ಲೇ. ನಾಗೇಂದ್ರ.ಪತ್ರಕರ್ತರು.ಶಿವಮೊಗ್ಗ
Klive Special Article ಸ್ನೇಹಿತ್ರೆ, ಭಾನುವಾರ ಸಂಜೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗದ ನೇಟಿವ್ ಥಿಯೇಟರ್ ಸಂಸ್ಥೆ ಹಾಗೂ ಮೈಸೂರು ರಂಗಾಯಣ ರೆಪೆರ್ಟರಿ ಪ್ರಯೋಗಿಸಿದ ನಾಟಕವೇ ‘ಗೋರ್ ಮಾಟಿ’, ಇದು ಬರೀ ನಾಟಕವಾಗಿರದೇ ಬಂಜಾರರ ಐತಿಹಾಸಿಕ ಹಿನ್ನೆಲೆ, ಕಲೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಚರಣೆ, ಸಂಪ್ರದಾಯ, ಆಚಾರ-ವಿಚಾರ, ಬದುಕು-ಭವಣೆಗಳ ಸಂಕಥನವಾಗಿರುವುದು ವಿಶೇಷ.
ಸಿ.ಬಸವಲಿಂಗಯ್ಯನವರ ಪರಿಕಲ್ಪನೆ, ಸಂಗೀತ, ನಿರ್ದೇಶನದೊಂದಿಗೆ, ಡಾ.ಶಿರಗಾನಹಳ್ಳಿ ಶಾಂತನಾಯಕ್ ರವರ ನಾಟಕ/ರಂಗರೂಪದೊಂದಿಗೆ, ನಂದಿನಿ.ಕೆ.ಆರ್ ರವರ ಸಹ ನಿರ್ದೇಶನ ಮತ್ತು ರಂಗಪಠ್ಯದೊಂದಿಗೆ, ಗೀತಾ ಮೋoಟಡ್ಕರವರ ರಂಗ ನಿರ್ವಹಣೆಯೊಂದಿಗೆ ನಾಟಕವು ಬಲು ಸೊಗಸಾಗಿ ಮೂಡಿ ಬಂದಿತು. ಈ ನಾಟಕದಲ್ಲಿ ಶಾಂತನಾಯಕ್ ರವರ ‘ಗೋರ್ ಮಾಟಿ’ ಕಾದಂಬರಿಯ ಕೆಲವು ಅಧ್ಯಾಯಗಳನ್ನು ಹಾಗೂ ಬಿ.ಟಿ.ಲಲಿತಾನಾಯಕ್ ರವರ ‘ತಾಂಡಾಯಣ’ ಮತ್ತು ‘ಹಬ್ಬ ಮತ್ತು ಬಲಿ’ ಸಣ್ಣ ಕಥೆಗಳ ಜೊತೆಗೆ ಚರಿತ್ರೆಯಲ್ಲಿ ಮುಖ್ಯವಾಗಿರುವ ಲಕ್ಕಿಸಾ ಬಂಜಾರ ಹಾಗೂ ವಸಾಹತುಶಾಹಿಯಡಿಯಲ್ಲಿ ಬಂಜಾರರ ದಮನಿತ ಸಂಕಥನಗಳನ್ನು ಹಾಗೂ ಸಂತ ಸೇವಾಲಾಲರ ಧರ್ಮ ಬೋಧನೆಯ ಅಂಶಗಳನ್ನು ಬೆಸೆಲಾಗಿದೆ.
‘ಗೋರ್ ಮಾಟಿ’ ಎಂದರೆ ನಮ್ಮವರು ಎನ್ನುವ ಒಳಗೊಳ್ಳುವಿಕೆಯ ಅರ್ಥದ ಹಿನ್ನೆಲೆಯಲ್ಲಿ ಬಳಸಲಾಗಿದ್ದು, ಸುಮಾರು 2 ಗಂಟೆ 15 ನಿಮಿಷಗಳ ಈ ನಾಟಕವು ಕೃಷ್ಣನ ಗೊಲ್ಲ ಕಥೆಯಿಂದ ಹಿಡಿದು ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಅಕ್ಷರಸ್ಥ ಬಂಜಾರರ ಬದುಕಿನವರೆಗೂ ಪ್ರೇಕ್ಷಕರನ್ನು ಎಲ್ಲಿಯೂ ಅಲುಗಾಡದಂತೆ ಹಿಡಿದಿಟ್ಟುಬಿಡುತ್ತದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹರಡಿಕೊಂಡಿರುವ ಬಂಜಾರ ಅಲೆಮಾರಿ ಬುಡಕಟ್ಟು ಸಮುದಾಯವು ಹೇಗೆ ಅನೇಕ ಶತಮಾನಗಳ ಹೋರಾಟದಿಂದ ತಮ್ಮ ನೆಲೆಯನ್ನು ಕಂಡುಕೊಳ್ಳಲು ಹೆಣಗಾಡಿತು ಎಂಬುವ ದೃಶ್ಯರೂಪ ಈ ಸಂಕಥನದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ.
