾರಿತ ಶಿಕ್ಷಣಕ್ಕೆ ಇನ್ನಷ್ಟು ಶಕ್ತಿ ತುಂಬಬೇಕೆಂದು ಶಾಸಕರಾದ ಎಸ್ ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಉಪ ನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಅವರು ಬ್ರಿಟಿಷರು ಸೇರಿದಂತೆ ಯಾರೇ ಆಗಲಿ ಭಾರತೀಯ ಪರಂಪರೆಯನ್ನು ಅಧ್ಯಯನ ಮಾಡದೇ ನಮ್ಮ ದೇಶವನ್ನು ಟೀಕಿಸಬೇಡಿ ಎಂದು ಉತ್ತರ ನೀಡಿದವರು.
ಪ್ರಸ್ತುತ ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣಕ್ಕೆ ಇನ್ನಷ್ಟು ಶಕ್ತಿ ನೀಡಬೇಕು. ಶಿಕ್ಷಕರ ಉತ್ತಮ ಸಾಧನೆಗಾಗಿ ಇಂದು ಪ್ರಶಸ್ತಿ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಗಿದೆ. ಎಲ್ಲ ಶಿಕ್ಷಕರು ಅತ್ಯುತ್ತಮ ಕೆಲಸ ಮಾಡಿದ್ದು ಪ್ರಶಸ್ತಿ ಪ್ರದಾನ ಒಂದು ಸಾಂಕೇತಿಕ ಮಾತ್ರ ಎಂದರು.
S N. Channabasappa ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಮಹಾನ್ ವ್ಯಕ್ತಿಗಳನ್ನು ರೂಪಿಸುವ ಅವಕಾಶ ಶಿಕ್ಷಕರಿಗೆ ಇದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು. ಇಡೀ ದೇಶವನ್ನು ಸಂರಕ್ಷಿಸುವ, ಸಭ್ಯ ಸಮಾಜ ನಿರ್ಮಿಸುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಶಕ್ತಿ ಶಿಕ್ಷಕರಲ್ಲಿ ಇದೆ. ನಮ್ಮ ಸಂಸ್ಕೃತಿಯನ್ನು, ಸಂಸ್ಕಾರವನ್ನು ಹಾಗೂ ಮಕ್ಕಳು ಏನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಶಿಕ್ಷಕರು ಮನವರಿಕೆ ಮಾಡಿಕೊಡಬೇಕು. ಮಕ್ಕಳು ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಅದಕ್ಕಾಗಿ ಬಳಸುವ ಪದಗಳ ಬಗ್ಗೆ, ನಡೆ, ನುಡಿ ಬಗ್ಗೆ ಶಿಕ್ಷಕರು ಎಚ್ಚರಿಕೆಯಿಂದ ಇರಬೇಕು. ನಾನು ಸಭ್ಯ ಆಗಿದ್ದಾಗ ಮಾತ್ರ ಸಭ್ಯರನ್ನು ರೂಪುಗೊಳ್ಳಿಸಬಹುದು. ಶಿಕ್ಷಕರು ಆದರ್ಶ ವ್ಯಕ್ತಿಯಾಗಿರಬೇಕು. ಬದುಕು ಮತ್ತು ಬೋಧನೆ ಒಂದಾದಾಗ ಉತ್ತಮ ವಿದ್ಯಾರ್ಥಿಗಳನ್ನು ತಯಾರಿ ಮಾಡಬಹುದು. ಕಲಿಸುವುದು ಒಂದು ಕಲೆ. ಮಕ್ಕಳನ್ನು ಸ್ಫೂರ್ತಿಗೊಳಿಸಿ, ಆಸಕ್ತಿ ಮೂಡಿಸಿ ಪಾಠ ಮಾಡಬೇಕು ಎಂದರು. ಬದುಕು ಕಟ್ಟಿಕೊಡುವ ಶಕ್ತಿ ಗುರುಗಳಿಗೆ ಇರುತ್ತದೆ. ಶಿಕ್ಷಕರು ಕರ್ತವ್ಯ ಕೇವಲ ಶಾಲೆಯಲ್ಲಿ ಮಾತ್ರ ಇರುವುದಿಲ್ಲ. ಪೂರ್ವತಯಾರಿ ಮಾಡಿಕೊಂಡೇ ತರಗತಿಗೆ ಹೋಗಬೇಕೆಂದು ಕಿವಿಮಾತು ಹೇಳಿದ ಅವರು ಕೇವಲ ಅಕ್ಷರ ಕಲಿಸಿದರೆ ಸಾಲದು ವಿನಯ, ವಿದ್ಯೆ, ದಯೆ, ಸಭ್ಯತೆ, ಸಜ್ಜನಿಕೆ, ಪ್ರಾಮಾಣಿಕತೆ, ತ್ಯಾಗದಂತಹ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳಲ್ಲಿ ವಿವೇಕ ಬಿತ್ತಬೇಕು ಎಂದು ಹೇಳಿದರು..
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವುದು ಹೆಮ್ಮೆ ಎನಿಸುತ್ತಿದೆ. ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿರಬೇಕು. ಶಿಕ್ಷಕ ವೃತ್ತಿ ಎಲ್ಲರ ಜೀವನ ಬೆಳೆಸುವ ಶ್ರೇಷ್ಠ ವೃತ್ತಿ. ನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರನ್ನು ನಾವು ಸ್ಮರಿಸಲೇ ಬೇಕು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ನಾವುಗಳು ಸದನದಲ್ಲಿ ಶಿಕ್ಷಣ ವ್ಯವಸ್ಥೆ, ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ನಮ್ಮ ಆಡಳಿತ ಸಾಮಾನ್ಯ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ನೀಡಿದಲ್ಲಿ ಭವಿಷ್ಯ ಉತ್ತಮವಾಗಿರುತ್ತದೆ. ಪ್ರಸ್ತುತ ಶಿಕ್ಷಕರು ವಿದ್ಯಾರ್ಥಿಗಳಸನ್ನು ಭಾವನಾತ್ಮಕವಾಗಿ ಜೋಡಿಸುವ ಕೆಲಸ ಮಾಡಬೇಕು. ಹಾಗೂ ನೀತಿಪಾಠಗಳು ಆಗಬೇಕೆಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಸತ್ಯದೆಡೆ, ಬೆಳಕಿನೆಡೆ, ಅಮರತ್ವದ ಕಡೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿ ಗುರುಗಳಿಗಿದೆ. ಪಾಠ ಮಾಡುವ ಶಿಕ್ಷಕರು ತಮ್ಮ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಸಲಹೆಗಳನ್ನು ನೀಡಿದರು.
ವಿಧಾನ ಪರಿಷತ್ ಶಾಸಕರಾದ ಎಸ್.ಎಲ್ ಭೋಜೇಗೌಡ ಮಾತನಾಡಿ, ಪ್ರಶಸ್ತಿಗಳ ಗುಣಮಟ್ಟ ಕಾಪಾಡಬೇಕು. ಪ್ರಶಸ್ತಿ ಆಯ್ಕೆ ಮಾನದಂಡಗಳನ್ನು ಅನುಸರಿಸಿ ಪ್ರಶಸ್ತಿಗಳನ್ನು ನೀಡಬೇಕು. ಹಾಗೂ ಪ್ರಶಸ್ತಿಯ ಮೌಲ್ಯ ಉಳಿಸುವ ಕೆಲಸ ಮಾಡಬೇಕು. ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕಿದೆ. ಶಿಕ್ಷಕರ ಜೊತೆ ನಾವಿದ್ದೇವೆ. ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಉತ್ತಮ ಶಿಕ್ಷಕ ಪ್ರಶಸ್ತಿ ಮಾನದಂಡಗಳಲ್ಲಿ ಕೆಲವು ಬದಲಾವಣೆ ಆಗಬೇಕು. ಶಿಕ್ಷಕರ ಸಾಧನೆಯ ಡಾಂಕ್ಯುಮೆAಟರಿ ಮಾಡಿ ತೋರಿಸಿದಲ್ಲಿ ಅದು ಇತರರಿಗೆ ಮಾದರಿ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ 2024-25 ನೇ ಸಾಲಿನಲ್ಲಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ 21 ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಹೆಚ್. ಎಸ್.ಸುಂದರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಮಂಜುನಾಥ್, ಬಿಇಓ ರಮೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.