Mallikarjun Kharge ದೇಶದಾದ್ಯಂತ ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಇನ್ನೂ ತಾರತಮ್ಯವನ್ನು ಎದುರಿಸುತ್ತಿವೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರಣ’ಕ್ಕೆ ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಮತ್ತು ಹೊಸ ಸಂಸತ್ ಭವನದ ಉದ್ಘಾಟನೆಗೆ ಮುರ್ಮು ಅವರನ್ನು ಆಹ್ವಾನಿಸಿಲ್ಲ. ಕೋವಿಂದ್ ಅವರಿಗೆ ಹೊಸ ಸಂಸತ್ ಭವನದ ಶಂಕುಸ್ಥಾಪನೆ ಮಾಡಲು ಅವಕಾಶ ನೀಡಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ ‘ಐಡಿಯಾ ಎಕ್ಸ್ ಚೇಂಜ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ, ರಾಜಕೀಯ ಬಲವಂತದ ಕಾರಣದಿಂದ ಕಾಂಗ್ರೆಸ್ ರಾಮ ಮಂದಿರದ ಶಂಕುಸ್ಥಾಪನೆಯಿಂದ ದೂರ ಉಳಿದಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
“ನನ್ನ ಜನರಿಗೆ ಇನ್ನೂ ಅನೇಕ ದೇವಸ್ಥಾನಗಳಿಗೆ ಪ್ರವೇಶಿಸಲು ಅನುಮತಿಯಿಲ್ಲ. ಹೀಗಿರುವಾಗ ನಾನು ಆಯೋಧ್ಯೆಗೆ ಹೋದರೆ ಸಹಿಸಿಕೊಳ್ಳುವರೇ?” ಎಂದು ಪ್ರಶ್ನಿಸಿದ್ದಾರೆ.
Mallikarjun Kharge ಎನ್‌ಡಿಎ 400 ಸೀಟ್ ಪಡೆಯಲಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖರ್ಗೆ, “ಜನರು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಹಾಗಾಗಿ, ಮೂರನೇ ಬಾರಿಯ ಕನಸು ಈಡೇರುವುದಿಲ್ಲ” ಎಂದಿದ್ದಾರೆ. ಮತೊಮ್ಮೆ ಬಿಜೆಪಿ ಸರ್ಕಾರ ರಚಿಸುವ ಬಗ್ಗೆ ಎಚ್ಚರಿಕೆ ನೀಡಿದ ಖರ್ಗೆ, “ಅವರು ಈಗಲೇ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ” ಎಂದಿದ್ದಾರೆ.
ಕಾಂಗ್ರೆಸ್ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿಬೇಕಿತ್ತು ಎಂದು ನಿಮಗೆ ಅನಿಸಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ” ಅದು ವೈಯುಕ್ತಿಕ ನಂಬಿಕೆ. ಯಾರು, ಯಾವಾಗ ಬೇಕಾದರು ಅಲ್ಲಿಗೆ ಹೋಗಬಹುದು. ಮೋದಿ ಪೂಜಾರಿಯಲ್ಲ. ರಾಮ ವಿಗ್ರಹ ಪ್ರತಿಷ್ಠಾಪಿಸುವಲ್ಲಿ ಅವರೇಕೆ ಮುಂದಾಳತ್ವ ವಹಿಸಬೇಕು? ಅವರು ಅದನ್ನು ಕೇವಲ ರಾಜಕೀಯ ಉದ್ದೇಶಗಳಿಗಾಗಿ ಮಾಡಿದ್ದಾರೆ.
ದೇವಾಲಯದ ಮೂರನೇ ಒಂದು ಭಾಗ ಇನ್ನೂ ಪೂರ್ಣಗೊಂಡಿಲ್ಲ. ಇದು ರಾಜಕೀಯ ಕಾರ್ಯವೇ ಅಥವಾ ಧಾರ್ಮಿಕ ಕಾರ್ಯವೇ? ರಾಜಕೀಯದೊಂದಿಗೆ ಧರ್ಮವನ್ನು ಏಕೆ ಬೆರೆಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
“ನನ್ನ ಜನರಿಗೆ ಇಂದಿಗೂ ಎಲ್ಲಾ ದೇವಾಲಯಗಳಲ್ಲಿ ಪ್ರವೇಶವಿಲ್ಲ. ರಾಮ ಮಂದಿರ ಬಿಡಿ, ನೀವು ಎಲ್ಲಿಗೆ ಹೋದರೂ, ಪ್ರವೇಶಕ್ಕಾಗಿ ಹೋರಾಟ ಮಾಡಬೇಕು. ಹಳ್ಳಿಯಲ್ಲಿ ಸಣ್ಣ ದೇವಾಲಯಗಳಿಗೂ ಅಲ್ಲಿನ ಪ್ರಬಲ ಜಾತಿಯವರು ಅನುಮತಿಸುವುದಿಲ್ಲ. ಕುಡಿಯುವ ನೀರಿಗೆ ಅವಕಾಶ ನೀಡುವುದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡುವುದಿಲ್ಲ. ಕುದುರೆ ಮೇಲೆ ಮೆರವಣಿಗೆ ಹೋಗುವ ಮದು ಮಗನನ್ನು ಸಹ ನೀವು (ಬಿಜೆಪಿ-ಆರ್‌ಎಸ್‌ಎಸ್) ಸಹಿಸುವುದಿಲ್ಲ. ಜನರು ಅವರನ್ನು ಎಳೆದುಕೊಂಡು ಹೊಡೆಯುತ್ತಾರೆ. ದಲಿತರು ಮೀಸೆ ಬಿಟ್ಟರೆ ಸಹಿಸುವುದಿಲ್ಲ. ನಾನು ರಾಮ ಮಂದಿರಕ್ಕೆ ಹೋಗಿದ್ದರೆ, ಅವರು (ಮೋದಿ-ಬಿಜೆಪಿ) ಸಹಿಸಿಕೊಳ್ಳುತ್ತಿದ್ದರೇ? ಎಂದು ಖರ್ಗೆ ಕೇಳಿದ್ದಾರೆ.