“ಜನನ ಮರಣಗಳ ವೃತ್ತಾಕಾರ” ಎಂಬ ಹಾಡಿನಿಂದ ಪ್ರಾರಂಭವಾಗುವ ಈ ನಾಟಕವು ಚಾರ್ಲಿ ಚಾಪ್ಲಿನ್ ನಂತಹ ಮೇರು ನಟರೂ ಸಹ ಬಂಜಾರ ಸಮುದಾಯದವರೇ ಎಂದು ತೋರಿಸುತ್ತದೆ. ಹಾಡಿನ ನಂತರ ಕೃಷ್ಣನ ಗೊಲ್ಲ ಕಥೆಯಲ್ಲಿ ಒಂದು ಅದ್ಭುತವಾದ ಡೈಲಾಗ್ ಬರುತ್ತೆ. “ಜಗದೋದ್ಧಾರದ ಕಾಯಕದಲ್ಲಿ ಜನಾಂಗಗಳು ಜಾತಿಗಳಾಗದೇ ಜಗದ ಜ್ಯೋತಿಗಳಾಗಲಿ…..” ಎಂದು. ಭವಿಷ್ಯಃ ಈ ಕೃಷ್ಣ ವಾಣಿಯು ಪ್ರಪಂಚದ ಎಲ್ಲಾ ಜಾತಿ-ಜನಾಂಗಗಳಿಗೂ, ಇಡೀ ಮಾನವ ಕುಲಕ್ಕೂ ಎಂದೆಂದಿಗೂ ಅನ್ವಯವಾಗುವ ವಾಣಿ.
ತದನಂತರ ಲಕ್ಕಿಸಾ ಬಂಜಾರರ ಇತಿಹಾಸ ಹಾಗೂ ಸಿಕ್ಕರ ಇತಿಹಾಸವನ್ನೂ ಈ ರಂಗರೂಪಕದಲ್ಲಿ ಹಾಡು ಹಾಗೂ ನೃತ್ಯಗಳ ಮೂಲಕ, ವಿಶೇಷವಾಗಿ ಪರದೆಯ ಮೇಲೆ ಗೊಂಬೆಗಳ ನೆರಳಿನ ಆಟದೊಂದಿಗೆ ತೋರಿಸಿರುವುದು ಅತ್ಯಂತ ಕ್ರಿಯಾತ್ಮಕ ಸಂಗತಿಯಾಗಿದೆ. ತದನಂತರ ನಿಧಾನವಾಗಿ ಬಂಜಾರರ ಮಕ್ಕಳು ಶಾಲೆಗೆ ಹೋಗಿ ಅಕ್ಷರಭ್ಯಾಸ ನಡೆಸುವ ಸಂದರ್ಭದಲ್ಲಿ ವಿದ್ಯಾಭ್ಯಾಸವನ್ನು ನಡೆಸಬಾರದು ಎಂದು ತಾಂಡಾದ ನಾಯಕರು ಬಂದೂಕಿನಿಂದ ಹೆದರಿಸಿ ಬಂಜಾರ ಸಮುದಾಯವು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗುವ ಇತಿಹಾಸದ ಹಿನ್ನೆಲೆ ಹಾಗೂ ಇದರ ತತ್ಪರಿಣಾಮವಾಗಿ ಬಂಜಾರರ ಮೇಲೆ ಬ್ರಿಟಿಷರ ದಬ್ಬಾಳಿಕೆ, ಬ್ರಿಟಿಷ್ ಸರ್ಕಾರದ ಕಂದಾಯ ಇಲಾಖೆಯಿಂದ ಬರುವ ಪತ್ರ, ಅಕ್ಷರ ಜ್ಞಾನವಿಲ್ಲದೆ ಅದನ್ನು ಓದಲೂ ಆಗದೇ ಹೆಣಗಾಡುವ ಬಂಜಾರರ ಪರಿಸ್ಥಿತಿ, ತಾಂಡಾದಲ್ಲಿರುವ ಅಕ್ಷರಸ್ಥ ತುಳಸಿರಾಮನ ಸಹಾಯ ಪಡೆದು ಪತ್ರದಲ್ಲಿ ಬಂಜಾರ ಸಮುದಾಯ ಬದುಕುತ್ತಿರುವ ನೂರು ಎಕರೆ ಭೂಮಿಯೂ ಸರ್ಕಾರದ ವಶವಾಗಿರುವ ಆಘಾತಕಾರಿ ಸಂಗತಿ, ಮತ್ತೆ ಬಂಜಾರರು ನೆಲೆಯಿಲ್ಲದೆ ಹೆಣಗಾಡುವ ರೀತಿ ಈ ಎಲ್ಲಾ ದೃಶ್ಯ ರೂಪಕಗಳನ್ನು ನಾಟಕದಲ್ಲಿ ನೋಡುವಾಗ ಅನಿಸಿದ್ದು, “ಇಷ್ಟೆಲ್ಲಾ ಬವಣೆಗಳನ್ನು ಅನುಭವಿಸಿದ ಬಂಜಾರ ಸಂಸ್ಕೃತಿಯನ್ನು ಅದು ಹೇಗೆ ಇತಿಹಾಸ ಮರೆತುಬಿಟ್ಟಿದೆ” ಎಂದು.
ಇದರ ನಂತರ ಬಂಜಾರರ ಅತಿ ಮುಖ್ಯವಾದ ಐತಿಹಾಸಿಕ ಚರಿತ್ರೆಯಾದ ಸಂತ ಸೇವಾಲಾಲರ ಚರಿತ್ರೆ ಹಾಗೂ ಬಂಜಾರರ ರಕ್ಷಣೆಗಾಗಿ ಸಂತ ಸೇವಾಲಾಲರು ಆಜನ್ಮ ಬ್ರಹ್ಮಚಾರಿಯಾದ ಕಥೆಯನ್ನು ನೃತ್ಯ-ಲಾವಣಿಗಳಲ್ಲಿ ತೋರಿಸಿರುವುದಂತೂ ಬಲು ರೋಚಕವಾಗಿದೆ. ಆಹಾರ ಪದಾರ್ಥ, ಧವಸ-ಧಾನ್ಯ, ಅಕ್ಕಿ, ಉಪ್ಪು, ಯುದ್ಧ ಸಾಮಗ್ರಿಗಳನ್ನು ಸಾಗಿಸುವ ವ್ಯಾಪಾರಿ ಪ್ರವೃತ್ತಿಯುಳ್ಳ ಬಂಜಾರರು ಎಲ್ಲಿ ಸಿಗುತ್ತದೆಯೋ ಅಲ್ಲಿಯೇ ತಮ್ಮ ತಾಂಡಾಗಳನ್ನು ಹೂಡುತ್ತಿದ್ದರು. ಕಾಲಕ್ರಮೇಣ ವಿದ್ಯಾಭ್ಯಾಸವನ್ನು ಪಡೆದು ಅಕ್ಷರಾಭ್ಯಾಸವನ್ನು ಕಲಿತ ಬಂಜಾರರು ತಮ್ಮ ಸ್ವಂತ ತಾಂಡಾಗಳನ್ನು ಪಡೆದು ಕೃಷಿ-ಪಶುಸಂಗೋಪನೆ ಪ್ರಾರಂಭಿಸಿದರು. ಆದರೂ ಭೂ ಮಾಲೀಕರು, ಆಳುವ ವರ್ಗ, ಗೂಂಡಾಗಳು, ಬ್ರಿಟಿಷ್ ಸರ್ಕಾರ ಕೊಡುವ ಕಿರುಕುಳ, ದಬ್ಬಾಳಿಕೆಗಳಿಂದ ಸಮಾಜದಲ್ಲಿ ಜೀತದಾಳು ಪದ್ಧತಿಯ ಭೀಕರತೆಯನ್ನು ಸಹ ಅತ್ಯಂತ ಅಚ್ಚುಕಟ್ಟಾಗಿ ಇಲ್ಲಿ ತೋರಿಸಲಾಗಿದೆ.
