Narendra Modi ಪ್ರಧಾನಿ ನರೇಂದ್ರ ಮೋದಿ ಎಸ್‌ಸಿಎಸ್‌ಟಿ, ಅಲೆಮಾರಿ ಮತ್ತು ಶೋಷಿತ ವರ್ಗದ ಪರ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಬೆರಳೆಣಿಕೆಯಷ್ಟು ಶ್ರೀಮಂತರ ಪರ ಯೋಜನೆ ಮಾಡಿದ್ದಾರೆ.
ಶೇ. ೫೦ರಷ್ಟಿರುವ ಜನರ ಸಂಪತ್ತು ಶೇ. ೫೦ರಿಂದ ೪೦ಕ್ಕಿಳಿದಿದೆ. ಅದೇ ಶೇ. ೧ರಷ್ಟಿರುವ ಶ್ರೀಮಂತರ ಸಂಪತ್ತು ಶೇ. ೬೫ಕ್ಕೇರಿದೆ. ಇದು ಮೋದಿ ಬಹುಸಂಖ್ಯಾತರ ಪರ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ರಾಜ್ಯಸಭಾ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಮತ್ತು ಸಾಹಿತಿ ಎಲ್ .ಹನುಮಂತಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೪೦ ಕೋಟಿ ಜನರಿರುವ ಭಾರತದ ಆರ್ಥಿಕತೆ ಸಹಜವಾಗಿಯೇ ದೊಡ್ಡ ಶಕ್ತಿಯಾಗಲಿದೆ. ಇದನ್ನು ತಾವು ಮಾಡಿದ್ದೇವೆ. ಆರ್ಥಿಕವಾಗಿ ಜಗತ್ತಿನ ನಂ. ೧ ದೇಶವಾಗಿದ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದ ಅವರು, ಬಿಜೆಪಿ ಹತ್ತು ವರ್ಷಗಳ ತನ್ನ ಆಡಳಿತದ ಸಾಧನೆಯ ದಾಖಲೆ ಬಿಡುಗಡೆ ಮಾಡಲಿ, ನರೇಗಾ, ಆಹಾರ ಹಕ್ಕು ಅಧಿನಿಯಮ, ಅರಣ್ಯ ಹಕ್ಕು ಅಧಿನಿಯಮದಂತಹ ಜನಪರ ಕಾಯ್ದೆಗಳನ್ನು ಯುಪಿಎ ಸರ್ಕಾರ ತಂದಿತ್ತು.
ಇಂತಹ ಒಂದೇ ಒಂದು ಕಾಯ್ದೆ ಮೋದಿ ತಂದಿದ್ದಾರೆಯೇ ಎಂದು ಪ್ರಶ್ನಿಸಿದರು.
ಈಗ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಜನಸಾಮಾನ್ಯರ ಪರವಾಗಿ ಒಂದಾದರೂ ಕಾರ್ಯಕ್ರಮಗಳಿವೇಯೇ ? ದೇಶದಲ್ಲಿ ಆರ್ಥಿಕ ಅಸಮಾನತೆ ಎದ್ದು ಕಾಣುತ್ತಿದೆ. ಮೋದಿ ಅವರ ಆರ್ಥಿಕ ನೀತಿ ಶ್ರೀಮಂತರ ಪರವಾಗಿದೆ ಎಂದರಲ್ಲದೆ, ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಮೋದಿ ಅವರು ಹೇಳುತ್ತಿರುವಾಗಲೆ ಉತ್ತರ ಭಾರತದಲ್ಲಿ ಅವರ ಪಕ್ಷದ ಅಭ್ಯರ್ಥಿ ಲಲ್ಲೂ ಸಿಂಗ್ ಎನ್ನುವವರು ಬಿಜೆಪಿಗೆ ಬಹುಮತ ಬಂದಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಅವರ ವಿರುದ್ದ ಯಾಕೆ ಮೋದಿ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು.
Narendra Modi ಚುನಾವಣಾ ಬಾಂಡ್ ಜಗತ್ತಿನ ದೊಡ್ಡ ಹಗರಣವಾಗಿದೆ. ಐಟಿ,ಇಡಿ,ಸಿಬಿಐನಂತಹ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟರಿಂದ ಕೋಟ್ಯಾಂತರ ರೂಪಾಯಿಗಳ ಹಫ್ತಾ ವಸೂಲಿ ಮಾಡಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ.
ಚುನಾವಣೆಯ ಹೊತ್ತಲ್ಲಿ ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳ ಮುಖ್ಯಮಂತ್ರಿಗಳನ್ನು , ಸಚಿವರನ್ನು ಜೈಲಿನಲ್ಲಿಡಲಾಗುತ್ತದೆ. ಪಾರದರ್ಶಕ, ಮತ್ತು ನಿರ್ಭೀತ ಚುನಾವಣೆ ನಡೆಯುತ್ತಿಲ್ಲ. ಇವಿಎಂ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಪಕ್ಷಗಳ ಖಾತೆಗಳನ್ನು ರದ್ದುಗೊಳಿಸಲಾಗುತ್ತಿದೆ. ಮೋದಿ ಸರ್ಕಾರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಹಾಳು ಗೆಡುವುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.