Klive Special Article ಇದರ ನಂತರ ಹುಡುಗನಿಗೆ ಮದುವೆಯಾಗಿ ಮಕ್ಕಳಿದ್ದರೂ ಸಹ ಅದೇ ತಾಂಡಾದ ಮತ್ತೊರ್ವ ಕನ್ಯೆ ಹುಡುಗನನ್ನು ನೋಡಿ ಪ್ರೇಮಿಸುವುದು, ಇದಕ್ಕೆ ಸಮಾಜದ ವಿರೋಧ, ಪಂಚಾಯಿತಿಯಲ್ಲಿ ಅವರು ಒಟ್ಟಿಗೆ ಬದುಕಲು ಸಿಗುವ ಸಮ್ಮತಿ ಇವೆಲ್ಲವೂ ಸಹ ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಆಗದಂತೆ ನೋಡಿಕೊಳ್ಳುತ್ತವೆ.
ಇನ್ನೂ ಬರೆಯುತ್ತಾ ಹೋದರೆ ಸಾಕಷ್ಟಿದೆ ಈ ನಾಟಕದ ಬಗ್ಗೆ, ನಾಟಕದ ಕೊನೆಯಲ್ಲಿ ಪ್ರಸ್ತುತ ತಾಂಡಾಗಳಿಂದ ಹೊರ ಬರುತ್ತಿರುವ ಅಕ್ಷರಸ್ಥ ಬಂಜಾರರು ನಗರಗಳಲ್ಲಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುತ್ತಿರುವ ದೃಶ್ಯ ಕಂಡುಬರುತ್ತದೆ. ಹಾಗೆಯೇ ಬಂಜಾರರನ್ನು ಇತಿಹಾಸ ಹೇಗೆ ಮರೆಯಿತು ಎಂಬ ಪ್ರಶ್ನೆಗೆ ಇತಿಹಾಸ ಇನ್ನೂ ಅವರನ್ನು ಮರೆತಿಲ್ಲ ಎಂಬ ಉತ್ತರ ಈ ಮುಂದಿನ ಸಾಲುಗಳಲ್ಲಿ ಸಿಕ್ಕಿತು. “ಭವಿಷ್ಯಃ ಶತಶತಮಾನಗಳಿಂದ ಅನುಭವಿಸಿದ ಬವಣೆಗಳು, ಸಂಕಟಗಳು, ದಬ್ಬಾಳಿಕೆಗಳು, ಕಷ್ಟಗಳನ್ನು ಮೆಟ್ಟಿ ಇಂದಿಗೂ ಗಟ್ಟಿಯಾಗಿ ನಿಂತಿರುವ ಬಂಜಾರ ಸಮುದಾಯದ ಸಾಂಸ್ಕೃತಿಕ ಪರಂಪರೆಗೆ, ಅವರ ಕರಕುಶಲತೆಗೆ 2023 ರಲ್ಲಿ ಹಂಪಿಯಲ್ಲಿ ನಡೆದ G-20 ಶೃಂಗಸಭೆಯಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಜಾಗ ಸಿಗುವ ಮುಖಾಂತರ ಬಂಜಾರ ಸಂಸ್ಕೃತಿಗೆ ಜಾಗತಿಕ ಮನ್ನಣೆ ಸಿಕ್ಕಿರುವುದು ಇವೆಲ್ಲದರ ಫಲಶ್ರುತಿ ಎಂಬುದು ಸುಳ್ಳಲ್ಲ”, ಈ ಅದ್ಬುತ ನಾಟಕದಿಂದ ಬಂಜಾರ ಸಂಸ್ಕೃತಿಯ ಬಗ್ಗೆ ಕೇವಲ ಎರಡು ಗಂಟೆಗಳಲ್ಲಿ ಆಳವಾದ ಅಧ್ಯಯನ ಮಾಡಲು ಸಾಧ್ಯವಾಯಿತು ಎಂದರೆ ಅದು ಅತಿಶಯೋಕ್ತಿಯಾಗಲಾರದು.
ಚಿತ್ರಕೃಪೆ : ಸ್ಪಂದನ ಚಂದ್ರು, ಶಿವಮೊಗ್ಗ.
ಬರಹ : ನಾಗೇಂದ್ರ.ಟಿ.ಆರ್, ಪತ್ರಕರ್ತರು, ಶಿವಮೊಗ್ಗ.
6362570396